ಲಕ್ಷಾಂತರ ಬಡ ಮಕ್ಕಳಿಗೆ ಅನ್ನ, ಅಕ್ಷರ ದಾಸೋಹ, ಆಶ್ರಯ ನೀಡುವ ಮೂಲಕ ಸಮಾಜಕ್ಕೆ ಅಪಾರ ಕೊಡುಗೆಯನ್ನು ನೀಡಿರುವ ತ್ರಿವಿಧ ದಾಸೋಹಮೂರ್ತಿ ಲಿಂಗೈಕ್ಯ ಸಿದ್ದಗಂಗಾ ಮಠದ ಹಿರಿಯ ಶ್ರೀಗಳಾದ ಡಾ. ಶಿವಕುಮಾರ ಸ್ವಾಮೀಜಿಯವರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ “ಭಾರತ ರತ್ನ” ಪ್ರಶಸ್ತಿಯನ್ನು ಕೇಂದ್ರ ಸರ್ಕಾರ ನೀಡಬೇಕು ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಒತ್ತಾಯಿಸಿದರು.
ತುಮಕೂರು ನಗರದ ಸಿದ್ದಗಂಗಾ ಮಠಕ್ಕೆ ಲಿಂಗೈಕ್ಯ ಡಾ. ಶಿವಕುಮಾರ ಸ್ವಾಮೀಜಿಯವರ 117ನೇ ಜಯಂತಿ ಪ್ರಯುಕ್ತ ಸೋಮವಾರ ಬೆಳಿಗ್ಗೆ ಭೇಟಿ ನೀಡಿ ಶ್ರೀಗಳ ಗದ್ದುಗೆ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿ, ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿಯವರ ಆಶೀರ್ವಾದ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
“ಶ್ರೀಗಳು ಮಾಡಿರುವ ನಿಸ್ವಾರ್ಥ ಸೇವೆಯನ್ನು ಪರಿಗಣಿಸಿ ಕೇಂದ್ರ ಸರ್ಕಾರ ಭಾರತ ರತ್ನ ಪ್ರಶಸ್ತಿ ನೀಡಬೇಕು. ಶ್ರೀಗಳಿಗೆ ಭಾರತ ರತ್ನ ಬೇಕಿಲ್ಲ. ಆದರೆ ಅವರ ಕೊಡುಗೆಗೆ ʼಭಾರತ ರತ್ನʼ ಕೊಡಬೇಕಾದುದು ಗೌರವ. ಈಗಾಗಲೇ ರಾಜ್ಯ ಸರ್ಕಾರವು ಶಿಫಾರಸು ಮಾಡಿರುವುದನ್ನು ಪರಿಗಣಿಸಿದರೆ ಸಾಕು. ಸ್ವಾಮೀಜಿಯವರಿಗೆ ಭಾರತ ರತ್ನ ಕೊಡಬೇಕೆಂದು ಕೇಂದ್ರ ಸರ್ಕಾರಕ್ಕೆ ಅನ್ನಿಸಿದರೆ ಯಾವ ಅರ್ಜಿಯೂ ಬೇಕಾಗುವುದಿಲ್ಲ” ಎಂದು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
“ಇಡೀ ದೇಶದಲ್ಲಿ ಡಾ. ಶಿವಕುಮಾರ ಸ್ವಾಮೀಜಿಯವರ ಕೊಡುಗೆ ಒಂದು ರೀತಿಯ ವಿಸ್ಮಯ. ಎಷ್ಟೊಂದು ಬಡ ಮಕ್ಕಳಿಗೆ ಅನ್ನ ದಾಸೋಹ, ವಿದ್ಯಾದಾನ ಮಾಡುವ ದೊಡ್ಡ ಪ್ರಯತ್ನ ದೇಶದಲ್ಲಿ ಎಲ್ಲೂ ಇಲ್ಲ. ಈ ದೇಶದಲ್ಲಿ ಸಾಮಾನ್ಯ ಜನರು ಪ್ರಜ್ಞಾವಂತರಾಗಬೇಕು. ಆಗ ಅಭಿವೃದ್ಧಿ ಸುಲಭವಾಗುತ್ತದೆಂಬ ಮಹಾತ್ಮ ಗಾಂಧೀಜಿಯವರ ಮಾತನ್ನು ಶಿವಕುಮಾರ ಸ್ವಾಮೀಜಿಯವರು ಆಗಾಗ್ಗೆ ಹೇಳುತ್ತಿದ್ದರು. ಹೀಗಾಗಿ, ಮಕ್ಕಳಿಗೆ ಶಿಕ್ಷಣ ಕೊಡುವುದು ಅತಿ ಮುಖ್ಯ ಎಂಬುದು ಶ್ರೀಗಳಿಗೆ ತಿಳಿದಿತ್ತು. ಇಡೀ ರಾಜ್ಯದಲ್ಲಿ ಎಲ್ಲ ಭಾಗದಿಂದ ಬಂದ ಬಡ ಮಕ್ಕಳು ವಿದ್ಯೆ ಕಲಿತು, ಜೀವನವನ್ನು ಕಟ್ಟಿಕೊಳ್ಳಲು ಅವಕಾಶ ಕಲ್ಪಿಸಿಕೊಟ್ಟಿದ್ದಾರೆ” ಎಂದರು.
“ಮಠದಲ್ಲಿ ಕಲಿತ ಅನೇಕ ಜನ ವಿದೇಶದಲ್ಲಿದ್ದಾರೆ. ರಾಜ್ಯ ಮತ್ತು ದೇಶದ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಇಡೀ ದೇಶದಲ್ಲಿ ಇದೊಂದು ಬಹಳ ದೊಡ್ಡ ಕೊಡುಗೆ” ಎಂದು ಬಣ್ಣಿಸಿದರು.
“ತುಮಕೂರು ಲೋಕಸಭಾ ಕ್ಷೇತ್ರದ ಕೈ ಅಭ್ಯರ್ಥಿ ಎಸ್ ಪಿ ಮುದ್ದಹನುಮೇಗೌಡ ಅವರು ಏಪ್ರಿಲ್ 4ರಂದು ಅಧಿಕೃತವಾಗಿ ನಾಮಪತ್ರ ಸಲ್ಲಿಸಲಿದ್ದಾರೆ. ಅವರು ನಾಮಪತ್ರ ಸಲ್ಲಿಸುವ ದಿನದಂದು ಮುಖ್ಯಮಂತ್ರಿಯವರು, ಕೆಪಿಸಿಸಿ ಅಧ್ಯಕ್ಷರು ಬರುವ ಸಾಧ್ಯತೆ ಇದೆ. ಆದರೆ ಇನ್ನು ಅವರ ಕಾರ್ಯಕ್ರಮ ನಿಗದಿಯಾಗಿಲ್ಲ. ಜತೆಗೆ ನಮ್ಮ ಜಿಲ್ಲೆಯ ಎಲ್ಲ ನಾಯಕರು, ಮುಖಂಡರುಗಳೂ ಕೂಡ ಭಾಗವಹಿಸಲಿದ್ದಾರೆ” ಎಂದರು.
ಈ ಸುದ್ದಿ ಓದಿದ್ದೀರಾ? ಲೋಕಸಭಾ ಚುನಾವಣೆ | ಹಾಸನ, ಮಂಡ್ಯ ಸೇರಿ ಮೂರರಲ್ಲಿ ‘ಕೈ’ ಗೆಲ್ಲಿಸುವ ಹೊಣೆ ಚಂದ್ರಶೇಖರ್ ಹೆಗಲಿಗೆ
“ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಮುದ್ದಹನುಮೇಗೌಡರ ಗೆಲುವು ನಿಶ್ಚಿತ. ಮುದ್ದಹನುಮೇಗೌಡರು ಸಜ್ಜನ ವ್ಯಕ್ತಿ, ಜತೆಗೆ ಶಾಸಕರಾಗಿ, ಸಂಸದರಾಗಿ ಉತ್ತಮವಾಗಿ ಕೆಲಸ ಮಾಡಿದ್ದಾರೆ. ಜನಮನ್ನಣೆಯನ್ನು ಗಳಿಸಿರುವ ವ್ಯಕ್ತಿ. ಹಾಗಾಗಿ ಅವರು ಗೆಲುವು ಸಾಧಿಸುತ್ತಾರೆಂಬ ವಿಶ್ವಾಸ, ನಂಬಿಕೆ ಇದೆ” ಎಂದರು.
