- ಸಿಗ್ನಲ್ ವ್ಯತ್ಯಯದಿಂದ ಡಿಕ್ಕಿ ಹೊಡೆದ ಗೂಡ್ಸ್ ರೈಲುಗಳು
- ಗಾಯಾಳುಗಳು ಸ್ಥಳೀಯ ಆಸ್ಪತ್ರೆಗೆ ದಾಖಲು
ಮಧ್ಯಪ್ರದೇಶದ ಶಾದೋರ್ ಜಿಲ್ಲೆಯ ಸಿಂಗ್‌ಪುರ್ ಎಂಬಲ್ಲಿ ಎರಡು ಗೂಡ್ಸ್ ರೈಲುಗಳಲು ಡಿಕ್ಕಿಯಾಗಿದ್ದು, ಈ ಭೀಕರ ಅಪಘಾತದಲ್ಲಿ ರೈಲಿನ ಲೋಕೋ ಪೈಲಟ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ನಾಲ್ವರು ಸಿಬ್ಬಂದಿಗೆ ಗಂಭೀರ ಗಾಯಗಳಾಗಿವೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಮಂಗಳವಾರ ಬೆಳಗ್ಗೆ 6:50ರ ಸುಮಾರಿಗೆ ಘಟನೆ ಸಂಭವಿಸಿದೆ. ವಿಲಾಸ್ ಪುರ್ ಮತ್ತು ಕತ್ನಿ ಮಾರ್ಗದಲ್ಲಿ ಎದುರಾಗಿ ಸಾಗುತ್ತಿದ್ದ ಗೂಡ್ಸ್ ರೈಲುಗಳು ಸಿಗ್ನಲ್ ವ್ಯತ್ಯಯದಿಂದಾಗಿ ಡಿಕ್ಕಿ ಹೊಡೆದಿವೆ ಎಂದು ರೈಲ್ವೇ ಇಲಾಖೆ ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ಡಿಕ್ಕಿಯ ರಭಸಕ್ಕೆ ಎರಡೂ ರೈಲಿನ ಎಂಜಿನ್ ಮತ್ತು ಬೋಗಿಗಳು ಹಳಿಯಿಂದ ಉರುಳಿ ಬಿದ್ದಿವೆ. ಪರಿಣಾಮ ರೈಲುಗಳ ಎಂಜಿನ್ ಭಾಗಕ್ಕೆ ಬೆಂಕಿ ಹೊತ್ತಿಕೊಂಡಿದೆ.
ಲೋಕೋ ಪೈಲಟ್ ಒಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ನಾಲ್ವರು ಸಿಬ್ಬಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡ ನಾಲ್ವರ ಪೈಕಿ ಇಬ್ಬರು ರೈಲಿನಡಿ ಸಿಲುಕಿಕೊಂಡಿದ್ದಾರೆ. ಘಟನೆಯ ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಅಗ್ನಿ ಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದು, ಕ್ರೇನ್ ಬಳಸಿ ಗಾಯಾಳುಗಳ ರಕ್ಷಣಾ ಕಾರ್ಯಾಚರಣೆ ಮಾಡಲಾಗುತ್ತಿದೆ. ಉಳಿದ ಇಬ್ಬರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.