ಆದಾಯ ತೆರಿಗೆ ಮರು ಮೌಲ್ಯಮಾಪನ ಪ್ರಕ್ರಿಯೆಯ ವಿರುದ್ಧವಾಗಿ ಕಾಂಗ್ರೆಸ್ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ಶುಕ್ರವಾರ ವಜಾಗೊಳಿಸಿದೆ. ನ್ಯಾಯಮೂರ್ತಿ ಯಶ್ವಂತ್ ವರ್ಮಾ ಮತ್ತು ಪುರುಶ್ಚೇಂದ್ರ ಕುಮಾರ್ ಕೌರವ್‌ರನ್ನು ಒಳಗೊಂಡ ನ್ಯಾಯಪೀಠವು ಅರ್ಜಿ ವಿಚಾರಣೆಯನ್ನು ನಡೆಸಿದ್ದು, ‘ನಾವು ಈ ಅರ್ಜಿಯನ್ನು ವಜಾಗೊಳಿಸುತ್ತೇವೆ’ ಎಂದು ತಿಳಿಸಿದರು.
2014-15, 2015-16 ಮತ್ತು 2016-17 ಹಣಕಾಸು ವರ್ಷದ ಆದಾಯ ತೆರಿಗೆಯನ್ನು ಮರು ಮೌಲ್ಯಮಾಪನ ಮಾಡುವ ಆದೇಶವನ್ನು ಕಾಂಗ್ರೆಸ್ ಪ್ರಶ್ನಿಸಿತ್ತು. ಮಾರ್ಚ್ 20ರಂದು ಅರ್ಜಿಯ ವಿಚಾರಣೆ ನಡೆಸಿ, ಹೆಚ್ಚಿ ವಿಚಾರಣೆಗಾಗಿ ಕಾಯ್ದಿರಿಸಿದ್ದ ಹೈಕೋರ್ಟ್, ಇಂದು ಅರ್ಜಿಯ ವಿಚಾರಣೆ ನಡೆಸಿದ್ದು, ವಜಾಗೊಳಿಸಿದೆ.
ನಿಯಮವನ್ನು ಉಲ್ಲಂಘಿಸಿ ಹೆಚ್ಚುವರಿ ವರ್ಷಗಳ ಆದಾಯ ತೆರಿಗೆ ಮರು ಮೌಲ್ಯಮಾಪನ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಕಾಂಗ್ರೆಸ್ ಪರ ವಕೀಲ ಹಿರಿಯ ವಕೀಕ ಅಭಿಷೇಕ್ ಸಿಂಗ್ವಿ ಆದಾಯ ತೆರಿಗೆ ಇಲಾಖೆಯು ಆರು ವರ್ಷಕ್ಕಿಂತ ಹಳೆಯ ಆದಾಯ ತೆರಿಗೆಗಳ ಮರು ಮೌಲ್ಯಮಾಪನ ಮಾಡುತ್ತಿದೆ ಎಂದು ದೂರಿದ್ದರು.
ಇದನ್ನು ಓದಿದ್ದೀರಾ? ಆದಾಯ ತೆರಿಗೆ ಮರು ಮೌಲ್ಯಮಾಪನ ಪ್ರಕ್ರಿಯೆ ವಿರುದ್ಧ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ ಕಾಂಗ್ರೆಸ್
2021ರ ತಮ್ಮ ಬಜೆಟ್ ಭಾಷಣದಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಆದಾಯ ತೆರಿಗೆ ರಿಟರ್ನ್ ಸಲ್ಲಿಸಿದ ಮೂರು ವರ್ಷಗಳ ಬಳಿಕ, ಆ ತೆರಿಗೆ ರಿಟರ್ನ್ಅನ್ನು ಮರುಮೌಲ್ಯಮಾಪನ ಮಾಡುವಂತಿಲ್ಲ ಎಂದು ಹೊಸ ನಿಯಮವನ್ನು ಘೋಷಿಸಿದ್ದಾರೆ. ಅದಕ್ಕೂ ಹಿಂದೆ, 50 ಲಕ್ಷ ಅಥವಾ ಅದಕ್ಕಿಂತ ಅಧಿಕ ತೆರಿಗೆ ವಂಚನೆಯ ಸಾಕ್ಷಿಯಿದ್ದರೆ ಮಾತ್ರ, ಆರು ವರ್ಷಗಳ ಹಳೆಯ ಆದಾಯ ತೆರಿಗೆ ಮರುಮೌಲ್ಯಮಾಪನ ಮಾಡುವ ಅವಕಾಶವಿತ್ತು. ಆದರೆ, ಆದಾಯ ತೆರಿಗೆ ಇಲಾಖೆಯು ಅದಕ್ಕೂ ಹಳೆಯ ಆದಾಯ ತೆರಿಗೆ ಮರು ಮೌಲ್ಯಮಾಪನ ಮಾಡುತ್ತಿದೆ ಎಂಬ ಆರೋಪವಿದೆ. ಆದಾಯ ತೆರಿಗೆ ಇಲಾಖೆ ಮಾತ್ರ ಯಾವುದೇ ನಿಯಮ ಉಲ್ಲಂಘಿಸಲಾಗಿಲ್ಲ ಎಂದು ಹೇಳಿದೆ.
ಸುಮಾರು 100 ಕೋಟಿ ರೂಪಾಯಿ ಆದಾಯ ತೆರಿಗೆ ಪಾವತಿ ಮಾಡುವಂತೆ ಕಾಂಗ್ರೆಸ್‌ಗೆ ಇತ್ತೀಚೆಗೆ ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿ ಆದೇಶಿಸಿದೆ. ಹೈಕೋರ್ಟ್ ಈ ಆದೇಶ ವಿಚಾರದಲ್ಲಿ ಮಧ್ಯಪ್ರವೇಶ ಮಾಡಲು ನಿರಾಕರಿಸಿದೆ. ಆದಾಯ ತೆರಿಗೆ ಇಲಾಖೆಯು 2018-19ನೇ ಹಣಕಾಸು ವರ್ಷದ ತೆರಿಗೆ 100 ಕೋಟಿ ರೂಪಾಯಿ ಪಾವತಿಸುವಂತೆ ಕಾಂಗ್ರೆಸ್‌ಗೆ ಫೆಬ್ರವರಿ 13ರಂದು ನೋಟಿಸ್ ಕಳುಹಿಸಿತ್ತು. ತೆರಿಗೆ ಅಧಿಕಾರಿಗಳು 199 ಕೋಟಿ ರೂಪಾಯಿಗೂ ಹೆಚ್ಚಿನ ಆದಾಯವನ್ನು ಲೆಕ್ಕ ಹಾಕಿ ಈ ಆದೇಶವನ್ನು ನೀಡಿತ್ತು.