ತುಮಕೂರು | ಕೃಷಿ ಉತ್ಪನ್ನಕ್ಕೆ ಕಾನೂನಿನ ಚೌಕಟ್ಟಿನಲ್ಲಿ ಎಂಎಸ್‌ಪಿ ಖಾತ್ರಿಗೊಳಿಸಬೇಕು: ಪ್ರಕಾಶ್ ಕಮ್ಮರಡಿ

Date:

Advertisements

ಅನೇಕ ವರ್ಷಗಳ ಬೇಡಿಕೆ ಕೃಷಿ ಉತ್ಪನ್ನಗಳಿಗೆ ಸ್ವಾಮಿನಾಥನ್ ವರದಿಯಂತೆ ಕನಿಷ್ಟ ಬೆಂಬಲ ಬೆಲೆಯನ್ನು ಖಾತ್ರಿಗೊಳಿಸಬೇಕು. ಅದು ರೈತರಿಗೆ ಲಾಭದಾಯಕವಾಗುತ್ತಿದ್ದು, ಕಾನೂನಿನ ಚೌಕಟ್ಟಿನೊಳಗೆ ತರಬೇಕು ಎಂದು ಕೃಷಿ ಆರ್ಥಿಕ ತಜ್ಞ ಮತ್ತು ಕರ್ನಾಟಕ ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಡಾ ಟಿ ಎನ್ ಪ್ರಕಾಶ್ ಕಮ್ಮರಡಿ ಒತ್ತಾಯಿಸಿದರು.

ತುಮಕೂರು ನಗರದ ಪತ್ರಿಕಾ ಭನದಲ್ಲಿ ಈ ಕುರಿತು ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, “ರೈತರ ಬೆಳೆಗೆ ಕಾನೂನಿನ ಖಾತ್ರಿಯ ಬೆಂಬಲ ಬೆಲೆ ನೀಡುವಂತೆ ರೈತರ ಹೊಸ ಹಕ್ಕೊತ್ತಾಯ ಇಂದು ದೇಶದಾದ್ಯಂತ ಕೇಳಿಬರುತ್ತಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಇದನ್ನು ಜಾರಿಗೊಳಿಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಈಗಾಗಲೇ ಆಶ್ವಾಸನೆ ನೀಡಿದ್ದಾರೆ. ಬಿಜೆಪಿ ಬೆಳೆ ವೈವಿಧ್ಯಗೊಳಿಸುವುದಾದರೆ ಹಾಗೂ ನೋಂದಾಯಿಸಿದ ರೈತರಿಂದ ಬೆಂಬಲ ಬೆಲೆಯಲ್ಲೇ ದ್ವಿದಳ ಧಾನ್ಯ ಜೋಳ, ಹತ್ತಿ ಕೊಳ್ಳಲು ಸಿದ್ಧವಿರುವುದಾಗಿ ತಿಳಿಸಿರುತ್ತದೆ. ಚುನಾವಣೆ ಹತ್ತಿರವಾಗುತ್ತಿದ್ದಂತೆ ಇಂತಹ ಭಾವನಾತ್ಮಕ ವಿಚಾರಗಳು, ವಿಭಜಕ ನಿರೂಪಣೆಗಳಿಂದ ರೈತರು ಹಿಂದೆ ಸರಿದು ಗಂಭೀರ ಸಮಸ್ಯೆಗಳನ್ನು ಮುನ್ನೆಲೆಗೆ ತರುವ ಬಗ್ಗೆ ಚಿಂತಿಸಬೇಕಿದೆ” ಎಂದರು.

“ಕರ್ನಾಟಕ ಕೃಷಿ ಬೆಲೆ ಆಯೋಗ ಬೆಂಬಲ ಬೆಲೆ ಖಾತರಿಸುವ ನಿಟ್ಟಿನಲ್ಲಿ ವಿವರ ಅಧ್ಯಯನ ನಡೆಸಿ 2018ರ ವಿಸ್ತ್ರತವಾದ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಇದರ ಅನುಷ್ಠಾನಕ್ಕೆ ತಗಲುವ ಹೊರೆ ಅಧಿಕವೇನು ಆಗಲಾರದೆಂದು ಲೆಕ್ಕಾಚಾರ ಹಾಕಿದ್ದು, ಸರ್ಕಾರ ಸಕಾಲದಲ್ಲಿ ‘ಮಧ್ಯಪ್ರವೇಶಿಸಿ’ ಖರೀದಿ ಮುಂತಾದ ಕ್ರಮ ಕೈಗೊಂಡಲ್ಲಿ ರೈತರಿಗೆ ಬೆಂಬಲ ಬೆಲೆ ಸಿಗುವಂತೆ ಮಾಡುವುದು ಕಷ್ಟಸಾಧ್ಯವಲ್ಲವೆಂದು ಸ್ಪಷ್ಟಪಡಿಸಿರುತ್ತದೆ. ಹಾಗೆಯೇ ಖರೀದಿಸುವುದನ್ನು ಸದುಪಯೋಗಪಡಿಸಿಕೊಳ್ಳುವ ದಾರಿಯನ್ನು ಸೂಚಿಸಲಾಗಿರುತ್ತದೆ” ಎಂದು ತಿಳಿಸಿದರು.

Advertisements

“ಆಹಾರ ಉತ್ಪಾದನೆಯ ಸ್ವಾವಲಂಬನೆಯನ್ನು ಕಾಪಾಡಿಕೊಳ್ಳುವ ಜತೆಗೆ ಇನ್ನೂ ತಾಂಡವವಾಡುತ್ತಿರುವ ಹಸಿವು, ಅಪೌಷ್ಠಿಕತೆಗಳನ್ನು ಹೊಡೆದೋಡಿಸುವ ಜವಾಬ್ದಾರಿಗಳು ದೇಶದ ಮುಂದಿರುವಾಗ ರೈತರ ಈ ನ್ಯಾಯಯುತ ಬೇಡಿಕೆಯನ್ನು ಈಡೇರಿಸುವುದು ಒಂದು ನೈತಿಕ ಹೊಣೆಗಾರಿಕೆಯಾಗಿದೆ. ಹಾಗಿದ್ದರೂ, ಸರ್ಕಾರದ ಈ ಮಧ್ಯ ಪ್ರವೇಶದಿಂದ ಮಾರುಕಟ್ಟೆ ವ್ಯವಸ್ಥೆ ದಾರಿ ತಪ್ಪುತ್ತದೆ. ಸರ್ಕಾರದ ಮೇಲೆ ಖರೀದಿಯ ಹೊರೆ ಜಾಸ್ತಿಯಾಗುತ್ತದೆ. ಇಲ್ಲಸಲ್ಲದ ಆತಂಕ ಅನುಮಾನಗಳನ್ನು ಮುಕ್ತ ಮಾರುಕಟ್ಟೆಯ ಅಂಧ ಪ್ರತಿಪಾದಕರು ವ್ಯಕ್ತಪಡಿಸುತ್ತಿರುವರು. ಹಾಗಾಗಿ ತಮ್ಮ ಕೂಗು ಗಟ್ಟಿಯಾಗಿ ಮತಪಟ್ಟಿಗೆಯ ಮೇಲೆ ಪ್ರಭಾವ ಬೀರಿದರೆ ಮಾತ್ರ ಈ ಬೇಡಿಕೆ ಈಡೇರಲಿದೆ ಎನ್ನುವುದನ್ನು ರೈತಾಪಿ ವರ್ಗ ಅರಿತು ಜಾಗೃತಗೊಳ್ಳುವಂತಾಗಬೇಕು” ಎಂದು ಕರೆ ನೀಡಿದರು.

“ಕೃಷಿ, ತಾಂತ್ರಿಕತೆ ಜತೆಗೆ ರೈತ ಬೆಳೆದ ಬೆಳೆಗೆ ಲಾಭದಾಯಕ ಬೆಲೆ ಬೇಕು, ಬೆಂಬಲ ಬೆಲೆ ತಾಂತ್ರಿಕ ವಿಚಾರವಲ್ಲ. ನಮ್ಮ ದೇಶ ಆಹಾರ ಉತ್ಪಾದನೆಗಳಲ್ಲಿ ಸ್ವಾವಲಂಬಿಯಾಗಿದ್ದು, ಅಂದಿನಂತೆ ವಿದೇಶಗಳಿಂದ ಆಮದು ಮಾಡಿಕೊಳ್ಳುವ ಪರಿಸ್ಥಿತಿ ಇಲ್ಲ. ಆದರೂ ದೇಶದಲ್ಲಿ ಶೇ.20ರಷ್ಟು ಹಸಿವು ಇನ್ನೂ ನಮ್ಮ ಜನರನ್ನು ಕಾಡುತ್ತಿದೆ. ಹಲವಾರು ಬಿಕ್ಕಟ್ಟಿನಿಂದ ರೈತ ಇಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದು, ಕಾನೂನಿನ ಚೌಕಟ್ಟಿನಲ್ಲಿ ಬೆಂಬಲ ಬೆಲೆಯನ್ನು ನೀಡಬೇಕು” ಎಂದು ಒತ್ತಾಯಿಸಿದರು.

“ಬೆಂಬಲ ಬೆಲೆ ನೀಡುವುದು ಸರ್ಕಾರಗಳ ನೈತಿಕ ಹೊಣೆಯಾಗಿದ್ದು, ಕೃಷಿ ಉತ್ಪನ್ನಗಳ ನೀತಿಯನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ. ಸರ್ಕಾರಿ ಬೆಲೆ ಘೋಷಿಸುವ ಅಧಿಕಾರ ರೈತನಿಗೆ ಇರುವುದಿಲ್ಲ ರೈತನಿಂದ ಖರೀದಿಯಾದ ಆಹಾರ ಉತ್ಪನ್ನ ಆಹಾರ ಭದ್ರತೆ ಕಾಯ್ದೆಯಡಿ ಅಂಗನವಾಡಿ ಶಾಲೆ ಮೂಲಕ ಹಂಚಿಕೆ ಮಾಡಲಾಗುತ್ತಿದ್ದು, ರೈತರು ಬೆಳೆಯುವ ಬೆಳೆಗೆ ವಿಮೆ ಮಾಡಬೇಕಾಗಿದೆ” ಎಂದು ಒತ್ತಾಯಿಸಿದರು.

ಕರ್ನಾಟಕ ರಾಜ್ಯ ಪ್ರಾಂತ ರೈತ ಸಂಘದ ಅಧ್ಯಕ್ಷ ಗೋವಿಂದರಾಜು ಮಾತನಾಡಿ, “ದೇಶದ ಪ್ರಧಾನಿ ನರೇಂದ್ರ ಮೋದಿಯವರ ಆಡಳಿತ ರೈತ ಸಮುದಾಯವನ್ನು ನಿರ್ಲಕ್ಷ್ಯ ಮಾಡಿದ್ದು, ಕೃಷಿ ಕ್ಷೇತ್ರವನ್ನು ಸಂಪೂರ್ಣ ಕಾರ್ಪೊರೇಟ್ ವಲಯಗಳನ್ನಾಗಿ ಮಾಡುತ್ತಿದೆ. ಇದರ ವಿರುದ್ಧವಾಗಿ 2020ರಲ್ಲಿ ಸಂಯುಕ್ತ ಕಿಸಾನ್ ಮೋರ್ಚಾದ ಸುಮಾರು 400ಕ್ಕೂ ಅತಿ ಹೆಚ್ಚು ರೈತ ಸಂಘಗಳು ಕೃಷಿ ವಿರೋಧಿ, ಜನವಿರೋಧಿ, ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಹೋರಾಟ ಮಾಡಿದ್ದನ್ನು ಇಡೀ ದೇಶವೇ ನೋಡಿದೆ. ಆದರೂ ಸರ್ಕಾರ ರೈತರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ವಿಫಲವಾಗಿದೆ” ಎಂದರು.

“ಕೃಷಿ ವಲಯ ಮತ್ತು ರೈತರು ಬಹಳ ಸಂಕಷ್ಟದಲ್ಲಿದ್ದು, ರೈತರು ಬೆಳೆದ ಎಲ್ಲ ಬೆಳೆಗಳಿಗೆ ಬೆಂಬಲ ಬೆಲೆ ನಿಗದಿ ಮಾಡಿ ಶಾಸನಾತ್ಮಕ ನಿರ್ಧಾರಗಳನ್ನು ಕೈಗೊಳ್ಳಬೇಕೆಂದು ಅನೇಕ ಐತಿಹಾಸಿಕ ಹೋರಾಟಗಳು ನಡೆದಿದ್ದು, ಇದಕ್ಕಾಗಿ ಸುಮಾರು ನೂರಾರು ರೈತರು ಪ್ರಾಣ ತ್ಯಾಗ ಮಾಡಿದ್ದಾರೆ. ರೈತರ ಸಾಲ ಮನ್ನಾ, ಸ್ವಾಮಿನಾಥನ್ ವರದಿ ಜಾರಿ, ತುಮಕೂರು ಕೊಬ್ಬರಿಗೆ ಬೆಂಬಲ ಬೆಲೆ ಸೇರಿದಂತೆ ಅನೇಕ ರೈತರ ವಿಚಾರಗಳನ್ನು ಕಾನೂನಿನ ಅಡಿಯಲ್ಲಿ ಶಾಸನಾತ್ಮಕವಾಗಿ ಸರ್ಕಾರ ಜಾರಿಗೊಳಿಸಬೇಕು” ಎಂದು ಒತ್ತಾಯಿಸಿದರು.

“ರಾಷ್ಟ್ರೀಯ ರಾಜ್ಯ ರೈತ ಸಂಘ ರೈತರ ಸಮಸ್ಯೆಗಳ ಕುರಿತಾಗಿ ಸ್ಪಂದಿಸದ ಕೇಂದ್ರ ಸರ್ಕಾರದ ವಿರುದ್ಧ ನಡೆದ ಸಭೆಯಲ್ಲಿ ರೈತ ಸಂಘ ರೈತರಿಗೆ ಕರಪತ್ರಗಳನ್ನು ಹಂಚುವ ಮೂಲಕ ಕೇಂದ್ರ ಸರ್ಕಾರದ ವಿರೋಧಿ ನೀತಿಯ ಅಸ್ತಿತ್ವದ ಸಲುವಾಗಿ ಬಂದಿರುವ ಲೋಕಸಭಾ ಚುನಾವಣೆಯಲ್ಲಿ ರೈತರನ್ನು ಎಚ್ಚರಿಕೆ ಮಾಡುವ ಕೆಲಸ ಮಾಡಲು ಒಮ್ಮತದ ತೀರ್ಮಾನ ಕೈಗೊಳ್ಳಲಾಗಿದೆ” ಎಂದು ತಿಳಿಸಿದರು.

ಪ್ರಗತಿಪರ ಚಿಂತಕ ಹಾಗೂ ಗಾಂಧಿ ಸಹಜ ಬೇಸಾಯ ಶಾಲೆಯ ಮುಖ್ಯಸ್ಥ ಯತಿರಾಜ್ ಮಾತನಾಡಿ, “ದೆಹಲಿ ಹೋರಾಟದ ಬಗ್ಗೆ ಅನೇಕ ವರದಿಗಳು ಬಂದಿವೆ. ಪರ ವಿರೋಧ ಚರ್ಚೆಗಳು ನಡೆಯುತ್ತಿವೆ. ಖಾತ್ರಿಪಡಿಸಿದ ಕನಿಷ್ಟ ಬೆಂಬಲ ಬೆಲೆಯನ್ನು ಸರ್ಕಾರ ಕಾನೂನಿನ ಚೌಕಟ್ಟಿನೊಳಗೆ ಗುರುತಿಸಬೇಕು. ಪ್ರಸ್ತುತ ಚುನಾವಣೆಯಲ್ಲಿ ಪಕ್ಷಗಳು ತಮ್ಮ ಪ್ರಣಾಳಿಕೆ ಮತ್ತು ನಿಲುವುಗಳು ರೈತರ ಪರವಾಗಿರುವಂತೆ ಗಮನ ಹರಿಸಬೇಕು. ದೇಶದಲ್ಲಿ ರೈತರ ಬೇಡಿಕೆಗಳು ಭುಗಿಲೆದ್ದಿದೆ. ಕೇಂದ್ರ ಸರ್ಕಾರ ರೈತ ವಿರೋಧಿ ಕಾಯ್ದೆ ಜಾರಿಗೆ ತಂದು ಎಂಎಸ್‌ಪಿ ಕೊಡಬಾರದೆಂಬ ಧೋರಣೆ ಮಾಡುತ್ತಿದೆ. ಹೀಗಾಗಿ ರೈತ ಸಮುದಾಯ ಕೇಂದ್ರ ಸರ್ಕಾರಕ್ಕೆ ಈಗಿರುವ ಲೋಕಸಭಾ ಚುನಾವಣೆಯಲ್ಲಿ ತಕ್ಕ ಉತ್ತರ ಕೊಡಬೇಕಿದೆ” ಎಂದು ತಿಳಿಸಿದರು.

ಈ ಸುದ್ದಿ ಓದಿದ್ದೀರಾ? ಉತ್ತರ ಕರ್ನಾಟಕ | 2.5 ಲಕ್ಷ ಮಂದಿ ವಲಸೆ ಮತದಾರರ ಸಂಪರ್ಕಕ್ಕೆ ಮುಂದಾದ ಚುನಾವಣಾ ಆಯೋಗ

ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡ ರವೀಶ್, ರೈತ ಕಾರ್ಮಿಕ ಸಂಘದ ಎನ್ ಎಸ್ ಸ್ವಾಮಿ ಸೇರಿದಂತೆ ಇತರರು ಇದ್ದರು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಕಡಿಮೆ ದರದಲ್ಲಿ ಊಟ ಉಪಾಹಾರ ಒದಗಿಸುವ ಅಕ್ಕ ಕೆಫೆ ಪ್ರಾರಂಭ

ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉಡುಪಿ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ...

ಸಕಲೇಶಪುರ | ಸಮಾಜ ವ್ಯಸನಮುಕ್ತವಾದಾಗ ಮಾತ್ರ ನೆಮ್ಮದಿಯ ಬದುಕು ಸಾಧ್ಯ: ಅವಿನಾಶ್‌ ಕಾಕಡೆ

ಸಮಾಜ ವ್ಯಸನಮುಕ್ತವಾದಾಗ ಮಾತ್ರ ನೆಮ್ಮದಿಯ ಬದುಕು ಸಾಧಿಸಲು ಸಾಧ್ಯ. ಹಾಗಾಗಿ ಮನೆಯಿಂದಲೇ...

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

Download Eedina App Android / iOS

X