ದೆಹಲಿ ಅಬಕಾರಿ ನೀತಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದಿಂದ ಬಂಧಿತರಾಗಿರುವ ಬಿಆರ್‌ಎಸ್ ನಾಯಕಿ ಕೆ ಕವಿತಾ ಅವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲು ದೆಹಲಿಯ ರೋಸ್ ಅವಿನ್ಯೂ ನ್ಯಾಯಾಲಯ ಆದೇಶಿಸಿದೆ.
ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಕಸ್ಟಡಿ ವಿಚಾರಣೆ ವಿಸ್ತರಣೆಗೆ ಅನುಮತಿ ಕೇಳದ ಹಿನ್ನೆಲೆಯಲ್ಲಿ ವಿಶೇಷ ನ್ಯಾಯಾಧೀಶರಾದ ಕಾವೇರಿ ಬೇವೆಜಾ ಅವರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ಹೊರಡಿಸಿದರು.
ಈ ಮೊದಲು ಬಿಆರ್‌ಎಸ್ ನಾಯಕಿಯನ್ನು ಮಾ.16ರವರೆಗೆ ಇ.ಡಿ ಕಸ್ಟಡಿಗೆ ನೀಡಲಾಗಿತ್ತು. ನಂತರದಲ್ಲಿ ಕಳೆದ ಶನಿವಾರ ಕಸ್ಟಡಿಯನ್ನು ಮೂರು ದಿನ ವಿಸ್ತರಿಸಲಾಗಿತ್ತು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಅಡಿಕೆ ಕದ್ದ ಕಳ್ಳ ಜೈಲಿಗೆ, ಆನೆ ಕದ್ದ ಕಳ್ಳ ಎಲ್ಲಿಗೆ?
ವಿಚಾರಣೆಯ ಸಂದರ್ಭದಲ್ಲಿ ಕವಿತ ಅವರ ವಕೀಲರಾದ ನಿತೀಶ್ ರಾಣ ಅವರು, ಆಕೆಯ ಅಪ್ರಾಪ್ತ ಪುತ್ರನ ಪರೀಕ್ಷೆಯ ಕಾರಣದಿಂದ ಮಧ್ಯಂತರ ಜಾಮೀನು ನೀಡಬೇಕೆಂದು ಮನವಿ ಮಾಡಿದರು.
ಜಾಮೀನು ಅರ್ಜಿಯ ಮನವಿಗೆ ವಾದ ಮಂಡಿಸಿದ ಇ.ಡಿ ಪರ ವಕೀಲರು, ಒಂದು ವೇಳೆ ಮಧ್ಯಂತರ ಜಾಮೀನು ಅರ್ಜಿಯನ್ನು ಪರಿಗಣಿಸಿದರೆ ಮರು ಅರ್ಜಿಯನ್ನು ಸಲ್ಲಿಸಲು ಅವಕಾಶ ನೀಡಬೇಕು ಎಂದು ನ್ಯಾಯಾಲಯಕ್ಕೆ ತಿಳಿಸಿದರು.
ಅಕ್ರಮ ಹಣ ವರ್ಗಾವಣೆ ಪ್ರಕರಣದಡಿ ಮಧ್ಯಂತರ ಹಾಗೂ ನಿಯಮಿತ ಜಾಮೀನಿಗೆ ಕಠಿಣ ನಿಯಮಗಳಿವೆ ಎಂದು ಎಂದು ಇದೇ ಸಂದರ್ಭದಲ್ಲಿ ಇ.ಡಿ ಪುನರ್ರಚ್ಚರಿಸಿತು.
ತೆಲಂಗಾಣ ಮಾಜಿ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರ ಪುತ್ರಿಯಾಗಿರುವ 46 ವರ್ಷದ ಕವಿತಾ ಅವರು ರಾಷ್ಟ್ರ ರಾಜಧಾನಿಯಲ್ಲಿ ಅಬಕಾರಿ ಪರವಾನಗಿಯಲ್ಲಿ ದೊಡ್ಡ ಪಾಲು ಪಡೆಯಲು ಎಎಪಿಗೆ 100 ಕೋಟಿ ರೂ. ಲಂಚ ನೀಡಿದ ಆರೋಪದಲ್ಲಿ ದಕ್ಷಿಣ ಗುಂಪಿನ ಪ್ರಮುಖ ಪಾಲುದಾರರಾಗಿದ್ದಾರೆ ಎಂದು ಇ.ಡಿ ಆರೋಪಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ಸಂಸ್ಥೆಯು ಮಾ.15ರಂದು ಕವಿತಾ ಅವರನ್ನು ಬಂಧಿಸಿತ್ತು.
