ತಾಪಮಾನ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಶಿವಮೊಗ್ಗದ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹ ಸಫಾರಿ ಪ್ರದೇಶದ ಅಧಿಕಾರಿಗಳು ಪ್ರಾಣಿಗಳನ್ನು ಬಿಸಿಲಿನ ತಾಪ ಮತ್ತು ಬಾಯಾರಿಕೆಯಿಂದ ರಕ್ಷಿಸಲು ಹಲವಾರು ಕ್ರಮಗಳನ್ನು ಪ್ರಾರಂಭಿಸಿದ್ದಾರೆ. ಪ್ರಾಣಿಗಳನ್ನು ತಂಪಾಗಿಡಲು ಕೃತಕ ಕೊಳಗಳನ್ನು ರಚಿಸುವುದು, ಆವರಣದೊಳಗೆ ಜೆಟ್‌ಗಳನ್ನು ಸ್ಥಾಪಿಸುವುದು ಸೇರಿದಂತೆ ಪ್ರಾಣಿಗಳಿಗೆ ನೀಡುವ ಆಹಾರದಲ್ಲಿ ಸ್ವಲ್ಪ ಬದಲಾವಣೆ ಕ್ರಮಗಳನ್ನು ಕೈಗೊಂಡಿದ್ದಾರೆ.
“ಹುಲಿಗಳು ಯಾವಾಗಲೂ ನೀರನ್ನು ಇಷ್ಟಪಡುತ್ತವೆ. ಆದ್ದರಿಂದ ಕೊಳದಲ್ಲಿ ಯಾವಾಗಲು ನೀರು ತುಂಬಿರುವಂತೆ ನೋಡಿಕೊಳ್ಳುವುದರ ಜತೆಗೆ, ಹಲವು ಕೊಳಗಳನ್ನು ನಿರ್ಮಿಸಲಾಗಿದೆ. ಬಿಸಿಲಿನ ತಾಪ ಹೆಚ್ಚಾದಾಗ ಹುಲಿಗಳು ಕೊಳದ ಬಳಿ ಹೋಗಿ ಮಲಗುತ್ತವೆ” ಎಂದು ಸಫಾರಿಯ ಕಾರ್ಯನಿರ್ವಾಹಕ ನಿರ್ದೇಶಕರು ಹೇಳಿದ್ದಾರೆ.
“ಸಫಾರಿಯಲ್ಲಿ ಪ್ರಾಣಿಗಳಿಗೆ ನೀರಿನ ಕೊರತೆಯಿಲ್ಲ. ಮಹಾನಗರ ಪಾಲಿಕೆಯಿಂದ ಕುಡಿಯುವ ನೀರು ಸರಬರಾಜು ಮಾಡಲಾಗಿದ್ದು, ಇಲ್ಲಿ 2.5 ಲಕ್ಷ ಲೀಟರ್ ಓವರ್ ಹೆಡ್ ಟ್ಯಾಂಕ್ ಮತ್ತು 2 ಲಕ್ಷ ಲೀಟರ್ ನೀರಿನ ಸಂಪ್(ತೊಟ್ಟಿ) ಇದೆ. ಆದ್ದರಿಂದ ನಮ್ಮಲ್ಲಿ 4.5 ಲಕ್ಷ ಲೀಟರ್ ನೀರಿನ ಸಂಗ್ರಹವಿದೆ. ಸಾಂಬಾರ್ ಜಿಂಕೆಗಳು ಒದ್ದೆಯಾದ ಮಣ್ಣು ಮತ್ತು ನೀರನ್ನು ಇಷ್ಟಪಡುತ್ತವೆ. ಆದ್ದರಿಂದ ಕೊಳಗಳು ಯಾವಾಗಲೂ ನೀರಿನಿಂದ ತುಂಬಿರುವಂತೆ ನೋಡಿಕೊಳ್ಳಲಾಗುತ್ತದೆ” ಎಂದು ಮಾಹಿತಿ ನೀಡಿದ್ದಾರೆ.
“ಕಾಡೆಮ್ಮೆ, ನೀರ್ಗುದುರೆ ಮತ್ತು ಇತರ ಸಸ್ಯಾಹಾರಿ ಪ್ರಾಣಿಗಳಿಗೆ ಕಲ್ಲಂಗಡಿ, ಮಸ್ಕ್ಮೆಲನ್, ಹೆಚ್ಚಿನ ನೀರಿನ ಅಂಶವನ್ನು ಹೊಂದಿರುವ ತಾಜಾ ತರಕಾರಿಗಳನ್ನು ನೀಡಲಾಗುತ್ತದೆ. ಹೊಸ ಮೃಗಾಲಯದ ಆವರಣಗಳಲ್ಲಿ ನೀರಿನ ಜೆಟ್‌ಗಳಿವೆ. ಅವು ಮಳೆ ಹನಿ ಬೀಳುವಂತೆ ಕಾರ್ಯ ನಿರ್ವಹಿಸುತ್ತವೆ. ಇದರಿಂದ ಯಾವಾಗಲು ನೆಲದ ತಾಪಮಾನವಿರುತ್ತದೆ. ಪ್ರಾಣಿಗಳ ಮೇಲೂ ಕೂಡ ನೀರನ್ನು ಸಿಂಪಡಿಸುವುದರಿಂದ ಅವು ಆನಂದಿಸುತ್ತವೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಸಾರ್ವಜನಿಕ ಶೌಚಾಲಯವಿಲ್ಲದೆ ಹೈರಾಣು; ಕಚೇರಿ ಕೆಲಸಕ್ಕೆ ಬರುವವರ ಆಕ್ರೋಶ
“ಚಿರತೆಗಳು ಮತ್ತು ಇತರ ಮಾಂಸಾಹಾರಿ ಪ್ರಾಣಿಗಳಿಗೆ, ಮಾಂಸದ ತುಂಡುಗಳನ್ನು ನೀರಿನೊಂದಿಗೆ ಹೆಪ್ಪುಗಟ್ಟಿಸಿ ಐಸ್ ಚಪ್ಪಡಿಗಳಂತೆ ತಯಾರಿಸಲಾಗುತ್ತದೆ. ಪ್ರಾಣಿಗಳು ಮಾಂಸವನ್ನು ತಿನ್ನಲು ಪ್ರಯತ್ನಿಸಿದಾಗ, ಮಂಜುಗಡ್ಡೆಯ ರೂಪದಲ್ಲಿರುವ ನೀರನ್ನು ಕುಡಿಯುತ್ತವೆ. ಇದರಿಂದ ಅವುಗಳು ದೇಹವು ತಂಪಾಗಿರುತ್ತದೆ” ಎಂದು ಅಧಿಕಾರಿ ತಿಳಿಸಿದ್ದಾರೆ.