ಲೋಕಸಭಾ ಚುನಾವಣೆಗೆ ಗುಜರಾತ್ ಬಿಜೆಪಿಯಲ್ಲಿ ಅಭ್ಯರ್ಥಿಗಳ ಆಯ್ಕೆ ಮತ್ತು ನಾಯಕರ ರಾಜಕೀಯ ನಿರ್ಧಾರಗಳ ವಿರುದ್ಧ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಗುಜರಾತ್‌ನ ಪ್ರಮುಖ ಲೋಕಸಭಾ ಕ್ಷೇತ್ರಗಳಲ್ಲಿ ಒಂದಾದ ಅಮ್ರೇಲಿಯಲ್ಲಿ ಬಿಜೆಪಿಗರ ಬಣಗಳ ನಡುವೆ ಗಲಾಟೆ ನಡೆದಿದ್ದು, ಹಲವರು ಕಾರ್ಯಕರ್ತರು ಆಸ್ಪತ್ರೆ ಸೇರಿದ್ದಾರೆ ಎಂದು ವರದಿಯಾಗಿದೆ.
ಅಮ್ರೇಲಿಯಲ್ಲಿ ಬಿಜೆಪಿಯು ಹಾಲಿ ಸಂಸದ ನಾರಣಭಾಯ್ ಕಚಾಡಿಯಾ ಅವರಿಗೆ ಟಿಕೆಟ್ ನೀಡಿಲ್ಲ. ಬದಲಾಗಿ, ಭರತ್ ಸುತಾರಿಯಾ ಎಂಬವರನ್ನು ಹೊಸದಾಗಿ ಕಣಕ್ಕಿಳಿಸಿದೆ. ಇದು ಸಂಸದ ನಾರಾಣಭಾತ್ ಮತ್ತು ಅಭ್ಯರ್ಥಿ ಭರತ್ ಬೆಂಬಲಿಗರ ನಡುವೆ ಕಲಹಕ್ಕೆ ಕಾರಣವಾಗಿದ್ದು, ಎರಡೂ ಬಣದ ಕಾರ್ಯಕರ್ತರು ಹೊಡೆದಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಉಭಯ ಬಣಗಳ ಕಾರ್ಯಕರ್ತರಿಗೆ ಗಾಯಗಳಾಗಿದ್ದು, ಆಸ್ಪತ್ರೆ ಸೇರಿದ್ದಾರೆ. ಅವರು ಆಸ್ಪತ್ರೆಯಲ್ಲಿರುವ ಕೆಲ ವಿಡಿಯೋಗಳ ತುಣುಕುಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.
ಗುಜರಾತ್‌ನಲ್ಲ ಮೇ 7ರಂದು ಲೋಕಸಭಾ ಚುನಾವಣೆಯ ಮತದಾನ ನಡೆಯಲಿದೆ. ಅಲ್ಲಿನ ಒಟ್ಟು 26 ಕ್ಷೇತ್ರಗಳ ಪೈಕಿ ಕನಿಷ್ಠ 5 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ವಿರೋಧ ಮತ್ತು ಬಹಿರಂಗ ಪ್ರತಿಭಟನೆಗಳನ್ನು ಎದುರಿಸುತ್ತಿದ್ದಾರೆ. ಸಬರ್ಕಾಂತ, ರಾಜ್‌ಕೋಟ್, ವಡೋದರಾ ಮತ್ತು ವಲ್ಸಾದ್ ಲೋಕಸಭಾ ಕ್ಷೇತ್ರಗಳಲ್ಲಿ ಪ್ರತಿಭಟನೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ.
ಜೊತೆಗೆ, ಜುನಾಗಢ್ ಅಭ್ಯರ್ಥಿ ರಾಜೇಶ್ ಚುಡಸಾಮ ಅವರನ್ನು ಬದಲಾಯಿಸುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಸಿ.ಆರ್ ಪಾಟೀಲ್‌ಗೆ ಬರೆಯಲಾಗಿರುವ ಪತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. “ರಾಜೇಶ್ ಅವರು ಜುನಾಗಢದಲ್ಲಿ ಒಂದೇ ಒಂದು ಅಭಿವೃದ್ಧಿ ಕೆಲಸ ಮಾಡಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸುವಲ್ಲಿಯೂ ಅವರು ವಿಫಲರಾಗಿದ್ದಾರೆ” ಎಂದು ಪತ್ರದಲ್ಲಿ ಹೇಳಲಾಗಿದೆ.
ಸ್ಥಳೀಯ ನಾಯಕರ ಪ್ರತಿರೋಧದಿಂದ ವಡೋದರಾದಲ್ಲಿ ಬಿಜೆಪಿ ಅಭ್ಯರ್ಥಿ ರಂಜನ್ ಭಟ್ ಅವರನ್ನು ಈಗಾಗಲೇ ಬದಲಾವಣೆ ಮಾಡಲಾಗಿದೆ. ಈಗ, ಅದೇ ಕ್ಷೇತ್ರಕ್ಕೆ ಹೊಸದಾಗಿ ಹೆಸರಿಸಲಾದ ಹೊಸ ಅಭ್ಯರ್ಥಿ ಡಾ. ಹೇಮಾಂಗ್ ಜೋಶಿ ಅವರನ್ನೂ ಬದಲಿಸಬೇಕೆಂಬ ಒತ್ತಾಯವೂ ಕೇಳಿಬರುತ್ತಿದೆ.
ಬಿಜೆಪಿಗೆ ಕರ್ಣಿ ಸೇನಾ ಮುಖ್ಯಸ್ಥ ರಾಜೀನಾಮೆ
ಕೇಂದ್ರ ಸಚಿವ ಮತ್ತು ರಾಜ್‌ಕೋಟ್‌ನ ಬಿಜೆಪಿ ಅಭ್ಯರ್ಥಿ ಪರ್ಷೋತ್ತಮ್ ರೂಪಾಲಾ ಅವರು ರಜಪೂತ ಸಮುದಾಯದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದು, ಕ್ಷೇತ್ರದಲ್ಲಿ ಮತ್ತು ಬಿಜೆಪಿಯಲ್ಲಿ ಕೋಲಾಹಲ ಸೃಷ್ಟಿಯಾಗಿದೆ. ಸ್ಥಳೀಯ ರಾಜ್‌ಕೋಟ್ ನ್ಯಾಯಾಲಯದಲ್ಲಿ ರೂಪಾಲಾ ವಿರುದ್ಧ ಕಾಂಗ್ರೆಸ್ ಮಾನನಷ್ಟ ಮೊಕದ್ದಮೆ ದಾಖಲಿಸಿದೆ ಎಂದು ವರದಿಯಾಗಿದೆ.
ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರೂಪಾಲಾ, “ಹಲವಾರು ರಜಪೂತ ಆಡಳಿತಗಾರರು ಬ್ರಿಟಿಷರಿಗೆ ಸಹಕರ ನೀಡಿದ್ದರು” ಎಂದು ಆರೋಪಿಸಿದ್ದರು. ಅವರ ಹೇಳಿಕೆಯ ನಂತರ, ಕರ್ಣಿ ಸೇನಾದ ಮುಖ್ಯಸ್ಥ ರಾಜ್ ಶೆಖಾವತ್ ಶನಿವಾರ ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ.