ವಿಧಾನ ಪರಿಷತ್ ಮಾಜಿ ಸದಸ್ಯೆ ತೇಜಸ್ವಿನಿ ಗೌಡ ಬಿಜೆಪಿ ತೊರೆದು ಕಾಂಗ್ರೆಸ್‌ಗೆ ಸೇರಿದ್ದಾರೆ. ಕಾಂಗ್ರೆಸ್‌ಗೆ ಕೈಕೊಟ್ಟಿದ್ದ ತೇಜಸ್ವಿನಿ ಅವರು ಇದೀಗ ಮತ್ತೆ ಘರ್ ವಾಪ್ಸಿ ಮಾಡಿದ್ದಾರೆ.
ಪ್ರಸ್ತುತ ನಡೆಯುತ್ತಿರುವ ಲೋಕಸಭಾ ಚುನಾವಣೆಯಲ್ಲಿ ಅವರು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಪ್ರತಾಪ್ ಸಿಂಹ ಅವರಿಗೆ ಬಿಜೆಪಿ ಟಿಕೆಟ್ ನಿರಾಕರಿಸಿ, ತಮಗೆ ನೀಡಬಹುದೆಂಬ ವಿಶ್ವಾಸದಲ್ಲಿ ಅವರಿದ್ದರು. ಆದರೆ, ಬಿಜೆಪಿ ಟಿಕೆಟ್ ದೊರೆಯದ ಕಾರಣ ಅವರು ಬಿಜೆಪಿ ತೊರೆದಿದ್ದಾರೆ ಎಂದು ಹೇಳಲಾಗುತ್ತಿದೆ.
ದೆಹಲಿಯಲ್ಲಿ ಜೈರಾಮ್ ರಮೇಶ್ ಮತ್ತು ಪವನ್ ಖೇರಾ ಅವರನ್ನು ಭೇಟಿ ಮಾಡಿರುವ ತೇಜಸ್ವಿನಿ ಕಾಂಗ್ರೆಸ್ ಸೇರಿದ್ದಾರೆ.
ಕಾಂಗ್ರೆಸ್ ಸೇರಿದ ಬಳಿಕ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿರುವ ತೇಜಸ್ವಿನಿ ಗೌಡ, “ಬಿಜೆಪಿಯಲ್ಲಿ ನಿಷ್ಠೆಯಿಂದ ಕೆಲಸ ಮಾಡಿದ್ದೇನೆ. ಆದರೆ, ಪಕ್ಷದಲ್ಲಿ ಒಕ್ಕಲಿಗರ ಸಮುದಾಯದ ಮುಖಂಡರನ್ನು ತುಳಿಯಲಾಗುತ್ತಿದೆ. ಪ್ರತಾಪ್ ಸಿಂಹ, ಸದಾನಂದಗೌಡ ಹಾಗೂ ಸಿ.ಟಿ ರವಿಗೆ ಟಿಕೆಟ್ ನಿರಾಕರಿಸಲಾಗಿದೆ. ಹೊಂದಾಣಿಕೆ ರಾಜಕಾರಣ ಮಾಡಿಕೊಂಡು, ರಾಜ್ಯದಲ್ಲಿ ಬಿಜೆಪಿ ಸಂಘಟನೆಯಾಗಿಲ್ಲ” ಎಂದು ದೂರಿದ್ದಾರೆ.
“ಸಂಸತ್ ಮೇಲೆ ದಾಳಿ ನಡೆದಿದೆ. ಸಂಸತ್‌ಗೆ ನುಗ್ಗಿದ ಯುವಕರಿಗೆ ಪಾಸ್ ಕೊಟ್ಟಿದ್ದ ಸಂಸದರ ವಿರುದ್ಧ ಕ್ರಮ ಕೈಗೊಳ್ಳಲಿಲ್ಲ. ಅವರನ್ನು ರಕ್ಷಣೆ ಮಾಡಲಾಯಿತು. ಈಗ, ಆ ಸಂಸದರಿಗೆ ಟಿಕೆಟ್ ನೀಡಿಲ್ಲ. ಮೈಸೂರು ಭಾಗದಲ್ಲಿ ನಾನು ಕೆಲಸ ಮಾಡಿದ್ದೆ, ಟಿಕೆಟ್ ಬೇಕೆಂದು ಕೇಳಿದ್ದೆ. ಆದರೆ, ನನಗೆ ಟಿಕೆಟ್ ಕೊಡಲಿಲ್ಲ. ರಾಜವಂಶಸ್ಥರಿಗೆ ಟಿಕೆಟ್ ಕೊಟ್ಟಿದ್ದಾರೆ” ಎಂದು ವಾಗ್ದಾಳಿ ನಡೆಸಿದರು.
“ಕಾಂಗ್ರೆಸ್‌ನಲ್ಲಿ ಯಾವುದೇ ಬೇಡಿಕೆ ಇಟ್ಟಿಲ್ಲ. ಪಕ್ಷವು ಯಾವುದೇ ಕೆಲಸ ಕೊಟ್ಟರೂ ಮಾಡುತ್ತೇನೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಡಿ.ಕೆ ಸುರೇಶ್ ಸೇರಿದಂತೆ ರಾಜ್ಯದ ಎಲ್ಲ ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಪರವಾಗಿ ಪ್ರಚಾರ ಮಾಡುತ್ತೇನೆ” ಎಂದಿದ್ದಾರೆ.
ತೇಜಸ್ವಿನಿ ಘರ್ ವಾಪ್ಸಿ
ಪತ್ರಕರ್ತೆಯಾಗಿದ್ದ ತೇಜಸ್ವಿನಿ ಗೌಡ ಅವರು 2004ರಲ್ಲಿ ಕಾಂಗ್ರೆಸ್ ಸೇರಿದ್ದರು. ಅಲ್ಲದೆ, ಅದೇ ವರ್ಷ ನಡೆದ ಲೋಕಸಭಾ ಚುನಾವಣೆಯಲ್ಲಿ ಕನಕಪುರ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ವಿರುದ್ಧ ಗೆಲುವು ಸಾಧಿಸಿದ್ದರು.
ಬಳಿಕ, 2014ರಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು. ಬಿಜೆಪಿಯಿಂದ ವಿಧಾನ ಪರಿಷತ್ ಸದಸ್ಯೆಯಾಗಿ ಆಯ್ಕೆಯಾಗಿದ್ದರು. ಇದೀಗ, ಅವರು ಕಾಂಗ್ರೆಸ್‌ಗೆ ಮರಳಿಬಂದಿದ್ದಾರೆ. ಅವರು ಕಾಂಗ್ರೆಸ್‌ನಿಂದಲೂ ಎಂಎಲ್‌ಸಿ ಆಗುವ ಸಾಧ್ಯತೆಗಳಿವೆ.