ಚಿತ್ರದುರ್ಗದ ಭರಮಗಿರಿಯ ಸುತ್ತಮುತ್ತಲಿನ 11 ಹಳ್ಳಿಗಳ ಜನ ಕಳೆದ ಆರು ದಿನಗಳಿಂದ ನೀರಿಗಾಗಿ ಹೋರಾಟ ನಡೆಸುತ್ತಿದ್ದಾರೆ. ನೀರಾವರಿ ಸಂಪರ್ಕ ಒದಗಿಸದಿದ್ದಾರೆ ಚುನಾವಣೆ ಬಹಿಷ್ಕಾರದ ಎಚ್ಚರಿಕೆಯನ್ನೂ ನೀಡಿದ್ದಾರೆ.
ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ನೀರಾವರಿ ಹೋರಾಟಗಾರ ಕಸವನಹಳ್ಳಿ ರಮೇಶ್ ಮಾತನಾಡಿ, ನಿಮ್ಮ ಹೋರಾಟ ನ್ಯಾಯಯುತವಾಗಿದೆ. ವಾಣಿವಿಲಾಸ ಸಾಗರ ಜಲಾಶಯದಿಂದ ಕೇವಲ ಎರಡು ಕಿಲೋಮೀಟರ್ ದೂರದಲ್ಲಿರುವ ಭರಮಗಿರಿ ಕೆರೆಗೆ ನೀರಾವರಿ ಕಲ್ಪಿಸದೇ, ಅನ್ಯಾಯವಾಗಿದೆ ಎಂದರು.
ಇದರ ಹಿಂದಿನ ವಿಚಾರಗಳನ್ನು ಕೆದಕದೆ ಆಗಬೇಕಾದ ಕೆಲಸಗಳ ಕಡೆ ಗಮನಕೊಡಬೇಕು. ಆದ್ದರಿಂದ ಈ ಭಾಗದ 11 ಹಳ್ಳಿಗಳ ಜನರ ಕುಡಿಯುವ ನೀರಿನ ಬವಣೆ ಜಾನುವಾರಗಳ ನೀರು ಮತ್ತು ಮೇವಿನ ಸಮಸ್ಯೆ. ಅಲ್ಲದೆ ಪ್ರಮುಖ ವೃತ್ತಿಯಾದ ವ್ಯವಸಾಯಕ್ಕೆ ನೀರಿಲ್ಲದೆ ಈ ಭಾಗದ ಜನ ಪರಿತಪಿಸುತ್ತಿದ್ದಾರೆ. ಹತ್ತಿರದಲ್ಲೇ ಜಲಾಶಯ ಇದೆ ಎಂದು ನಂಬಿಕೊಂಡು ಪ್ರತಿಯೊಬ್ಬ ರೈತರು ನಿರಂತರ ಕೃಷಿ ಮಾಡುತ್ತಾ ಅಡಿಕೆ ತೆಂಗು ಬಾಳೆ ಇತ್ಯಾದಿಗಳನ್ನು ಬೆಳೆಯುತ್ತಿದ್ದಾರೆ ಎಂದು ತಿಳಿಸಿದರು.
ಆದರೆ, ಈಗ ಏಕಾಏಕಿ ಕೊಳವೆ ಬಾವಿಗಳಲ್ಲಿ ಅಂತರ್ಜಲ ಬತ್ತಿ ಹೋಗುತ್ತಿದೆ ಆದ್ದರಿಂದ ತುರ್ತಾಗಿ ಸರ್ಕಾರ ನೀರು ಹರಿಸುವ ಮೂಲಕ ಇಚ್ಛಾಶಕ್ತಿ ಪ್ರದರ್ಶಿಸಬೇಕೆಂದು ಒತ್ತಾಯಿಸುತ್ತೇವೆ. ಹೋರಾಟಕ್ಕೆ ನಮ್ಮ ಬೆಂಬಲ ಇದೆ ಎಂದು ಕಸವನಹಳ್ಳಿ ರಮೇಶ್ ಹೇಳಿದರು.
ಹೋರಾಟದ ನೇತೃತ್ವವನ್ನು ಶ್ರೀಮತಿ ಗಂಗಮ್ಮ ಉಮೇಶ್ ಶ್ರೀಮತಿ ಕವಿತಾ, ಕೆಂಚಪ್ಪ, ಮೂರ್ತಿ, ಮೂಡ್ಲಪ್ಪ, ಓಂಕಾರಪ್ಪ, ರಮೇಶ್, ಲೋಕೇಶ್, ವಂದೇ ಮಾತರಂ ವೇದಿಕೆಯ ದೇವರಾಜ್ ನಾಗಣ್ಣ, ಎಸ್.ಕೆ. ರಘು, ರಾಮಚಂದ್ರ ಕಸವನಹಳ್ಳಿ ಇತರ ಹಳ್ಳಿಗಳ ಗ್ರಾಮಸ್ಥರು ಹಾಜರಿದ್ದರು.