2024ರ ಲೋಕಸಭಾ ಚುನಾವಣೆಯು ಭಾರತದಲ್ಲಿ ಇದುವರೆಗೆ ನಡೆದ ಎರಡನೇ ಅತಿ ದೀರ್ಘಾವಧಿಯ ಚುನಾವಣೆಯಾಗಿದೆ. ಇದು ವಿರೋಧ ಪಕ್ಷಗಳಿಗೆ ಅನನುಕೂಲಕರವಾಗಿದೆ ಎಂದು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಹೇಳಿದ್ದಾರೆ.
ಚುನಾವಣಾ ದಿನಾಂಕಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಹಕ್ಕು ಚುನಾವಣಾ ಆಯೋಗಕ್ಕೆ ಇದೆ ಎಂದಿರುವ ಅವರು, ಅದರ ಹಿಂದಿನ ಉದ್ದೇಶವನ್ನು ಪ್ರಶ್ನಿಸಿದ್ದಾರೆ. “ಸಾರ್ವತ್ರಿಕ ಚುನಾವಣೆಯ 82 ದಿನಗಳ ಅವಧಿಯಲ್ಲಿ (ಮಾರ್ಚ್ 16ರಿಂದ ಜೂನ್ 4) ನಡೆಯುತ್ತಿರುವುದು ಕಳವಳಕಾರಿ ವಿಷಯ” ಎಂದು ಅವರು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
“ಸುರ್ಧೀಘ ಕಾಲದ ಚುನಾವಣೆಯು ಕಳವಳಕಾರಿ ವಿಷಯವಾಗಿದೆ. ಸಂವಿಧಾನವು ಚುನಾವಣಾ ವಿಷಯಗಳ ಬಗ್ಗೆ ಚುನಾವಣಾ ಆಯೋಗಕ್ಕೆ ಸಂಪೂರ್ಣ ಹಕ್ಕನ್ನು ನೀಡುತ್ತದೆ ಎಂಬುದು ನಮಗೆ ಗೊತ್ತಿದೆ. ಆದರೆ, ಅದರ ಹಿಂದಿನ ಉದ್ದೇಶ ಮತ್ತು ಬುದ್ದವಂತಿಕೆಯನ್ನು ನಾವು ಪ್ರಶ್ನಿಸುತ್ತೇವೆ” ಎಂದು ಅವರು ಹೇಳಿದ್ದಾರೆ.
“ತಂತ್ರಜ್ಞಾನ ಮುಂದುವರೆದಂತೆ, ಚುನಾವಣೆ ನಡೆಸಲು ತೆಗೆದುಕೊಳ್ಳುವ ಸಮಯವು ಕಡಿಮೆಯಾಗಬೇಕು. ಆದರೆ, ಇಲ್ಲಿ ಹೆಚ್ಚಾಗುತ್ತಿದೆ” ಎಂದು ಅವರು ಹೇಳಿದ್ದಾರೆ
“ನನ್ನ ಪ್ರಕಾರ ನೀವು ಈಗ ಇಷ್ಟು ಸುದೀರ್ಘ ಚುನಾವಣೆಯನ್ನು ನೋಡುತ್ತೀರಿ. ಭಾರತದಲ್ಲಿ ಮೊದಲ ಬಾರಿಗೆ ಚುನಾವಣೆ ನಡೆದ 1952ರ ಚುನಾವಣೆಯನ್ನು ಹೊರತುಪಡಿಸಿ, ಈ ಬಾರಿಯೇ ಚುನಾವಣೆಯೇ ಅತೀ ಸುದೀರ್ಘ ಚುನಾವಣೆಯಾಗಿದೆ. ಅವರು ಮಾತನಾಡುತ್ತಿರುವ ಎಲ್ಲ ತಂತ್ರಜ್ಞಾನದೊಂದಿಗೆ ವಾಸ್ತವವಾಗಿ ಚುನಾವಣಾ ಸಮಯವನ್ನು ಕಡಿತ ಮಾಡಬೇಕು. ಬದಲಿಗೆ, ಹೆಚ್ಚಿಸಲಾಗಿದೆ” ಎಂದು ಅವರು ಹೇಳಿದ್ದಾರೆ.
“ಈ ಬಾರಿಯ ಚುನಾವಣೆಯಲ್ಲಿ ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳ ನಡುವೆ ಹಣ ಅಥವಾ ತಲುಪುವಿಕೆಯಲ್ಲಿ ಸಮಬಲವಿಲ್ಲ. ದೀರ್ಘಾವಧಿಯ ಚುನಾವಣೆಯು ದೈಹಿಕ ಪ್ರಚಾರಕ್ಕೆ ಬಂದಾಗ ಪ್ರತಿಪಕ್ಷಗಳನ್ನು ಅನನುಕೂಲಕ್ಕೆ ಒಳಪಡಿಸುತ್ತದೆ” ಎಂದು ತಿಳಿಸಿದ್ದಾರೆ.
“ಈ ಚುನಾವಣೆಯು ಆಡಳಿತ ಪಕ್ಷಕ್ಕೆ ಪ್ರಯೋಜನವನ್ನು ನೀಡುತ್ತದೆ. ಅವರು ಎಲ್ಲಡೆ ಸಂಚರಿಸಬಹುದು. ಒಂದರಿಂದ ಮತ್ತೊಂದು ಹಂತಕ್ಕೆ ತೆರಳಿ ಪ್ರಚಾರ ಮುಂದುವರಿಸಬಹುದು. ಇಲ್ಲಿ ಏನಾಗುತ್ತದೆ ಎಂದರೆ, ಒಂದು ಹಂತದಲ್ಲಿ ಮತದಾನ ಮತ್ತು ಇನ್ನೊಂದು ಹಂತದಲ್ಲಿ ಪ್ರಚಾರ ನಡೆಯುತ್ತಿದೆ. ಪ್ರಧಾನಿ ಮತ್ತು ಆಡಳಿತ ಪಕ್ಷದ ನಾಯಕರು, ಇತರ ಕೆಲವು ಸ್ಥಳಗಳಲ್ಲಿ ಏನು ಹೇಳುತ್ತಿದ್ದಾರೆ ಎಂಬುದು ಮಾಧ್ಯಮ, ಸಾಮಾಜಿಕ ಜಾಲತಾಣಗಳ ಮೂಲಕ ನೇರವಾಗಿ ಮತದಾನ ನಡೆಯುತ್ತಿರುವ ಸ್ಥಳಗಳಿಗೆ ಪ್ರಸಾರವಾಗುತ್ತದೆ” ಎಂದರು.
“ಅದು ಉಲ್ಲಂಘನೆ ಅಲ್ಲವೇ? 48 ಗಂಟೆಗಳ ಕಾಲ, ನೀವು ಎಲ್ಲ ಪ್ರಚಾರವನ್ನು ನಿಲ್ಲಿಸುವುದಾಗಿ ಹೇಳುತ್ತೀರಿ. ಆದರೆ, ನಂತರ ಅದನ್ನು ಸ್ಪಷ್ಟವಾಗಿ ಉಲ್ಲಂಘಿಸಲಾಗುತ್ತದೆ. ಆದ್ದರಿಂದ, ಈ ರೀತಿಯ ವೇಳಾಪಟ್ಟಿಗಳು ಉಲ್ಲಂಘನೆಗಳಿಗೆ ಎಡೆಮಾಡಿಕೊಡುತ್ತವೆ” ಎಂದು ಯೆಚೂರಿ ಹೇಳಿದ್ದಾರೆ.
“ಎರಡನೆಯದಾಗಿ, ಬಿಜೆಪಿ ದುರ್ಬಲವಾಗಿರುವ ಮತ್ತು ಸಾಕಷ್ಟು ಕಾರ್ಯಕರ್ತರನ್ನು ಹೊಂದಿರದ ರಾಜ್ಯಗಳಲ್ಲಿ, ಏಳು ಹಂತದ ಚುನಾವಣೆಗಳು ಆ ಪಕ್ಷದ ಕಾರ್ಯಕರ್ತರು ಒಂದು ಕ್ಷೇತ್ರದಿಂದ ಮತ್ತೊಂದು ಕ್ಷೇತ್ರಕ್ಕೆ ಹೋಗಲು, ಪ್ರಚಾರ ಮಾಡಲು ಅವಕಾಶವನ್ನು ನೀಡುತ್ತವೆ. ಇದೆಲ್ಲವೂ ಆಡಳಿತ ಪಕ್ಷಕ್ಕೆ ಲಾಭವನ್ನು ನೀಡುತ್ತದೆ” ಎಂದು ಅವರು ವಿವರಿಸಿದ್ದಾರೆ.
“ಇಂತಹ ಧೋರಣೆಗಳು ದುರದೃಷ್ಟಕರ. ಚುನಾವಣಾ ಕಣವು ಸಮತಟ್ಟಾದ ಮೈದಾನದಂತಿರಬೇಕು. ಎಲ್ಲರಿಗೂ ಒಂದೇ ರೀತಿಯಲ್ಲಿರಬೇಕು. ಇದು ಹಣ ಬಲದ ವಿಷಯ ಮಾತ್ರವಲ್ಲ. ಜಾಹೀರಾತುಗಳು ಮತ್ತು ಜನರಿಗೆ ತಲುಪುವ ವಿಷಯದಲ್ಲಿ ಹಾಗೂ ಭೌತಿಕ ಪ್ರಚಾರದ ವಿಷಯದಲ್ಲಿ ಬಹುಮುಖ್ಯ” ಎಂದಿದ್ದಾರೆ.
1921-52ರಲ್ಲಿ ನಡೆದ ಮೊದಲ ಲೋಕಸಭಾ ಚುನಾವಣೆಯು ನಾಲ್ಕು ತಿಂಗಳ ಕಾಲ ನಡೆದಿತ್ತು. ಆದಾದ, ಬಳಿಕ ಈ ಚುನಾವಣೆಯು ಅತೀ ಸುಧೀರ್ಘಾವಧಿಯ ಚುನಾವಣೆಯಾಗಿದೆ. ಏಪ್ರಿಲ್ 19ರಿಂದ ಏಳು ಹಂತಗಳಲ್ಲಿ ಲೋಕಸಭಾ ಚುನಾವಣೆ ನಡೆಯಲಿದ್ದು, ಜೂನ್ 4 ರಂದು ಮತ ಎಣಿಕೆ ನಡೆಯಲಿದೆ.