ಉಕ ಲೋಕಸಭಾ ಕ್ಷೇತ್ರ: ಅಂಜಲಿ ನಿಂಬಾಳ್ಕರ್ ಕನಸಿಗೆ ಕೊಳ್ಳಿಯಾದೀತೆ ಕುಮಟಾ ಕಾಂಗ್ರೆಸ್ ಅನಾಯಕತ್ವ?

Date:

Advertisements
ಕಾಂಗ್ರೆಸ್ ಹುರಿಯಾಳು ಅಂಜಲಿ ನಿಂಬಾಳ್ಕರ್ ಸೋಲು-ಗೆಲುವು ಕುಮಟಾ ಕಾಂಗ್ರೆಸ್ ಸಿಕ್ಕುಗಳಲ್ಲಿ ಸಿಕ್ಕಿಕೊಂಡಿದೆ. ಅಂಜಲಿ ನಿಂಬಾಳ್ಕರ್ ಪಾರ್ಟಿ ಹಿರಿಯರಿಂದ ಕುಮಟಾ ಕಾಂಗ್ರೆಸ್ ಸಿಕ್ಕುಗಳನ್ನು ಹೇಗೆ ಬಿಡಿಸುತ್ತಾರೆಂಬ ಕುತೂಹಲ ಕೆನರಾ ಲೋಕ ಕಣದಲ್ಲಿ ಮೂಡಿದೆ.

ಉತ್ತರ ಕನ್ನಡದ ಭೌಗೋಳಿಕ ಮತ್ತು ರಾಜಕೀಯ ವಾತಾವರಣ ಒಂದೇ ಸಮನೆ ಬಿಸಿಯಾಗುತ್ತಿದೆ. ಎದುರಾಗಿರುವ ಲೋಕಸಭಾ ಚುನಾವಣಾ ಸಮರಕ್ಕೆ ಎದುರಾಳಿ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಪರಸ್ಪರ ರಣವೀಳ್ಯ ಕೊಟ್ಟುಕೊಂಡು ಮುಖಾಮುಖಿಯಾಗಿವೆ. ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಸೋಲನುಭವಿಸಿದ್ದವರನ್ನು ಕಣಕ್ಕಿಳಿಸಿವೆ. ಬಿಜೆಪಿ ಸಂಘಿ ಸಂಸ್ಕಾರದ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯನ್ನು ಅಭ್ಯರ್ಥಿಯಾಗಿಸಿದೆ. ಮಾಜಿ ಶಾಸಕಿ ಅಂಜಲಿ ನಿಂಬಾಳ್ಕರ್ ಕಾಂಗ್ರೆಸ್ ಘೋಷಿತ ಹುರಿಯಾಳಾಗಿದ್ದಾರೆ. ಸತತ ಆರು ಬಾರಿ ಶಾಸಕರಾಗಿದ್ದ ಕಾಗೇರಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶಿರಸಿಯಲ್ಲಿ ಹೀನಾಯವಾಗಿ ಸೋತಿದ್ದರೆ, ಅಂಜಲಿ ನಿಂಬಾಳ್ಕರ್ ಖಾನಾಪುರದಲ್ಲಿ ದೊಡ್ಡ ಅಂತರದಲ್ಲಿ ಮುಗ್ಗರಿಸಿದ್ದರು.

ಹಿಂದುತ್ವ ಹೊಟ್ಟೆಪಾಡು ಮಾಡಿಕೊಂಡವರೆಂದು ರಾಜಕೀಯ ವಲಯದಲ್ಲಿ ವ್ಯಾಖ್ಯಾನಿಸಲಾಗುತ್ತಿರುವ ಸಂಸದ ಅನಂತಕುಮಾರ್ ಹೆಗಡೆಗೆ ನಿರೀಕ್ಷೆಯಂತೆ ಬಿಜೆಪಿ ಮೂಲೆಗೊತ್ತಿದೆ. ಸುಮಾರು ಮೂರು ದಶಕ ಎಂಪಿಯಾಗಿದ್ದ ಹೆಗಡೆ ಅತ್ಯುಗ್ರ ಅಸಹಿಷ್ಣುತೆ ಮತ್ತು ಅಶ್ಲೀಲ ಬೈಗುಳದ ಮಾತುಗಾರಿಕೆ ಜತೆಗೆ ಅಮಾಯಕರ ಮೇಲೆ ಮುಷ್ಟಿ ಕಾಳಗ ಮಾಡಿದ್ದು ಬಿಟ್ಟರೆ ಅಭಿವೃದ್ಧಿ-ಪ್ರಗತಿಗೆ ಯಾವ ಪ್ರಯತ್ನವನ್ನೂ ಮಾಡಲಿಲ್ಲ. ಕೇಸರಿ ಪರಿವಾರಕ್ಕೆ ಹೆಗಡೆ ಬೇಡದ ಪೀಡೆಯಾಗಿದ್ದರು. ಬೆಳಗಾವಿಯ ಖಾನಾಪುರ ಮತ್ತು ಕಿತ್ತೂರು ತಾಲೂಕುಗಳನ್ನು ಒಳಗೊಂಡ ಉತ್ತರ ಕನ್ನಡ ಸಂಸದೀಯ ಕ್ಷೇತ್ರದ ಬಿಜೆಪಿ ರಾಜಕಾರಣದಲ್ಲಿ ಹೆಗಡೆಯ ಅವಮಾನಕರ ನಿರ್ಗಮನದಿಂದ ಅಲ್ಲೋಲಕಲ್ಲೋಲವೇ ಆಗುತ್ತಿದೆ. ಟಿಕೆಟ್ ದಕ್ಕಿಸಿಕೊಳ್ಳಲಾಗದ ಹೆಗಡೆ ಬುಸುಗುಡುತ್ತಿದ್ದಾರೆ.

ತನ್ನನ್ನು ಕಾಣಲು ಮನೆಗೆ ಬಂದಿದ್ದ ಕಾಗೇರಿಗೆ ಅನಂತ್ ಬಾಗಿಲು ಸಹ ತೆರೆಯದೆ ಅವಮಾನಿಸಿ ಕಳಿಸಿದ್ದಾರೆ. ಸಮಾಧಾನಿಸಲು ಬಂದಿದ್ದ ಜಿಲ್ಲಾ ಬಿಜೆಪಿ ಚುನಾವಣಾ ಉಸ್ತುವಾರಿ ಮಾಜಿ ಮಂತ್ರಿ ಹರತಾಳು ಹಾಲಪ್ಪರಿಗೆ ಮುಲಾಜಿಲ್ಲದೆ ಬೈದು ಕಳಿಸಿದ್ದಾರೆ. ಫೋಟೋ ಕ್ಲಿಕ್ಕಿಸಿದ ಹಾಲಪ್ಪರ ಆಪ್ತ ಸಹಾಯಕನಿಗೆ ನಾಲ್ಕು ಬಾರಿಸಿ ಕಳಿಸಿದ್ದಾರೆಂಬ ಸುದ್ದಿ ಹಬ್ಬಿದೆ.

Advertisements

ಹೋದಹೋದಲ್ಲಿ ಬಿಜೆಪಿ ಅಭ್ಯರ್ಥಿ ಕಾಗೇರಿಗೆ ಅಪಶಕುನ ಎದುರಾಗುತ್ತಿದೆ. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಸಂಘಟನಾತ್ಮಕ ಬಲವಿಲ್ಲದಿದ್ದರೂ ಗೆಲ್ಲುವ ಆಸೆ ಕಾಂಗ್ರೆಸ್‌ನಲ್ಲಿ ಮೂಡಿದೆ. ಬೂಟಾಟಿಕೆಯ ಹಿಂದುತ್ವದ ಹಿರೇಮಣಿ ಅನಂತ್ ಹೆಗಡೆ ಬದಲಿಗೆ ಕಾಗೇರಿಗೆ ಕೇಸರಿ ಟಿಕೆಟ್ ಸಿಕ್ಕಿರುವುದರಿಂದ ಕಾಂಗ್ರೆಸ್‌ಗೆ ಅನುಕೂಲವಾಗಿರುವುದಲ್ಲ; ಪ್ರಬಲ ಆಡಳಿತ ವಿರೋಧಿ ತೂಫಾನಿಗೆ ಸಿಲುಕಿದ್ದ ಹೆಗಡೆ ಅಖಾಡಕ್ಕಿಳಿದಿದ್ದರೂ ಈ ಸಲ ಕಾಂಗ್ರೆಸ್‌ಗೆ ಗೆಲ್ಲುವ ಅವಕಾಶವಿತ್ತು. ಆದರೆ ಈಗ ಭುಗಿಲೆದ್ದಿರುವ ಹೆಗಡೆ-ಕಾಗೇರಿ ಗುದುಮುರಿಗೆ ಕಾಂಗ್ರೆಸ್ಸಿಗೆ ಅನುಕೂಲಕರ ವಾತಾವರಣ ಸೃಷ್ಟಿಸಿದೆ ಎಂದು ರಾಜಕೀಯ ಆಸಕ್ತರು ವಿಶ್ಲೇಷಿಸುತ್ತಾರೆ.

ಕೆನರಾ ಕ್ಷೇತ್ರದಲ್ಲಿ ಒಂದು ಸುತ್ತು ಹಾಕಿದರೆ ಜನಮನದಲ್ಲಿರುವ ಬಿಜೆಪಿ ಬಗೆಗಿನ ನಕಾರಾತ್ಮಕ ಭಾವನೆ ಕಾಂಗ್ರೆಸಿಗೆ ವರದಾನದಂತೆ ಕಾಣಿಸುತ್ತಿದೆ. ಹಲವು ಸರ್ವೇಗಳ ಮುಖಾಂತರ ಒಳ ಜಗಳದಿಂದ ಜರ್ಜರಿತವಾಗಿರುವ ಎದುರಾಳಿ ಬಿಜೆಪಿ ಕಷ್ಟ-ನಷ್ಟ ಅನುಭವಿಸುತ್ತಿರುವ ಅಂಶಗಳನ್ನು ಕಾಂಗ್ರೆಸ್ ಕಂಡುಕೊಂಡಿದೆ. ಕಾಂಗ್ರೆಸಿಗರು ಗೆಲ್ಲುವ ಕನಸು ಕಾಣುತ್ತಿದ್ದಾರೆ. ಆದರೆ ಈ ಕನಸನ್ನು ಕಾಂಗ್ರೆಸ್ ಸಂಘಟನೆ ತೀರಾ ದುರ್ಬಲವಾಗಿರುವ ಕುಮಟಾ ವಿಧಾನಸಭಾ ಕ್ಷೇತ್ರದ ಹಿನ್ನಡೆ ಭಗ್ನಗೊಳಿಸುವ ಸಾಧ್ಯತೆ ಇದೆಯೆನ್ನುವ ಅಭಿಪ್ರಾಯ ಆ ಪಕ್ಷದ ವಲಯದಲ್ಲಿ ವ್ಯಕ್ತವಾಗುತ್ತಿದೆ.

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಐದರಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಕಡಿಮೆ ಅಂತರದಲ್ಲಿ ಸೋತಿರುವ ಮಾಜಿ ಎಮ್ಮೆಲ್ಲೆ ವಿ.ಎಸ್.ಪಾಟೀಲ್ ಯಲ್ಲಾಪುರ-ಮುಂಡಗೋಡದಲ್ಲಿ ತಮ್ಮದೇ ವರ್ಚಸ್ಸು ಹೊಂದಿದ್ದಾರೆ. ಬಿಜೆಪಿಯಲ್ಲಿದ್ದೂ ಇಲ್ಲದಂತಿರುವ ಅಲ್ಲಿಯ ಶಾಸಕ ಶಿವರಾಮ ಹೆಬ್ಬಾರ್ ಪಡೆ ಕಾಂಗ್ರೆಸ್ ಪರ ರಹಸ್ಯ ಕಾರ್ಯಾಚರಣೆಗಿಳಿದಿದೆ. ಖುದ್ದು ಹೆಬ್ಬಾರರ ಮಗ ವಿವೇಕ್ ಹೆಬ್ಬಾರ್ ಬೆಂಬಲಿಗರೊಂದಿಗೆ ಕಾಂಗ್ರೆಸ್ ಸೇರ್ಪಡೆಗೆ ಸಿದ್ಧವಾಗಿದ್ದಾರೆನ್ನಲಾಗಿದೆ. ಖಾನಾಪುರದಲ್ಲಿ ಅಂಜಲಿ ನಿಂಬಾಳ್ಕರ್ ಸೋತಿದ್ದರೂ ಈಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ‘ಮರಾಠ-ಮರಾಠಿ ಅಸ್ಮಿತೆ’ ಮುಂದಿಟ್ಟು ಮತದಾರರನ್ನು ಸೆಳೆಯುತ್ತಿದ್ದಾರೆ. ಆದರೆ ಕುಮಟಾ ಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್ ಕತೆ ಕರಣಾಜನಕವಾಗಿದೆ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಾರೆ.

ಇದನ್ನು ಓದಿದ್ದೀರಾ?: ಪಕ್ಷ ಮರೆತು ನಾರಾಯಣ‌ಗುರು ವಿಚಾರ ವೇದಿಕೆಯಿಂದ ಬಿಲ್ಲವ ಅಭ್ಯರ್ಥಿಗಳಿಗೆ ಬೆಂಬಲ: ಸತ್ಯಜಿತ್ ಸುರತ್ಕಲ್

ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಸಖ್ಯವಿರುವ ಮಾಜಿ ಸಂಸದೆ-ಮಾಜಿ ರಾಜ್ಯಪಾಲೆ ಮಾರ್ಗರೆಟ್ ಆಳ್ವ ಮಗ ನಿವೇದಿತ್ ಆಳ್ವ ಕಳೆದ ಅಸೆಂಬ್ಲಿ ಚುನಾವಣೆ ಸಂದರ್ಭದಲ್ಲಿ ಹೈಕಮಾಂಡ್‌ನ ಕ್ಯಾಂಡಿಡೇಟಾಗಿ ಕುಮಟೆಗೆ ಬಂದಿಳಿದಿದ್ದರು. ನಿವೇದಿತ್ ಆಳ್ವಗೆ ಕ್ಷೇತ್ರದ ಮತ್ತು ಕಾರ್ಯಕರ್ತರ ಪರಿಚಯವೇ ಇರಲಿಲ್ಲ. ಚುನಾವಣಾ ತಂತ್ರಗಾರಿಕೆ ಮಾಡಲಾಗದೆ ಎಡವಿದ ಆಳ್ವ ಮತದಾನಕ್ಕೆ ವಾರವಿರುವಾಗ ಇದ್ದಕ್ಕಿದ್ದಂತೆ ಕ್ಷೇತ್ರದಿಂದ ಕಾಣೆಯಾಗಿಬಿಟ್ಟರು. ನೆರೆಯ ಭಟ್ಕಳ, ಕಾರವಾರ ಹಾಗೂ ಶಿರಸಿಯಲ್ಲಿ ಕಾಂಗ್ರೆಸ್ ದೊಡ್ಡ ಅಂತರದಿಂದ ಗೆಲವು ಸಾಧಿಸಿತು. ರಾಜ್ಯದಲ್ಲಿ ಕಾಂಗ್ರೆಸ್‌ನ ಪ್ರಚಂಡ ಅಲೆಯಿತ್ತು. ಆದರೂ ನಿವೇದಿತ್ ಆಳ್ವ ಠೇವಣಿ ಕಳೆದುಕೊಂಡು ಹೀನಾಯವಾಗಿ ಸೋತರು.

ಕ್ಷೇತ್ರಕ್ಕೀಗ ಆಳ್ವ ಅಪರೂಪದ ಅತಿಥಿ. ಬೆಂಗಳೂರು-ದಿಲ್ಲಿಯ ತಮ್ಮ ವ್ಯವಹಾರ-ವಹಿವಾಟಿನಲ್ಲಿ ಬಿಜಿಯಾಗಿರುವ ಆಳ್ವ ಕ್ಷೇತ್ರವನ್ನು ‘ರಿಮೋಟ್’ನಿಂದ ನಿಭಾಯಿಸುತ್ತಿದ್ದಾರೆ. ಸ್ಥಳೀಯ ರಾಜಕೀಯ, ಸಾಮಾಜಿಕ ಆಗುಹೋಗುಗಳ ಕನಿಷ್ಠ ತಿಳಿವಳಿಕೆಯೂ ಇಲ್ಲದ ಆಳ್ವರಿಂದ ನಿಷ್ಠಾವಂತ ಕಾಂಗ್ರೆಸಿಗರು ಕಂಗೆಟ್ಟಿದ್ದಾರೆ. ನಿವೇದಿತ್ ಆಳ್ವ ಪುರಸೊತ್ತಾದಾಗ ಕುಮಟಾಕ್ಕೆ ಬರುತ್ತಾರೆ. ಫೇಸ್ ಬುಕ್, ವ್ಯಾಟ್ಸ್ ಆಪ್‌ಗಳಲ್ಲಿ ಕ್ಷೇತ್ರ ಸಂಚಾರದ ಫೋಟೋ ಹಂಚಿಕೊಳ್ಳುತ್ತಾರೆ. ಅವರ ಶಿರಸಿ ಶಿಷ್ಯರು ಕುಮಟಾದಲ್ಲಿ ‘ಆಡಳಿತ’ ನಡೆಸುತ್ತಾರೆ. ವರ್ಗಾವಣೆ, ಕಾಮಗಾರಿ ಹಂಚಿಕೆ ಮತ್ತು ಲೇವಾದೇವಿ ರಾಜಕೀಯಕ್ಕಷ್ಟೇ ಕುಮಟಾ ಕಾಂಗ್ರೆಸ್ ಸೀಮಿತವಾಗಿದೆ ಎಂಬ ಮಾತು ಸಾಮಾನ್ಯವಾಗಿದೆ.

ನಿವೇದಿತ್ ಕುಮಟೆಗೆ ಬಂದಾಗ ನೆರಳಿನಂತೆ ಹಿಂಬಾಲಿಸಿ ಮೇಜುವಾನಿ ಮಾಡುವ ಭುವನ್ ಭಾಗ್ವತ್ ಎಂಬ ಅನನುಭವಿ ಬ್ರಾಹ್ಮಣರ ಹುಡುಗನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷನಾಗಿ ನೇಮಕ ಮಾಡಲಾಗಿದೆ. ಮಾಜಿ ಎಮ್ಮೆಲ್ಸಿ ಆರ್.ಎಸ್.ಭಾಗ್ವತ್ ಎಂಬ ಸಹಕಾರಿ ಧುರೀಣರ ಮೊಮ್ಮಗನೆಂಬ ‘ಮೆರಿಟ್’ ಬಿಟ್ಟರೆ ಸ್ವಜಾತಿಯ ಒಂದೇ ಒಂದು ಓಟು ಕಾಂಗ್ರೆಸ್ಸಿಗೆ ತರುವ ತಾಕತ್ತು ಭುವನ್ ಭಾಗ್ವತಗೆ ಇಲ್ಲ. ಶೇಕಡಾ 90ರಷ್ಟು ಅಹಿಂದ್ ಮತಗಳಿರುವ ಕುಮಟಾ ಕ್ಷೇತ್ರದಲ್ಲಿ ಆ ವರ್ಗವನ್ನು ನಿವೇದಿತ್ ಬಳಗ ಕಡೆಗಣಿಸಿ ತಮ್ಮ ಬಾಲಂಗೋಚಿಗಳಿಗೆ ಮುನ್ನಲೆಗೆ ತಂದಿರುವುದು ಪಕ್ಷಕ್ಕೆ ಮಾರಕವಾಗಿದೆ ಎಂಬುದು ನಿಷ್ಠಾವಂತ ಕಾಂಗ್ರೆಸಿಗರ ಅಳಲು. ದಶಕಗಳಿಂದ ಪಕ್ಷಕ್ಕಾಗಿ ದುಡಿದ ಹಿರಿಯರು, ಕಟ್ಟಾ ಕಾಂಗ್ರೆಸಿಗರು ಬೆಲೆಯಿಲ್ಲದಂತಾಗಿದ್ದಾರೆ. ಹಿರಿಯ ಕಾಂಗ್ರೆಸಿಗ ಹೊನ್ನಪ್ಪ ನಾಯಕ್ ರನ್ನು ಅವಮಾನಕರವಾಗಿ ಬಿಸಿಸಿ ಕುರ್ಚಿಯಿಂದ ಕೆಳಗಿಳಿಸಲಾಗಿದೆ. ಜಿಪಂ, ತಾಪಂ ಮಾಜಿ ಸದಸ್ಯರು, ಪ್ರಮುಖ ಪದಾಧಿಕಾರಿಗಳು ಮತ್ತು ನಿವೇದಿತರನ್ನು ಕುಮಟಾಕ್ಕೆ ತಂದು ಪ್ರತಿಷ್ಠಾಪಿಸಿದ್ದ ಮಾಜಿ ಶಾಸಕಿ ಶಾರದಾ ಶೆಟ್ಟಿ ವಿರೋಧಿಗಳೂ ಸಹ ಕಾಂಗ್ರೆಸ್ ಚಟುವಟಿಕೆಯಿಂದ ದೂರಾಗಿದ್ದಾರೆ. ಬಣ ಬಡಿದಾಟದಿಂದ ಕುಮಟಾ-ಹೊನ್ನಾವರ ಅಸೆಂಬ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಕುಮಟಾದಲ್ಲಿ ಬಿಜೆಪಿ ಪ್ರಬಲ ನೆಲೆ ಹೊಂದಿದೆ. ಚುನಾವಣೆ ಎದುರಿಸುವ ಪಟ್ಟುಗಳನ್ನು ಕರಗತ ಮಾಡಿಕೊಂಡಿರುವ ಶಾಸಕ ದಿನಕರ ಶೆಟ್ಟಿಗೆ ಸೆಡ್ಡು ಹೊಡೆಯುವ ತಂತ್ರಗಾರಿಕೆ ನಿವೇದಿತರಲ್ಲಿ ಇಲ್ಲ. ಆ ತಾಕತಿದ್ದ ಮಾಜಿ ಶಾಸಕಿ ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಟಿಕೆಟ್ ತಪ್ಪಿದ ಬೇಸರದಲ್ಲಿ ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ. ಅವರ ಪುತ್ರ ರವಿ ಶೆಟ್ಟಿಯನ್ನು ಮಾರ್ಗರೆಟ್ ಆಳ್ವ ಪಾರ್ಟಿಯಿಂದ ಹೊರಹಾಕಿಸಿದ್ದಾರೆ. ಕ್ಷೇತ್ರದಲ್ಲಿ ತನ್ನದೆ ಆದ ಚಾರಿಷ್ಮಾ ಹೊಂದಿರುವ ನಾಮಧಾರಿ ಸಮುದಾಯದ ಸೂರಜ್ ನಾಯ್ಕ್ ಸೋನಿಯನ್ನು ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ತರುವ ಪ್ರಯತ್ನ ನಡೆದಿತ್ತು.

ವಿಧಾನಸಭಾ ಚುನಾವಣೆಯಲ್ಲಿ ಆರುನೂರು ಚಿಲ್ಲರೆ ಮತದ ತೀರಾ ಸಣ್ಣ ಅಂತರದಲ್ಲಿ ಸೋತಿರುವ ಸೂರಜ್, ಬಿಜೆಪಿಯ ದಿನಕರ ಶೆಟ್ಟಿಗೆ ಬೆವರಿಳಿಸಿದ್ದರು. ಶಾರದಾ ಶೆಟ್ಟಿ ಮತ್ತು ಸೂರಜ್ ನಾಯ್ಕರನ್ನು ಒಲಿಸಿಕೊಂಡರೆ ಕುಮಟಾದಲ್ಲಿ ಕಾಂಗ್ರೆಸ್ಸಿಗೆ ಹೋದ ಜೀವ ಮರಳಿ ಬರುತ್ತದೆ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ. ಆದರೆ ಜನ ಬೆಂಬಲದ ಶಾರದಾ ಶೆಟ್ಟಿ, ರವಿ ಶೆಟ್ಟಿ ಮತ್ತು ಸೂರಜ್ ನಾಯ್ಕ್ ಕಾಂಗ್ರೆಸ್ಸಿಗೆ ಬಂದರೆ ತಾನು ಅಪ್ರಸ್ತುತನಾಗುವ ಭೀತಿಯಿಂದ ನಿವೇದಿತ್ ಆಳ್ವ ಅಡ್ಡಗಾಲು ಹಾಕುತ್ತಿದ್ದಾರೆನ್ನಲಾಗಿದೆ. ಮತ್ತೊಂದೆಡೆ ಕುಮಟಾ ಕಾಂಗ್ರೆಸ್ ಸ್ಥಿತಿ-ಗತಿಯ ಅರಿವಿರುವ ಹಿರಿಯ ಮುಂದಾಳು ಆರ್.ವಿ.ದೇಶಪಾಂಡೆ ನಿರ್ಲಿಪ್ತರಾಗಿದ್ದಾರೆ.

ಸುಮಾರು ಎರಡೂವರೆ ದಶಕದ ಹಿಂದೆ ಮಾರ್ಗರೆಟ್ ಆಳ್ವ ತಾನು ಉತ್ತರ ಕನ್ನಡದ ಸೊಸೆ ಎನ್ನುತ್ತ ಜಿಲ್ಲೆ ಪ್ರವೇಶಿಸುತ್ತಿದ್ದಂತೆಯೇ ಅವರ ಹಲವು ‘ದತ್ತು ಮಕ್ಕಳ’ ದರ್ಬಾರೂ ಶುರುವಾಗಿತ್ತು. ನೆಲೆ-ಬೆಲೆ ಇಲ್ಲದ ಈ ದತ್ತು ಮಕ್ಕಳನ್ನು ಕಟ್ಟಿಕೊಂಡು ತಿರುಗಿದ್ದರಿಂದ ಮಾರ್ಗರೆಟ್ ಆಳ್ವ ಸತತ ಸೋಲು ಕಾಣುವಂತಾಯಿತೆಂಬುದು ಇತಿಹಾಸ. ಅದೇ ಪರಂಪರೆ ಈಗ ಕುಮಟಾದಲ್ಲಿ ಮುಂದುವರಿದಿದೆ. ಇದರ ದುಷ್ಪರಿಣಾಮ ಕಾಂಗ್ರೆಸ್ ಮೇಲಾಗುತ್ತಿದೆ. ಕುಮಟಾ ಕಾಂಗ್ರೆಸ್ಸಿನ ಸದ್ಯದ ಪರಿಸ್ಥಿತಿ ಅದೆಷ್ಟು ಹೀನಾಯವಾಗಿದೆಯೆಂದರೆ, ಲೋಕಸಭಾ ಕ್ಷೇತ್ರ ವ್ಯಾಪ್ತಿ ಉಳಿದ ಏಳು ಅಸೆಂಬ್ಲಿ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದರೂ ಅದೆಲ್ಲವನ್ನು ಕುಮಟಾ ಕ್ಷೇತ್ರದ ಹಿನ್ನಡೆ ಅಳಿಸಿಹಾಕುವ ಸಾಧ್ಯತೆಯಿದೆ ಎಂದು ಕಾಂಗ್ರೆಸ್ಸಿಗರು ಆತಂಕ ವ್ಯಕ್ತಪಡಿಸುತ್ತಾರೆ.

ಇದನ್ನು ಓದಿದ್ದೀರಾ?: ದೇಶವಾಸಿಗಳು ʼಕ್ವಿಟ್ ಎನ್‍ಡಿಎʼ ಮತ್ತು ʼಸೇವ್ ಇಂಡಿಯಾʼ ಚಳವಳಿಗೆ ಸನ್ನದ್ಧರಾಗಬೇಕಿದೆ..

ಪಕ್ಷಕ್ಕೆ ಪ್ರಯೋಜನವಿಲ್ಲದ ನಿವೇದಿತ್ ಆಳ್ವರ ಹಿಡಿತದಿಂದ ಕುಮಟಾ ಕಾಂಗ್ರೆಸ್ ಹೊರತರದಿದ್ದರೆ ಅಂಜಲಿ ನಿಂಬಾಳ್ಕರ್ ಗೆಲುವು ಕಷ್ಟ. ನಿವೇದಿತ್ ಬೇರು ಮಟ್ಟದ ರಾಜಕಾರಣದಲ್ಲಿ ಜಿರೋ. ಹೈಕಮಾಂಡ್ ಮಟ್ಟದ ವಶೀಲಿ ಪಾಲಿಟಿಕ್ಸ್ ನ ಹೀರೋ. ರಾಹುಲ್ ಗಾಂಧಿ ಜತೆ ನೇರ ಸಂಪರ್ಕವಿದೆ. ಹೀಗಾಗಿ ಕುಮಟಾ ಕಾಂಗ್ರೆಸ್ ವಸ್ತುಸ್ಥಿತಿ ಗೊತ್ತಿದ್ದರೂ ಸಿಎಂ ಸಿದ್ದು ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಏನೂ ಮಾಡಲಾಗದೆ ಅಸಹಾಯಕರಾಗಿದ್ದಾರೆ. ಜಿಲ್ಲಾ ಉಸುವಾರಿ ಮಂತ್ರಿ ಮಂಕಾಳ್ ವೈದ್ಯ ಸದ್ಯದ ಇಕ್ಕಟ್ಟಿನಲ್ಲಿ ನಿವೇದಿತ್ ಕೈಯಿಂದ ಕಾಂಗ್ರೆಸ್ ಹೊರತರುವ ಅಥವಾ ಬೈಪಾಸ್ ಮಾಡಿ ಪಕ್ಷಕ್ಕೆ ಪುನಶ್ಚೇತನ ನೀಡುವ ಸಾಹಸಕ್ಕೆ ಧೈರ್ಯ ಮಾಡುತ್ತಿಲ್ಲ. ಇಂಥ ಸಂದಿಗ್ಧ ಸಮಸ್ಯೆ ಪರಿಹರಿಸಬಲ್ಲ ದೇಶಪಾಂಡೆ ಉದಾಸೀನದಲ್ಲಿದ್ದಾರೆ ಎಂಬ ಮಾತುಗಳು ಕಾಂಗ್ರೆಸ್ ಅಂಗಳದಲ್ಲಿ ಕೇಳಿಬರುತ್ತಿವೆ.

ಒಟ್ಟಿನಲ್ಲಿ ಕಾಂಗ್ರೆಸ್ ಹುರಿಯಾಳು ಅಂಜಲಿ ನಿಂಬಾಳ್ಕರ್ ಸೋಲು-ಗೆಲುವು ಕುಮಟಾ ಕಾಂಗ್ರೆಸ್ ಸಿಕ್ಕುಗಳಲ್ಲಿ ಸಿಕ್ಕಿಕೊಂಡಿದೆ. ಅಂಜಲಿ ನಿಂಬಾಳ್ಕರ್ ಪಾರ್ಟಿ ಹಿರಿಯರಿಂದ ಕುಮಟಾ ಕಾಂಗ್ರೆಸ್ ಸಿಕ್ಕುಗಳನ್ನು ಹೇಗೆ ಬಿಡಿಸುತ್ತಾರೆಂಬ ಕುತೂಹಲ ಕೆನರಾ ಲೋಕ ಕಣದಲ್ಲಿ ಮೂಡಿದೆ.

-ನಹುಷ

ಈದಿನ 2
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

ಈದಿನ ವಿಶೇಷ | ಧರ್ಮಸ್ಥಳ: ಉತ್ತರ ನೀಡಿದ ಗೃಹ ಸಚಿವರು; ಈಗಲೂ ಉಳಿದ ಹಲವು ಪ್ರಶ್ನೆಗಳು

ಸದನದಲ್ಲಿ ನಿಂತು ಷಡ್ಯಂತ್ರ ಎನ್ನುವವರಿಗೆ, ಎಸ್‌ಐಟಿ ರಚನೆಯಾಗಿದ್ದೇಕೆ? ಕಾನೂನು ಏನು ಹೇಳುತ್ತೆ?...

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಪಟ್ಟಣ ಪಂಚಾಯತ್ ಚುನಾವಣೆ: ಮೂರರಲ್ಲಿ ಕಾಂಗ್ರೆಸ್‌ಗೆ ಮೇಲುಗೈ; ಎರಡರಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಗೆ ಜಯ

ಕರ್ನಾಟಕದಲ್ಲಿ ಐದು ಪ್ರದೇಶಗಳು ತಾಲೂಕು ಸ್ಥಾನಕ್ಕೇರಿದ ಬಳಿಕ ರಚನೆಯಾದ ಪಟ್ಟಣ ಪಂಚಾಯಿತಿಗೆ...

Download Eedina App Android / iOS

X