ಗಬಸಾವಳಗಿ ಮತ್ತು ಬಿಸನಾಳ ಗ್ರಾಮಗಳನ್ನು ಸಿಂದಗಿ ತಾಲೂಕಿನಲ್ಲಿಯೇ ಉಳಿಸಿ ಎಂಬ ಬೇಡಿಕೆಯೊಂದಿಗೆ ನಡೆಸುತ್ತಿರುವ ಉಪವಾಸ ಸತ್ಯಾಗ್ರಹ ಮಂಗಳವಾರ (ಮಾ.26) ಅಂತ್ಯವಾಗಿದೆ. ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಿ ಶಾಸಕ ಅಶೋಕ್ ಮನಗೋಳಿ ಉಪವಾಸ ಕೈಬಿಡುವಂತೆ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಸಂದರ್ಭದಲ್ಲಿ ಉಪವಾಸ ನಿರತ ನಾಯಕ ಶಾಂತಗೌಡ ಅ. ಬಿರಾದಾರ ಮಾತನಾಡಿ, ನಮ್ಮ ಸ್ಥಳೀಯ ಶಾಸಕರ ಮೇಲೆ ನಂಬಿಕೆ ಇದೆ. ಯಾಕಂದ್ರೆ ದಿ. ಮಾಜಿ ಸಚಿವ ಎಂ.ಸಿ. ಮನಗೂಳಿಯವರನ್ನು ನೆನೆದು ಯಾವ ರೀತಿ ಎಂ.ಸಿ ಮನಗೂಳಿಯವರು ನಮ್ಮ ಕ್ಷೇತ್ರಕ್ಕೆ ಸಮಗ್ರ ನೀರಾವರಿ ಸಲುವಾಗಿ ಕಾಲಿಗೆ ಪಾದರಕ್ಷೆ ಇಲ್ದೆ ಹೋರಾಡಿ, ನೀರಾವರಿ ಮಾಡಿದರೋ ಅದೇ ರೀತಿ ಅವರ ಪುತ್ರ ಎ.ಎಂ. ಮನಗೂಳಿ ಶಾಸಕರು ಕೂಡ ಅಭಿವೃದ್ಧಿಯ ಹಾದಿಯಲ್ಲಿದ್ದಾರೆ ಎಂದರು.
ಅವರ ಮೇಲೆ ನಂಬಿಕೆ ಇಟ್ಟು, ಇಂದಿನಿಂದ ಅದೇ ಭರವಸೆಯಲ್ಲಿ ನಾನೂ ಕೂಡ ನ್ಯಾಯ ಸಿಗುವವರೆಗೆ ಕಾಲಿಗೆ ಪಾದರಕ್ಷೆ ಇಲ್ದೆ ಇರುತ್ತೇನೆ. ಯಾವ ರೀತಿ ದೇವೇಗೌಡರು ಗುತ್ತಿಬಸವೇಶ್ವರ ಏತನೀರಾವರಿಗೆ ಚಾಲನೆ ನೀಡಿ ಮನಗೂಳಿ ಮಾವನವರಿಗೆ ಪಾದರಕ್ಷೆ ಹಾಕಿಸಿದರೋ, ಅದೇ ರೀತಿ ನನಗೆ ಶಾಸಕರು ನ್ಯಾಯ ಕೊಡಿಸಿ ಪಾದರಕ್ಷೆ ಹಾಕಿಸಬೇಕು ಅಲ್ಲಿಯವರೆಗೆ ಪಾದರಕ್ಷೆ ತೊಡುವುದಿಲ್ಲ ಎಂದರು.
ಅದೇ ರೀತಿ ಬಂಗಾರೆಪ್ಪಗೌಡ ಬಾ ಬಿರಾದಾರ ಅವರು ಕೂಡ ಪಾದರಕ್ಷೆ ಬಿಡುವುದಾಗಿ ಹೇಳಿದರು. ಶಾಸಕರು ಭರವಸೆಯನ್ನು ಸ್ವೀಕರಿಸಿ ಉಪವಾಸ ನಿರತರಿಗೆ ಎಳನೀರು ಕುಡಿಸಿ ಸತ್ಯಾಗ್ರಹವನ್ನು ಅಂತ್ಯಗೊಳಿಸುವಲ್ಲಿ ಯಶ್ವಿಯಾದರು.
ಈ ಸಂದರ್ಭದಲ್ಲಿ ಗಂಗಪ್ಪಗೌಡ ದಾ. ಬಿರಾದಾರ, ಸಾಹೇಬಗೌಡ ಅ. ಬಿರಾದಾರ, ಅಪ್ಪಾಸಾಹೇಬಗೌಡ ಅ. ಬಿರಾದಾರ, ವೇದಿಕೆ ಅದ್ಯಕ್ಷ ಬಾಬಾಗೌಡ ಕಾ. ಬಿರಾದಾರ, ಪ್ರಭುಗೌಡ ಬಿರಾದಾರ, ಚಂದ್ರಶೇಖರ ಎಮ್. ದೇವರೆಡ್ಡಿ, ಬಸನಗೌಡ ಶಾಂ.ಬಿರಾದಾರ, ಮಲ್ಲಿಕಾರ್ಜುನ ಜಿ.ಹಿರೇಮಠ ಇತರರು ಇದ್ದರು.