ಸಂವಿಧಾನ ಸಂಪೂರ್ಣ ಜಾರಿಗೆ ಹಿಂದೇಟು ಹಾಕುತ್ತಿರುವ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳನ್ನು ಸೋಲಿಸಿ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ಅಭ್ಯರ್ಥಿಗಳಿಗೆ ಬೆಂಬಲಿಸುವಂತೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎನ್. ಮೂರ್ತಿ ಮನವಿ ಮಾಡಿದರು.
ರಾಯಚೂರಿನಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಜ್ಯ ಕಾಂಗ್ರೆಸ್ ಸರ್ಕಾರ ಎರಡು ದಲಿತ, ಕಾರ್ಮಿಕರ, ರೈತರ ವಿರೋಧಿಯಾಗಿ ನಡೆದುಕೊಳ್ಳುತ್ತಲಿವೆ. ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಭಿವೃದ್ದಿ ಹೆಸರಿನಲ್ಲಿ ಅನ್ಯಾಯ ಮಾಡುತ್ತಲೇ ಬಂದಿವೆ. ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದು ಹಣ, ಹೆಂಡ, ಆಮಿಷೆಗಳಿಗೆ ಬಲಿಯಾಗದೇ ಶೇ.80 ರಷ್ಟು ಇರುವ ಶೋಷಿತ ಸಮುದಾಯಗಳು ಆರ್‌ಪಿಐ ಪಕ್ಷದ ಚಿಹ್ನೆ ಪೆನ್ನು ಗುರುತಿನ ಅಭ್ಯರ್ಥಿಗಳನ್ನು ಬೆಂಬಲಿಸಬೇಕೆಂದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಾಲದ ಹಣದಲ್ಲಿ ಬಜೆಟ್ ಮಂಡಿಸಿ ಸಾಧನೆ ಎಂಬಂತೆ ಬಿಂಬಿಸಿಕೊಳ್ಳುತ್ತಲಿವೆ. ದೇಶದ ಸಾಲ 188 ಲಕ್ಷ ಕೋಟಿಯಾಗಿದ್ದರೆ, ರಾಜ್ಯ ಸರ್ಕಾರದ ಸಾಲ 5.65 ಲಕ್ಷ ಕೋಟಿಯಾಗಿದೆ. ವಜ್ರ, ಚಿನ್ನ ,ಬೆಳ್ಳಿಗೆ ತೆರಿಗೆ ಇಳಿಸಿರುವ ಕೇಂದ್ರ ಸರ್ಕಾರ ಬಡವರು ಉಣ್ಣುವ ಹಾಲು, ಮೊಸರು, ರಸಗೊಬ್ಬರ, ಇಂಧನಗಳ ತೆರಿಗೆ ಹೆಚ್ಚಿಸಿದೆ. ದೇಶದಲ್ಲಿ 9 ಕೋಟಿ ಜನರು ಹಸಿವಿನಿಂದ ಸಾಯುತ್ತಿದ್ದಾರೆ. 67 ಲಕ್ಷ ಮಕ್ಕಳು ಒಪ್ಪೊತ್ತಿನ ಊಟವಿಲ್ಲದ ಸ್ಥಿತಿಯಲ್ಲಿದ್ದಾರೆ. 60 ಲಕ್ಷ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ಶಿಷ್ಯವೇತನ ರದ್ದುಗೊಳಿಸಲಾಗಿದೆ. ರೈತರ ಮೂರು ಕಾಯ್ದೆಗಳನ್ನು ರದ್ದುಗೊಳಿಸಿದ್ದರೂ ಅಧಿಕೃತವಾಗಿ ರೈತರ ರಕ್ಷಣೆಗೆ ಮುಂದಾಗುತ್ತಿಲ್ಲ ಎಂದು ದೂರಿದರು.
ಇನ್ನು ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಎಸ್‌ಇಪಿ ಮತ್ತು ಟಿಎಸ್‌ಪಿ ಅನುದಾನದ 11 ಸಾವಿರ ಕೋಟಿ ರೂ.ಗಳನ್ನು ಗ್ಯಾರಂಟಿ ಯೋಜನೆಗೆ ಬಳಿಸಿಕೊಂಡು ಪರಿಶಿಷ್ಟ ಅಭಿವೃದ್ದಿ ಬದ್ದವೆಂದು ಹೇಳುತ್ತಲಿದೆ. ಅನುದಾನ ಅನ್ಯ ಕಾರ್ಯಗಳಿಗೆ ಬಳಸದಂತೆ ಕಾಯ್ದೆ ತಂದಿರುವುದಾಗಿ ಹೇಳುವ ಸರ್ಕಾರವೇ ಬೇರೆ ಯೋಜನೆಗಳಿಗೆ ಅನುದಾನ ಬಳಸಿದೆ. ವಸತಿ ನಿಲಯಗಳ ಅವ್ಯವಸ್ಥೆ ಸರಿಪಡಿಸುತ್ತಿಲ್ಲ. ಶಿಷ್ಯವೇತನ ನೀಡುತ್ತಿಲ್ಲ. ಮುಖ್ಯಮಂತ್ರಿಗಳ ಗಮನಕ್ಕೆ ತಂದರೂ, ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ. ಕಾಂಗ್ರೆಸ್-ಬಿಜೆಪಿ ಪಕ್ಷಗಳಿಂದ ಡಾ. ಬಿ.ಆರ್. ಅಂಬೇಡ್ಕರ ಕನಸು ನನಸು ಮಾಡಲು ಸಾಧ್ಯವಿಲ್ಲ ಎಂದರು.
ಎರಡು ಪಕ್ಷಗಳನ್ನು ತಿರಸ್ಕರಿಸಿ ಪರ್ಯಾಯ ರಾಜಕೀಯಕ್ಕಾಗಿ ಆರ್‌ಪಿಐ ಬೆಂಬಲಿಸಬೇಕೆಂದರು. ಪರಿಶಿಷ್ಟರ ಕಲ್ಯಾಣಕ್ಕಾಗಿ ಮಾಡಿರುವ ಖರ್ಚು ವೆಚ್ಚದ ಕುರಿತ ಶ್ವೇತಪತ್ರ ಹೊರಡಿಸಲಿ ಎಂದು ಆಗ್ರಹಿಸಿದರು.
ಜನರಲ್ಲಿ ಜಾಗೃತಿ ಮೂಡಿಸಲು ನಾಲ್ಕು ತಂಡಗಳು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಭೀಮ ಜಾಥಾ ಪ್ರಾರಂಭಿಸಿದೆ. ಆ.27ರಂದು ರಾಯಚೂರು ಜಿಲ್ಲೆಗೆ ಜಾಥಾ ಆಗಮಿಸಲಿದೆ. ಏ.15ರಂದು ದಲಿತ ಸಂಘರ್ಷ ಸಮಿತಿಯ 50ನೇ ವರ್ಷ ವಜ್ರಮಹೋತ್ಸವ ಐತಿಹಾಸಿಕ ಸಮಾವೇಶ ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ. ಬುದ್ದಿಜೀವಿಗಳು, ಪ್ರಗತಿಪರರು, ಸಾಹಿತಿಗಳು, ಹೋರಾಟಗಾರರು ಭಾಗವಹಿಸಲಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಬಹುಜನರ ಒಲುವು ನಿಲುವು ಕುರಿತು ಚರ್ಚಿಸಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಅಶೋಕ್ ನಂಜಲದಿನ್ನಿ, ಎಂ. ಮನೋಹರ, ಬಷೀರ್ ಅಹ್ಮದ್, ಬಸವರಾಜ, ರಂಗಪ್ಪ ಕೋತಿಗುಡ್ಡ ಸೇರಿದಂತೆ ಅನೇಕರಿದ್ದರು.
