ಭೂಮಿಯಲ್ಲಿರುವ ಸಕಲ ಜೀವ ರಾಶಿಗಳಿಗೂ ನೀರು ಅಗತ್ಯವಾಗಿ ಬೇಕು. ಆದರೆ ಮನುಷ್ಯನು ನೀರನ್ನು ಬಳಸುವ ಪ್ರಮಾಣವು ಮಾತ್ರ ಹೆಚ್ಚಾಗಿದೆ. ನಗರ ಪ್ರದೇಶಗಳಲ್ಲಿ ನೀರಿನ ಸಮಸ್ಯೆಯು ಕಾಡುತ್ತಿದೆ. ನಗರ ಪ್ರದೇಶಗಳಲ್ಲಿ ವಾಸಿಸುತ್ತಿರುವ ಜನರು ನೀರನ್ನು ಉಳಿತಾಯ ಮಾಡಲು ಈ ಕೆಲವು ಟಿಪ್ಸ್‌ಗಳನ್ನು ಪಾಲಿಸುವುದು ಉತ್ತಮ ಎಂದು ತಾಳಿಕೋಟಿಯ ಎಸ್ ಕೆ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದ ರಸಾಯನಶಾಸ್ತ್ರ ಉಪನ್ಯಾಸಕ ಆಯ್ ವ್ಹಿ ರೋಡಗಿ ಸಲಹೆ ನೀಡಿದರು.
ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದ ಜಿ ಆರ್ ಗಾಂಧಿ ಕಲಾ, ವಾಯ್ ಎ ಪಾಟೀಲ ವಾಣಿಜ್ಯ ಹಾಗೂ ಎಂ ಪಿ ದೋಶಿ ವಿಜ್ಞಾನ ಪದವಿ ಮಹಾವಿದ್ಯಾಲಯದಲ್ಲಿ ರಸಾಯನಶಾಸ್ತ್ರ ವಿಭಾಗದ ಅಡಿಯಲ್ಲಿ ಹಮ್ಮಿಕೊಂಡಿದ್ದ “ವಿಶ್ವ ಜಲ ದಿನಾಚರಣೆ” ಕಾರ್ಯಕ್ರಮದಲ್ಲಿ ಮಾತನಾಡಿದರು.
“ನೀರು ಕುಡಿಯುವುದರಿಂದ ಹಿಡಿದು ದೈನಂದಿನ ಚಟುವಟಿಕೆಗಳಿಗೆ ನೀರಿನ ಬಳಕೆಯು ಹೆಚ್ಚಿದೆ. ನೀರಿನ ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಹೊಣೆಯಾಗಿದೆ” ಎಂದು ಹೇಳಿದರು.
ಪ್ರಾಂಶುಪಾಲ ಡಾ ಎಸ್ ಬಿ ಜಾಧವ ಮಾತನಾಡಿ, “ಬೇಸಿಗೆಕಾಲ ಆರಂಭವಾಗುತ್ತಿದ್ದಂತೆ ನೀರಿನ ಹಾಹಾಕಾರ ಕಾಣಿಸಿಕೊಳ್ಳುತ್ತದೆ. ದೈನಂದಿನ ಚಟುವಟಿಕೆಗಳಿಗೆ ಬಿಡಿ, ಕುಡಿಯುವುದಕ್ಕೂ ನೀರು ಇರುವುದಿಲ್ಲ. ಕಾಡಿನ ನಾಶದಿಂದ ಸರಿಯಾದ ಸಮಯಕ್ಕೆ ಮಳೆ ಬಾರದೆ ಹಳ್ಳ, ಕೊಳ್ಳ, ನದಿ ಸೇರಿದಂತೆ ಅದೆಷ್ಟೋ ಸಿಹಿ ನೀರಿನ ಮೂಲಗಳು ಬತ್ತಿ ಹೋಗಿವೆ. ಹೀಗಾಗಿ ಸೃಷ್ಟಿಯಲ್ಲಿರುವ ಸಕಲ ಜೀವರಾಶಿಗಳಿಗೂ ಕುಡಿಯಲು ನೀರಿಲ್ಲದಂತಾಗಿದೆ” ಎಂದು ಹೇಳಿದರು.
“ನೀರನ್ನು ಮಿತವಾಗಿ ಬಳಸುವವರು ಕೆಲವೇ ಕೆಲವು ಜನರಷ್ಟೆ, ಹೀಗಾಗಿ ನೀರಿನ ಬಳಕೆಯಲ್ಲಿ ಸಣ್ಣ ಪುಟ್ಟ ಬದಲಾವಣೆಯನ್ನು ಮಾಡಿಕೊಂಡರೆ ನೀರನ್ನು ಉಳಿತಾಯ ಮಾಡುವುದು ಕಷ್ಟವೇನಲ್ಲ” ಎಂದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಜಲ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯ: ನ್ಯಾ. ವಿಶ್ವನಾಥ ಯಮಕನಮರಡಿ
ಉಪನ್ಯಾಸಕಿ ಶೃತಿ ಬಿರಾದಾರ, ಉಪನ್ಯಾಸಕ ಪರಶುರಾಮ ಅಜಮನಿ, ಉಪನ್ಯಾಸಕಿ ಶೃತಿ ಪಾಟೀಲ, ಡಾ ವಿಶ್ವಾಸ ಕೊರವಾರ, ಡಾ ಸುರೇಂದ್ರ ಕೆ, ಡಾ. ಸಿ ಎಸ್ ಬಿರಾದಾರ, ಡಾ.ಶ್ರೀಕಾಂತ ರಾಠೋಡ, ಮಲ್ಲಿಕಾರ್ಜುನ ಕೋಣದೆ, ಆರ್ ಪಿ ಇಂಗನಾಳ, ಪಂಕಜ ಕುಲಕರ್ಣಿ, ಬಲರಾಮ ವಡ್ಡರ ಸೇರಿದಂತೆ ಇತರರು ಇದ್ದರು.