ಕಿರಾತಕ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದ ತಮಿಳಿನ ಖ್ಯಾತ ಖಳನಟ ಡೇನಿಯಲ್ ಬಾಲಾಜಿ ಅವರು ತೀವ್ರ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ವೆಟ್ಟೈಯಾಡು ವಿಲಯಾಡುವಿನಲ್ಲಿ ಅಮುಧನ್, ವಡಾ ಚೆನ್ನೈನ ತಂಬಿ ಪಾತ್ರಗಳಿಂದ ಡೇನಿಯಲ್ ಬಾಲಾಜಿ ಪ್ರಖ್ಯಾತರಾಗಿದ್ದಾರೆ. ಅವರಿಗೆ 48 ವರ್ಷ ವಯಸ್ಸಾಗಿತ್ತು.
ಡೇನಿಯಲ್ ಬಾಲಾಜಿ ಅವರಿಗೆ ಕಳೆದ ರಾತ್ರಿ ತೀವ್ರ ಎದೆನೋವು ಕಾಣಿಸಿಕೊಂಡಿದ್ದು ಕೂಡಲೇ ಅವರನ್ನು ಚೆನ್ನೈನ ಕೊಟ್ಟಿವಾಕಂನಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಡೇನಿಯಲ್ ಅವರ ಪಾರ್ಥಿವ ಶರೀರವನ್ನು ಇಂದು (ಮಾರ್ಚ್ 30) ಪುರಸೈವಾಲ್ಕಂನಲ್ಲಿರುವ ಅವರ ನಿವಾಸದಲ್ಲಿ ಸಾರ್ವಜನಿಕ ದರ್ಶನಕ್ಕೆ ಇರಿಸಲಾಗುತ್ತದೆ. ಇಂದು ಸಂಜೆಯೇ ಅಂತ್ಯಕ್ರಿಯೆ ನಡೆಯಲಿದೆ.
ಇದನ್ನು ಓದಿದ್ದೀರಾ? ಧಾರವಾಡ | ಹಿರಿಯ ಸಾಹಿತಿ ಗುರುಲಿಂಗ ಕಾಪಸೆ ನಿಧನ
ಬಹು ಭಾಷಾನಟನಾಗಿಯೂ ಗುರುತಿಸಿಕೊಂಡಿರುವ ಡೇನಿಯಲ್ ಬಾಲಾಜಿ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕಿರಾತಕ ಚಿತ್ರದಲ್ಲಿ ವಿಲನ್ ಆಗಿ ನಟಿಸಿದ್ದಾರೆ. ಧಾರಾವಾಹಿ ಮೂಲಕ ತಮ್ಮ ಸಿನಿವೃತ್ತಿಯನ್ನು ಆರಂಭಿಸಿದ ಬಾಲಾಜಿ ಅವರು ಚಿತ್ತಿ ಧಾರಾವಾಹಿಯಲ್ಲಿ ಡೇನಿಯಲ್ ಪಾತ್ರದಲ್ಲಿ ನಟಿಸಿದ್ದಾರೆ. ಅದಾದ ಬಳಿಕ ಡೇನಿಯಲ್ ಬಾಲಾಜಿ ಎಂದು ಜನಪ್ರಿಯರಾದರು. ಬಾಲಾಜಿ ಅತೀವ ದೈವಭಕ್ತರಾಗಿದ್ದು, ಅವಡಿಯಲ್ಲಿ ದೇವಾಲಯವನ್ನು ನಿರ್ಮಿಸುತ್ತಿದ್ದರು ಎಂದು ವರದಿ ಹೇಳುತ್ತದೆ.
ಚಿತ್ತಿ ಧಾರಾವಾಹಿ ಬಳಿಕ ಬಾಲಾಜಿ ಅವರಿಗೆ ಕಮಲ್ ಹಾಸನ್ ಜೊತೆ ನಟಿಸುವ ಅವಕಾಶ ಲಭಿಸಿದ್ದು ‘ವೆಟ್ಟೈಯಾಡು ವಿಲೈಯಾಡು’ ಸಿನಿಮಾದಲ್ಲಿ ಖಳನಟರಾಗಿದ್ದರು. ಮೋಹನ್ಲಾಲ್ ನಟನೆಯ ಭಗವಾನ್, ಮಮ್ಮೂಟಿ ನಟನೆಯ ಬ್ಲ್ಯಾಕ್, ಡ್ಯಾಡಿ ಕೂಲ್ ಸಿನಿಮಾಗಳಲ್ಲಿ ಪಾತ್ರ ಮಾಡಿದ್ದರು.