- ‘ಪ್ರಜಾಪ್ರಭುತ್ವದಲ್ಲಿ ಸರ್ವಾಧಿಕಾರಿ ಧೋರಣೆಗೆ ಅವಕಾಶ ಇಲ್ಲ’
- ನಡ್ಡಾ ಹೇಳಿಕೆಗೆ ಸರಣಿ ಟ್ವೀಟ್ ಮಾಡಿ ಕುಟುಕಿದ ಸಿದ್ದರಾಮಯ್ಯ
“ಪ್ರಜಾಪ್ರಭುತ್ವದಲ್ಲಿ ಜನರೇ ಜನಾರ್ದನರು, ಆಶೀರ್ವಾದ ನೀಡಲು ಪ್ರಧಾನಿ ಮೋದಿ ಅವರೇನು ದೇವರಲ್ಲ” ಎಂದು ಹೇಳುವ ಮೂಲಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರಿಗೆ ತಿರುಗೇಟು ನೀಡಿದ್ದಾರೆ.
ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಶಿಗ್ಗಾಂವಿಯಲ್ಲಿ ಮಾತನಾಡಿದ್ದ ಜೆ.ಪಿ ನಡ್ಡಾ, “ರಾಜ್ಯದ ಜನತೆ ಪ್ರಧಾನಿ ಮೋದಿ ಅವರ ಆಶೀರ್ವಾದದಿಂದ ವಂಚಿತರಾಗಬಾರದು” ಎಂದು ಹೇಳಿಕೆ ನೀಡಿದ್ದರು.
ಈ ಹೇಳಿಕೆಗೆ ಪ್ರತಿಕ್ರಿಯಿಸಿ ಸಿದ್ದರಾಮಯ್ಯ ಅವರು ಸರಣಿ ಟ್ವೀಟ್ ಮಾಡಿ, ಜೆ.ಪಿ ನಡ್ಡಾ ವಿರುದ್ಧ ಹರಿಹಾಯ್ದಿದ್ದಾರೆ. “ಪ್ರಜಾಪ್ರಭುತ್ವದಲ್ಲಿ ಜನರೇ ಜನಾರ್ದನರು, ಆಶೀರ್ವಾದ ನೀಡಲು ಪ್ರಧಾನಿ ಮೋದಿ ಅವರೇನು ದೇವರಲ್ಲ, ಜನರ ಸೇವೆ ಮಾಡಲು ಜನರಿಂದ ಆಯ್ಕೆಯಾಗಿರುವ ಪ್ರತಿನಿಧಿ ಎನ್ನುವುದು ನೆನಪಿರಲಿ ಜೆ.ಪಿ ನಡ್ಡಾ ಅವರೇ” ಎಂದು ಟ್ವೀಟ್ ಮಾಡಿದ್ದಾರೆ.
“ಕರ್ನಾಟಕದ ಜನತೆ ನರೇಂದ್ರ ಮೋದಿಯವರ ಆಶೀರ್ವಾದದಿಂದ ವಂಚಿತರಾಗಬಾರದು ಎನ್ನುವ ನಿಮ್ಮ ಹೇಳಿಕೆ ಬೆದರಿಕೆ ಎಂದಾದರೆ ಅದಕ್ಕೆ ನನ್ನ ಧಿಕ್ಕಾರ ಇದೆ. ಇದು ನಿಮ್ಮ ಅಜ್ಞಾನ ಎಂದಾದರೆ ನಿಮಗೆ ದೇವರು ಸದ್ಬುದ್ಧಿಯ ಆಶೀರ್ವಾದವನ್ನು ಮಾಡಲಿ ಎಂದು ಹಾರೈಸುತ್ತೇನೆ” ಎಂದು ಕುಟುಕಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೊಮ್ಮಾಯಿಗೆ ಮುಂದಿನ 5 ವರ್ಷಗಳ ಕಾಲ ಮತ್ತೆ ಸಿಎಂ ಅವಕಾಶ: ಜೆ ಪಿ ನಡ್ಡಾ
“ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳು ಸಂವಿಧಾನದತ್ತವಾದ ಸಮಾನ ಸ್ಥಾನಮಾನ, ಗೌರವ ಮತ್ತು ಹಕ್ಕುಗಳನ್ನು ಹೊಂದಿರುತ್ತವೆ ಎಂಬುದು ನೆನಪಿರಲಿ” ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
“ಜೆ.ಪಿ ನಡ್ಡಾ ಅವರೇ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಿಮ್ಮ ಸರ್ವಾಧಿಕಾರಿ ಧೋರಣೆಗೆ ಅವಕಾಶ ಇಲ್ಲ” ಎಂದು ಸಿದ್ದರಾಮಯ್ಯ ಹೇಳಿದ್ದಾರೆ.