ಕಾರನ್ನು ತೊಳೆಯಲು ಕಾವೇರಿ ನೀರನ್ನು ಬಳಸಿದ ಮೂವರಿಗೆ ಜಲಮಂಡಳಿಯ ಅಧಿಕಾರಿಗಳು ತಲಾ ₹5,000 ದಂಡ ವಿಧಿಸಿರುವ ಸಂಗರಿ ಬೆಳಕಿಗೆ ಬಂದಿದೆ.
ಸದಾಶಿವನಗರದಲ್ಲಿ ಕಾವೇರಿ ನೀರಿನಿಂದ ಕಾರನ್ನು ತೊಳೆಯುತ್ತಿದ್ದ ಮಹಿಳೆಯೊಬ್ಬರಿಗೆ ₹5,000 ದಂಡ ವಿಧಿಸಿರುವ ಜಲಮಂಡಳಿ ಸ್ಥಳದಲ್ಲೇ ದಂಡವನ್ನು ಕಟ್ಟಿಸಿಕೊಂಡಿದೆ. ಇದೇ ರೀತಿ ಮಹದೇವಪುರ ಮತ್ತು ಡಾಲರ್ಸ್ ಕಾಲೋನಿಯಲ್ಲೂ ಇಬ್ಬರಿಗೆ ದಂಡ ವಿಧಿಸಿರುವುದಾಗಿ ಜಲಮಂಡಳಿ ತಿಳಿಸಿದೆ.
ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ನೀರಿಲ್ಲದೆ ಪರಿತಪಿಸುತ್ತಿರುವಾಗ ವಾಹನಗಳನ್ನು ತೊಳೆಯಲು ಕಾವೇರಿ ನೀರು ಬಳಸಿ ವ್ಯರ್ಥ ಮಾಡಬೇಡಿ ಎಂದು ಬೆಂಗಳೂರು ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ಪರಿಪರಿಯಾಗಿ ಬೇಡಿಕೊಂಡಿತ್ತು. ಜತೆಗೆ ನೀರನ್ನು ಪೋಲು ಮಾಡಿದರೆ ದಂಡ ವಿಧಿಸುವುದಾಗಿಯೂ ಎಚ್ಚರಿಕೆ ನೀಡಿತ್ತು. ಆದರೆ ನೀರಿನ ಮಹತ್ವವನ್ನು ಅರಿಯದವರು ತಮ್ಮ ವಾಹನಗಳನ್ನು ಸ್ವಚ್ಚಗೊಳಿಸಲು ಕಾವೇರಿ ನೀರನ್ನು ಬಳಸುತ್ತಿರುವ ಪ್ರಕರಣಗಳು ಅಲ್ಲಲ್ಲಿ ವರದಿಯಾಗುತ್ತಲೇ ಇವೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಕೆಂಗೇರಿ ಕೆರೆಗೆ ಸಂಸ್ಕರಿಸಿದ ನೀರು; ತ್ವರಿತವಾಗಿ ಕಾಮಗಾರಿ ಮುಗಿಸಿದ ಜಲಮಂಡಳಿ
ನೀರಿನ ಸದ್ಬಳಕೆ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುತ್ತಿದೆ. ಜಲಮಂಡಳಿ ನೀರನ್ನು ಕಾರು ತೊಳೆಯುವುದು, ಕೈತೋಟ, ಮನರಂಜನೆಗಾಗಿ, ಕಾರಂಜಿ ನಿರ್ಮಾಣ, ಕಟ್ಟಡ ನಿರ್ಮಾಣ, ರಸ್ತೆ ನಿರ್ಮಾಣ, ಸಿನಿಮಾ ಹಾಗೂ ಮಾಲ್‌ಗಳಲ್ಲಿ ಕುಡಿಯುವ ನೀರಿನ ಹೊರತುಪಡಿಸಿ ಇನ್ನಿತರ ಬಳಕೆಗೆ ಬಳಸುವಂತಿಲ್ಲ ಎಂದು ಆದೇಶ ಹೊರಡಿಸಿದೆ. ಒಂದು ವೇಳೆ ಯಾರಾದರೂ ನೀರನ್ನು ಅನ್ಯ ಉದ್ದೇಶಗಳಿಗೆ ಬಳಸುವುದನ್ನು ಕಂಡರೆ 1916 ನಂಬರಿಗೆ ಕರೆ ಮಾಡುವಂತೆಯೂ ಜಲ ಮಂಡಳಿ ಕೇಳಿಕೊಂಡಿದೆ.
