‘ಲಾಟರಿ ಕಿಂಗ್’ ಎಂದೆ ಹೆಸರಾಗಿರುವ ಸಾಂಟಿಯಾಗೊ ಮಾರ್ಟಿನ್ ಚುನಾವಣಾ ಬಾಂಡ್ಗಳ ಮೂಲಕ ರಾಜಕೀಯ ಪಕ್ಷಗಳಿಗೆ ಅತಿ ಹೆಚ್ಚು ದೇಣಿಗೆ ನೀಡಿದ ಉದ್ಯಮಿಯಾಗಿದ್ದಾನೆ.
ನಿನ್ನೆಯಷ್ಟೆ(ಮಾ.21) ಚುನಾವಣಾ ಆಯೋಗಕ್ಕೆ ಎಸ್ಬಿಐ ಸಲ್ಲಿಸಿದ ಸಂಪೂರ್ಣ ಮಾಹಿತಿಯಲ್ಲಿ ಇದು ಬಹಿರಂಗಗೊಂಡಿದೆ.
ಲಾಟರಿ ಸಂಸ್ಥೆ ಫ್ಯೂಚರ್ ಗೇಮಿಂಗ್ ಅಂಡ್ ಹೋಟೆಲ್ ಸರ್ವೀಸ್ ಪ್ರೈವೇಟ್ ಲಿಮಿಟೆಡ್ ನಡೆಸುತ್ತಿರುವ ಲಾಟರಿ ಕಿಂಗ್ ಸಂಟಿಯಾಗೊ ಮಾರ್ಟಿನ್ ಏಪ್ರಿಲ್ 12, 2019 ರಿಂದ ಜನವರಿ 24, 2014ರವರೆಗೆ ಚುನಾವಣಾ ಬಾಂಡ್ಗಳ ಮೂಲಕ ಒಟ್ಟು 1368 ಕೋಟಿ ರೂ. ದಾನ ನೀಡಿದ್ದಾನೆ.
ತನ್ನ ಸ್ವಂತ ರಾಜ್ಯ ತಮಿಳುನಾಡಿನ ಪಕ್ಷಗಳಿಗೆ ಮಾತ್ರವಲ್ಲದೆ ಪಶ್ಚಿಮ ಬಂಗಾಳ, ಆಂಧ್ರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳ ರಾಜಕೀಯ ಪಕ್ಷಗಳಿಗೂ ದೇಣಿಗೆ ನೀಡಿದ್ದಾನೆ.
ಅಂಕಿಅಂಶಗಳ ವರದಿಯಂತೆ ಈತನಿಂದ ಅತಿ ಹೆಚ್ಚು ದೇಣಿಗೆ ಪಡೆದ ರಾಜಕೀಯ ಪಕ್ಷ ಪಶ್ವಿಮ ಬಂಗಾಳದ ತೃಣಮೂಲ ಕಾಂಗ್ರೆಸ್. 542 ಕೋಟಿ ರೂ. ಹಣವನ್ನು ಟಿಎಂಸಿಗೆ ನೀಡಿದ್ದಾನೆ. ಡಿಎಂಕೆ ಅತಿ ಹೆಚ್ಚು ದೇಣಿಗೆ ಪಡೆದ ಎರಡನೇ ಸ್ಥಾನದಲ್ಲಿದೆ. ದ್ರಾವಿಡ ಪಕ್ಷಕ್ಕೆ ಚುನಾವಣಾ ಬಾಂಡ್ಗಳ ಮೂಲಕ 503 ಕೋಟಿ ರೂ. ನೀಡಿದ್ದಾನೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬೆಂಗಳೂರು ಉತ್ತರಕ್ಕೆ ಬೆಂಕಿ ಹಚ್ಚದಿರಲಿ ಶೋಭಾ ಕರಂದ್ಲಾಜೆ
ಭಾರತೀಯ ಜನತಾ ಪಕ್ಷ ಕೂಡ ಲಾಟರಿ ಕಿಂಗ್ನಿಂದ 100 ಕೋಟಿ ರೂ. ದೇಣಿಗೆ ಪಡೆದಿದೆ. ಆಂಧ್ರ ಪ್ರದೇಶದ ವೈಎಸ್ಆರ್ ಪಕ್ಷ 154 ಕೋಟಿ ರೂ. ದೇಣಿಗೆ ಪಡೆದಿದೆ. ಕಾಂಗ್ರೆಸ್ ಪಕ್ಷಕ್ಕೂ ಕೂಡ 50 ಕೋಟಿ ರೂ. ದೇಣಿಗೆ ನೀಡಿದ್ದಾನೆ.
ಅದೇ ರೀತಿ ಸಿಕ್ಕಿಂ ಸೇರಿದಂತೆ ಹಲವು ಸಣ್ಣಪುಟ್ಟ ಪಕ್ಷಗಳಿಗೂ ಸಾಂಟಿಯಾಗೊ ಮಾರ್ಟಿನ್ ನೆರವು ನೀಡಿದ್ದಾನೆ.
ಚುನಾವಣಾ ಬಾಂಡ್ಗಳು ಅಸಂವಿಧಾನಿಕ,ಆಲ್ಫಾನ್ಯೂಮರಿಕ್ ಸಂಖ್ಯೆಗಳನ್ನು ಒಳಗೊಂಡ ಎಲ್ಲ ವಿವರಗಳನ್ನು ಚುನಾವಣಾ ಆಯೋಗದ ವೆಬ್ಸೈಟ್ಗೆ ಅಪ್ಲೋಡ್ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ಫೆ.15, 2024ರ ತೀರ್ಪಿನಲ್ಲಿ ಸ್ಪಷ್ಟವಾಗಿ ಹೇಳಿತ್ತು.
ಸುಪ್ರೀಂ ಕೋರ್ಟ್ ಛೀಮಾರಿ ಹಾಕಿದ ನಂತರ ಭಾರತೀಯ ಸ್ಟೇಟ್ ಬ್ಯಾಂಕ್ ಆಲ್ಫಾನ್ಯೂಮರಿಕ್ ಸಂಖ್ಯೆ ಒಳಗೊಂಡ ಚುನಾವಣಾ ಬಾಂಡ್ಗಳ ಎಲ್ಲ ವಿವರಗಳನ್ನು ಚುನಾವಣಾ ಆಯೋಗದ ವೆಬ್ಸೈಟ್ನಲ್ಲಿ ಮಾ.21 ರಂದು ಅಪ್ಲೋಡ್ ಮಾಡಿದೆ. ಈ ಬಗ್ಗೆ ಕೂರ್ಟ್ಗೂ ಮಾಹಿತಿ ನೀಡಿದೆ.