ಇಡಿ ಕಸ್ಟಡಿಯಲ್ಲಿರುವ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಭದ್ರತೆಯ ಬಗ್ಗೆ ಆಮ್ ಆದ್ಮಿ ಪಕ್ಷ (ಎಎಪಿ) ಆತಂಕಗೊಂಡಿದೆ ಎಂದು ದೆಹಲಿ ಸಚಿವ ಅತಿಶಿ ಶುಕ್ರವಾರ ಹೇಳಿದ್ದಾರೆ.
ಅಬಕಾರಿ ನೀತಿ ಸಂಬಂಧಿತ ಮನಿ ಲಾಂಡರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಜ್ರಿವಾಲ್ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಗುರುವಾರ ರಾತ್ರಿ ಬಂಧಿಸಿದೆ.
ಅವರ ಬಂಧನದ ಬಗ್ಗೆ ಕಳವಳ ವ್ಯಕ್ತಪಡಿಸಿ ಸುದ್ದಿಗೋಷ್ಠಿ ನಡೆಸಿರುವ ಅತಿಶಿ, “ಲೋಕಸಭೆ ಚುನಾವಣೆಗೂ ಮುನ್ನ ರಾಷ್ಟ್ರೀಯ ಪಕ್ಷದ ಮುಖ್ಯಸ್ಥರನ್ನು ಬಂಧಿಸಿರುವುದು, ಭಾರತದ ಪ್ರಜಾಪ್ರಭುತ್ವ ಇತಿಹಾಸದಲ್ಲಿ ಇದೇ ಮೊದಲು” ಎಂದು ಹೇಳಿದ್ದಾರೆ.
“ಇಡಿ ಒಂದೇ ಒಂದು ಸಾಕ್ಷ್ಯವನ್ನು ನೀಡಲು ಸಾಧ್ಯವಾಗಿಲ್ಲ. ಆದರೂ, ಬಂಧಿಸಲಾಗಿದೆ. ಇದು ಅರವಿಂದ್ ಕೇಜ್ರಿವಾಲ್ ಬಗ್ಗೆ ಬಿಜೆಪಿಗೆ ಎಷ್ಟು ಭಯವಾಗಿದೆ ಎಂಬುದನ್ನು ತೋರಿಸುತ್ತದೆ” ಎಂದು ಆರೋಪಿಸಿದ್ದಾರೆ.
“ಒಬ್ಬ ನಾಯಕ ಮಾತ್ರ ಅವರಿಗೆ (ಬಿಜೆಪಿ) ಸವಾಲು ಹಾಕಬಹುದು ಎಂದು ಅವರಿಗೆ ತಿಳಿದಿದೆ. ಅದಕ್ಕಾಗಿಯೇ ಅವರು ಅರವಿಂದ್ ಕೇಜ್ರಿವಾಲ್ ಮತ್ತು ಎಎಪಿಯನ್ನು ತುಳಿಯಲು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದಾರೆ” ಎಂದು ಸಚಿವರು ಹೇಳಿದ್ದಾರೆ.
“ಇಡಿ ಕಸ್ಟಡಿಯಲ್ಲಿರುವ ಕೇಜ್ರಿವಾಲ್ ಅವರ ಸುರಕ್ಷತೆ ಮತ್ತು ಭದ್ರತೆಯ ಬಗ್ಗೆ ಆಮ್ ಆದ್ಮಿ ಪಕ್ಷವು ಚಿಂತಿತವಾಗಿದೆ” ಎಂದಿದ್ದಾರೆ.
“ದಿಲ್ಲಿಯ ಮುಖ್ಯಮಂತ್ರಿಯಾಗಿರುವ ಕೇಜ್ರಿವಾಲ್ ಅವರಿಗೆ Z+ ಭದ್ರತೆ ಇರುತ್ತದೆ. ಈಗ ಅವರು ಇಡಿ ಕಸ್ಟಡಿಯಲ್ಲಿದ್ದಾರೆ. ಕೇಜ್ರಿವಾಲ್ ಅವರ ಸುರಕ್ಷತೆಯ ಹೊಣೆ ಯಾರು? ಇಡಿ ಕಚೇರಿಯಲ್ಲಿ ಕೇಜ್ರಿವಾಲ್ ಇರುವ ಲಾಕ್-ಅಪ್‌ಗೆ ಯಾರ್ಯಾರು ಹೋಗುತ್ತಿದ್ದಾರೆ? ಅವರ ಭದ್ರತಾ ವ್ಯವಸ್ಥೆಗಳ ಬಗ್ಗೆ ಕೇಂದ್ರವು ಉತ್ತರಿಸಬೇಕು” ಎಂದು ಅವರು ಹೇಳಿದ್ದಾರೆ.
“ಕೇಜ್ರಿವಾಲ್ ಮತ್ತು ವಿರೋಧ ಪಕ್ಷದ ನಾಯಕರ ವಿರುದ್ಧ ಬಿಜೆಪಿ ‘ರಾಜಕೀಯ ಪಿತೂರಿ’ ನಡೆಸುತ್ತಿದೆ” ಎಂದು ಆರೋಪಿಸಿದರು.
ಏತನ್ಮಧ್ಯೆ, ಕೇಜ್ರಿವಾಲ್ ಕುಟುಂಬವನ್ನು ಭೇಟಿ ಮಾಡಲು ದೆಹಲಿ ಸಂಪುಟ ಸಚಿವ ಗೋಪಾಲ್ ರೈ ಅವರು ಕೇಜ್ರಿವಾಲ್ ನಿವಾಸಕ್ಕೆ ಭೇಟಿ ನೀಡಿದ್ದರು. ಆದರೆ, ಅವರಿಗೆ ಅಧಿಕಾರಿಗಳು ಪ್ರವೇಶ ನೀಡಿಲ್ಲ ಎಂದು ಆರೋಪಿಸಿದ್ದಾರೆ.
“ನನಗೆ ಕಾಯುವಂತೆ ಹೇಳಿದರು. ಕೇಜ್ರಿವಾಲ್ ಅವರನ್ನು ಬಂಧಿಸಲಾಗಿದೆ. ಅವರ ಕುಟುಂಬ ಯಾವ ಸ್ಥಿತಿಯಲ್ಲಿದೆ ಎಂದು ಯಾರಿಗೂ ತಿಳಿದಿಲ್ಲ. ಅನಾರೋಗ್ಯದಿಂದ ಬಳಲುತ್ತಿರುವ ಕೇಜ್ರಿವಾಲ್ ಪೋಷಕರು ಮನೆಯಲ್ಲಿದ್ದಾರೆ. ಯಾವ ಕಾನೂನಿನ ಅಡಿಯಲ್ಲಿ ಅವರನ್ನು ಗೃಹಬಂಧನದಲ್ಲಿ ಇರಿಸಲಾಗಿದೆ” ಗೋಪಾಲ್ ರೈ ಕಿಡಿಕಾರಿದ್ದಾರೆ.
ಮತ್ತೊಬ್ಬ ಸಚಿವ ಸೌರಭ್ ಭಾರದ್ವಾಜ್ ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, “ಮುಖ್ಯಮಂತ್ರಿ ಕೇಜ್ರಿವಾಲ್‌ರನ್ನು ಸುಳ್ಳು ಪ್ರಕರಣದಲ್ಲಿ ಬಂಧಿಸಲಾಗಿದೆ. ಕೇಂದ್ರ ಸರ್ಕಾರಕ್ಕೆ ಕೇಜ್ರಿವಾಲ್ ಅವರ ಹಿರಿಯ ಪೋಷಕರು ಮತ್ತು ಮಕ್ಕಳೊಂದಿಗೆ ಏನು ದ್ವೇಷವಿದೆ? ಅವರನ್ನು ಭೇಟಿ ಮಾಡಲು ಯಾರಿಗೂ ಅವಕಾಶ ನೀಡಿಲ್ಲ. ಯಾವುದೇ ಸಹಾನುಭೂತಿಯೂ ಇಲ್ಲ. ಕುಟುಂಬವು ದುಃಖಿತವಾಗಿದೆ” ಎಂದು ಹೇಳಿದ್ದಾರೆ.
“ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ನಾಯಕರು ಬಿಜೆಪಿ ಸೇರಿದರೆ ಅವರ ಪ್ರಕರಣಗಳ ತನಿಖೆ ನಡೆಸುವುದಿಲ್ಲ. ಹೇಮಂತ್ ಸೋರೆನ್ ಅವರನ್ನು ಬಂಧಿಸಲಾಗಿದೆ. ಕಾಂಗ್ರೆಸ್ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ. ಇದು ಚುನಾವಣೆಯ ಮೇಲೆ ಪರಿಣಾಮ ಬೀರುವ ಪ್ರಯತ್ನ” ಎಂದು ಅತಿಶಿ ಆರೋಪಿಸಿದ್ದಾರೆ.
“ನೀವು ಪ್ರತಿಪಕ್ಷಗಳು ಮತ್ತು ಎಎಪಿ ವಿರುದ್ಧ ಯಾವುದೇ ಪಿತೂರಿ ನಡೆಸುತ್ತಿದ್ದರೂ, ದೆಹಲಿ, ಪಂಜಾಬ್ ಮತ್ತು ಈ ದೇಶದ ಜನರು ನಿಮಗೆ ತಕ್ಕ ಉತ್ತರವನ್ನು ನೀಡುತ್ತಾರೆ” ಎಂದು ಬಿಜೆಪಿಗೆ ಅತಿಶಿ ಎಚ್ಚರಿಕೆ ನೀಡಿದ್ದಾರೆ.
“ನಾವು ಬಿಜೆಪಿ ವಿರುದ್ಧ ಪ್ರತಿಭಟನೆ ನಡೆಸುತ್ತೇವೆ. ಪ್ರತಿಭಟನೆಗೆ ಬಿಜೆಪೊ ಹೆದರಿದೆ ಎಂಬುದು ರಸ್ತೆಗಳಲ್ಲಿ ಗೋಚರಿಸುತ್ತಿದೆ. ದೆಹಲಿಯ ಎಎಪಿ ಕೇಂದ್ರ ಕಚೇರಿ ಕೋಟೆಯಾಗಿ ಮಾರ್ಪಟ್ಟಿದೆ. ಪಕ್ಷದ ಕಚೇರಿಯ ಹೊರಗೆ 2000-2500 ಪೊಲೀಸರನ್ನು ನಿಯೋಜಿಸಲಾಗಿದೆ. ಹಲವಾರು ಅರೆಸೇನಾಪಡೆಗಳನ್ನು ಕರೆತರಲಾಗಿದೆ” ಎಂದು ಅತಿಶಿ ಹೇಳಿದ್ದಾರೆ.