ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಧಾರವಾಡ ವ್ಯಾಪ್ತಿಯಲ್ಲಿ ಬರುವ ವಾರ್ಡ್‌ವಾರು ಪ್ರದೇಶಗಳಲ್ಲಿ ಮಾರ್ಚ್ 30 ರಂದು ಬೆಳಿಗ್ಗೆ ಸ್ವಚ್ಛತೆ ಹಾಗೂ ಚಾಲ್ತಿಯಲ್ಲಿರುವ, ಕಾಮಗಾರಿಗಳ ಕುರಿತು ಧಾರವಾಡ ಶಹರದಲ್ಲಿ ಸಂಚರಿಸಿ ಹು-ಧಾ ಮಹಾನಗರ ಪಾಲಿಕೆಯ ಆಯುಕ್ತರು ಪರಿಶೀಲಿಸಿ ಸಂಬಂಧಪಟ್ಟ ಅಧಿಕಾರಿ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.
ವಾರ್ಡ ಸಂಖ್ಯೆ 18 ಮತ್ತು 19ರಲ್ಲಿ ಸ್ವಚ್ಛತೆ ಪರಿಶೀಲಿಸಿ ರಸ್ತೆಯ ಎರಡೂ ಕಡೆ ರಾಶಿ ಕಸವನ್ನು ಕಂಡು ಸಂಬಂಧಪಟ್ಟ ಅಧಿಕಾರಿ ಸಿಬ್ಬಂದಿಗಳನ್ನು ಸ್ಥಳಕ್ಕೆ ಕರೆಯಿಸಿ ತಕ್ಷಣ ಕಸವನ್ನು ವಿಲೇವಾರಿ ಮಾಡುವಂತೆ ಹೇಳಿ ಮುಂದೆ ಈ ರೀತಿ ಅವ್ಯವಸ್ಥೆ ಕಂಡುಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ತಾಖೀತು ಮಾಡಿದರು.
ವಾರ್ಡ್ ಸಂಖ್ಯೆ 3, 13, 6, 14, 7, 9ರಲ್ಲಿ ಸಂಚರಿಸಿ ಸ್ವಚ್ಛತೆ ಕುರಿತು ಪರಿಶೀಲಿಸಿ ಸ್ಥಳದಲ್ಲಿ ಹಾಜರಿದ್ದ ವಲಯ ಸಹಾಯಕ ಆಯುಕ್ತರನ್ನು ಹಾಗೂ ಆರೋಗ್ಯ ನಿರೀಕ್ಷಕರಿಗೆ ಸ್ವಚ್ಛತೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಇನ್ನಿತರ ಪ್ರದೇಶಗಳಲ್ಲಿ ಸಂಚರಿಸಿದ ಆಯುಕ್ತರು ಅನಧಿಕೃತವಾಗಿ ಫುಟ್‌ಪಾತ್‌ನಲ್ಲಿ ಹಾಕಿಕೊಂಡಿರುವ ಅಂಗಡಿ ಮುಂಗಟ್ಟುಗಳನ್ನು ತಕ್ಷಣ ತೆರವುಗೊಳಿಸಿ ತೆರವುಗೊಳಿಸಿದ ಕುರಿತು ಮಾಹಿತಿಯನ್ನು ನೀಡುವಂತೆ ವಲಯ ಸಹಾಯಕ ಆಯುಕ್ತ ಆನಂದ್ ಕಾಂಬ್ಳಿಯವರಿಗೆ ನಿರ್ದೇಶನ ನೀಡಿದರು. ಸೂಪರ್ ಮಾರುಕಟ್ಟೆಯಲ್ಲಿ ರಸ್ತೆಯಲ್ಲಿ ಅನಧಿಕೃತವಾಗಿ ವಿವಿಧ ಸರಕುಗಳನ್ನಿಟ್ಟು ವ್ಯವಹಾರ ನಡೆಸುತ್ತಿದ್ದವರನ್ನು ಖಾಲಿ ಮಾಡಿಸಿ ಮಾಹಿತಿ ನೀಡುವಂತೆ ಆರೋಗ್ಯ ನಿರೀಕ್ಷಕ ಶಾಂತಗೌಡ ಬಿರಾದಾರಗೆ ನಿರ್ದೇಶನ ಮಾಡಿದರು.
ಕಲ್ಯಾಣನಗರ ರೇಲ್ವೆ ಸೇತುವೆ ಕೆಳಗೆ ರಾಶಿ ಹಾಕಿರುವ ಕಸವನ್ನು ಸ್ವತಃ ಆಯುಕ್ತರೇ ನಿಂತು ಸ್ವಚ್ಛತಾ ಸಿಬ್ಬಂದಿಗಳಿಂದ ಸ್ವಚ್ಚತೆ ಮಾಡಿಸಿ ಕಸ ಹಾಕುವವರನ್ನು ಗುರುತಿಸಿ ನೋಟಿಸ್ ಕೊಡುವಂತೆ ಸ್ಥಳದಲ್ಲಿ ಹಾಜರಿದ್ದ ಆರೋಗ್ಯ ನಿರೀಕ್ಷಕಿ ಜ್ಯೋತಿ ಚಳಕಿಮಠ ಇವರಿಗೆ ನಿರ್ದೇಶನ ತಿಳಿಸಿದರು. ಎಸ್‌ಡಬ್ಲ್ಯೂಎಂ ಕಾರ್ಯನಿರ್ವಾಹಕ ಅಭಿಯಂತರ ಮಲ್ಲಿಕಾರ್ಜುನ ಅವರಿಗೆ ಇಂದು ಪೂರ್ತಿ ದಿನ ಧಾರವಾಡದಲ್ಲೇ ಕಾರ್ಯನಿರ್ವಹಿಸುವಂತೆ ತಾಕೀತು ಮಾಡಿದರು. ಪರಿಸರ ಅಭಿಯಂತರರಾದ ಫರೀದಾ ನದಾಫ ರವರನ್ನು ಸ್ಥಳಕ್ಕೆ ಕರೆಯಿಸಿ ಪ್ರತಿದಿನ ವಾರ್ಡ್‌ಗಳಲ್ಲಿ ಸಂಚರಿಸಿ ಸ್ವಚ್ಛತೆಯನ್ನು ಪರಿಶೀಲಿಸಿ ಮಾಹಿತಿ ನೀಡುವಂತೆ ಆದೇಶಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಬಿಜೆಪಿಯ ಸಿದ್ದೇಶ್ವರ್ ಕುಟುಂಬವನ್ನು ಸೋಲಿಸಿ ಕಾಂಗ್ರೆಸ್ ಗೆಲ್ಲಿಸಿ; ಪ್ರಭಾ ಮಲ್ಲಿಕಾರ್ಜುನ್ ಕರೆ
ವಲಯ ಸಹಾಯಕ ಆಯುಕ್ತ ಸಂತೋಷ್, ಆನಂದ ಕಾಂಬ್ಳಿ, ಶಂಕರ ಪಾಟೀಲ ಹಾಗೂ ಆರೋಗ್ಯ ನಿರೀಕ್ಷಕ ಶಾಂತಗೌಡ ಬಿರಾದಾರ, ಮಧುಕೇಶ್ವರ ರಾಯ್ಕರ್, ವಿದ್ಯಾಶ್ರೀ ಬಡಿಗೇರ, ಜ್ಯೋತಿ ಚಳಕಿಮಠ, ಪ್ರತಿಭಾ, ಹನುಮಂತ ಗಡ್ಡಿ ಹಾಗೂ ಸುಧಾಕರ ಸಾಥ್ ನೀಡಿದರು.
