ಈ ದಿನ ಸಂಪಾದಕೀಯ | ಅಡಿಕೆ ಕದ್ದ ಕಳ್ಳ ಜೈಲಿಗೆ, ಆನೆ ಕದ್ದ ಕಳ್ಳ ಎಲ್ಲಿಗೆ?

Date:

ಬಿಜೆಪಿ ಸಾಮ ದಾನ ಭೇದ ದಂಡಗಳನ್ನು ಪ್ರಯೋಗಿಸಿ 8,718 ಕೋಟಿ ರೂಪಾಯಿಗಳನ್ನು ಚುನಾವಣಾ ಬಾಂಡ್‌ಗಳ ಹೆಸರಿನಲ್ಲಿ ಸಂಗ್ರಹಿಸಿದೆ. ಇದೇ ವ್ಯಕ್ತಿಗಳು ಮತ್ತು ಸಂಸ್ಥೆಗಳಿಂದ ಆಮ್ ಆದ್ಮಿ ಪಕ್ಷ ಕೂಡ ಚಿಲ್ಲರೆ ಕಾಸು ಪಡೆದಿದೆ. ಅಡಿಕೆ ಕದ್ದ ಕೇಜ್ರಿವಾಲ್‌ರನ್ನು ಇಡಿ ಅಸ್ತ್ರ ಬಳಸಿ ಬಂಧಿಸಲಾಗಿದೆ. ಆನೆ ಕದ್ದ ಕಳ್ಳನಿಗೆ…? 

ಭಾರತೀಯ ಜನತಾ ಪಕ್ಷ ಹತ್ತು ವರ್ಷಗಳ ಆಡಳಿತ ಮುಗಿಸಿ, ಮತ್ತೊಂದು ಚುನಾವಣೆಗೆ ಸಿದ್ಧವಾಗುತ್ತಿದೆ. ಇಡೀ ದೇಶವೇ ಚುನಾವಣೆಗೆ ಒಡ್ಡಿಕೊಳ್ಳುತ್ತಿದೆ. ಈ ಹೊತ್ತಿನಲ್ಲಿ ದೇಶಕ್ಕೆ ಬೇಕಾದ ಪಕ್ಷವನ್ನು ನಾಯಕರನ್ನು ಆಯ್ಕೆ ಮಾಡಿಕೊಳ್ಳುವ ಅನಿವಾರ್ಯತೆ ಮತದಾರನ ಮುಂದಿದೆ.

ಆಡಳಿತಾರೂಢ ಬಿಜೆಪಿ ನಿಜಕ್ಕೂ ದೇಶದ ಬಗ್ಗೆ ಕಾಳಜಿ ಇರುವ ಪಕ್ಷವೇ ಆಗಿದ್ದರೆ, ಹೊಸ ತಂತ್ರಜ್ಞಾನವನ್ನು ಬಳಸಿಕೊಂಡು ಬೆಳೆಯುವತ್ತ ದಾಪುಗಾಲು ಹಾಕಬೇಕಾಗಿತ್ತು. ಯುವಜನರ ಕೈಗೆ ಕೆಲಸ ಸಿಕ್ಕಿ ಉತ್ಪಾದನೆ ಹೆಚ್ಚಾಗಬೇಕಿತ್ತು. ಆರ್ಥಿಕತೆಯ ಚಕ್ರ ತಿರುಗಿ ದೇಶ, ಚೀನಾ-ಅಮೆರಿಕಾಗಳಿಗೆ ಸೆಡ್ಡು ಹೊಡೆಯಬೇಕಾಗಿತ್ತು.

ಬದಲಿಗೆ, ಮೋದಿಯವರ ಹತ್ತು ವರ್ಷಗಳ ಆಡಳಿತದಲ್ಲಿ ದೇಶ ಪುರಾತನ ಕಾಲದತ್ತ ಹೆಜ್ಜೆ ಹಾಕಿತು. ಜನರ ಮೂಲಭೂತ ಅಗತ್ಯಗಳಾದ ಅನ್ನ, ಆರೋಗ್ಯ, ನೀರಿಗೆ ಬಳಕೆಯಾಗಬೇಕಿದ್ದ ಹಣವನ್ನು ಕಾಗೆ ಕೂರುವ ಪ್ರತಿಮೆ, ಗಂಟೆ ಬಾರಿಸುವ ಮಂದಿರಗಳ ನಿರ್ಮಾಣಕ್ಕೆ ವಿನಿಯೋಗಿಸಲಾಯಿತು. ಯುವಜನರ ತಲೆಗೆ ಕೇಸರಿ ವಸ್ತ್ರ ಕಟ್ಟಿ, ರಾಮಭಜನೆ ಮಾಡಿಸಲಾಯಿತು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಬಿಜೆಪಿ ಜನಪರವಾಗಿದ್ದರೆ, ಅದರ ಹತ್ತು ವರ್ಷಗಳ ಆಡಳಿತವೇ ಅದನ್ನು ಅಧಿಕಾರಕ್ಕೇರಿಸುತ್ತಿತ್ತು. ಆದರೆ, ಹೇಳಿಕೊಳ್ಳುವಂಥದ್ದು ಏನೂ ಇಲ್ಲವಾದ್ದರಿಂದ, ಈಗ ಮತ್ತೊಮ್ಮೆ ಅಧಿಕಾರಕ್ಕೇರಲು ಅದರ ಹಿಂದುತ್ವ, ಹಿಂದೂ ರಾಷ್ಟ್ರ ನಿರ್ಮಾಣ, ಪಾಕಿಸ್ತಾನ ವಿರೋಧ, ಮುಸ್ಲಿಂ ದ್ವೇಷಗಳೆಲ್ಲ ಸವಕಲು ನಾಣ್ಯಗಳಂತೆ ಕಾಣತೊಡಗಿವೆ. ಆ ಅಸ್ತ್ರಗಳನ್ನೇ ಮುಂದಿಟ್ಟು ಚುನಾವಣೆ ಎದುರಿಸಲು ಸಾಧ್ಯವಿಲ್ಲ ಎನ್ನುವುದು ಅದಕ್ಕೂ ಅರ್ಥವಾಗಿದೆ.

ಹಾಗಾಗಿಯೇ ಚತುರೋಪಾಯಗಳು- ಸಾಮ ದಾನ ಭೇದ ದಂಡಗಳನ್ನು ಚಾಲ್ತಿಗೆ ತಂದಿದೆ. ಸಾಮವೆಂದರೆ ಸಂಧಾನ, ದಾನವೆಂದರೆ ಒಲಿಸಿಕೊಳ್ಳುವುದು, ಭೇದವೆಂದರೆ ಒಡಕನ್ನು ಉಂಟು ಮಾಡುವುದು, ದಂಡ ಎಂದರೆ ದುಷ್ಟರನ್ನು ಹತೋಟಿಯಲ್ಲಿಡುವುದು ಎಂಬ ಅರ್ಥವಿದೆ. ಅವುಗಳನ್ನು ಆಳಿಗೆ ತಕ್ಕಂತೆ ಬಳಸಿದ ಬಿಜೆಪಿ ವಿರೋಧ ಪಕ್ಷಗಳಿಲ್ಲದಂತೆ ಮಾಡಲು ಇನ್ನಿಲ್ಲದ ಕಸರತ್ತಿಗಿಳಿದಿದೆ. ಆ ಕಸರತ್ತಿನಲ್ಲಿ ಬಿಜೆಪಿ ಕೂಡ ಬೆತ್ತಲಾಗುತ್ತಿದೆ.

ಮೂರನೇ ಬಾರಿಗೆ ನರೇಂದ್ರ ಮೋದಿಯವರು ಪ್ರಧಾನಿಯಾಗಲೇಬೇಕೆಂಬ ಹಪಹಪಿಗೆ ಬಿದ್ದಿದ್ದಾರೆ. ನಿಜಕ್ಕೂ, ಮೋದಿಯವರು ಜನನಾಯಕನಾಗಿದ್ದರೆ, ಪ್ರಧಾನಿಯಾಗಲಿ, ಅಡ್ಡಿ ಇಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ಇದೆ, ಎದುರಿಸಲಿ, ಯಾರೂ ಬೇಡವೆನ್ನುವುದಿಲ್ಲ. ಆದರೆ, ಅದಕ್ಕೂ ಒಂದು ರೀತಿ-ನೀತಿ ಇದೆಯಲ್ಲವೇ? ಎದುರಾಳಿ ಇರಬೇಕಲ್ಲವೇ? ವಿರೋಧ ಪಕ್ಷವನ್ನೇ ಇಲ್ಲದಂತೆ ಮಾಡುವುದು ಪ್ರಜಾಪ್ರಭುತ್ವಕ್ಕೆ ಮಾರಕವಲ್ಲವೇ?

ಬಿಜೆಪಿಗೆ ಸದ್ಯಕ್ಕೆ ಪ್ರಬಲ ಎದುರಾಳಿ ಎನ್ನಿಸಿರುವುದು ಕಾಂಗ್ರೆಸ್ಸಲ್ಲ, ಆಮ್ ಆದ್ಮಿ ಪಕ್ಷ. ಏಕೆಂದರೆ, ದೆಹಲಿಯಂತಹ ಶಕ್ತಿಕೇಂದ್ರವನ್ನು ಗೆಲ್ಲುವುದು ಬಿಜೆಪಿಗೆ ಸಾಧ್ಯವಾಗಿಲ್ಲ. ಎರಡು ಬಾರಿ ವಿಧಾನಸಭೆಯನ್ನು ಗೆದ್ದ ಆಮ್ ಆದ್ಮಿ, ಪಕ್ಕದ ಪಂಜಾಬನ್ನೂ ಗೆದ್ದು ಬೀಗಿದೆ. ದೂರದ ಗೋವಾ ಮತ್ತು ಗುಜರಾತಿನಲ್ಲೂ ನೆಲೆಯೂರಲು ನೋಡುತ್ತಿದೆ.

ಅಷ್ಟೇ ಅಲ್ಲ, ಆಮ್ ಆದ್ಮಿಯ ನಾಯಕರು ಸರಳ ಸಂಪನ್ನರು. ಸಾಮಾನ್ಯರೊಂದಿಗೇ ಬದುಕುವವರು. ಆರೋಗ್ಯ, ಶಿಕ್ಷಣ, ಸಾರಿಗೆ, ನೀರಿನಂತಹ ಮೂಲಭೂತ ಸೌಕರ್ಯಗಳತ್ತ ಗಮನ ಹರಿಸಿ, ಜನರ ಬದುಕಿನಲ್ಲಿ ಭರವಸೆ ಮೂಡಿಸಿ, ಬಿಜೆಪಿಗಿಂತ ಭಿನ್ನ ಎನಿಸಿಕೊಂಡವರು. ಬಿಜೆಪಿಯ ಹಿಂದುತ್ವವನ್ನು ಮತ್ತು ಮುಸ್ಲಿಂ ದ್ವೇಷವನ್ನು ಬಹಳ ನಾಜೂಕಾಗಿ ನಿಭಾಯಿಸಿದವರು. ಅಯೋಧ್ಯೆಗೆ ಉಚಿತ ಬಸ್ ವ್ಯವಸ್ಥೆ ಮಾಡುವ ಮೂಲಕ ಹಿಂದೂಗಳನ್ನು ಓಲೈಸಿ; ಸಿಎಎ-ಎನ್ಆರ್‍‌ಸಿ ಸಂಬಂಧ ದೆಹಲಿಯಲ್ಲಿ ಗಲಭೆಗಳಾದಾಗ ತಟಸ್ಥ ನಿಲುವು ತಾಳಿ, ಬಿಜೆಪಿಗೆ ಶಾಕ್ ಕೊಟ್ಟವರು.

ಹಾಗಂತ, ಆಮ್ ಆದ್ಮಿ ಭ್ರಷ್ಟಾಚಾರ ಮುಕ್ತ ಪಕ್ಷವಲ್ಲ. ಪಕ್ಷ ರಾಜಕಾರಣ, ವಿಸ್ತರಣೆ ಮತ್ತು ಚುನಾವಣೆ ಎದುರಿಸುವುದು ಇಂದು ರಾಜಕೀಯ ಪಕ್ಷಗಳಿಗೆ ಸುಲಭವಲ್ಲ. ಇದರ ನಿಭಾವಣೆಗೆ ಅಪಾರ ಹಣದ ಅಗತ್ಯವಿದೆ. ಅದಕ್ಕೆ ಬೇಕಾದ ಸಂಪನ್ಮೂಲ ಕ್ರೋಡೀಕರಣಕ್ಕೆ ಆಮ್ ಆದ್ಮಿ ಪಕ್ಷ ಕೂಡ ಅಡ್ಡ ಹಾದಿ ಹಿಡಿಯುತ್ತದೆ. ಅಬಕಾರಿ ಹಗರಣದಲ್ಲಿ ಅದು ಭಾಗಿಯಾಗಿರಬಹುದು. ಭಾಗಿಯಾದವರನ್ನು ಶಿಕ್ಷೆಗೆ ಗುರಿಪಡಿಸುವುದು ಸರಿಯಾಗಿರಬಹುದು.

ಆದರೆ, ಆಮ್ ಆದ್ಮಿಯ ಸಾಮ್ರಾಜ್ಯ ವಿಸ್ತರಣೆ ಕಂಡು ಕಸಿವಿಸಿಗೊಂಡಿರುವ ಬಿಜೆಪಿ, ಅದನ್ನು ರಾಜಕೀಯವಾಗಿ ಎದುರಿಸಲಾಗದೆ, ಕೇಂದ್ರದ ತನಿಖಾ ಏಜೆನ್ಸಿಗಳನ್ನು ಅಸ್ತ್ರದಂತೆ ಬಳಸಿ ಬಗ್ಗುಬಡಿಯುವುದು ಎಷ್ಟು ಸರಿ? ಚುನಾವಣಾ ದಿನಾಂಕ ಘೋಷಣೆಯಾಗಿ, ನೀತಿ ಸಂಹಿತೆ ಜಾರಿಯಲ್ಲಿರುವಾಗ, ಮುಖ್ಯಮಂತ್ರಿಯೊಬ್ಬರನ್ನು ಬಂಧಿಸಿ, ಜೈಲಿಗಟ್ಟುವುದು ಸಂವಿಧಾನಕ್ಕೆ ವಿರುದ್ಧವಾದ ಕ್ರಮವಲ್ಲವೇ? ಸರ್ವಾಧಿಕಾರಿ ನಡೆಯಲ್ಲವೇ?

ವಿಪರ್ಯಾಸವೆಂದರೆ, ಆಮ್ ಆದ್ಮಿ ಪಕ್ಷದ ನೇತಾರ ಕೇಜ್ರಿವಾಲ್‌ರನ್ನು ಅಬಕಾರಿ ಹಗರಣ ಮತ್ತು ಹಣದ ಅಕ್ರಮ ವರ್ಗಾವಣೆ ಪ್ರಕರಣಗಳ ಹಿನ್ನೆಲೆಯಲ್ಲಿ ಬಂಧಿಸಿ, ಜೈಲಿನಲ್ಲಿರಿಸಿರುವ ಬಿಜೆಪಿ, ಅದೇ ಅಬಕಾರಿ ಕುಳ, ಅರಬಿಂದೊ ಫಾರ್ಮಾದ ಮಾಲೀಕ ಪಿ. ಶರತ್ಚಂದ್ರ ರೆಡ್ಡಿಯಿಂದ ಕೋಟ್ಯಂತರ ರೂಪಾಯಿಗಳ ದೇಣಿಗೆ ಪಡೆದಿದೆ.

ಭಾರತೀಯ ಜನತಾ ಪಕ್ಷ ಸಾಮ ದಾನ ಭೇದ ದಂಡಗಳನ್ನು ಪ್ರಯೋಗಿಸಿ ಖಾಸಗಿ ವ್ಯಕ್ತಿಗಳು, ಸಂಸ್ಥೆಗಳು, ಕಂಪನಿಗಳಿಂದ 8,718 ಕೋಟಿ ರೂಪಾಯಿಗಳನ್ನು ಚುನಾವಣಾ ಬಾಂಡ್‌ಗಳ ಹೆಸರಿನಲ್ಲಿ ಸಂಗ್ರಹಿಸಿದೆ. ಇದೇ ವ್ಯಕ್ತಿಗಳು ಮತ್ತು ಸಂಸ್ಥೆಗಳಿಂದ ಆಮ್ ಆದ್ಮಿ ಪಕ್ಷ ಪಡೆದ ಚಿಲ್ಲರೆ ಕಾಸಿಗೆ ಬಂಧಿಸಿರುವ ಬಿಜೆಪಿ, ‘ಕೇಜ್ರಿವಾಲ್ ಬಂಧನಕ್ಕೆ ದೆಹಲಿ ಜನ ದುಃಖ ವ್ಯಕ್ತಪಡಿಸಿಲ್ಲ. ಬದಲಿಗೆ ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ’ ಎನ್ನುತ್ತಿದೆ.

ಅಡಿಕೆ ಕದ್ದ ಕಳ್ಳನಿಗೆ ಜೈಲು ಶಿಕ್ಷೆ ಕೊಡುವುದಾದರೆ, ಆನೆ ಕದ್ದ ಕಳ್ಳನಿಗೆ ಅದಕ್ಕಿಂತ ಹೆಚ್ಚಿನ ಶಿಕ್ಷೆ ಕೊಡಬೇಕಲ್ಲವೇ? ಚಿಲ್ಲರೆ ಕಾಸಿಗೆ ಕೇಜ್ರಿವಾಲ್‌ರನ್ನು ಜೈಲಿಗೆ ಹಾಕುವುದು ಸರಿಯಾದ ಕ್ರಮವಾದರೆ, ಸಾವಿರಾರು ಕೋಟಿ ಕಬಳಿಸಿದ ಬಿಜೆಪಿಗರನ್ನು ಎಲ್ಲಿಗೆ ಕಳಿಸಬೇಕು? ದೇಶದ ಜನಕ್ಕೆ ಇದು ಅರ್ಥವಾಗುವುದಿಲ್ಲವೇ?

ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಕ್ರಿಕೆಟ್ ಆಟ, ಹುಚ್ಚಾಟ, ಜೂಜಾಟ ಮತ್ತು ಧೋನಿಯ ದುಗುಡ

ಇತ್ತೀಚಿನ ದಿನಗಳಲ್ಲಿ ಎಲ್ಲವೂ ಮಿತಿ ಮರೆತು ಅತಿಯಾಗುತ್ತಿದೆ. ಕ್ರೀಡಾಸ್ಫೂರ್ತಿ ಮರೆಯಾಗಿ ಹುಚ್ಚಾಟ...

ಈ ದಿನ ಸಂಪಾದಕೀಯ | ಪ್ಲಾನ್ ಬಿ ಬಗೆಗಿನ ಮಾತು ಮತ್ತು ನಾಯಕನ ಹಿಂದಿನ ನಾಯಕ

ಹತ್ತು ವರ್ಷಗಳ ಕಾಲ ಮೋದಿಯನ್ನು ಮೆರೆಯಲು ಬಿಟ್ಟ ಅಮಿತ್ ಶಾ, ಬಿಜೆಪಿಯನ್ನು...

ಈ ದಿನ ಸಂಪಾದಕೀಯ | ರಾಜ್ಯವನ್ನು ತಲ್ಲಣಿಸಿದ ಹೆಣ್ಣುಮಕ್ಕಳ ಸರಣಿ ಹತ್ಯೆಗಳು ಕೊಡುತ್ತಿರುವ ಸಂದೇಶವೇನು?

ಒಂದು ತಿಂಗಳಲ್ಲಿ ಮೂರ್ನಾಲ್ಕು ಘಟನೆಗಳು ನಡೆದಾಗ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ಮಹಿಳೆಯರಿಗೆ...

ಈ ದಿನ ಸಂಪಾದಕೀಯ | ಮುಸ್ಲಿಮರು, ಮಾಧ್ಯಮಗಳು ಮತ್ತು ಮೂರು ಕೊಲೆಗಳು

ನೇಹಾ ಹತ್ಯೆಯ ವಿರುದ್ಧ ಕಾಣಿಸಿಕೊಂಡ ಜನಾಕ್ರೋಶದ ಹಿಂದೆ ಸುದ್ದಿ ಮಾಧ್ಯಮಗಳ ಪ್ರಚೋದನೆ...