ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ತೆಲಂಗಾಣ ಮಾಜಿ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅವರ ಪುತ್ರಿ, ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ಎಂಎಲ್‌ಸಿ ಕಲ್ವಕುಂಟ್ಲ ಕವಿತಾ ಅವರ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಬಿಆರ್‌ಎಸ್ ನಾಯಕಿ ಕಲ್ವಕುಂಟ್ಲ ಕವಿತಾ ಅವರನ್ನು ಜಾರಿ ನಿರ್ದೇಶನಾಲಯವು (ಇಡಿ) ಮಾರ್ಚ್ 15ರಂದು ಬಂಧಿಸಿದೆ. ಕವಿತಾ ಜಾಮೀನು ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಶುಕ್ರವಾರ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ಅರ್ಜಿಯನ್ನು ವಜಾಗೊಳಿಸಿದೆ. ಜಾಮೀನು ನೀಡಲು ನಿರಾಕರಿಸಿದೆ.
ಇದನ್ನು ಓದಿದ್ದೀರಾ? ದೆಹಲಿ ಅಬಕಾರಿ ನೀತಿ ಪ್ರಕರಣ: ನಿರ್ದೇಶಕರ ಬಂಧನದ ಬಳಿಕ ಬಿಜೆಪಿಗೆ 30 ಕೋಟಿ ರೂ. ಚುನಾವಣಾ ಬಾಂಡ್ ನೀಡಿದ್ದ ಅರಬಿಂದೋ ಫಾರ್ಮಾ
ಮಾರ್ಚ್ 15ರಿಂದ ಮಾರ್ಚ್ 23ರವರೆಗೆ ಜಾರಿ ನಿರ್ದೇಶನಾಲಯವು 46 ವರ್ಷದ ಬಿಆರ್‌ಎಸ್ ನಾಯಕಿ ಕವಿತಾ ಅವರನ್ನು ತನ್ನ ವಶಕ್ಕೆ ಪಡೆದುಕೊಂಡಿದೆ. “ಈ ಬಂಧನವು ಅಕ್ರಮ, ಅಸಾಂವಿಧಾನಿಕ” ಎಂದು ವಾದಿಸಿರುವ ಕವಿತಾ, “ಇದು ಮನಿ ಲಾಂಡರಿಂಗ್ ತಡೆ ಕಾಯ್ದೆಯ ಸೆಕ್ಷನ್ 19 ಅನ್ನು ಉಲ್ಲಂಘಿಸುತ್ತದೆ” ಎಂದು ಅರ್ಜಿಯಲ್ಲಿ ತಿಳಿಸಿದ್ದರು.
ಇನ್ನು ಜಾರಿ ನಿರ್ದೇಶನಾಲಯವು ಈ ಪ್ರಕರಣದಲ್ಲೇ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಗುರುವಾರ ಬಂಧಿಸಿದೆ. ಈ ನಡುವೆ ಚುನಾವಣಾ ಆಯೋಗ ಚುನಾವಣಾ ಬಾಂಡ್ ಮಾಹಿತಿಯನ್ನು ಬಹಿರಂಗಪಡಿಸಿದ್ದು, ಇದೇ ಪ್ರಕರಣದಲ್ಲಿ ತನ್ನ ನಿರ್ದೇಶಕ ಶರತ್ ಚಂದ್ರ ರೆಡ್ಡಿ ಬಂಧನಕ್ಕೊಳಗಾದ ಬಳಿಕ ಬಿಜೆಪಿಗೆ ಅರಬಿಂದೋ ಫಾರ್ಮಾ 30 ಕೋಟಿ ರೂಪಾಯಿ ದೇಣಿಗೆ ನೀಡಿರುವುದು ತಿಳಿದುಬಂದಿದೆ. ಇನ್ನು ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಇದೇ ಪ್ರಕರಣದಲ್ಲಿ 2023ರ ಫೆಬ್ರವರಿಯಿಂದ ಜೈಲಿನಲ್ಲಿದ್ದಾರೆ.