ಶ್ರೀ ಜಗದ್ಗುರು ರೇಣುಕಾಚಾರ್ಯರು ಅಂದಿನ ಸಮಾಜದಲ್ಲಿ ಬೇರೂರಿದ್ದ ಮೇಲು-ಕೀಳು ಭಾವ ಹೋಗಲಾಡಿಸಿ ಸಮ ಸಮಾಜ ನಿರ್ಮಿಸಿದ್ದರು ಎಂದು ಡಾ.ರಾಜಶೇಖರ ಶಿವಾಚಾರ್ಯ ನುಡಿದರು.
ಬೀದರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಡಳಿತದಿಂದ ಆಯೋಜಿಸಿದ್ದ ಶ್ರೀ ಜಗದ್ಗುರು ರೇಣುಕಾಚಾರ್ಯರ ಜಯಂತಿ ಕಾರ್ಯಕ್ರಮದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರ ಭಾವಚಿತ್ರಕ್ಕೆ ಹಾಗು ಸಿದ್ಧಾಂತ ಶಿಖಾಮಣಿ ಗ್ರಂಥಕ್ಕೆ ಪೂಜಿಸಿ, ಪುಷ್ಪ ಅರ್ಪಿಸಿ ಜಯಂತಿ ಉತ್ಸವಕ್ಕೆ ಚಾಲನೆ ನೀಡಲಾಯಿತು.
“ತೆಲಂಗಾಣದ ಕೊಲನಪಾಕದ ಸೋಮೇಶ್ವರ ಲಿಂಗದಲ್ಲಿ ಉದ್ಭವಿಸಿದ ರೇಣುಕಾಚಾರ್ಯರು ಸರ್ವ ಸಮುದಾಯಗಳ ಕಲ್ಯಾಣಕ್ಕೆ ಶ್ರಮಿಸಿದ್ದರು.18 ಮಠಗಳನ್ನು ಸ್ಥಾಪಿಸಿ ಸರ್ವ ಸಮುದಾಯಗಳ ಜನರಿಗೆ ಲಿಂಗ ದೀಕ್ಷೆ, ಭಕ್ತಿ ಹಾಗೂ ಮುಕ್ತಿಯ ಮಾರ್ಗ ತೋರಿದ್ದರು. ಮನುಕುಲಕ್ಕೆ ಅವರ ಕೊಡುಗೆ ಅನನ್ಯವಾಗಿದೆ. ಶಿವಾಗಮ ಹಾಗೂ ಸಿದ್ಧಾಂಥ ಶಿಖಾಮಣಿ ಗ್ರಂಥಗಳು ರೇಣುಕಾಚಾರ್ಯರ ಕಾರ್ಯಗಳಿಗೆ ಹಿಡಿದ ಕೈಗನ್ನಡಿಯಾಗಿವೆ” ಎಂದು ತಿಳಿಸಿದರು.
ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಶಿವಯ್ಯ ಸ್ವಾಮಿ ಮಾತನಾಡಿ, “ರಾಜ್ಯ ಸರ್ಕಾರದ ಮಾದರಿಯಲ್ಲಿ ಕೇಂದ್ರ ಸರ್ಕಾರವೂ ದೇಶದಾದ್ಯಂತ ರೇಣುಕಾಚಾರ್ಯ ಜಯಂತಿ ಆಚರಣೆಗೆ ಕ್ರಮ ಕೈಗೊಳ್ಳಬೇಕು. ಬನಾರಸ್ ಹಿಂದು ವಿಶ್ವವಿದ್ಯಾಲಯ ಹಾಗೂ ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ ಜಗದ್ಗುರು ಪಂಚಾಚಾರ್ಯರ ಅಧ್ಯಯನ ಪೀಠ ಸ್ಥಾಪಿಸಬೇಕು” ಎಂದು ಬೇಡಿಕೆ ಮಂಡಿಸಿದರು.
ಸಿದ್ಧಾಂತ ಶಿಖಾಮಣಿ ಗ್ರಂಥ ವಿಶ್ವದ 19 ಭಾಷೆಗಳಿಗೆ ಅನುವಾದಗೊಂಡಿದೆ. ವಿದೇಶಿಗರೂ ಲಿಂಗ ದೀಕ್ಷೆ ಪಡೆದು ಶಿವತತ್ವ ಅನುಸರಿಸುತ್ತಿದ್ದಾರೆ ಎಂದು ತಿಳಿಸಿದರು.
ಲೋಕಸಭೆ ಚುನಾವಣೆ ಪ್ರಯುಕ್ತ ನೀತಿ ಸಂಹಿತೆ ಜಾರಿಯಲ್ಲಿ ಇರುವ ಕಾರಣ ಕಾರ್ಯಕ್ರಮ ಸರಳವಾಗಿ ಆಯೋಜಿಸಿದ್ದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಚುನಾವಣಾ ತಹಶೀಲ್ದಾರ್ ಕಿರಣ ಕುಮಾರ ಪಾಟೀಲ್ ಅವರು ರೇಣುಕಾಚಾರ್ಯರ ಭಾವಚಿತ್ರಕ್ಕೆ ಪುಷ್ಪ ಅರ್ಪಣೆ ಹಾಗೂ ಸಿದ್ಧಾಂತ ಶಿಖಾಮಣಿ ಗ್ರಂಥಕ್ಕೆ ಪೂಜೆ ಸಲ್ಲಿಸಿ ಕಾರ್ಯಕ್ರಮ ಉದ್ಘಾಟಿಸಿದರು.
ಈ ಸುದ್ದಿ ಓದಿದ್ದೀರಾ? ಲೋಕಸಭಾ ಚುನಾವಣೆ | ಕಾಂಗ್ರೆಸ್ ಅಭ್ಯರ್ಥಿಗಳ 4ನೇ ಪಟ್ಟಿ ಪ್ರಕಟ; ಸೆಂಥಿಲ್ ಸ್ಪರ್ಧೆ
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಕಚೇರಿಯ ಅಧಿಕಾರಿ ಮಹೇಶ, ವಿಶ್ವ ಹಿಂದು ಪರಿಷತ್ ಉತ್ತರ ಕರ್ನಾಟಕ ಪ್ರಾಂತ ಕಾರ್ಯಕಾರಿಣಿ ಸದಸ್ಯ ರಾಮಕೃಷ್ಣ ಸಾಳೆ, ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ವೈಜಿನಾಥ ಕಮಠಾಣೆ, ಯುವ ಘಟಕದ ಅಧ್ಯಕ್ಷ ಸಂಗಮೇಶ ಮೂಲಗೆ, ಮುಖಂಡರಾದ ರವಿ ಸ್ವಾಮಿ, ಓಂಪ್ರಕಾಶ ರೊಟ್ಟೆ, ಜಗದೀಶ್ವರ ಬಿರಾದಾರ, ವರದಯ್ಯ ಸ್ವಾಮಿ, ಮಹಾಲಿಂಗ ಸ್ವಾಮಿ ಚಟ್ನಳ್ಳಿ, ಬಸವರಾಜ ಸ್ವಾಮಿ ಹೆಡಗಾಪುರ, ಅಂಬರೀಷ್ ಸ್ವಾಮಿ, ಕಾವೇರಿ ಸ್ವಾಮಿ, ಡಾ. ದಿಲೀಪ್ ಕಮಠಾಣೆ, ಕಂಟೆಪ್ಪ ಭಂಗೂರೆ, ಶಿವಶಂಕರ ಬೆಮಳಗಿ, ರೇವಣಸಿದ್ದಯ್ಯ ಮಠಪತಿ, ಕಾರ್ತಿಕ ಮಠಪತಿ,ಸೋಮನಾಥ, ಮಹಾರುದ್ರ ಡಾಕುಳಗಿ, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ವಿವಿಧ ಸಮಾಜಗಳ ಗಣ್ಯರು ಇದ್ದರು.