ಏಪ್ರಿಲ್ 19ರಿಂದ ಆರಂಭವಾಗುವ ಲೋಕಸಭಾ ಚುನಾವಣೆಗೆ ಇಲ್ಲಿಯವರೆಗೂ ಐದು ಹಂತಗಳಲ್ಲಿ ಬಿಜೆಪಿ ಬಿಡುಗಡೆ ಮಾಡಿರುವ 402 ಅಭ್ಯರ್ಥಿಗಳಲ್ಲಿ 100 ಹಾಲಿ ಸಂಸದರಿಗೆ ಟಿಕೆಟ್ ನಿರಾಕರಿಸಲಾಗಿದೆ.
ಮೊದಲ ಹಂತದಲ್ಲಿ 195 ಮಂದಿಗೆ ಟಿಕೆಟ್ ನೀಡಲಾಗಿತ್ತು. ನಂತರದಲ್ಲಿ 290 ಹಾಲಿ ಸಂಸದರಿಗೆ ಟಿಕೆಟ್ ನೀಡಲಾಗಿದ್ದು, 100 ಸಂಸದರನ್ನು ಟಿಕೆಟ್ ಪಟ್ಟಿಯಿಂದ ಕೈಬಿಡಲಾಗಿದೆ.
ಮಾ.2ರಂದು ಬಿಡುಗಡೆ ಮಾಡಿದ ಮೊದಲ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಾರಣಾಸಿಯಿಂದ ಟಿಕೆಟ್ ನೀಡಲಾಗಿದ್ದು, ಅವರು ಮೂರನೇ ಬಾರಿ ಸ್ಪರ್ಧೆ ಮಾಡುತ್ತಿದ್ದಾರೆ. 2014ರಲ್ಲಿ ಎಎಪಿಯ ಕೇಜ್ರಿವಾಲ್ ಅವರನ್ನು ಸೋಲಿಸಿದರೆ, 2019ರಲ್ಲಿ ಸಮಾಜವಾದಿ ಪಕ್ಷದ ಶಾಲಿನಿ ಯಾದವ್ ಅವರನ್ನು ಮೋದಿ ಪರಾಭವಗೊಳಿಸಿದ್ದರು.
ಹಾಗೆಯೆ ಮೊದಲ ಪಟ್ಟಿಯಲ್ಲಿ ಕೇಂದ್ರ ಸಚಿವರಾದ ಅಮಿತ್ ಶಾ, ಮನ್ಸುಕ್ ಮಾಂಡವ್ಯ, ಭೂಪೇಂದರ್ ಹೂಡಾ, ಜ್ಯೋತಿರಾಧಿತ್ಯ ಸಿಂಧಿಯಾ, ಪರ್‌ಶೋತಮ್ ರೂಪಲಾ, ಸರ್ಬಾನಂದ ಸೋನಾವಾಲ್ ಹಾಗೂ ರಾಜೀವ್ ಚಂದ್ರಶೇಖರ್ ಅವರಿಗೆ ಟಿಕೆಟ್ ನೀಡಲಾಗಿತ್ತು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಅಡಿಕೆ ಕದ್ದ ಕಳ್ಳ ಜೈಲಿಗೆ, ಆನೆ ಕದ್ದ ಕಳ್ಳ ಎಲ್ಲಿಗೆ?
ಮಾ.13ರಂದು ಬಿಡುಗಡೆ ಮಾಡಿದ 2ನೇ ಪಟ್ಟಿಯಲ್ಲಿ ಹರಿಯಾಣದ ಮಾಜಿ ಮುಖ್ಯಮಂತ್ರಿ ಮನೋಹರ್‌ಲಾಲ್ ಕಟ್ಟರ್ ಒಳಗೊಂಡು 72 ಮಂದಿಗೆ ಟಿಕೆಟ್ ನೀಡಲಾಗಿತ್ತು.
ಮಾ.21ರ ಮೂರನೇ ಪಟ್ಟಿಯಲ್ಲಿ 9 ಮಂದಿ, ಮಾ.22ರ ನಾಲ್ಕನೇ ಪಟ್ಟಿಯಲ್ಲಿ ತಮಿಳು ನಾಡು ಹಾಗೂ ಪುದುಚೆರಿ ಒಳಗೊಂಡು 15 ಮಂದಿಗೆ ಟಿಕೆಟ್ ಕೊಡಲಾಗಿತ್ತು.
ಮಾ.24ರ 111 ಅಭ್ಯರ್ಥಿಗಳ ಐದನೇ ಪಟ್ಟಿಯಲ್ಲಿ ಕರ್ನಾಟಕದ ನಾಲ್ವರನ್ನು ಅಭ್ಯರ್ಥಿಗಳನ್ನಾಗಿ ಘೋಷಿಸಲಾಗಿತ್ತು. ಮೈತ್ರಿ ಪಕ್ಷಗಳ ಹೊಂದಾಣಿಕೆಯ ನಡುವೆಯೂ ಬಿಜೆಪಿಯು ಇನ್ನು 30ರಿಂದ 40 ಮಂದಿಗೆ ಟಿಕೆಟ್ ನಿಡುವ ಸಂಭವವಿದೆ.
ಮೊದಲ ಪಟ್ಟಿಯಲ್ಲಿ 33 ಹಾಲಿ ಸಂಸದರು, ಐದನೇ ಪಟ್ಟಿಯಲ್ಲಿ 37 ಸಂಸದರನ್ನು ಕೈಬಿಡಲಾಗಿತ್ತು. ಮುಂದೆ ಬಿಡುಗಡೆಯಾಗುವ ಪಟ್ಟಿಯಲ್ಲಿ ಇನ್ನೂ ಹಲವು ಹಾಲಿ ಸಂಸದರನ್ನು ಕೈಬಿಡುವ ಸಾಧ್ಯತೆಯಿದೆ.
2019ರ ಲೋಕಸಭಾ ಚುನಾವಣೆಯಲ್ಲಿಯೂ 2014ರಲ್ಲಿ ಆಯ್ಕೆಯಾಗಿದ್ದ 119 ಹಾಲಿ ಸಂಸದರಿಗೆ ಟಿಕೆಟ್ ನಿರಾಕರಿಸಲಾಗಿತ್ತು.
