ಮಕ್ಕಳು ತನ್ನವಲ್ಲ ಎಂದು ಶಂಕಿಸಿದ ತಂದೆಯೊಬ್ಬ ಇಬ್ಬರು ಮಕ್ಕಳನ್ನು ಹಾಗೂ ತನ್ನ ಅಜ್ಜಿಯನ್ನು ಕೊಲೆ ಮಾಡಿರುವ ಘಟನೆ ರಾಜಸ್ಥಾನದ ಚುರು ಜಿಲ್ಲೆಯಲ್ಲಿ ವರದಿಯಾಗಿದೆ. ಆರೋಪಿ ವಿಕೃತ ತಂದೆಯನ್ನು ಬಂಧಿಸಿರುವುದಾಗಿ ಮಂಗಳವಾರ ಪೊಲೀಸರು ತಿಳಿಸಿದ್ದಾರೆ.
“ಬಂಧಿತ ಆರೋಪಿ ಭೂಪ್ ಸಿಂಗ್ (32) ಎಂಬಾತ ಭೈನ್ಸಿ ಗ್ರಾಮದಲ್ಲಿ ತನ್ನ ಅಜ್ಜಿಯನ್ನು ಜನವರಿ 31ರಂದು ಹಾಗೂ ಮಕ್ಕಳಾದ ಗರ್ವಿತ್ (4) ಹಾಗೂ ಅನುರಾಗ್ (8) ಅವರನ್ನು ಫೆಬ್ರವರಿ 13ರಂದು ವಿಷ ಹಾಕಿ ಕೊಲೆ ಮಾಡಿದ್ದಾನೆ” ಎಂದು ಚುರು ಪೊಲೀಸ್ ಸೂಪರಿಂಟೆಂಡೆಂಟ್ ಜೈ ಯಾದವ್ ಹೇಳಿದ್ದಾರೆ.
“ತಿಂಗಳ ಅವಧಿಯಲ್ಲಿ ಮೂವರು ಮೃತಪಟ್ಟಿದ್ದರಿಂದ ಅನುಮಾನ ಮೂಡಿತ್ತು. ಹೀಗಾಗಿ, ಪೊಲೀಸರು ಪ್ರಕರಣದ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು” ಎಂದಿದ್ದಾರೆ.
“ಮಕ್ಕಳ ಶವಗಳನ್ನು ಸಮಾಧಿಯಿಂದ ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಗರ್ವಿತ್ ದೇಹದಲ್ಲಿ ವಿಷದ ಅಂಶ ಪತ್ತೆಯಾದ ಕಾರಣ, ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಯಿತು. ಬಳಿಕ ಆತ ʼಮಕ್ಕಳು ತನ್ನವಲ್ಲ ಎಂಬ ಅನುಮಾನ ಮೂಡಿತ್ತು. ಹಾಗಾಗಿ ಕೊಲೆ ಮಾಡಲು ನಿರ್ಧರಿಸಿದೆʼ ಎಂದು ವಿಚಾರಣೆ ವೇಳೆ ಒಪ್ಪಿಕೊಂಡಿರುವ ಆರೋಪಿ, ಅನುಮಾನ ಬರದಂತೆ ನೋಡಿಕೊಳ್ಳುವ ಸಲುವಾಗಿ, ಮೊದಲು ತನ್ನ ಅಜ್ಜಿಯನ್ನು ನಂತರ ಮಕ್ಕಳನ್ನು ಕೊಲೆ ಮಾಡಿದ್ದಾನೆ” ಎಂದು ಅಧಿಕಾರಿ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಅಮೆರಿಕದ ಗಾಜಾ ನಡೆ ವಿರೋಧಿಸಿ ಪಿ.ಹೆಚ್‌ಡಿ, ಎಂಎಸ್‌ಸಿ ಪದವಿಗಳನ್ನು ಮರಳಿಸಿದ ಸಾಮಾಜಿಕ ಕಾರ್ಯಕರ್ತ ಸಂದೀಪ್ ಪಾಂಡೆ
“ಆರೋಪಿಯು ನರ್ಸಿಂಗ್ ಓದಿದ್ದು, ಮೆಡಿಕಲ್ ಸ್ಟೋರ್ ಹೊಂದಿದ್ದಾನೆಂಬುದೂ ವಿಚಾರಣೆ ವೇಳೆ ಗೊತ್ತಾಗಿದೆ” ಎಂದು ವಿವರಿಸಿದ್ದಾರೆ.