ದಾವಣಗೆರೆ ಜಿಲ್ಲೆಯ ಸೂಳೆಕೆರೆಯಲ್ಲಿ ಅಪಾರ ಹೂಳು ತುಂಬಿದ್ದು, ಸಂಗ್ರಹವಾಗುತ್ತಿದ್ದ ನೀರಿನ ಪ್ರಮಾಣ ಕಡಿಮೆಯಾಗಿದ್ದು, ಹಿನ್ನೀರಿನ ಭಾಗದಲ್ಲಿರುವ ರೈತರು ಕೆರೆಯಲ್ಲಿನ ಫಲವತ್ತಾದ ಹೂಳನ್ನು ತೆಗೆದು ತಮ್ಮ ಜಮೀನುಗಳಿಗೆ ಸಾಗಿಸುತ್ತಿದ್ದಾರೆ. ಈ ಮೂಲಕ ಪರೋಕ್ಷವಾಗಿ ಕೆರೆಯ ಪುನಶ್ಚೇತನಕ್ಕೆ ಮುಂದಾಗಿದ್ದಾರೆ.
ಕೆರೆಯಲ್ಲಿ ಇರುವ ಹೂಳು ತೆರವುಗೊಳಿಸುವ ಯೋಜನೆ ರೂಪಿಸುವಂತೆ ಖಡ್ಗ ಸಂಘ ಸೇರಿದಂತೆ ಹಲವು ರೈತ ಮುಖಂಡರು ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡುತ್ತಿವೆ. ಆದರೆ, ಸರ್ಕಾರ ಯೋಜನೆ ರೂಪಿಸಲಿ ಎಂದು ಕಾಯದ ರೈತರು ಸ್ವಯಂ ಪ್ರೇರಣೆಯಿಂದ ಕೆರೆಯ ಹೂಳನ್ನು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುವ ಉದ್ದೇಶದಿಂದ ಹೂಳೆತ್ತುವ ಕಾರ್ಯಕ್ಕೆ ಕೈ ಹಾಕಿದ್ದಾರೆ.
ಕೆರೆಯಲ್ಲಿ ಹಿಟ್ಯಾಚಿ, ಜೆಸಿಬಿ ಯಂತ್ರಗಳು ಹೂಳು ತೆಗೆಯುತ್ತಿದ್ದು, ಕೆರೆಬಿಳಚಿ, ಸೋಮಲಾಪುರ, ಜಕ್ಕಲಿ, ಚೆನ್ನಾಪುರ, ಕೊಂಡದಹಳ್ಳಿ ವ್ಯಾಪ್ತಿಯಲ್ಲಿ ರೈತರು ಭರದಿಂದ ಮಣ್ಣು ಸಾಗಿಸುತ್ತಿದ್ದಾರೆ. ಪ್ರತೀ ನಿತ್ಯ 200ರಿಂದ 250 ಟ್ರ್ಯಾಕ್ಟರ್‌ಗಳು ಮಣ್ಣನ್ನು ತೋಟಗಳಿಗೆ ಸಾಗಿಸುತ್ತಿವೆ.
ಹಿಟ್ಯಾಚಿಗಳಿಗೆ ಪ್ರತಿ ಗಂಟೆಗೆ ₹2,200 ದರ ನಿಗದಿಗೊಳಿಸಲಾಗಿದೆ. ಟಿಪ್ಪರ್‌ಗಳಿಗೆ ದಿನಕ್ಕೆ ₹6,000 ಬಾಡಿಗೆ ನೀಡಿ, ಡೀಸೆಲ್ ಅನ್ನು ರೈತರೇ ತುಂಬಿಸುವ ಕರಾರಿನ ಮೂಲಕ ಜಮೀನುಗಳಿಗೆ ಮಣ್ಣು ಸಾಗಿಸಲಾಗುತ್ತಿದೆ.
ತೋಟದ ಬೆಳೆಗಳಿಗೆ ಹೂಳು ಮಣ್ಣು ಹಾಕುವುದರಿಂದ ಮಣ್ಣು ಫಲವತ್ತಾಗುವುದರ ಜೊತೆಗೆ, ಇಳುವರಿ ವೃದ್ಧಿಸುತ್ತದೆ. 15 ದಿನಗಳಿಂದ 5ರಿಂದ 8 ಅಡಿ ಆಳದವರೆಗೆ ಅಗೆದು ಮಣ್ಣು ತುಂಬಿಸಲಾಗುತ್ತಿದೆ. ವ್ಯವಸ್ಥಿತವಾಗಿ ಹೂಳನ್ನು ತೆಗೆಯಲಾಗುತ್ತಿದೆ. ಮುಂದೆ ಮಳೆ ಬಂದಾಗ ಕೆರೆ ನೀರಿನ ಸಂಗ್ರಹ ಸಾಮರ್ಥ್ಯ ಹೆಚ್ಚಲಿದೆ ಎನ್ನುತ್ತಾರೆ ಸ್ಥಳೀಯ ರೈತರು.
