ಕಲ್ಕತ್ತ ಹೈಕೋರ್ಟ್‌ನ ಮಾಜಿ ಹೈಕೋರ್ಟ್ ನ್ಯಾಯಮೂರ್ತಿ ಹಾಗೂ ಪಶ್ಚಿಮ ಬಂಗಾಳದ ಬಿಜೆಪಿಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಅಭಿಜಿತ್ ಗಂಗೋಪಾದ್ಯಾಯ ಅವರು ಮಹಾತ್ಮ ಗಾಂಧಿ ಬಗ್ಗೆ ನೀಡಿದ ವಿವಾದಾತ್ಮಕ ಹೇಳಿಕೆಯನ್ನು ಕಾಂಗ್ರೆಸ್ ಖಂಡಿಸಿದೆ.
ಈ ಬಗ್ಗೆ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ”ಪ್ರಧಾನಿ ಕೃಪೆಯಿಂದ ಲೋಕಸಭೆಗೆ ಟಿಕೆಟ್ ಪಡೆದಿರುವ ಕಲ್ಕತ್ತ ಹೈಕೋರ್ಟ್ ಮಾಜಿ ನ್ಯಾಯಮೂರ್ತಿಯೊಬ್ಬರು ಮಹಾತ್ಮ ಗಾಂಧಿ ಬಗ್ಗೆ ನೀಡಿರುವ ಹೇಳಿಕೆ ಕರುಣಾಜನಕಕ್ಕಿಂತ ಕೆಟ್ಟದಾಗಿದೆ. ಇದು ಖಂಡಿತಾ ಸ್ವೀಕಾರ್ಹವಲ್ಲ ಹಾಗೂ ಮಹಾತ್ಮ ಅವರ ಪರಂಪರೆಯ ಬಗ್ಗೆ ಅರ್ಥಮಾಡಿಕೊಳ್ಳದ ಇವರನ್ನು ಅಭ್ಯರ್ಥಿ ಆಯ್ಕೆಯಿಂದ ರದ್ದುಗೊಳಿಸಬೇಕಾಗಿದೆ” ಎಂದು ಒತ್ತಾಯಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಅಡಿಕೆ ಕದ್ದ ಕಳ್ಳ ಜೈಲಿಗೆ, ಆನೆ ಕದ್ದ ಕಳ್ಳ ಎಲ್ಲಿಗೆ?
ಇತ್ತೀಚಿಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಅಭಿಜಿತ್ ಗಂಗೋಪಾದ್ಯಾಯ, ”ವಕೀಲ ವೃತ್ತಿಯಿಂದ ಬಂದ ನಾನು ಖಂಡಿತಾ ವಿಷಯದ ಮತ್ತೊಂದು ಹಂತದ ಬಗ್ಗೆ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಬೇಕಾಗಿದೆ. ನಾನು ನಾಥೂರಾಂ ಗೋಡ್ಸೆ ಬರಹಗಳನ್ನು ಓದಿ, ಆತ ಮಹಾತ್ಮ ಗಾಂಧಿಯನ್ನು ಕೊಲ್ಲಲು ಕಾರಣವಾದ ಪ್ರೇರೇಪಣೆ ಏನು ಎಂಬುದನ್ನು ಅರ್ಥಮಾಡಿಕೊಳ್ಳಬೇಕಿದೆ. ಅಲ್ಲಿಯವರೆಗೂ ಗಾಂಧಿ ಹಾಗೂ ಗೋಡ್ಸೆ ನಡುವೆ ಆಯ್ಕೆ ಮಾಡಿಕೊಳ್ಳಲು ಸಾಧ್ಯವಿಲ್ಲ. ಈ ಐತಿಹಾಸಿಕ ಘಟನೆಗಳ ಎಲ್ಲ ಅಂಶಗಳನ್ನು ಪರೀಶಿಲಿಸುವ ಅಗತ್ಯವಿದೆ” ಎಂದು ಹೇಳಿದ್ದರು.
ಕಲ್ಕತ್ತ ಹೈಕೋರ್ಟ್ ನ್ಯಾಯಮೂರ್ತಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಅಭಿಜಿತ್ ಗಂಗೋಪಾಧ್ಯಾಯ ಅವರನ್ನು ಬಿಜೆಪಿ ಅಭ್ಯರ್ಥಿಯನ್ನಾಗಿಸಿದೆ, ಅವರು ಪಶ್ಚಿಮ ಬಂಗಾಳದಿಂದ ಸ್ಪರ್ಧಿಸಿದ್ದಾರೆ.
