ದೆಹಲಿ ಮುಖ್ಯಮಂತ್ರಿ ಹಾಗೂ ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರ ಬಂಧನದ ವಿರುದ್ಧ ನ್ಯಾಯಾಲಯದ ಆವರಣದಲ್ಲಿ ವಕೀಲರು ಪ್ರತಿಭಟನೆ ನಡೆಸದಂತೆ ದೆಹಲಿ ಹೈಕೋರ್ಟ್ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನಮೋಹನ್ ಬುಧವಾರ ಎಚ್ಚರಿಕೆ ನೀಡಿದ್ದಾರೆ.
ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಕೇಜ್ರಿವಾಲ್ ಅವರನ್ನು ಜಾರಿ ನಿರ್ದೇಶನಾಲಯ(ಇಡಿ) ಬಂಧಿಸಿದ ಬಳಿಕ ಆಮ್ ಆದ್ಮಿ ಪಕ್ಷದ ಕಾನೂನು ಘಟಕ ಬುಧವಾರ ಇಲ್ಲಿನ ಜಿಲ್ಲಾ ನ್ಯಾಯಾಲಯಗಳಲ್ಲಿ ಪ್ರತಿಭಟನೆಗೆ ಕರೆ ನೀಡಿದೆ.
ಈ ಹಿನ್ನೆಲೆಯಲ್ಲಿ “ನ್ಯಾಯಾಲಯದಲ್ಲಿ ಪ್ರತಿಭಟನೆಯನ್ನು ಆಯೋಜಿಸಿದರೆ ಪರಿಣಾಮಗಳು ತೀವ್ರವಾಗಿರುತ್ತವೆ. ನ್ಯಾಯಾಲಯಗಳಲ್ಲಿ ಪ್ರಕರಣಗಳ ವಿಚಾರಣೆಗಳನ್ನು ತಡೆಹಿಡಿಯಲಾಗಲೀ ಅಥವಾ ನಿಲ್ಲಿಸಲಾಗಲಿ ಸಾಧ್ಯವಿಲ್ಲ. ನ್ಯಾಯಾಲಯಕ್ಕೆ ಬರುವ ಯಾರೊಬ್ಬರ ಹಕ್ಕನ್ನು ನಾವು ಕಸಿದುಕೊಳ್ಳಲು ಸಾಧ್ಯವಿಲ್ಲ” ಎಂದು ನ್ಯಾಯಮೂರ್ತಿ ಮನಮೋಹನ್ ಹೇಳಿದರು.
“ಒಂದು ವೇಳೆ ಯಾರಾದರೂ ಪ್ರತಿಭಟನೆ ಕೈಗೊಂಡು ನ್ಯಾಯಾಲಯಕ್ಕೆ ಬರುವವರಿಗೆ ತೊಂದೆರೆಯಾದರೆ ತಾವೇ ನೇರ ಹೊಣೆಯಾಗಬೇಕಾಗುತ್ತದೆ” ಎಂದು ವಕೀಲರಿಗೆ ಎಚ್ಚರಿಕೆ ನೀಡಿದರು.
ನ್ಯಾಯಮೂರ್ತಿ ಮನಮೋಹನ್ ಅವರು ಗುರುವಾರದಂದು ಈ ವಿಷಯವನ್ನು ಕೈಗೆತ್ತಿಕೊಳ್ಳುವುದಾಗಿ ಹೇಳಿದ್ದು, “ಪ್ರಜ್ಞೆ ಮೇಲುಗೈ ಸಾಧಿಸುತ್ತದೆ” ಎಂಬ ಆಶಾಭಾವನೆ ಇದೆ. ಅಗತ್ಯ ಬಿದ್ದರೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಚುನಾವಣಾ ಬಾಂಡ್ | ವಿಶ್ವದಲ್ಲೇ ಅತೀ ದೊಡ್ಡ ಹಗರಣ ಎಂದ ನಿರ್ಮಲಾ ಸೀತಾರಾಮನ್ ಪತಿ!
ವಕೀಲ ವೈಭವ್ ಸಿಂಗ್ ಅವರು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನ್ಮೀತ್ ಪಿ ಎಸ್ ಅರೋರಾ ಅವರ ನ್ಯಾಯಪೀಠದ ಮುಂದೆ ಈ ವಿಷಯವನ್ನು ಉಲ್ಲೇಖಿಸಿದ್ದು, “ನ್ಯಾಯಾಲಯದ ಆವರಣವನ್ನು ರಾಜಕೀಯ ಉದ್ದೇಶಗಳಿಗಾಗಿ ಬಳಸಲಾಗುವುದಿಲ್ಲ ಎಂದು ಹೇಳಿದ್ದಾರೆ.