ವಿಧಾನಸಭೆಯಲ್ಲಿ ಅಂಗೀಕರಿಸಿದ್ದ ನಾಲ್ಕು ಮಸೂದೆಗಳನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಪರಿಗಣನೆಗಾಗಿ ಕಾಯ್ದಿರಿಸಿರುವ ರಾಜ್ಯಪಾಲರ ವಿರುದ್ಧ ಕೇರಳ ಸರ್ಕಾರವು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದೆ.
ಸಿಪಿಎಂ ನೇತೃತ್ವದ ಲೆಫ್ಟ್ ಡೆಮಾಕ್ರಟಿಕ್ ಫ್ರಂಟ್ (ಎಲ್‌ಡಿಎಫ್) ಸರ್ಕಾರವು ತನ್ನ ಅರ್ಜಿಯಲ್ಲಿ ರಾಷ್ಟ್ರಪತಿಗಳ ಕಾರ್ಯದರ್ಶಿ, ಕೇಂದ್ರ ಸರ್ಕಾರ, ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಮತ್ತು ಅವರ ಹೆಚ್ಚುವರಿ ಕಾರ್ಯದರ್ಶಿಯನ್ನು ಪ್ರತಿವಾದಿಗಳನ್ನಾಗಿ ಹೆಸರಿಸಿದೆ.
ವಿಧಾನಸಭೆಯಲ್ಲಿ ಅಂಗೀಕರಿಸಿದ್ದ ನಾಲ್ಕು ಮಸೂದೆಗಳನ್ನು – ವಿಶ್ವವಿದ್ಯಾಲಯ ಕಾನೂನುಗಳು (ತಿದ್ದುಪಡಿ) (ಸಂ.2) ಮಸೂದೆ-2021; ಕೇರಳ ಸಹಕಾರ ಸಂಘಗಳ (ತಿದ್ದುಪಡಿ) ಮಸೂದೆ-2022; ವಿಶ್ವವಿದ್ಯಾಲಯ ಕಾನೂನುಗಳು (ತಿದ್ದುಪಡಿ) ಮಸೂದೆ-2022; ಮತ್ತು ವಿಶ್ವವಿದ್ಯಾನಿಲಯ ಕಾನೂನುಗಳು (ತಿದ್ದುಪಡಿ) (ಸಂ.3) ಮಸೂದೆ-2022 – ಯಾವುದೇ ಕಾರಣವನ್ನು ನೀಡದೆಯೇ ಅಸಂವಿಧಾನಿಕ ಎಂದು ಘೋಷಿಸಲಾಗಿದೆ ಎಂದು ಕೇರಳ ಸರ್ಕಾರ ಆರೋಪಿಸಿದೆ.
ಹಲವಾರು ತಿದ್ದುಪಡಿಗಳ ಜೊತೆಗೆ, ರಾಜ್ಯ ಸರ್ಕಾರವು ಈ ನಾಲ್ಕು ಸೇರಿದಂತೆ ಒಟ್ಟು ಏಳು ಮಸೂದೆಗಳನ್ನು ಅಂಗೀಕರಿಸಿದೆ. ಆ ಏಳು ಮಸೂದೆಗಳ ಪೈಕಿ, ನಾಲ್ಕು ಮಸೂದೆಗಳನ್ನು ರಾಷ್ಟ್ರಪತಿಗಳ ಪರಿಗಣನೆಗಾಗಿ ಅಕ್ರಮವಾಗಿ ಗವರ್ನರ್ ಖಾನ್ ಅವರು ಕಾಯ್ದಿರಿಸಿದ್ದಾರೆ ಎಂದು ಸರ್ಕಾರ ಆರೋಪಿಸಿದೆ.
“ರಾಜ್ಯಪಾಲರು ವಿಧೇಯಕಗಳನ್ನು ದೀರ್ಘ ಮತ್ತು ಅನಿರ್ದಿಷ್ಟ ಅವಧಿಯವರೆಗೆ ಬಾಕಿ ಇರಿಸುವುದು ಮತ್ತು ನಂತರ ಸಂವಿಧಾನಾತ್ಮಕ ಯಾವುದೇ ಕಾರಣಗಳನ್ನು ನೀಡದೆ ಮಸೂದೆಗಳನ್ನು ರಾಷ್ಟ್ರಪತಿಗಳ ಪರಿಗಣನೆಗೆ ಕಾಯ್ದಿರಿಸುವುದು ಸ್ಪಷ್ಟವಾಗಿ ಕಾನೂನುಬಾಹಿರವಾಗಿದೆ. ಸಂವಿಧಾನದ ಆರ್ಟಿಕಲ್ 14 (ಕಾನೂನಿನ ಮುಂದೆ ಸಮಾನತೆ) ಅನ್ನು ಉಲ್ಲಂಘಿಸುತ್ತದೆ” ಎಂದು ಸರ್ಕಾರವು ಅರ್ಜಿಯಲ್ಲಿ ಹೇಳಿದೆ.
“ಹೆಚ್ಚುವರಿಯಾಗಿ, ರಾಜ್ಯ ಅಸೆಂಬ್ಲಿ ಜಾರಿಗೊಳಿಸಿದ ಕಲ್ಯಾಣ ಶಾಸನದ ಪ್ರಯೋಜನಗಳನ್ನು ನಿರಾಕರಿಸುವ ಮೂಲಕ ಸಂವಿಧಾನದ 21ನೇ ವಿಧಿಯ ಅಡಿಯಲ್ಲಿ ಕೇರಳ ರಾಜ್ಯದ ಜನರ ಹಕ್ಕುಗಳನ್ನು ಕಸಿದುಕೊಳ್ಳಲಾಗಿದೆ” ಎಂದು ಸರ್ಕಾರ ವಾದಿಸಿದೆ.
ಈ ಹಿಂದೆಯೂ, ವಿಧಾನಸಭೆಯಿಂದ ಅಂಗೀಕರಿಸಲ್ಪಟ್ಟ ಹಲವಾರು ಮಸೂದೆಗಳಿಗೆ ರಾಜ್ಯಪಾಲರು ಒಪ್ಪಿಗೆ ನೀಡಿಲ್ಲ ಎಂದು ಆರೋಪಿಸಿ ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿತ್ತು. ನ್ಯಾಯಾಲಯವು ಕಳೆದ ವರ್ಷ ನವೆಂಬರ್ 20ರಂದು ಮನವಿಯ ಕುರಿತು ರಾಜ್ಯಪಾಲರ ಕಚೇರಿಗೆ ನೋಟಿಸ್ ನೀಡಿತ್ತು.