ಲೋಕಸಭೆ ಚುನಾವಣೆಗೆ ಇನ್ನು ಕೆಲವೇ ವಾರಗಳು ಬಾಕಿ ಉಳಿದಿರುವಾಗ ಕಾಂಗ್ರೆಸ್‌ಗೆ ಮತ್ತೆ ಐಟಿ ನೋಟಿಸ್ ನೀಡಲಾಗಿದೆ. ಆದಾಯ ತೆರಿಗೆ ಇಲಾಖೆಯು 2014-15 ರಿಂದ 2016-17ರ ಹಣಕಾಸು ವರ್ಷಕ್ಕೆ 1,745 ಕೋಟಿ ರೂಪಾಯಿಗಳ ತೆರಿಗೆ ಬೇಡಿಕೆ ಮುಂದಿಟ್ಟು ಹೊಸ ನೋಟೀಸ್‌ಗಳನ್ನು ನೀಡಿದೆ ಎಂದು ಕಾಂಗ್ರೆಸ್ ಶನಿವಾರ ಹೇಳಿದೆ.
ಈ ಹಿಂದೆ ಕಾಂಗ್ರೆಸ್‌ಗೆ 1994-95 ಮತ್ತು 2017-18 ರಿಂದ 2020-21 ರವರೆಗಿನ ತೆರಿಗೆ ನೋಟಿಸ್ ನೀಡಲಾಗಿದೆ. ಒಟ್ಟಾಗಿ ಆದಾಯ ತೆರಿಗೆ ಇಲಾಖೆಗೆ 3,567 ಕೋಟಿ ರೂಪಾಯಿ ತೆರಿಗೆ ಪಾವತಿಸುವಂತೆ ಕಾಂಗ್ರೆಸ್ ಮುಂದೆ ಬೇಡಿಕೆಯಿರಿಸಿದೆ.
ಈ ನಡುವೆ ಕಾಂಗ್ರೆಸ್ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಆದಾಯ ತೆರಿಗೆ ನೋಟಿಸ್‌ಗಳ ಬಗ್ಗೆ ಮಾಹಿತಿ ನೀಡಿದೆ. ಲೋಕಸಭೆ ಚುನಾವಣೆಗೆ ಮುನ್ನ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು “ಆರ್ಥಿಕವಾಗಿ ದುರ್ಬಲಗೊಳಿಸಲು” ತೆರಿಗೆ ಭಯೋತ್ಪಾದನೆಯಲ್ಲಿ ತೊಡಗಿದೆ ಎಂದು ಕಾಂಗ್ರೆಸ್ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದೆ. ಇದಾದ ಬೆನ್ನಲ್ಲೇ ಶನಿವಾರ ಮತ್ತೆ ಹೊಸದಾಗಿ ನೋಟಿಸ್ ನೀಡಲಾಗಿದೆ.
ಇದನ್ನು ಓದಿದ್ದೀರಾ? ಕಾಂಗ್ರೆಸ್‌ಗೆ ನೀಡಿರುವ ಐಟಿ ನೋಟಿಸ್ ಎಲ್ಲ ವಿಪಕ್ಷಗಳಿಗೆ ಎಚ್ಚರಿಕೆ ಸಂದೇಶ: ಪಿ ಚಿದಂಬರಂ
2019 ರ ಲೋಕಸಭೆ ಚುನಾವಣೆಗೆ ಮುನ್ನ ಐಟಿ ಇಲಾಖೆಯು ದಾಳಿಗಳನ್ನು ಮಾಡಿದೆ. ಈಗ 2024ರ ಲೋಕಸಭೆ ಚುನಾವಣೆಗೂ ಮುನ್ನ ನೋಟಿಸ್‌ಗಳನ್ನು ನೀಡುತ್ತಿದೆ. ಒಟ್ಟಿನಲ್ಲಿ ಚುನಾವಣೆ ಸಮಯದಲ್ಲಿ ವಿಪಕ್ಷಗಳನ್ನು ಆರ್ಥಿಕವಾಗಿ ದುರ್ಬಲಗೊಳಿಸಲು ಕೇಂದ್ರ ಸರ್ಕಾರ ಐಟಿ ಇಲಾಖೆಯ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಲಾಗಿದೆ.
ಇನ್ನು ಈ ಹಿಂದೆ 2014-15, 2015-16 ಮತ್ತು 2016-17 ಹಣಕಾಸು ವರ್ಷದ ಆದಾಯ ತೆರಿಗೆಯನ್ನು ಮರು ಮೌಲ್ಯಮಾಪನ ಮಾಡುವ ಆದೇಶವನ್ನು ಕಾಂಗ್ರೆಸ್ ಪ್ರಶ್ನಿಸಿತ್ತು. ಆದರೆ ಆದಾಯ ತೆರಿಗೆ ಮರು ಮೌಲ್ಯಮಾಪನ ಪ್ರಕ್ರಿಯೆಯ ವಿರುದ್ಧವಾಗಿ ಕಾಂಗ್ರೆಸ್ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿದೆ.
ನಿಯಮವನ್ನು ಉಲ್ಲಂಘಿಸಿ ಹೆಚ್ಚುವರಿ ವರ್ಷಗಳ ಆದಾಯ ತೆರಿಗೆ ಮರು ಮೌಲ್ಯಮಾಪನ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಕಾಂಗ್ರೆಸ್ ಪರ ವಕೀಲ ಹಿರಿಯ ವಕೀಕ ಅಭಿಷೇಕ್ ಸಿಂಗ್ವಿ ಆದಾಯ ತೆರಿಗೆ ಇಲಾಖೆಯು ಆರು ವರ್ಷಕ್ಕಿಂತ ಹಳೆಯ ಆದಾಯ ತೆರಿಗೆಗಳ ಮರು ಮೌಲ್ಯಮಾಪನ ಮಾಡುತ್ತಿದೆ ಎಂದು ದೂರಿದ್ದರು.