ಅಲಹಾಬಾದ್ ಹೈಕೋರ್ಟ್ ಶುಕ್ರವಾರ ಉತ್ತರ ಪ್ರದೇಶ ಬೋರ್ಡ್ ಆಫ್ ಮದರಸಾ ಎಜುಕೇಶನ್ ಆಕ್ಟ್ ಅನ್ನು ಅಸಾಂವಿಧಾನಿಕ ಎಂದು ಘೋಷಿಸಿದ್ದು, ‘ಇದು ಜಾತ್ಯಾತೀತೆಗೆ ವಿರುದ್ಧವಾಗಿದೆ’ ಎಂದು ಹೇಳಿದೆ. ಜೊತೆಗೆ ಇಲ್ಲಿ ಕಲಿಯುವ ಮಕ್ಕಳನ್ನು ಶೀಘ್ರವೇ ಶಾಲೆಗೆ ಸೇರಿಸಲು ತಿಳಿಸಿದೆ.
ನ್ಯಾಯಮೂರ್ತಿ ವಿವೇಕ್ ಚೌಧರಿ ಮತ್ತು ನ್ಯಾಯಮೂರ್ತಿ ಸುಭಾಶ್ ವಿದ್ಯಾರ್ಥಿ ಅವರನ್ನು ಒಳಗೊಂಡ ನ್ಯಾಯಪೀಠವು ಈ ಸಂದರ್ಭದಲ್ಲೇ ಪ್ರಸ್ತುತ ಮದರಸಾದಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಸಾಂಪ್ರದಾಯಿಕ ಶಿಕ್ಷಣ ವ್ಯವಸ್ಥೆಗೆ ತರುವ ನಿಟ್ಟಿನಲ್ಲಿ ಯೋಜನೆ ರೂಪಿಸುವಂತೆ ಉತ್ತರ ಪ್ರದೇಶ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಅನ್ಶುಮಾನ್ ಸಿಂಗ್ ರಾಥೋಡ್ ಎಂಬವರು ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಈ ತೀರ್ಪನ್ನು ನೀಡಿದೆ. ಉತ್ತರ ಪ್ರದೇಶ ರಾಜ್ಯದಲ್ಲಿರುವ ಇಸ್ಲಾಮಿಕ್ ಶಿಕ್ಷಣ ಸಂಸ್ಥೆಗಳ ಸಮೀಕ್ಷೆಯನ್ನು ನಡೆಸಲು ರಾಜ್ಯ ಸರ್ಕಾರವು ನಿರ್ಧರಿಸಿದ ಒಂದು ದಿನದ ಬಳಿಕ ಹೈಕೋರ್ಟ್ ಈ ಆದೇಶವನ್ನು ನೀಡಿದೆ.
ಇನ್ನು ವಿದೇಶದಿಂದ ಮದರಸಾ ಫಂಡ್ ಬಗ್ಗೆ ತನಿಖೆಯನ್ನು ನಡೆಸಲು ಇತ್ತೀಚೆಗೆ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಲಾಗಿದೆ. ಅನ್ಶುಮಾನ್ ಸಿಂಗ್ ರಾಥೋಡ್ ಯುಪಿ ಮದರಸಾ ಬೋರ್ಡ್‌ಗಳ ಸಾಂವಿಧಾನಿಕ ನಿಲುವನ್ನು ಪ್ರಶ್ನಿಸಿದ್ದಾರೆ. ಜೊತೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಲ್ಪಸಂಖ್ಯಾತ ಕಲ್ಯಾಣ ನಿಧಿಯ ನಿರ್ವಹಣೆಯ ಬಗ್ಗೆ ಪ್ರಶ್ನಿಸಿದ್ದರು.