ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬಂಧನವನ್ನು ವಿರೋಧಿಸಿ ಆಮ್ ಆದ್ಮಿ ಪಕ್ಷ (ಎಎಪಿ) ಭಾನುವಾರ ದೆಹಲಿಯಾದ್ಯಂತ ಮೇಣದಬತ್ತಿ ಮೆರವಣಿಗೆ ಮತ್ತು ಬಿಜೆಪಿ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಲು ಕರೆ ಕೊಟ್ಟಿದೆ. ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದೆ.
ಪ್ರತಿಭಟನೆಗೆ ಕರೆಕೊಟ್ಟು ಎಎಪಿ ಪ್ರಕಟಣೆ ಹೊರಡಿಸಿದೆ. “ಬಿಜೆಪಿಯ ಸರ್ವಾಧಿಕಾರ ಮತ್ತು ಅರವಿಂದ್ ಕೇಜ್ರಿವಾಲ್ ಅವರ ಬಂಧನವನ್ನು ವಿರೋಧಿಸಿ ಭಾನುವಾರ ದೆಹಲಿಯಾದ್ಯಂತ ಮೇಣದಬತ್ತಿ ಮೆರವಣಿಗೆ ನಡೆಸಿ, ಬಿಜೆಪಿಯ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಲಾಗುತ್ತದೆ. ಸಿಎಂ ಅರವಿಂದ್ ಕೇಜ್ರಿವಾಲ್ ಬಂಧನವನ್ನು ವಿರೋಧಿಸಿ ಈಗಾಗಲೇ ದೆಹಲಿಯ ಜನರು ಬೀದಿಗಿಳಿದಿದ್ದಾರೆ. ಕೇಜ್ರಿವಾಲ್ ಅವರ ಬೆಂಬಲಕ್ಕೆ ನಾವೆಲ್ಲರೂ ಒಟ್ಟಾಗಿ ನಿಲ್ಲಬೇಕಾಗಿದೆ. ಕೇಜ್ರಿವಾಲ್ ಬಂಧನವು ಮೋದಿ ಸರ್ಕಾರವನ್ನು ಅಧಿಕಾರದಿಂದ ಕಿತ್ತೊಗೆಯುವ ಕೊನೆಯ ಮೊಳೆಯೆಂಬುದನ್ನು ಸಾಬೀತುಪಡಿಸುತ್ತದೆ” ಎಂದು ಹೇಳಿದೆ.
ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಮಾರ್ಚ್ 21ರಂದು ಜಾರಿ ನಿರ್ದೇಶನಾಲಯ(ಇಡಿ) ಬಂಧಿಸಿತ್ತು. ವಿಚಾರಣಾಧೀನ ನ್ಯಾಯಾಲಯವು ಮಾರ್ಚ್ 22ರಂದು ಅವರಿಗೆ ಜಾಮೀನು ನೀಡಲು ನಿರಾಕರಿಸಿದೆ. ಜಾಮೀನು ನಿರಾಕರಣೆ ಆದೇಶವನ್ನು ಪ್ರಶ್ನಿಸಿ ಕೇಜ್ರಿವಾಲ್ ಶನಿವಾರ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಲೋಕಸಭಾ ಚುನಾವಣೆ | ಕಾಂಗ್ರೆಸ್ ಅಭ್ಯರ್ಥಿಗಳ 4ನೇ ಪಟ್ಟಿ ಪ್ರಕಟ; ಸೆಂಥಿಲ್ ಸ್ಪರ್ಧೆ
“ಬಂಧನ ಮತ್ತು ಜಾಮೀನು ನಿರಾಕರಣೆ ಆದೇಶ – ಎರಡೂ ‘ಕಾನೂನುಬಾಹಿರ’ವಾಗಿವೆ. ಬಂಧನದಿಂದ ಬಿಡುಗಡೆಯಾಗುವ ಅರ್ಹತೆಯನ್ನು ಸಿಎಂ ಕೇಜ್ರಿವಾಲ್ ಹೊಂದಿದ್ದಾರೆ” ಎಂದು ಅವರ ಕಾನೂನು ತಂಡ ದೆಹಲಿ ಹೈಕೋರ್ಟ್‌ಗೆ ಸಲ್ಲಿಸಿರುವ ಮನವಿಯಲ್ಲಿ ತಿಳಿಸಿದೆ.
ಎಎಪಿ ಮಾರ್ಚ್ 24ರ ಭಾನುವಾರದಂದು ಹಂಗಾಮಿ ಮುಖ್ಯ ನ್ಯಾಯಮೂರ್ತಿಗಳಿಂದ ತಕ್ಷಣದ ವಿಚಾರಣೆ ಕೋರಿದೆ.