ಎನ್‌ಇಪಿ-2020ರ ಅಡಿಯಲ್ಲಿ ನಾಲ್ಕು ವರ್ಷದ ಪದವಿ ಹೇರಿಕೆಯನ್ನು ವಿಜಯಪುರ ಜಿಲ್ಲಾ ಎಐಡಿಎಸ್‌ಒ ಖಂಡಿಸಿದೆ.
ಈ ಬಗ್ಗೆ ಎಐಡಿಎಸ್‌ಒ ವಿಜಯಪುರ ಜಿಲ್ಲಾ ಕಾರ್ಯದರ್ಶಿ ಕಾವೇರಿ ರಜಪೂತ ಪತ್ರಿಕಾ ಹೇಳಿಕೆ ನೀಡಿದ್ದು, ಕರ್ನಾಟಕ ರಾಜ್ಯ ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದ ಕೂಡಲೇ ರಾಜ್ಯದಲ್ಲಿ ಎನ್‌ಇಪಿ-2020 ಹಿಂಪಡೆಯುವುದಾಗಿ ಘೋಷಿಸಿತು. ಆದರೆ, ಈಗ 4 ವರ್ಷದ ಪದವಿ ಹೇರಿಕೆ ಸಂದೇಶ ಯುಯುಸಿಎಮ್‌ಎಸ್ ಪೋರ್ಟಲ್ ಮುಖಾಂತರ ವಿದ್ಯಾರ್ಥಿಗಳಿಗೆ ಕಳುಹಿಸಲಾಗಿದ್ದು, ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ.
ಅಂತಿಮ ವರ್ಷದ ಪದವಿಯನ್ನು ಮುಗಿಸಲಿರುವ ವಿದ್ಯಾರ್ಥಿಗಳ ಮೇಲೆ ಈ ಹೇರಿಕೆ ಸಿಡಿಲಿನಂತೆ ಎರಗಿದ್ದು, ವಿದ್ಯಾರ್ಥಿಗಳನ್ನು ಆತಂಕಕ್ಕೆ ತಳ್ಳಿದೆ. ಈ ಮೂಲಕ ಸರ್ಕಾರವು 4 ವರ್ಷದ ಪದವಿ ಅನುಷ್ಠಾನಕ್ಕೆ ಮುಂದಾಗಿರುವುದು ಖಚಿತವಾಗುತ್ತಿದೆ. ಸರ್ಕಾರದ ಈ ನಡೆಯು ವಿದ್ಯಾರ್ಥಿಗಳ ಭವಿಷ್ಯವನ್ನು ಅತಂತ್ರಕ್ಕೆ ದೂಡಿದೆ.
ರಾಜ್ಯ ಸರ್ಕಾರವು ಈ ರೀತಿ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟವಾಡಬಾರದು ಮತ್ತು ಕೂಡಲೇ 4 ವರ್ಷದ ಪದವಿಯನ್ನು ಹಿಂಪಡೆಯಬೇಕೆಂದು ಎಐಡಿಎಸ್‌ಒ ಆಗ್ರಹಿಸಿದ್ದು, ಇಲ್ಲವಾದಲ್ಲಿ ಎನ್‌ಇಪಿ-2020ರ ವಿರುದ್ಧ ರಾಜ್ಯದಲ್ಲಿ ನಡೆದ ಹೋರಾಟದಂತೆ 4 ವರ್ಷದ ಪದವಿ ಹೇರಿಕೆ ವಿರುದ್ಧ ಬೃಹತ್ ಪ್ರಮಾಣದ ವಿದ್ಯಾರ್ಥಿ ಚಳವಳಿಯು ಬುಗಿಲೇಳುವುದಾಗಿ ರಾಜ್ಯದ ವಿದ್ಯಾರ್ಥಿಗಳ ಪರವಾಗಿ ಎಐಡಿಎಸ್‌ಒ ರಾಜ್ಯ ಸಮಿತಿಯು ಕರ್ನಾಟಕ ರಾಜ್ಯ ಸರ್ಕಾರವನ್ನು ಎಚ್ಚರಿಸಿದೆ.
