“ರಾಜ್ಯಪಾಲ ಹುದ್ದೆ ಗಂಭೀರ ಸಾಂವಿಧಾನಿಕ ಹುದ್ದೆಯಾಗಿದೆ. ರಾಜ್ಯಪಾಲರು ಏನು ಮಾಡಬೇಕು, ಏನು ಮಾಡಬಾರದು ಎಂದು ಹೇಳಿಸಿಕೊಳ್ಳುವ ಬದಲಾಗಿ ಸಂವಿಧಾನದ ಪ್ರಕಾರ ಕಾರ್ಯನಿರ್ವಹಿಸಬೇಕು. ಅಲ್ಲದೇ, ಇದನ್ನ ಅವರಿಗೆ ಹೇಳುವುದು ಸಾಕಷ್ಟು ಮುಜುಗರದ ಸಂಗತಿ. ಈಗ ಸಂವಿಧಾನದ ಪ್ರಕಾರ ಕರ್ತವ್ಯ ನಿರ್ವಹಿಸಿ ಎಂದು ಅವರಿಗೆ ಹೇಳುವ ಕಾಲ ಬಂದಿದೆ” ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ನಾಗರತ್ನ ಹೇಳಿದರು.
ಹೈದರಾಬಾದ್‌ನ ನಲ್ಸಾರ್ ಕಾನೂನು ವಿಶ್ವವಿದ್ಯಾಲಯಲ್ಲಿ ಶನಿವಾರ ಆಯೋಜಿಸಿದ್ದ ನ್ಯಾಯಾಲಯಗಳ ಪರಿಚಯಾತ್ಮಕ ಅಧಿವೇಶನ ಮತ್ತು ಸಂವಿಧಾನ ಸಮ್ಮೇಳನದಲ್ಲಿ ಮಾತನಾಡಿದ ಅವರು, “ರಾಜ್ಯಪಾಲರು ಸಾಂವಿಧಾನಿಕ ನ್ಯಾಯಾಲಯಗಳಲ್ಲಿ ಹೂಡಲಾಗುವ ದಾವೆಗಳ ಕೇಂದ್ರ ಬಿಂದುವಾಗುತ್ತಿದ್ದಾರೆ” ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
“ಒಂದು ರಾಜ್ಯದ ರಾಜ್ಯಪಾಲರು ಮಸೂದೆಗಳಿಗೆ ನೀಡುವ ಒಪ್ಪಿಗೆಯಲ್ಲಿನ ಲೋಪ ಅಥವಾ ತಾವು ತೆಗೆದುಕೊಳ್ಳುವ ಇತರ ಕ್ರಮಗಳಿಂದಾಗಿ ದಾವೆಯ ಕೇಂದ್ರಬಿಂದುವಾಗುತ್ತಾರೆ. ರಾಜ್ಯಪಾಲರ ಕ್ರಮ ಅಥವಾ ಲೋಪಗಳನ್ನು ಸಾಂವಿಧಾನಿಕ ನ್ಯಾಯಾಲಯಗಳ ಪರಿಗಣನೆಗೆ ತರುವುದು ಸಂವಿಧಾನದ ಪ್ರಕಾರ ಆರೋಗ್ಯಕರ ಪ್ರವೃತ್ತಿಯಲ್ಲ” ಎಂದರು.
ಈ ಸುದ್ದಿ ಓದಿದ್ದೀರಾ? ಉಗಾಂಡ ಮಗು ದತ್ತು | ಭಾರತೀಯ ದಂಪತಿಗೆ ಮಾನ್ಯತೆ ನೀಡಲು ಹೈಕೋರ್ಟ್ ಸೂಚನೆ
ತಮಿಳುನಾಡು ರಾಜ್ಯಪಾಲ ಆರ್ ಎನ್ ರವಿ ಅವರ ನಡವಳಿಕೆಯ ಬಗ್ಗೆ ಸುಪ್ರೀಂ ಕೋರ್ಟ್ ತೀವ್ರ ಕಳವಳ ವ್ಯಕ್ತಪಡಿಸಿದೆ. ಅಲ್ಲದೇ, ಇತ್ತೀಚಿನ ದಿನಗಳಲ್ಲಿ ಕೇರಳ, ತೆಲಂಗಾಣ ಮತ್ತು ಪಂಜಾಬ್ ರಾಜ್ಯಗಳು ತಮ್ಮ ರಾಜ್ಯಪಾಲರ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿವೆ.
ಈ ಸಮ್ಮೇಳನದಲ್ಲಿ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ರವೀಂದ್ರ ಭಟ್, ತೆಲಂಗಾಣ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಲೋಕ್ ಅರಾಧೆ, ನೇಪಾಳದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಸಪನಾ ಮಲ್ಲಾ ಹಾಗೂ ಪಾಕಿಸ್ತಾನದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಸೈಯದ್ ಮನ್ಸೂರ್ ಅಲಿ ಶಾ ಅವರು ಮಾತನಾಡಿದರು.