ದೇಶದಲ್ಲಿ ದಲಿತರ ರಾಜಕೀಯ ಸ್ಥಿತಿಗತಿ ಚಿಂತಾಜನಕವಾಗಿದೆ. ಅದರಲ್ಲೂ ಯುವಜನರು ರಾಜಕೀಯ ಪಕ್ಷಗಳ ಆಳುಗಳಾಗಿ ದುಡಿಯುತ್ತಿದ್ದಾರೆ. ಯುವಜನರ ಎಚ್ಚೆತ್ತುಕೊಂಡು ಸಮಾಜದ ಬದಲಾವಣೆಗೆ ಮುಂದಾಗಿ ಅಭಿವೃದ್ಧಿಗಾಗಿ ಶ್ರಮಿಸಬೇಕು ಎಂದು ಹಿರಿಯ ದಲಿತ ಹೋರಾಟಗಾರ ವೈಜಿನಾಥ ಸೂರ್ಯವಂಶಿ ಕರೆ ನೀಡಿದರು.
ಬೀದರ್ ಜಿಲ್ಲೆಯ ಹುಮನಾಬಾದ್ ತಾಲೂಕಿನ ಡಾಕುಳಗಿ ಗ್ರಾಮದಲ್ಲಿ ದಲಿತ್ ಯುನಿಟಿ ಮೂವ್‌ಮೆಂಟ್ ರಾಜ್ಯ ಸಮಿತಿಯಿಂದ ಮಹಾಡ್ ಚೌಡಾರ್ ಕೆರೆ ಪ್ರವೇಶ ಚಳುವಳಿ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಉಪನ್ಯಾಸಕ ಅನಿಲ್ ಟೆಂಗಳಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿ, “ಭಾರತದಲ್ಲಿ ಅಸ್ಪೃಶ್ಯರಿಗೆ ನೀರು ಕುಡಿಯಲು ಅವಕಾಶ ಇರದೇ ಇರುವ ಜಾತಿವ್ಯವಸ್ಥೆ ಸಮಾಜದಲ್ಲಿ ಡಾ. ಬಿ ಆರ್ ಅಂಬೇಡ್ಕರ್ ಅವರು ಕುಡಿಯುವ ನೀರಿಗಾಗಿ ಹೋರಾಟ ನಡೆಸಿ ದಲಿತರಿಗೆ ನೀರು ಕುಡಿಯಲು ಅವಕಾಶ ಕಲ್ಪಿಸಿದರು. ಆ ದಿನವೇ ಮಹಾಡ್ ಚೌಡಾರ್ ಪ್ರವೇಶ ಚಳವಳಿ ದಿನವಾಗಿದೆ” ಎಂದು ಹೇಳಿದರು.
“ದೇಶದಲ್ಲಿ ಅನೇಕ ಹಳ್ಳಿಗಳಲ್ಲಿ ಅಸ್ಪೃಶ್ಯತೆ ಇನ್ನೂ ಜೀವಂತವಾಗಿ ಉಳಿದಿದೆ. ದಲಿತ ಎಂಬ ಕಾರಣಕ್ಕೆ ದೇಶಾದ್ಯಂತ ಅಸ್ಪೃಶ್ಯ ಸಮಾಜದವರ ಮೇಲೆ ನಿರಂತರವಾಗಿ ದಬ್ಬಾಳಿಕೆ, ದೌರ್ಜನ್ಯ, ಕೊಲೆ ನಡೆಯುತ್ತಿರುವುದು ಜಾತಿವ್ಯವಸ್ಥೆ ಜೀವಂತಿಕೆಗೆ ಸಾಕ್ಷಿಯಾಗಿದೆ” ಎಂದು ಕಳವಳ ವ್ಯಕ್ತಪಡಿಸಿದರು.
ದಲಿತ್ ಯುನಿಟಿ ಮೂವ್‌ಮೆಂಟ್ ಸಂಘಟನಾ ಸಂಸ್ಥಾಪಕ ವಿನೋದ್ ರತ್ನಾಕರ ಮಾತನಾಡಿ, “ಸರ್ಕಾರದ ಆಸ್ತಿಯಾದ ಊರಿನ ಕೆರೆಯ ನೀರು ಸಾರ್ವಜನಿಕರು ಮುಕ್ತವಾಗಿ ಬಳಸಬಹುದಿತ್ತು. ಆದರೆ, ಮನುಸ್ಮೃತಿ ಆರಾಧಕರು ಅಸ್ಪೃಶ್ಯರಿಗೆ ಬಳಸಲು ಅವಕಾಶ ಕೊಡಲಿಲ್ಲ. ದಲಿತರಿಗೆ ಕೆರೆ ನೀರು ಬಳಕೆಗೆ ಅವಕಾಶ ನೀಡಬೇಕೆಂಬ ಉದ್ದೇಶದಿಂದ ಅಂಬೇಡ್ಕರರು ಮಹಾಡ್ ಸತ್ಯಾಗ್ರಹ ಮಾಡಬೇಕಾಗಿ ಬಂತು” ಎಂದರು.
ರಾಜ್ಯಾಧ್ಯಕ್ಷ ಪ್ರಕಾಶ್ ರಾವಣ ಮಾತನಾಡಿ, “ಸರ್ಕಾರದ ಆಸ್ತಿಯಾದ ನೈಸರ್ಗಿಕ ಸಂಪನ್ಮೂಲ, ಶಿಕ್ಷಣ, ಆರೋಗ್ಯ ಮತ್ತು ರಾಜಕೀಯ ಪ್ರಾತಿನಿಧ್ಯ ಸಾರ್ವಜನಿಕರಿಗೆ ಮುಕ್ತವಾಗಿ ದಕ್ಕುತ್ತಿಲ್ಲ. ಇದಕ್ಕಾಗಿಯೇ ನಾವು ಮತ್ತೊಂದು ಸತ್ಯಾಗ್ರಹ ಮಾಡಬೇಕಾದ ಅವಶ್ಯಕತೆ ಇದೆ” ಎಂದು ಹೇಳಿದರು.
“ಸ್ವತಂತ್ರ ಪೂರ್ವದಿಂದಲೂ ದಲಿತರ ಮೇಲೆ ನಿರಂತರ ಶೋಷಣೆ ನಡೆಯುತ್ತಿದೆ. ಅದು ಸ್ವಾತಂತ್ರ್ಯ ನಂತರವೂ ಮುಂದುವರೆದಿದೆ. ಎಸ್‌ಸಿ/ಎಸ್‌ಟಿ, ಒಬಿಸಿ ಸಮಾಜದ ಉನ್ನತಿಗಾಗಿ ಶ್ರಮಿಸಲು ಸಂಘಟನಾತ್ಮಕ ಹೋರಾಟ ಅನಿವಾರ್ಯ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಗದಗ | ಸಾರ್ವಜನಿಕರು ಮೊಬೈಲ್ ಮೂಲಕವೇ ಅಕ್ರಮಗಳ ಬಗ್ಗೆ ದೂರು ಸಲ್ಲಿಸಿ: ಜಿಲ್ಲಾಧಿಕಾರಿ
ರಾಜ್ಯ ಸಂಘಟನಾ ಸಂಚಾಲಕ ಗೌತಮ್ ದೊಡ್ಡಿ, ಕಾರ್ಯಕ್ರಮದ ಅಧಯಕ್ಷತೆ ವಹಿಸಿದ್ದ ಶಿವಪುತ್ರ ಸೋನಿ, ಸಂಘಟನೆಯ ಪದಾಧಿಕಾರಿಗಳು, ಗ್ರಾಮಸ್ಥರು ಇದ್ದರು.
