ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ (ಮನರೇಗಾ) ವೇತನವನ್ನು ಹೆಚ್ಚಿಸಲು ಪ್ರಧಾನಿ ನರೇಂದ್ರ ಮೋದಿ ಸರ್ಕಾರಕ್ಕೆ ಚುನಾವಣಾ ಆಯೋಗ ಅನುಮತಿ ನೀಡಿದೆ. ಚುನಾವಣಾ ಸಮಯದಲ್ಲಿ ನೀಡಲಾಗಿರುವ ಈ ಅನುಮತಿಯನ್ನು ಖಂಡಿಸಿ ಆಯೋಗಕ್ಕೆ ನಿವೃತ್ತ ಅಧಿಕಾರಿ ಶರ್ಮಾ ಅವರು ಪತ್ರ ಬರೆದಿದ್ದಾರೆ. ವೇತನ ಹೆಚ್ಚಳವು ಪ್ರಚಾರಕ್ಕೆ ಬಳಸಿಕೊಳ್ಳುವ ಪ್ರಯತ್ನವಾಗಿದೆ. ಸರ್ಕಾರದ ಮೇಲೆ ಆಯೋಗವು ನಿರ್ಬಂಧ ಹೇರಬೇಕು ಎಂದು ಒತ್ತಾಯಿಸಿದ್ದಾರೆ.
ಮನರೇಗಾ ಕಾಯ್ದೆಯಡಿ ಪರಿಷ್ಕೃತ ವೇತನವನ್ನು ಏಪ್ರಿಲ್ 1ರಿಂದ ಜಾರಿಗೆ ತರಲು ಗ್ರಾಮೀಣಾಭಿವೃದ್ಧಿ ಸಚಿವಾಲಯಕ್ಕೆ ಮಾರ್ಚ್ 21 (ಗುರುವಾರ) ಚುನಾವಣಾ ಆಯೋಗವು ಅನುಮತಿ ನೀಡಿದೆ ಎಂದು ‘ಇಂಡಿಯನ್ ಎಕ್ಸ್ಪ್ರೆಸ್’ ವರದಿಯಾಗಿದೆ.
ಈ ಹಿಂದೆ, 2019ರ ಮಾರ್ಚ್ 28ರಂದು ಕೇಂದ್ರ ಸರ್ಕಾರದಲ್ಲಿ ಕಾರ್ಯದರ್ಶಿಯಾಗಿದ್ದ ಶರ್ಮಾ ಅವರು ಇದೇ ರೀತಿಯ ಅನುಮತಿ ನೀಡಿದ್ದರು. ಆಗ ಚುನಾವಣಾ ಆಯೋಗವು ಕೆಲವು ಷರತ್ತು ವಿಧಿಸಿತ್ತು.
“(i) ಮಾಧ್ಯಮಗಳ ಮೂಲಕ ಸರ್ಕಾರವು ಯಾವುದೇ ಪ್ರಚಾರ ಮಾಡಬಾರದು.
(ii) ಯಾವುದೇ ರಾಜಕೀಯ ಕಾರ್ಯಕರ್ತರು ಪ್ರಚಾರದ ವೇಳೆ ಇದನ್ನು ಉಲ್ಲೇಖಿಸಬಾರದು, ಮತ್ತು
(iii) ನಿರ್ಬಂಧಗಳು ಕೇಂದ್ರ ಮತ್ತು ರಾಜ್ಯಗಳೆರಡಕ್ಕೂ ಅನ್ವಯಿಸುತ್ತವೆ” ಎಂದು ಹೇಳಿತ್ತು.
“ಆಯೋಗದ ಇತ್ತೀಚಿನ ಅನುಮತಿ ಕೂಡ ಇದೇ ರೀತಿಯ ಷರತ್ತುಗಳನ್ನು ನಿಗದಿಪಡಿಸಿದೆ ಎಂದು ನನಗೆ ಖಾತ್ರಿಯಿದೆ. ಇಲ್ಲದಿದ್ದರೆ, ಆಯೋಗವು ಅಂತಹ ನಿರ್ಬಂಧಗಳನ್ನು ವಿಧಿಸುವುದು ಅವಶ್ಯಕ” ಎಂದು ಶರ್ಮಾ ಹೇಳಿದ್ದಾರೆ.
ಅದಾಗ್ಯೂ, “ಇತ್ತೀಚೆಗೆ ಮನರೇಗಾ ವೇತನ ಪರಿಷ್ಕರಣೆ ವಿಚಾರವು ಸುದ್ದಿಯಲ್ಲಿದೆ ಮತ್ತು ಚರ್ಚೆಯಾಗುತ್ತಿದೆ ಎಂಬುದನ್ನು ಸುದ್ದಿ ವರದಿಗಳು ಸಾಕ್ಷಿಯಾಗಿವೆ. ಸ್ಪಷ್ಟವಾಗಿ, ಸಂಬಂಧಿತ ಸಚಿವಾಲಯವು ಉದ್ದೇಶಪೂರ್ವಕವಾಗಿ ಪರಿಷ್ಕರಣೆ ಕುರಿತು ವಿವರನ್ನು ಮಾಧ್ಯಮಗಳಿಗೆ ನೀಡಿದೆ. ಈ ಬಗ್ಗೆ ತುರ್ತಾಗಿ ತನಿಖೆ ಮಾಡಬೇಕು. ಅಗತ್ಯವಿದ್ದರೆ, ಕ್ರಮಗಳನ್ನೂ ತೆಗೆದುಕೊಳ್ಳಬೇಕು” ಎಂದು ಅವರು ಒತ್ತಾಯಿಸಿದ್ದಾರೆ.
ತಮ್ಮ ಪತ್ರವನ್ನು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಮತ್ತು ಚುನಾವಣಾ ಆಯುಕ್ತರಾದ ಜ್ಞಾನೇಶ್ ಕುಮಾರ್ ಮತ್ತು ಸುಖಬೀರ್ ಸಿಂಗ್ ಸಂಧು ಅವರಿಗೆ ಕಳುಹಿಸಿದ್ದಾರೆ.