- 2050ರಲ್ಲಿ ಭಾರತದ ಜನಸಂಖ್ಯೆ 166.08 ಕೋಟಿ ಆಗಿರುತ್ತದೆ
- ಚೀನಾದಲ್ಲಿ 20 ಕೋಟಿ ಜನರು 65 ವರ್ಷ ಮೇಲ್ಪಟ್ಟವರು
ವಿಶ್ವದಲ್ಲಿಯೇ ಭಾರತ ಈಗ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿ ಹೊರಹೊಮ್ಮಿದೆ.
ವಿಶ್ವಸಂಸ್ಥೆ ನೀಡಿರುವ ವರದಿಯಲ್ಲಿ, ಜನಸಂಖ್ಯೆಯಲ್ಲಿ ಭಾರತ ಚೀನಾವನ್ನು ಹಿಂದಿಕ್ಕಿದೆ. ವರದಿಯ ಪ್ರಕಾರ, ಈಗ ಭಾರತದ ಜನಸಂಖ್ಯೆ 142.86 ಕೋಟಿ ಆಗಿದೆ. ಚೀನಾ 142.57 ಕೋಟಿ ಜನಸಂಖ್ಯೆಯೊಂದಿಗೆ ಎರಡನೇ ಸ್ಥಾನಕ್ಕೆ ಕುಸಿದಿದೆ.
2022ರಲ್ಲಿ ಚೀನಾದ 142.06 ಕೋಟಿಗೆ ಹೋಲಿಸಿದರೆ, ಭಾರತದ ಜನಸಂಖ್ಯೆಯು 141.02 ಕೋಟಿ ಇತ್ತು. 2050ರಲ್ಲಿ ಭಾರತದ ಜನಸಂಖ್ಯೆಯು 166.08 ಕೋಟಿ ಆಗಿರುತ್ತದೆ ಎಂದು ಅಂದಾಜಿಸಲಾಗಿದೆ.
ಒಂದು ವರ್ಷದಲ್ಲಿ ಭಾರತದ ಜನಸಂಖ್ಯೆ ಶೇ.1.56ರಷ್ಟು ಹೆಚ್ಚಾಗಿದೆ. ಭಾರತದ ಶೇ. 25ರಷ್ಟು ಜನರ ವಯಸ್ಸು 0-14 ವರ್ಷ, 10-19 ವರ್ಷ ವಯೋಮಾನದ ಶೇ.18 ಜನರಿದ್ದಾರೆ. 10-24 ವರ್ಷ ವಯಸ್ಸಿನ ಜನರ ಸಂಖ್ಯೆ ಶೇ. 26. ಭಾರತದಲ್ಲಿ 15-64 ವರ್ಷಗಳ ನಡುವೆ ಸುಮಾರು ಶೇ. 68 ಜನರಿದ್ದಾರೆ. ಅಂದರೆ ಭಾರತವು ಅತಿ ಹೆಚ್ಚು ಯುವಕರನ್ನು ಹೊಂದಿದೆ. ಇತ್ತೀಚಿನ ವರದಿಯು ಭಾರತದ ಒಟ್ಟು ಫಲವತ್ತತೆ ದರ 2.0 ಎಂದು ಅಂದಾಜಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲುವು ಭಾರತದ ಚಿತ್ರಣವನ್ನು ಬದಲಿಸುತ್ತದೆ: ಮಲ್ಲಿಕಾರ್ಜುನ ಖರ್ಗೆ
ಭಾರತೀಯ ಪುರುಷನ ಸರಾಸರಿ ಜೀವಿತಾವಧಿ 71 ವರ್ಷ, ಮಹಿಳೆಯರ ಜೀವಿತಾವಧಿ 74 ವರ್ಷ. ಈ ವರದಿಯನ್ನು 1978ರಿಂದ ಪ್ರಕಟಿಸಲಾಗುತ್ತಿದೆ. ಈಗ ವಿಶ್ವದ ಜನಸಂಖ್ಯೆ 800 ಕೋಟಿ ದಾಟಿದೆ ಎಂದು ವಿಶ್ವಸಂಸ್ಥೆಯ ಜನಸಂಖ್ಯಾ ನಿಧಿಯ (ಯುಎನ್‌ಎಪ್‌ಪಿಎ) ಭಾರತದ ಪ್ರತಿನಿಧಿ ತಿಳಿಸಿದ್ದಾರೆ.
ಚೀನಾದಲ್ಲಿ ಒಂದು ಮಗುವಿನ ನೀತಿ ರದ್ದುಗೊಳಿಸಿ, ಮೂರು ಮಕ್ಕಳಿಗೆ ಅವಕಾಶ ನೀಡಿದ ನಂತರ ಜನಸಂಖ್ಯೆಯು ನಿರೀಕ್ಷೆಯಂತೆ ಹೆಚ್ಚಾಗಲಿಲ್ಲ. ಇಲ್ಲಿ 20 ಕೋಟಿ ಜನರು 65 ವರ್ಷ ಮೇಲ್ಪಟ್ಟವರಿದ್ದಾರೆ.
ಚೀನಾ ತನ್ನ ವೃದ್ಧರ ಜನಸಂಖ್ಯೆಯಿಂದ ತೊಂದರೆಗೀಡಾಗಿದೆ. ಅಲ್ಲಿ ಜನಸಂಖ್ಯೆ ಹೆಚ್ಚಿಸಲು ಸರ್ಕಾರ ಜನರಿಗೆ ಹೊಸ ಯೋಜನೆಗಳನ್ನು ನೀಡುತ್ತಿದೆ. ಆದರೆ, ಅಲ್ಲಿಯ ಜನರು ಒಂದಕ್ಕಿಂತ ಹೆಚ್ಚು ಮಕ್ಕಳಿಗೆ ಜನ್ಮ ನೀಡುತ್ತಿಲ್ಲ. ಈಗ ಅವಿವಾಹಿತರು ಸಹ ಅಲ್ಲಿ ಮಗುವಿಗೆ ಜನ್ಮ ನೀಡಬಹುದು, ಮದುವೆಯಾದ ದಂಪತಿಯ ಮಗುವಿಗೆ ಸಿಗುವ ಎಲ್ಲಾ ಸೌಲಭ್ಯಗಳು ಅವರಿಗೆ ಸಿಗುತ್ತವೆ. ಅಲ್ಲಿ ಒಂದು ಕಾಲದಲ್ಲಿ ಜನರ ಸಂಖ್ಯೆ ನಿಯಂತ್ರಿಸಲು ಹಲವು ಕಠಿಣ ನಿಯಮಗಳನ್ನು ಜಾರಿಗೆ ತರಲಾಗಿತ್ತು.