ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ವಿನಯ್ ಕುಮಾರ್ ಅವರಿಗೆ ಟಿಕೆಟ್ ಸಿಕ್ಕಿಲ್ಲ. ಹಾಗೆಂದ ಮಾತ್ರಕ್ಕೆ ಸುಮ್ಮನೆ ಕುಳಿತಿಲ್ಲ. ಮತ್ತೆ ಹೊಸದೊಂದು ಅಭಿಯಾನ ಶುರು ಮಾಡಿದ್ದಾರೆ. ವಿನಯ ನಡಿಗೆ ಜನಸಾಮಾನ್ಯರ ಕಡೆಗೆ ಎನ್ನುವ ಪಾದಯಾತ್ರೆ ಆರಂಭಿಸಲಾಗಿದೆ. ಇದು ಬಂಡಾಯದ ಲಕ್ಷಣವೂ ಅಥವಾ ಜನಾಭಿಪ್ರಾಯ ಸಂಗ್ರಹಕ್ಕೋ ಎನ್ನುವ ಶಂಕೆ ವ್ಯಕ್ತವಾಗಿದೆ.
ಪಾದಯಾತ್ರೆ ಶುರು ಮಾಡಿದಾಗ ಸೇರಿದ ಜನರಿಗಿಂತ ಈಗ ದುಪ್ಪಟ್ಟು, ಮೂರು ಪಟ್ಟು ಜನರು ಬರುತ್ತಿದ್ದು , ಜನರು ಪ್ರೀತಿ, ವಿಶ್ವಾಸ ತೋರಿಸುತ್ತಾರೆ ಎಂದು ಅವರು ಆಪ್ತರು ತಿಳಿಸಿದ್ದಾರೆ. ಜಗಳೂರು ತಾಲೂಕಿನ ಕರಿಕಟ್ಟೆಯಿಂದ “ವಿನಯ ನಡಿಗೆ ಜನಸಾಮಾನ್ಯರ ಕಡೆಗೆ” ಎನ್ನುವ ಪಾದಯಾತ್ರೆ ಆರಂಭಿಸಲಾಗಿದೆ. ಶನಿವಾರ 15 ಹಳ್ಳಿಗಳಿಗೆ ಭೇಟಿ ನೀಡಿದ್ದಾರೆ, ಅಭಿಪ್ರಾಯ ಸಂಗ್ರಹ ನಡೆಯುತ್ತಿದೆ ಎನ್ನಲಾಗಿದೆ.
ದಾವಣಗರೆ ಕ್ಷೇತ್ರದ ಭಾವಿ ಟಿಕೆಟ್ ಆಕಾಂಕ್ಷಿ, ಪಾದಯಾತ್ರೆ ವೇಳೆ ತೋರಿದ ಜನರಿಗೆ ಕೃತಜ್ಞತೆ ಸಲ್ಲಿಸುವ ಸಲುವಾಗಿ ಮತ್ತೆ ಬಂದಿದ್ದೇನೆ. ಜೊತೆಗೆ ಟಿಕೆಟ್ ಮಿಸ್ ಆಗಿದೆ. ನನ್ನ ಮುಂದಿನ ನಡೆ ಹೇಗಿರಬೇಕು? ಯಾವ ನಿರ್ಧಾರ ತೆಗೆದುಕೊಳ್ಳಬೇಕು ತಿಳಿಸಿ ಎಂದು ಕೇಳುವ ಮೂಲಕ ಬಂಡಾಯ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸುವ ಕುರಿತಂತೆ ಮಾಹಿತಿ ಕಲೆ ಹಾಕುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವಂತೆ ಶೇಕಡಾ 90ಕ್ಕಿಂತ ಹೆಚ್ಚು ಜನರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದು, ಮತ್ತೆ ಕೆಲವರು ಬೇಡ ಎನ್ನುತ್ತಿದ್ದು, ಕಾಂಗ್ರೆಸ್ ಟಿಕೆಟ್ ತರಲು ಸಾಧ್ಯವಾಗಲಿಲ್ಲ. ಎಲ್ಲರ ಅಭಿಪ್ರಾಯವನ್ನೂ ಪಡೆದು ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದರೆ ಏನಾಗುತ್ತೆ? ನಿಲ್ಲದಿದ್ದರೆ ಹೇಗಾಗುತ್ತೆ? ಎಂಬ ವಿಚಾರದ ಕುರಿತಂತೆಯೂ ಮುಖಂಡರೊಂದಿಗೆ ಸಮಾಲೋಚನೆ ನಡೆಸಲಾಗುತ್ತಿದೆ.
ಈ ಮಧ್ಯೆ ಬೆಳವಣಿಗೆಯೊಂದರಲ್ಲಿ ಟಿಕೆಟ್ ಕೈಗೆ ತಪ್ಪಿದ ನಂತರ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಹಾಲಿ ಸಂಸದ ತೇಜಸ್ವಿ ಸೂರ್ಯ, ವಿನಯ್ ಕುಮಾರ್ ಗೆ ಟ್ವೀಟ್ ಮಾಡಿದ್ದು ಸರಿಯಾದ ವ್ಯಕ್ತಿ ತಪ್ಪಾದ ಪಕ್ಷದಲ್ಲಿ ಇದ್ದೀರಾ ಬಿಜೆಪಿಗೆ ಬನ್ನಿ ನಿಮಗೆ ಯಾವಾಗಲೂ ಸ್ವಾಗತ ಕೋರುತ್ತೇವೆ ಎನ್ನುವ ಅರ್ಥದಲ್ಲಿ ಟ್ವೀಟ್ ಮಾಡಿದ್ದು ಕುತೂಹಲ ಕೆರಳಿಸಿದೆ.
ವಿನಯ್ ಕುಮಾರ್ ತಿಳಿಸಿರುವಂತೆ 300ರಿಂದ 350 ಹಳ್ಳಿಗಳಿಗೆ ಇನ್ನು 12- 13 ದಿನ ಹೋಗಿ ದಾವಣಗೆರೆ ಲೋಕಸಭೆ ಕ್ಷೇತ್ರದ ಜಗಳೂರು, ಚನ್ನಗಿರಿ, ಹೊನ್ನಾಳಿ, ಹರಿಹರ, ದಾವಣಗೆರೆ ಉತ್ತರ, ದಾವಣಗೆರೆ ದಕ್ಷಿಣ, ಮಾಯಕೊಂಡ, ಹರಪನಹಳ್ಳಿ ಸೇರಿ ಎಂಟು ವಿಧಾನಸಭಾ ಕ್ಷೇತ್ರಗಳಿಗೂ ಸುತ್ತಿ, ಬರುವ ಅಭಿಪ್ರಾಯ ಸಂಗ್ರಹ ಬಳಿಕ 15 ದಿನಗಳ ನಂತರ ಪತ್ರಿಕಾಗೋಷ್ಠಿ ಕರೆದು ನಿರ್ಧಾರ ಘೋಷಣೆ ಮಾಡುತ್ತಾರೆ ಎನ್ನಲಾಗಿದ್ದು, ಕ್ಷೇತ್ರದ ಜನ ಬಂಡಾಯವಾಗಿ ಅಥವಾ ಪಕ್ಷೇತರವಾಗಿ ನಿಲ್ಲಿ ಅಥವಾ ನಿಲ್ಲಬೇಡಿ ಎನ್ನುವ ವಿಷಯ ಸಂಗ್ರಹದ ಮೇಲೆ ವಿನಯ್ ಕುಮಾರ್ ನಡೆ ನಿರ್ಧಾರವಾಗಲಿದೆ ಎಂದು ಗೊತ್ತಾಗಿದೆ.
ಪಾದಯಾತ್ರೆಯಲ್ಲಿ ಜನ ಬಂಡಾಯವಾಗಿ ನಿಲ್ಲಲು ತೀರ್ಮಾನಿಸುತ್ತಾರೆ ಅಥವಾ ಬೇರೊಂದು ಪಕ್ಷದಿಂದಲೋ ಅಥವಾ ಹಿಂದೆ ಸರಿಯುವ ನಿರ್ಧಾರವೋ ಎನ್ನುವುದನ್ನು ತಿಳಿಯಲು ಇನ್ನಷ್ಟು ದಿನಗಳು ಕಾಯಬೇಕಿದೆ.
ಇತ್ತ ಬಿಜೆಪಿಯಲ್ಲಿಯೂ ಕೂಡ ಬಂಡಾಯದ ಗಾಳಿ ಜೋರಾಗಿ ಇದ್ದು ದಿನಕ್ಕೊಂದು ತೀರ್ಮಾನಗಳು, ಹೇಳಿಕೆಗಳು ಕೇಳಿಬರುತ್ತಿತ್ತು ಗೊಂದಲಮಯ ವಾತಾವರಣ ನಿರ್ಮಾಣವಾಗಿದೆ.
ಕೆಲವೊಂದು ಸನ್ನಿವೇಶಗಳಲ್ಲಿ ಪಕ್ಷ ಹೇಳಿದಂತೆ ಪಕ್ಷದ ಅಭ್ಯರ್ಥಿಗೆ ಬೆಂಬಲ ನೀಡುತ್ತೇವೆ ಎನ್ನುವ ಅರ್ಥದ ಹೇಳಿಕೆಯನ್ನು ಕೆಲವು ಬಂಡಾಯ ನಾಯಕರು ನೀಡಿದ್ದು, ಕೆಲವು ನಾಯಕರು ಬಿಜೆಪಿ ಅಭ್ಯರ್ಥಿ ಬದಲಾಗಲೇಬೇಕು ಎನ್ನುವ ಪಟ್ಟನ್ನು ಹಿಡಿದು ಕೂತಿದ್ದಾರೆ ಎನ್ನಲಾಗಿದೆ.
ಈ ಮಧ್ಯೆ ದಾವಣಗೆರೆಯ ಮಾಜಿ ಸಚಿವ ಎಸ್ ಎ ರವೀಂದ್ರನಾಥ್ ಇತ್ತೀಚಿಗೆ ಶಿವಮೊಗ್ಗದಲ್ಲಿ ಎಸ್ ಈಶ್ವರಪ್ಪನವರನ್ನು ಭೇಟಿ ಮಾಡಿ ಮಾತುಕತೆ ನಡೆಸಿರುವುದು ಅವರ ಮುಂದಿನ ನಡೆ ಏನು ಎನ್ನುವುದರ ಬಗ್ಗೆ ಕುತೂಹಲ ಕೆರಳಿಸಿದೆ.
ಎಸ್ಎ ರವೀಂದ್ರನಾಥ್ ಮತ್ತು ರೇಣುಕಾಚಾರ್ಯ ಬಣದವರ ಜೊತೆಗೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಬಂಡಾಯ ಶಮನಕ್ಕೆ ಮಾತುಕತೆಗೆ ಮುಂದಾಗಲಿದ್ದಾರೆ ಎನ್ನುವ ಮಾಹಿತಿ ಬಂಡಾಯ ಬಣಕ್ಕೆ ದೊರೆತಿದ್ದು, ಈ ಹಿನ್ನೆಲೆಯಲ್ಲಿ ಭಾನುವಾರ ಎಸ್ಎ ರವೀಂದ್ರನಾಥ್ ಅವರ ನಿವಾಸದಲ್ಲಿ ಮತ್ತೊಮ್ಮೆ ಸಭೆ ಕರೆದಿದ್ದು, ಎಲ್ಲಾ ಅಸಮಾಧಾನಿತ ನಾಯಕರು ಒಟ್ಟಿಗೆ ಸೇರಲಿದ್ದು ರಹಸ್ಯ ಮಾತುಕತೆ ನಡೆಯಲಿದೆ ಎನ್ನಲಾಗಿದೆ. ಈ ಮಾತುಕತೆಯಲ್ಲಿ ಅಂತಿಮವಾಗಿ ಪಕ್ಷ ಹೇಳಿದಂತೆ ನಿರ್ಧರಿಸಿ ಅಭ್ಯರ್ಥಿಗೆ ಬೆಂಬಲ ಕೊಡುವುದು ಅಥವಾ ಬಂಡಾಯವಾಗಿ ಯಾರಾದರೂ ಒಬ್ಬರು ಸ್ಪರ್ಧಿಸುವುದು ಎನ್ನುವುದು ತೀರ್ಮಾನವಾಗಲಿದೆ ಎನ್ನಲಾಗಿದೆ.
ಬಿಜೆಪಿ ಮೂಲಗಳ ಪ್ರಕಾರ ಮತ್ತೊಂದು ಮಹತ್ವದ ಬೆಳವಣಿಗೆಯಲ್ಲಿ ದಾವಣಗೆರೆಯ ಬಂಡಾಯವನ್ನು ಶಮನ ಮಾಡಲು ರಾಜ್ಯಾಧ್ಯಕ್ಷ ವಿಜಯೇಂದ್ರ ಅವರಿಗಿಂತ ಬಿಎಸ್ ವೈ ಸೂಕ್ತ, ಹಾಗಾಗಿ ಬಂಡಾಯ ಶಮನಕ್ಕೆ ಕಣಕ್ಕೆ ಇಳಿಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕಾರಣ ಬಂಡಾಯಗಾರರು ಬಹುತೇಕ ಎಲ್ಲರೂ 30-40 ವರ್ಷ ರಾಜಕೀಯ ಮಾಡಿದ್ದು ಪಕ್ಷದಲ್ಲಿ ಹಿರಿಯರಾಗಿದ್ದು ಅವರನ್ನು ಸಂಧಾನದ ಮೂಲಕ ಬಂಡಾಯ ಶಮನ ಮಾಡಲು ಬಿಎಸ್‌ವೈ ಅವರೇ ಸೂಕ್ತ ಎಂದು ಹೈಕಮಾಂಡ್ ನಿರ್ಧರಿಸಿದ್ದು ಎರಡು ಮೂರು ದಿನಗಳಲ್ಲಿ ಬಿಎಸ್‌ವೈ ಮಾತುಕತೆ ನಡೆಸಲು ಸಿದ್ಧರಾಗಿದ್ದಾರೆ ಎಂದು ತಿಳಿದುಬಂದಿದೆ.
ಅಂತಿಮವಾಗಿ ಈ ಬಾರಿ ದಾವಣಗೆರೆ ಲೋಕಸಭಾ ಕ್ಷೇತ್ರದ ಚುನಾವಣೆ ಬಂಡಾಯದೊಂದಿಗೆ ಸ್ಪರ್ಧೆಯನ್ನು ಹೆಚ್ಚಿಸುವುದೋ? ಅಥವಾ ಬಂಡಾಯವಿಲ್ಲದೆ ಪಕ್ಷಗಳ ಅಭ್ಯರ್ಥಿಗಳೇ ಸ್ಪರ್ಧೆ ನಡೆಸುವರೋ? ಎನ್ನುವುದನ್ನು ತಿಳಿಯಲು ಹಾಗೂ ಜವಾಬ್ದಾರಿಯಿಂದ ಯಾರಿಗೆ ಮತ ಚಲಾಯಿಸಬೇಕು ಎನ್ನುವುದನ್ನು ತೀರ್ಮಾನಿಸಲು ಇನ್ನೂ ಕೆಲ ದಿವಸಗಳ ಕಾಲ ಮತದಾರ ತಾಳ್ಮೆಯಿಂದ ಕಾಯಬೇಕಾಗಿದೆ.

ವಿನಾಯಕ್ ಚಿಕ್ಕಂದವಾಡಿ
ದಾವಣಗೆರೆ, ಚಿತ್ರದುರ್ಗ ಜಿಲ್ಲಾ ಸಂಯೋಜಕರು