ಚುನಾವಣೆಯಲ್ಲಿ ಮತದಾರರನ್ನಷ್ಟೇ ಅಲ್ಲದೆ ಮಾಜಿ ಸಚಿವ ಮಾಧುಸ್ವಾಮಿ, ಸಂಸದ ಜಿ ಎಸ್ ಬಸವರಾಜು ಅವರನ್ನು ಮತ ನೀಡುವಂತೆ ಮನವಿ ಮಾಡಿಕೊಳ್ಳತ್ತೇನೆ. ನಮ್ಮದು ಟೀಕೆ ಟಿಪ್ಪಣಿಯ ರಾಜಕಾರಣವಲ್ಲ, ಅಭಿವೃದ್ಧಿಯ ರಾಜಕಾರಣ ಎಂದು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಸ್ ಪಿ ಮುದ್ದಹನುಮೇಗೌಡ ಹೇಳಿದರು.
ತುಮಕೂರು ನಗರದ ಪತ್ರಿಕಾ ಭವನದಲ್ಲಿ ಆಯೋಜಿಸಿದ್ದ ಮಾಧ್ಯಮ ಸಂವಾದಲ್ಲಿ ಮಾತನಾಡಿ, “ನಾನು ದೇವೇಗೌಡರ ವಿರುದ್ಧ ಕೆಲಸ ಮಾಡಿಲ್ಲ. ಅವರು ಅಂದು ಮೈತ್ರಿ ಪಕ್ಷದ ಅಭ್ಯರ್ಥಿಯಾಗಿದ್ದರು. ಆದ್ದರಿಂದ ಅವರ ಪರವಾಗಿ ವಾಲೆಂಟರಿಯಾಗಿ ಪ್ರಚಾರ ಮಾಡಿದ್ದೇನೆ. ನಾನು ಹೋದಲ್ಲೆಲ್ಲಾ ಜನರು ಪ್ರೀತಿಯಿಂದ ಕಾಣುತ್ತಿದ್ದಾರೆ. ಯಾರೂ ನನ್ನನ್ನು ಅಲ್ಲಗಳೆಯದೆ ಸ್ವಾಗತಿಸುತ್ತಿದ್ದಾರೆ. ನಾನು ಅದೃಷ್ಟವಂತ” ಎಂದು ಹೇಳಿದರು.
“ರಾಜಕಾರಣದಲ್ಲಿ ನಾನು ಪ್ರಾಮಾಣಿಕನೆಂದು ಹೇಳುವುದಿಲ್ಲ. ಆದರೆ ಒಂದು ಭರವಸೆ ನೀಡಬಲ್ಲೆ ನಾನು ಭ್ರಷ್ಟನಲ್ಲ. ನೈತಿಕತೆಯನ್ನು ಇಟ್ಟುಕೊಂಡೇ ರಾಜಕಾರಣ ಮಾಡಿದ್ದೇನೆ. ಪಕ್ಷಾಂತರ ಮಾಡುವುದು ಅಪರಾಧವೇನಲ್ಲ. ಸಂವಿಧಾನದಲ್ಲಿ ಅದಕ್ಕೆ ಅವಕಾಶವಿದೆ. ಆದರೆ, ಪಕ್ಷ ಬದಲಾವಣೆ ಕುರಿತು ನಾನು ಕ್ಷಮೆಯಾಚಿಸಿದ್ದೇನೆ” ಎಂದು ತಿಳಿಸಿದರು.
ವಿ ಸೋಮಣ್ಣ ಅವರ ವಲಸಿಗ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಮುದ್ದಹನುಮೇಗೌಡರು, “ನಾನು ಸ್ಥಳೀಯ. ಜಿಲ್ಲೆಯ ಯಾವ ಸ್ಥಳಗಳಿಗೆ ಬೇಕಾದರೂ ಗೂಗಲ್ ಮ್ಯಾಪ್ ಇಲ್ಲದೆ ಹೋಗುತ್ತೇನೆ. ಆದ್ದರಿಂದಲೇ ನಾನು ಎಂಪಿ ಆಗಿದ್ದಾಗ ಜನರ ಬಳಿಯೇ ಇದ್ದು ಕೆಲಸ ಮಾಡಲು ಸಾಧ್ಯವಾಯಿತು” ಎಂದು ತಿರುಗೇಟು ನೀಡಿದರು.
“ನನ್ನ ಕಾಲದಲ್ಲಿ ಎಂಪಿ ಅಭಿವೃದ್ಧಿ ನಿಧಿಯನ್ನು ಸಮಾಜದ ಕಾರ್ಯಗಳಿಗೆ ಸಮಪರ್ಕವಾಗಿ ಬಳಸಿದ್ದೇನೆಯೇ ಹೊರತು ಮಣ್ಣಿನ ಕೆಲಸಗಳಿಗೆ ಹಣ ಹಾಕಿ ವ್ಯಯಮಾಡಿಲ್ಲ. ರಾಷ್ಟ್ರೀಯ ಹೆದ್ದಾರಿ 206 ಶಂಕುಸ್ಥಾಪನೆಗೆ ಯಡಿಯೂರಪ್ಪ, ಶೋಭಾ ಕರಂದ್ಲಾಜೆ ಹಾಗೂ ದೇವೇಗೌಡರ ಸಹಕಾರವನ್ನೂ ತೆಗೆದುಕೊಂಡಿದ್ದೇನೆ. ಸಾಕಷ್ಟು ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಿದ್ದೇನೆ” ಎಂದರು.
“ಕಲ್ಪತರುನಾಡಿನಲ್ಲಿ ತೆಂಗು ಬೆಳೆಗಾರರು ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿಗೆ ಬಂದಿದ್ದಾರೆ. ಒಂದು ಕ್ವಿಂಟಾಲ್ ತೆಂಗು ಉತ್ಪಾದನೆಗೆ ₹16,850 ಖರ್ಚಾಗುತ್ತದೆ. ಆದರೆ ರೈತರಿಂದ ₹8,000 ಖರೀಸಲಾಗುತ್ತಿದೆ. ನಾನು ಮಂಡಿಗೆ ಕೊಬ್ಬರಿ ಹಾಕಿದ್ದರಿಂದ ಹೇಳುತ್ತಿದ್ದೇನೆ. ಕೊಬ್ಬರಿಗೆ ಕಾನೂನಾತ್ಮಕ ರಕ್ಷಣಾ ಬೆಲೆ ದೊರಕಿಸುವ ಮೂಲಕ ತೆಂಗಿನ ಗತವೈಭವ ಮರುಕಳಿಸುವಂತೆ ಮಾಡುತ್ತೇನೆ. ಹಾಗೆಯೇ ಜಿಲ್ಲೆಯ ಇತರೆ ಬೆಳೆಗಳಾದ ರಾಗಿ, ಕಡಲೆಕಾಯಿ, ಜೋಳ ಸಿರಿಧಾನ್ಯಗಳ ಬೆಳೆಗೆ ಪ್ರೋತ್ಸಾಹ ಸಿಗುವಂತೆ ನೋಡಿಕೊಳ್ಳುತ್ತೇನೆ. ನೀರಾ ಹಾಗೂ ತೆಂಗಿನ ಎಣ್ಣೆಗೆ ಮಾನ್ಯತೆ ಒದಗಿಸವ ನಿಟ್ಟಿನಲ್ಲಿ ವರದಿ ತರಿಸಿಕೊಳ್ಳುತ್ತೇನೆ” ಎಂದು ಭರವಸೆ ನೀಡಿದರು.
“ಜಿಲ್ಲೆಯಲ್ಲಿ ಸಂಸದನಾಗಲು ನಾನು ಅರ್ಹ ವ್ಯಕ್ತಿ ಎಂದು ಪ್ರತಿಪಾದಿಸುತ್ತೇನೆ. ನನಗೆ ಲೀಗಲ್ ಹಿನ್ನಲೆ ಇರುವುದರಿಂದ ಕಾನೂನು ರಚನಾ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅನುಕೂಲವಾಗಲಿದೆ. ರಾಜಕಾರಣದಲ್ಲಿ ಕಾನೂನು ಪದವೀಧರರೇ ಹೆಚ್ಚು ಜನ ಶಾಸಕರು, ಸಂಸದರಾಗುತ್ತಾ ಬಂದಿದ್ದಾರೆ. ಅದರಲ್ಲಿ ನಾನೂ ಒಬ್ಬ. ನಾನು ಸಂಸದನಾಗಿದ್ದ ಅವಧಿಯಲ್ಲಿ ನೂರಾರು ಕಾನೂನು ರಚನಾ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದೇನೆ” ಎಂದು ಹೇಳಿದರು.
“ಹಣಕಾಸಿಗೆ ಸಂಬಂಧಿಸಿದ ಬಿಲ್ ಪಾಸ್ ಮಾಡುವಲ್ಲಿ ಮೊದಲ ಚರ್ಚೆ ನನ್ನದಾಗಿತ್ತು ಎಂದು ಹೇಳಲು ಹೆಮ್ಮೆಯಿದೆ. ಭಾರತವನ್ನು ಪ್ರತಿನಿಧಿಸಿ ಹವಾಮಾನ ವೈಪರೀತ್ಯದ ಬಗ್ಗೆ ಮಾತನಾಡಿರುವ ಖುಷಿಯಿದೆ. ಇಸ್ರೋವನ್ನು ಗೋವಾಗೆ ಶಿಫ್ಟ್ ಮಾಡಲು ಚಿಂತನೆ ನಡೆಯುತ್ತಿದ್ದಾಗ ಆಕ್ಷೇಪಿಸಿದ ನಾನು ಎಚ್‌ಎಂಟಿಯ ಭೂಮಿಯನ್ನು ಇಸ್ರೋಗೆ ಕೋಡಿಸಿ ಅದನ್ನು ತುಮಕೂರಿನಲ್ಲೇ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದೆ. ಎಚ್‌ಎಂಟಿಯಿಂದ ಜಿಲ್ಲೆಯಲ್ಲಿ ಆರ್ಥಿಕ ಚಟುವಟಿಕೆ ಹೆಚ್ಚಿತು ಹಾಗೂ ವಿದ್ಯಾವಂತರು ಹೆಚ್ಚಾಗಲು ಸಾಧ್ಯವಾಯಿತು” ಎಂದು ಸ್ಮರಿಸಿದರು.
ಕಾರಣಾಂತರಗಳಿಂದ ಎಚ್‌ಎಂಟಿ ಮುಚ್ಚಿದಾಗಲೂ ಅದರ ಆಸ್ತಿಯನ್ನು ಉಳಿಸಿಕೊಂಡೆವು. ಕೇಂದ್ರದಲ್ಲಿ ಸಾರ್ವಜನಿಕ ಆಸ್ತಿ ಉಳಿಸಿಕೊಳ್ಳುವ ಪಾಲಿಸಿ ರಚನೆಯಾಯಿತು. ಅದರಲ್ಲಿ ನಾನೂ ಇದ್ದೆ. ಜತೆಗೆ ಕೈಗಾರಿಕಾ ಕಾರಿಡಾರ್, ರೈಲ್ವೆ ಯೋಜನೆ ಹಾಗೂ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುವುದಾಗಿ ಹೇಳಿದ್ದಲ್ಲದೆ, ರೈತರು ಮತ್ತು ಸರ್ಕಾರದ ನಡುವೆ ಸೇತುವೆಯಾಗಿ ಕೆಲಸ ಮಾಡುವುದಾಗಿ ಹೇಳಿದರು.
“ಹವಾಮಾನ ವೈಪರೀತ್ಯ, ಕೆರೆಗಳು ಹಾಗೂ ಅರಣ್ಯಗಳ ಉಳಿವು ನಮ್ಮ ಮೊದಲ ಆದ್ಯತೆ. ನಾನು ಪ್ರತಿ ವರ್ಷ ಗಿಡಗಳನ್ನು ನೆಡುತ್ತೇನೆ. ವೈ ಕೆ ರಾಮಯ್ಯ ಅವರೂ ಕೂಡ ಮರಗಳನ್ನು ನೆಡುವ ಕೆಲಸ ಮಾಡುತ್ತಿದ್ದರು. ಪ್ರತಿ ಅಂಗನವಾಡಿಗಳಿಗೆ ಅರಣ್ಯ ಇಲಾಖೆಯಿಂದ ಐವತ್ತು ಸಸಿಗಳನ್ನು ನೀಡುವ ಯೋಜನೆ ನನ್ನಲ್ಲಿದೆ. ಮತದಾರರಿಗೊಂದು ಮರ ಎಂಬ ಕಾನ್ಸೆಪ್ಟ್ ನನ್ನದು” ಎಂದರು.
“ಅಕ್ರಮ ಗಣಿಗಾರಿಕೆಗಳು ಹಾಗೂ ಅರಣ್ಯ ನಾಶದಿಂದ ಮಾನವ ಮತ್ತು ಪ್ರಾಣಿ ಸಂಘರ್ಷ ಹೆಚ್ಚಾಗುತ್ತಿದೆ. ಈ ಬಗ್ಗೆ ನಾನು ಸದನದಲ್ಲಿ ಪ್ರಸ್ತಾಪಿಸಿದ್ದೆ. ನನಗೆ ಯಾವ ಸಮುದಾಗಳ ವಿರೋಧವೂ ಇಲ್ಲ. ನಾನು ಸಂಸದನಾಗಿದ್ದಾಗ ಮಾಡಿದ ಕೊನೆಯ ಭಾಷಣ ಸಿದ್ದಗಂಗಾ ಶ್ರೀಗಳಿಗೆ ಭಾರತರತ್ನ ನೀಡಬೇಕು ಎಂಬುದಾಗಿತ್ತು” ಎಂದು ಹೇಳಿದರು.
ಕುಣಿಗಲ್, ಹೇಮಾವತಿ ಎಕ್ಸ್‌ಪ್ರೆಸ್ ಕೆನಾಲ್ ಬಗ್ಗೆ ಗೌಡರ ನಿಲುವು ಏನು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ಎಕ್ಸ್‌ಪ್ರೆಸ್ ಕೆನಾಲ್ ಮಾಡುವ ಅವಶ್ಯಕತೆ ಇಲ್ಲ, ನಾಲೆ ಆಧುನೀಕರಣ ಮಾಡಿ ನೀರು ತೆಗೆದುಕೊಂಡು ಹೋಗಿ. ಎಕ್ಸ್‌ಪ್ರೆಸ್ ಕೆನಾಲ್ ಮಾಡುವುದು ತಾಂತ್ರಿಕವಾಗಿ ಅಷ್ಟು ಒಳ್ಳೆಯದಲ್ಲ ಎಂದು ಈ ಹಿಂದೆ ಹೇಳಿದ್ದೆ, ಆ ಹೇಳಿಕೆಗೆ ಬದ್ದನಾಗಿದ್ದೇನೆ. ನನ್ನ ಕ್ಷೇತ್ರದ, ಜಿಲ್ಲೆಯ ಜನತೆಯ ಅಗತ್ಯತೆಗಳನ್ನು ಪೂರೈಸುವುದು ನನ್ನ ಮೊದಲ ಆದ್ಯತೆ” ಎಂದರು.
ಈ ಸುದ್ದಿ ಓದಿದ್ದೀರಾ? ತುಮಕೂರು | ಬಿಜೆಪಿ-ಜೆಡಿಎಸ್ ಮೈತ್ರಿ ಸಭೆ: ಕಾರ್ಯಕರ್ತರು ಹೊರಹೋಗದಂತೆ ಪ್ರವೇಶದ್ವಾರಕ್ಕೆ ಬೀಗ!
ನಿಮ್ಮಲ್ಲಿ ಹಣವಿಲ್ಲವಲ್ಲ ಚುನಾವಣೆ ಹೇಗೆ ಮಾಡುತ್ತೀರಿ? ಮತದಾರರಿಗೆ ಹಣ ಹಂಚಲು ವ್ಯವಸ್ಥೆ ಹೇಗೆ ಎಂಬ ದೃಶ್ಯ ಮಾಧ್ಯಮದವರೊಬ್ಬರ ಪ್ರಶ್ನೆಗೆ ಕಟುವಾಗಿ ಉತ್ತರಿಸಿದ ಮುದ್ದಹನುಮೇಗೌಡರು, “ರಾಜಕಾರಣ ಕೊಳಕಾಗಿರುವುದು ಸತ್ಯ. ಆದರೆ, ಹಣ ಹಾಗೂ ಜಾತಿಯ ಮೇಲೆ ಚುನಾವಣೆ ನಡೆಸುವುದು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ. ಅದನ್ನು ಮಾಧ್ಯಮದವರೇ ಪ್ರವೋಕ್ ಮಾಡಬಾರದು. ನಾವು ಹಾಗೆ ಮಾಡಿದ್ದು, ಕಂಡಲ್ಲಿ ನೀವು ಟೀಕಿಸಬೇಕು, ತಿದ್ದಬೇಕು. ಅದನ್ನು ಬಿಟ್ಟು ಈ ರೀತಿಯ ಪ್ರಶ್ನೆಗಳು ಸಮಂಜಸವಲ್ಲ” ಎಂದು ತರಾಟೆಗೆ ತೆಗೆದುಕೊಂಡರು.
