ಲೋಕಸಭಾ ಚುನಾವಣೆ ದಿನಾಂಕ ನಿಗದಿಯಾಗಿದ್ದು, ನೀತಿ ಸಂಹಿತೆ ಜಾರಿಯಲ್ಲಿದೆ. ಇದೀಗ, ಬೆಂಗಳೂರಿನ ಹಲಸೂರು ಗೇಟ್ ಪೊಲೀಸ್ ಠಾಣಾ ವ್ಯಾಪ್ತಿಯ ಧರ್ಮರಾಯಸ್ವಾಮಿ ದೇವಸ್ಥಾನದ ಬಳಿ ದಾಖಲೆ ಇಲ್ಲದೆ, ಸಾಗಿಸುತ್ತಿದ್ದ 25 ಲಕ್ಷ ಹಣವನ್ನು ಚುನಾವಣಾ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ನಗರದ ಧರ್ಮರಾಯಸ್ವಾಮಿ ದೇವಸ್ಥಾನದ ಬಳಿ ಮಾರ್ಚ್ 26 ರ ಸಂಜೆ ಹಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಪ್ರಕರಣದ ತನಿಖೆಯನ್ನು ಪೊಲೀಸರು ನಡೆಸುತ್ತಿದ್ದಾರೆ.
ಹಾಗೆಯೇ, ದಾಖಲೆ ಇಲ್ಲದೆ ಸಾಗಿಸುತ್ತಿದ್ದ 199 ಎಲ್ಇಡಿ ಟಿವಿಗಳನ್ನು ಚುನಾವಣಾ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಸ್ಲಾಂಪುರ ಗ್ರಾಮದ ಬಾಬುಜಾನ್ಗೆ ಈ ಎಲ್ಇಡಿ ಟಿವಿಗಳು ಸೇರಿವೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಲ್ಯಾಂಕೋ ಟೋಲ್ನಲ್ಲಿ ಚುನಾವಣಾ ಅಧಿಕಾರಿಗಳು 199 ಎಲ್ಇಡಿ ಟಿವಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ | ಬೆಂಗಳೂರು, ಶಿವಮೊಗ್ಗದಲ್ಲಿ ಎನ್ಐಎ ದಾಳಿ
ಚಿತ್ರದುರ್ಗ ಜಿಲ್ಲೆಯ ಪಿಳ್ಳೆಕೇರನಹಳ್ಳಿ ಚೆಕ್‌ಪೋಸ್ಟ್‌ನಲ್ಲಿ ದಾಖಲೆ ಇಲ್ಲದೇ 20 ಲಕ್ಷ 35 ಸಾವಿರ ಸಾಗಿಸುತ್ತಿದ್ದ ಹಣವನ್ನು ಚುನಾವಣಾ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಚಿತ್ರದುರ್ಗ ತಹಶೀಲ್ದಾರ್ ನಾಗವೇಣಿ ನೇತೃತ್ವದ ಎಸ್.ಎಸ್.ಟಿ ಹಾಗೂ ಎಫ್.ಎಸ್.ಟಿ ತಂಡವು ಈ ಹಣವನ್ನ ವಶಕ್ಕೆ ಪಡೆದಿದೆ. ಈ ಕುರಿತು ಚಿತ್ರದುರ್ಗ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಲಾಗಿದೆ.
ಚಿತ್ರದುರ್ಗ ಜಿಲ್ಲೆಯ ಭರಮಸಾಗರ ಗ್ರಾಮದ ಮನೋಜ್ ಕುಮಾರ್ ಎಂಬುವವರು ಹೊಸಪೇಟೆಯಿಂದ ಹಣವನ್ನು ಕಾರಿನಲ್ಲಿ ಗ್ರಾಮಕ್ಕೆ ತೆಗೆದುಕೊಂಡು ಹೋಗುತ್ತಿದ್ದರು. ಮಾದರಿ ನೀತಿ ಸಂಹಿತೆ ಹಿನ್ನಲೆ, ಸ್ಥಾಪಿಸಲಾಗಿರುವ ಪಿಳ್ಳೇಕೆರನಹಳ್ಳಿ ಚೆಕ್ ಪೊಸ್ಟ್‌ನಲ್ಲಿ ಎಸ್‌ಎಸ್‌ಟಿ ತಂಡ ತಪಾಸಣೆ ನಡೆಸುವ ವೇಳೆ ಕಾರಿನಲ್ಲಿ ನಗದು ಇರುವುದು ಪತ್ತೆಯಾಗಿದೆ.
ಮನೋಜ್ ಕುಮಾರ್ ಅವರು ಹಣ ಹೊಂದಿದ್ದಕ್ಕೆ ಯಾವುದೇ ಸೂಕ್ತ ದಾಖಲೆ ನೀಡದ ಕಾರಣ ₹20.35 ಲಕ್ಷ ನಗದನ್ನು ವಶಪಡಿಸಿಕೊಳ್ಳಲಾಗಿದೆ.
ಹಣದ ಮೂಲ ಹಾಗೂ ಇನ್ನಿತರ ಮಾಹಿತಿಯ ತನಿಖೆಗಾಗಿ ಪ್ರಕರಣವನ್ನು ಆದಾಯ ತೆರಿಗೆ ಇಲಾಖೆ ವರ್ಗಾಯಿಸಲಾಗಿದೆ.ಈ ಸಂದರ್ಭದಲ್ಲಿ ಚಿತ್ರದುರ್ಗ ತಹಶೀಲ್ದಾರ್ ಡಾ.ನಾಗವೇಣಿ, ಗ್ರಾಮಾಂತರ ಠಾಣೆ ಪೊಲೀಸ್ ನಿರೀಕ್ಷಕ ಸುನೀಲ್ ಕುಮಾರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.