ಈ ದಿನ ಸಂಪಾದಕೀಯ | ಬೆಂಗಳೂರು ಉತ್ತರಕ್ಕೆ ಬೆಂಕಿ ಹಚ್ಚದಿರಲಿ ಶೋಭಾ ಕರಂದ್ಲಾಜೆ

Date:

ಬಿಜೆಪಿ ನಾಯಕರು ಇನ್ನಾದರೂ ಇಂತಹ ಕೆಡುಕಿನ ರಾಜಕಾರಣ ಮಾಡುವುದು ಬಿಟ್ಟು, ಜನರ ನೈಜ ಸಮಸ್ಯೆಗಳನ್ನು ಇಟ್ಟುಕೊಂಡು ಚುನಾವಣೆಯನ್ನು ಎದುರಿಸಬೇಕಿದೆ. ಬರೀ ಧಾರ್ಮಿಕ ವಿಚಾರವನ್ನು ಇಟ್ಟುಕೊಂಡು ಎಷ್ಟು ದಿನ ಫಸಲು ತೆಗೆಯಲು ಸಾಧ್ಯ?

ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆಯವರು ಕ್ಷೇತ್ರದ ಜನತೆಯಿಂದ ಘೇರಾವ್ ಹಾಕಿಸಿಕೊಂಡು ಬೆಂಗಳೂರು ಉತ್ತರಕ್ಕೆ ವಲಸೆ ಬಂದಿದ್ದಾರೆ. ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡರಿಗೆ ಟಿಕೆಟ್ ತಪ್ಪಿಸಿ, ಶೋಭಾ ಅವರಿಗೆ ಉತ್ತರದ ಬಾಗಿಲು ತೆರೆಯಲಾಗಿದೆ. ಆದರೆ ಆರಂಭದಲ್ಲೇ ಕ್ಷೇತ್ರದ ಜನರಿಂದ ವಿರೋಧವನ್ನೂ ಎದುರಿಸಿದ ಶೋಭಾ ಕರಂದ್ಲಾಜೆ ತಮ್ಮ ಮತೀಯವಾದಿ ರಾಜಕಾರಣದ ಕಾರಣಕ್ಕೆ ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಬೆಂಗಳೂರಿನ ನಗರ್ತಪೇಟೆಯ ಸಿದ್ದಣ್ಣ ಗಲ್ಲಿಯಲ್ಲಿ ಭಾನುವಾರ ಸಂಜೆ ವರ್ತಕರೊಬ್ಬರ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದರು. ‘ಜೋರಾಗಿ ಹಾಡು ಹಾಕಿದ್ದ ಕಾರಣ ಹಲ್ಲೆ ಮಾಡಿದ್ದಾರೆ’ ಎಂದು ವರ್ತಕ ನೀಡಿದ ದೂರಿನ ಅನ್ವಯ ಪ್ರಕರಣವೂ ದಾಖಲಾಗಿತ್ತು. ಆದರೆ ನಂತರದಲ್ಲಿ ದೂರುದಾರ ವ್ಯಕ್ತಿ, ‘ಆಝಾನ್‌ ಸಮಯದಲ್ಲಿ ಭಕ್ತಿ ಗೀತೆ ಹಾಕಿದ್ದರಿಂದ ಹಲ್ಲೆಗೆ ಒಳಗಾಗಿದ್ದೇನೆ’ ಎಂದಿದ್ದರು. ಆರೋಪಿಗಳಲ್ಲಿ ಹಿಂದೂ, ಮುಸ್ಲಿಂ ಇಬ್ಬರೂ ಇರುವುದು ಅನುಮಾನಗಳಿಗೆ ಕಾರಣವಾಗಿತ್ತು. ಇಂತಹ ಧಾರ್ಮಿಕ ಆಯಾಮವನ್ನು ಪೊಲೀಸರು ಅಲ್ಲಗಳೆದಿದ್ದರು.

ನಗರ್ತಪೇಟೆಯು ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬರುತ್ತದೆ. ಇಲ್ಲಿನ ಶಾಸಕರು ಬಿಜೆಪಿಯ ಉದಯ್ ಗರುಡಾಚಾರ್‌ ನೀಡಿರುವ ಹೇಳಿಕೆಗಳು ಬೇರೊಂದು ಸತ್ಯವನ್ನು ಹೇಳುತ್ತಿವೆ. ”ಇದು ಹನುಮಾನ್ ಚಾಲೀಸಾ ಅಥವಾ ಆಝಾನ್ ಪ್ರಾರ್ಥನೆಯ ವಿಷಯ ಸಂಬಂಧ ನಡೆದ ಗಲಾಟೆಯಲ್ಲ, ಇದು ಚುನಾವಣೆ ಸಮಯದಲ್ಲಿ ಆಗಿರುವುದರಿಂದ ಇಷ್ಟು ದೊಡ್ಡ ವಿಷಯವಾಗಿದೆ” ಎಂದಿದ್ದಾರೆ ಅವರು. ”ಈ ಪ್ರಕರಣ ದೊಡ್ಡದು ಮಾಡುವುದು ಬೇಕಿರಲಿಲ್ಲ” ಎಂದೂ ಅವರು ಮನವಿ ಮಾಡಿದ್ದಾರೆ. ಆದರೆ ಮಂಗಳವಾರ ನಡೆದ ಪ್ರತಿಭಟನೆ ಸಂದರ್ಭದಲ್ಲಿ ಉದಯ್ ಗರುಡಾಚಾರ್‌ ಅವರೂ ಸ್ಥಳದಲ್ಲಿದ್ದರು ಎಂಬುದು ಗಮನಾರ್ಹ. ಪಕ್ಷದ ನಾಯಕರು ಸೇರಿದ್ದರಿಂದ ಒತ್ತಡದಿಂದಾಗಿ ಅವರೂ ಪ್ರತಿಭಟನೆಗೆ ಹೋದಂತೆ ಕಾಣುತ್ತಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಸಿದ್ದಣ್ಣ ಗಲ್ಲಿಯ ಅನೇಕ ವರ್ತಕರು, “ಈ ಭಾಗದಲ್ಲಿ ಹಿಂದೂ ಮುಸ್ಲಿಂ ಮಾರ್ವಾಡಿಗಳೆಲ್ಲರೂ ಸೌಹಾರ್ದತೆಯಿಂದ ಇದ್ದೇವೆ. ಕೆಲವು ಕಿಡಿಗೇಡಿಗಳು ಕಳೆದ ಒಂದೂವರೆ ವರ್ಷದಿಂದ ಉಪಟಳ ಮಾಡುತ್ತಿದ್ದಾರೆ” ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ.

ಪ್ರತಿಭಟನೆ ವೇಳೆ ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡಿರುವ ಶೋಭಾ ಮತ್ತು ತೇಜಸ್ವಿ ಸೂರ್ಯ ವಿರುದ್ಧ ಚುನಾವಣಾ ನೀತಿ ಸಂಹಿತೆ ಅನ್ವಯ ಪ್ರಕರಣವನ್ನು ಅಧಿಕಾರಿಗಳು ದಾಖಲಿಸಿದ್ದಾರೆ. ಮುಖ್ಯವಾಗಿ ಉಡುಪಿಯಿಂದ ಉತ್ತರಕ್ಕೆ ವಲಸೆ ಬಂದಿರುವ ಶೋಭಾ ವಿರುದ್ಧ ಎರಡು ಪ್ರಕರಣ ದಾಖಲಾಗಿರುವುದು ಗಮನಾರ್ಹ.

”ರಾಮೇಶ್ವರಂ ಕೆಫೆ ಬ್ಲಾಸ್ಟ್‌ನ ಹಿಂದೆ ತಮಿಳುನಾಡು ಜನರಿದ್ದಾರೆ” ಎಂದು ಹೇಳಿಕೆ ನೀಡಿ, ನಂತರ ಕ್ಷಮೆಯನ್ನೂ ಯಾಚಿಸಿರುವ ಶೋಭಾ ಮೇಲೆ ತಮಿಳುನಾಡಿನಲ್ಲೊಂದು ಪ್ರಕರಣ ದಾಖಲಿಸಲಾಗಿದೆ.

ಎಲ್ಲ ಪ್ರಕರಣಗಳಲ್ಲೂ ಕೋಮು ಆಯಾಮವನ್ನು ಹುಡುಕುವ ಕಾಯಿಲೆ ಬಿಜೆಪಿಗೆ ಹೊಸದಲ್ಲ. ಇದೇ ಶೋಭಾ ಅವರು ಪರೇಶ್‌ ಮೇಸ್ತಾ ಸಾವಿನಲ್ಲೂ ಭಾರೀ ಲಾಭವನ್ನು ಗಿಟ್ಟಿಸಿಕೊಂಡರು. ಆದರೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಸರ್ಕಾರವಿದ್ದಾಗಲೇ ಸಿಬಿಐ ‘ಬಿ’ ರಿಪೋರ್ಟ್ ಸಲ್ಲಿಸಿ, ”ಇದೊಂದು ಸಹಜ ಸಾವು” ಎಂದಿತ್ತು.

ಬಿಜೆಪಿ ಶಾಸಕ ಎಸ್‌.ಟಿ.ಸೋಮಶೇಖರ್‌ ಅವರು ಬೇಸರ ಹೊರಹಾಕಿದ್ದು, ”ಯಾವ ಟೈಮ್‌ನಲ್ಲಿ ದ್ವೇಷ ಭಾಷಣ ಮಾಡುತ್ತಾರೋ, ಯಾವ ಟೈಮ್‌ನಲ್ಲಿ ನನ್ನ ವಿರುದ್ಧ ಮಾತನಾಡುತ್ತಾರೋ ಎನ್ನುವಂತಾಗಿದೆ. ನನ್ನ ಕ್ಷೇತ್ರಕ್ಕೆ ಹೋಗುವುದಕ್ಕೂ ವಾರದಿಂದೀಚೆಗೆ ಭಯವಾಗುತ್ತಿದೆ. ಸದಾನಂದ ಗೌಡರು ಹತ್ತು ವರ್ಷ ಇದ್ದರು. ಒಂದೇ ಒಂದು ದಿನ ಬೆಂಕಿ ಉಗುಳುವ ಮಾತುಗಳನ್ನು ಆಡಲಿಲ್ಲ. ಆದರೆ ಇವರಿನ್ನೂ ಮತ ಕೇಳಲು ಬಂದೇ ಇಲ್ಲ. ಹೀಗಿರುವ ನನ್ನ ಕ್ಷೇತ್ರಕ್ಕೆ ಬಂದು ಬೆಂಕಿಯುಂಡೆಯ ಮಾತುಗಳನ್ನು ಆಡಿದರೆ, ನನ್ನ ರಕ್ಷಣೆಗಾಗಿ ಪೊಲೀಸ್ ಕಮಿಷನರ್‌ ಮೊರೆ ಹೋಗಬೇಕಾಗುತ್ತದೆ. ತಮಿಳುನಾಡಿನವರು, ಡೆಲ್ಲಿಯವರು ಎಲ್ಲಿಂದಲೋ ಬಂದು ಬಾಂಬ್ ಇಡುತ್ತಾರೆ ಎನ್ನುತ್ತಿದ್ದಾರೆ. ಇವರು ಎಂಪಿ ಆಗೋಕೆ ಬಂದಿದ್ದಾರಾ? ಅಥವಾ ಬೆಂಕಿ ಹಚ್ಚೋಕೆ ಬಂದಿದ್ದಾರಾ?” ಎಂದು ಪ್ರಶ್ನಿಸಿದ್ದಾರೆ. ಸೋಮಶೇಖರ್ ಈಗಾಗಲೇ ಬಿಜೆಪಿಯಿಂದ ಕಾಲು ಹೊರಗಿಟ್ಟಿದ್ದಾರೆ ಎಂಬುದು ನಿಜವಾದರೂ ಅವರು ಎತ್ತಿರುವ ಪ್ರಶ್ನೆಯಲ್ಲಿ ಖಂಡಿತವಾಗಿಯೂ ತೂಕವಿದೆ.

ಯಾವುದಾದರೂ ಪ್ರಕರಣದಲ್ಲಿ ಒಬ್ಬ ಆರೋಪಿ ಮುಸ್ಲಿಂ ಇದ್ದರೆ ಸಾಕು, ಹಿಂದೆ ಮುಂದೆ ನೋಡದೆ ಹಿಂದೂ- ಮುಸ್ಲಿಂ ಆಯಾಮವನ್ನು ನೀಡಲು ಬಿಜೆಪಿ ಪ್ರಯತ್ನಿಸುವುದು, ಅದನ್ನು ದೊಡ್ಡದು ಮಾಡಿ ಪ್ರಚಾರ ಮಾಡುವುದು ಚರ್ಚೆಯ ವಿಷಯ. ಟಿ.ನರಸೀಪುರದ ವೇಣುಗೋಪಾಲ್ (ಯುವ ಬ್ರಿಗೇಡ್ ಕಾರ್ಯಕರ್ತ) ಕೊಲೆಯಲ್ಲಿ ಒಬ್ಬಾತ ಮುಸ್ಲಿಂ ಆರೋಪಿ ಇದ್ದ. ಇನ್ನುಳಿದವರು ಹಿಂದೂ ಧರ್ಮದ ವಿವಿಧ ಜಾತಿಗಳಿಗೆ ಸೇರಿದವರಾಗಿದ್ದರು. ಆದರೆ ಇಡೀ ಪ್ರಕರಣವನ್ನು ‘ಹಿಂದೂ ಮುಸ್ಲಿಂ’ ಎಂದು ತಿರುಚುವ ಪ್ರಯತ್ನ ನಡೆಯಿತು. ಟಿ.ನರಸೀಪುರದಲ್ಲಿ ಮುಸ್ಲಿಂ ಸಮುದಾಯದ ಸಂಖ್ಯೆ ತೀರಾ ಕಡಿಮೆ. ಹೀಗಾಗಿ ಬಿಜೆಪಿ ನಾಯಕರು ಬಂದು ಹೋಗುತ್ತಿದ್ದನ್ನು ನೋಡಿ ಇಲ್ಲಿನ ಜನ ಆಶ್ಚರ್ಯಚಕಿತರಾಗಿದ್ದರು.

ಕೆರಗೋಡು ಹನುಮಧ್ವಜ ಪ್ರಕರಣದಲ್ಲಿ ಜಾತಿ ಆಯಾಮವಿತ್ತು. ಕೇಸರಿ ಧ್ವಜವನ್ನು ದಲಿತರು ಏಕೆ ವಿರೋಧಿಸಿದರು ಎಂಬುದನ್ನು ಮುಚ್ಚಿಟ್ಟು, ಹನುಮ ಧ್ವಜದೊಳಗೆ ಅವಿತಿದ್ದ ಜಾತಿ ಅಹಮಿಕೆಯನ್ನು ಪ್ರಚೋದಿಸಿ, ಇಲ್ಲಿಯೂ ಮುಸ್ಲಿಂ ದ್ವೇಷವನ್ನು ಬಿತ್ತಲಾಯಿತು. ಶಿವಮೊಗ್ಗದ ಈದ್ ಮೆರವಣಿಗೆ ವೇಳೆ ಬಜರಂಗದಳ ರೋಹನ್ ಅಲಿಯಾಸ್ ರೋಯಾ ಎಂಬಾತ ಎಸೆದ ಕಲ್ಲೇ ಗಲಾಟೆಗೆ ಕಾರಣವಾಗಿತ್ತು. ಆದರೆ ತಮ್ಮದೇ ಬಣದ ಕಾರ್ಯಕರ್ತ ಮಾಡಿದ ಕೃತ್ಯವನ್ನು ಮುಚ್ಚಿಟ್ಟು ಪ್ರಕರಣವನ್ನು ದೊಡ್ಡದು ಮಾಡಲಾಯಿತು.

ಬಿಜೆಪಿ ನಾಯಕರು ಇನ್ನಾದರೂ ಇಂತಹ ಕೆಡುಕಿನ ರಾಜಕಾರಣ ಮಾಡುವುದು ಬಿಟ್ಟು, ಜನರ ನೈಜ ಸಮಸ್ಯೆಗಳನ್ನು ಇಟ್ಟುಕೊಂಡು ಚುನಾವಣೆಯನ್ನು ಎದುರಿಸಬೇಕಿದೆ. ಎಲ್ಲದರಲ್ಲೂ ಕೋಮು ಆಯಾಮವನ್ನು ಹುಡುಕುತ್ತಾ ಹೋದರೆ ಜನರು ಬಿಜೆಪಿಯನ್ನು ನಂಬದಂತಾಗುತ್ತಾರೆ. ಬರೀ ಧಾರ್ಮಿಕ ವಿಚಾರವನ್ನು ಇಟ್ಟುಕೊಂಡು ಎಷ್ಟು ದಿನ ಫಸಲು ತೆಗೆಯಲು ಸಾಧ್ಯ? ಬೊಮ್ಮಾಯಿಯವರು ಸಿಎಂ ಆಗಿದ್ದಾಗ ಸರಣಿಯಾಗಿ ಕೋಮು ಕಲಹಗಳು ನಡೆದರೂ ಬಿಜೆಪಿ 66 ಸ್ಥಾನಕ್ಕೆ ಕುಸಿದದ್ದು ಏಕೆ? ಜನಾದೇಶವನ್ನು ರಾಜ್ಯ ಬಿಜೆಪಿ ನಾಯಕರು ಇನ್ನೂ ಸರಿಯಾಗಿ ಅರ್ಥಮಾಡಿಕೊಂಡಂತೆ ಕಾಣುತ್ತಿಲ್ಲ. ಉಡುಪಿಯಿಂದ ಉತ್ತರಕ್ಕೆ ವಲಸೆ ಬಂದಿರುವ ಶೋಭಾ ಅವರಂತೂ ಚೇತರಿಕೆ ಕಾಣುವ ಲಕ್ಷಣವಂತೂ ಕಾಣುತ್ತಿಲ್ಲ. ಜನರೇ ಇವರಿಗೆ ಸರಿಯಾದ ಪಾಠ ಕಲಿಸಬೇಕಿದೆ.

ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ರಾಜ್ಯದ ಪರವಾಗಿ ಧ್ವನಿ ಎತ್ತದ ಸಂಸದರನ್ನು ಮತದಾರ ತಿರಸ್ಕರಿಸಬೇಕಿದೆ

ರಾಜ್ಯದ ಬಿಜೆಪಿ ಸಂಸದರು ತಮ್ಮದೇ ಪಕ್ಷ ಅಧಿಕಾರದಲ್ಲಿದ್ದೂ, ನಾಲ್ವರು ಸಚಿವರು ಇದ್ದೂ...

ಈ ದಿನ ಸಂಪಾದಕೀಯ | ಚುನಾವಣಾ ವಿಷಯವಾದ ’ಸಂವಿಧಾನ’ ಮತ್ತು ಮೋದಿ ಮಾತಿನ ಬೂಟಾಟಿಕೆ

ಕಳೆದ ಹತ್ತು ವರ್ಷಗಳಲ್ಲಿ ಮೋದಿ ಸರ್ಕಾರ ಅನುಸರಿಸಿದ ದಮನಕಾರಿ ನೀತಿಗಳನ್ನು ನೋಡಿದರೆ...

ಈ ದಿನ ಸಂಪಾದಕೀಯ | ಮೋದಿ ಅಹಮಿಕೆಯೇ ಬಿಜೆಪಿ ಪ್ರಣಾಳಿಕೆ- ಬಡಜನತೆಯ ಕಷ್ಟ ಕಣ್ಣೀರು ಲೆಕ್ಕಕ್ಕಿಲ್ಲ

ಪ್ರಣಾಳಿಕೆಯಲ್ಲೂ ಅಡಿಯೂ ಮೋದಿಯೇ, ಮುಡಿಯೂ ಮೋದಿಯೇ. ಆದಿಯೂ ಮೋದಿಯೇ, ಅಂತ್ಯವೂ ಮೋದಿಯೇ....

ಈ ದಿನ ಸಂಪಾದಕೀಯ | ಕುಮಾರಸ್ವಾಮಿಯವರನ್ನು ಸೋಲಿಸಲು ಬಿಜೆಪಿ ಸುಪಾರಿ ಕೊಟ್ಟಿದೆಯೇ, ಆತಂಕಕ್ಕೊಳಗಾಗಿದ್ದಾರೆಯೇ?

'ಮೋಶಾ'ಗಳ ಸೋಲಿಸುವ ಸುಪಾರಿಗೆ ವಿಚಲಿತರಾಗಿರುವ ಕುಮಾರಸ್ವಾಮಿಯವರು, ಬಿಜೆಪಿಯ ಹುನ್ನಾರವನ್ನು ಬಯಲು ಮಾಡಲಾಗದೆ...