ಈ ದಿನ ಸಂಪಾದಕೀಯ | ಬರಗಾಲಕ್ಕೆ ಬರಲಿಲ್ಲ, ಪರಿಹಾರ ಕೊಡಲಿಲ್ಲ, ಓಡೋಡಿ ಬರುತ್ತಿದ್ದಾರೆ ಓಟಿಗಾಗಿ!

Date:

Advertisements
ರಾಜ್ಯ ಬರಗಾಲಕ್ಕೆ ತುತ್ತಾಗಿದೆ. ಸರ್ಕಾರ ಆರು ತಿಂಗಳಿನಿಂದ ಲೆಕ್ಕವಿಲ್ಲದಷ್ಟು ಮನವಿ ಮಾಡಿದೆ. ದೆಹಲಿ ಭೇಟಿ ನೀಡಿ ವಿನಂತಿಸಿಕೊಂಡಿದೆ. ಆದರೆ ಕೇಂದ್ರ ಸರ್ಕಾರ, ಕಾನೂನು ಪ್ರಕಾರ ಕೊಡಬೇಕಾದ ಪರಿಹಾರ ಕೊಡದೆ ವಂಚಿಸುತ್ತಿದೆ. ಬರಡು ಹೃದಯದ ದಿಲ್ಲಿ ನಾಯಕರು ಈಗ ಕರ್ನಾಟಕಕ್ಕೆ ಬರುತ್ತಿದ್ದಾರೆ. ಜನ ಈಗಲಾದರೂ ಎದ್ದು ನಿಂತು, ಬಿಜೆಪಿಗರ ಭಂಡತನವನ್ನು ಪ್ರಶ್ನಿಸಬೇಕಾಗಿದೆ. ಪ್ರಶ್ನಿಸಲಾಗದಿದ್ದರೆ, ಕೊನೆ ಪಕ್ಷ ಮತದಾನದ ಮೂಲಕವಾದರೂ ತಕ್ಕ ಉತ್ತರ ನೀಡಬೇಕಾಗಿದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ದೂರದ ದೆಹಲಿಯಿಂದ ಕರ್ನಾಟಕಕ್ಕೆ ಬಂದಿದ್ದಾರೆ. ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ, ಸಭೆ, ಸಮಾರಂಭ, ರ್‍ಯಾಲಿಗಳಲ್ಲಿ ಪಾಲ್ಗೊಂಡು, ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಗಳ ಪರ ಮತ ಯಾಚಿಸುತ್ತಿದ್ದಾರೆ. ಅಂದರೆ, ಗೃಹ ಸಚಿವರೇ ನಿಮ್ಮ ಬಳಿಗೆ ಬಂದಿದ್ದಾರೆ. ಅವರು ಮತ ಕೇಳುತ್ತಾರೆ, ನೀವು ಪರಿಹಾರ ಕೇಳಿ.

ರಾಜ್ಯ ಹಿಂದೆಂದೂ ಕಂಡರಿಯದ ಭೀಕರ ಬರಗಾಲಕ್ಕೆ ತುತ್ತಾಗಿದೆ. 240ರಲ್ಲಿ 223 ತಾಲೂಕುಗಳು ಬರಪೀಡಿತವೆಂದು ಘೋಷಿಸಲಾಗಿದೆ. ಮಳೆ ಕೊರತೆ, ಬೆಳೆ ನಾಶದಿಂದ ಕಂಗೆಟ್ಟಿರುವ ರೈತರು, ಜೀವಂತ ಶವವಾಗಿದ್ದಾರೆ. ಸುಮಾರು 35,162.05 ಕೋಟಿ ರೂಪಾಯಿಗಳ ಬೆಳೆ ನಷ್ಟವಾಗಿದ್ದು, ರಾಜ್ಯ ಸರ್ಕಾರ 18,171 ಕೋಟಿ ಬರ ಪರಿಹಾರವನ್ನು ಕೋರಿ ಸೆಪ್ಟೆಂಬರ್ 22 ಮತ್ತು ಅಕ್ಟೋಬರ್ 20, 2023ರಂದು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದೆ.

ರಾಜ್ಯಗಳಿಂದ ಇಂತಹ ಮನವಿ ಕೇಂದ್ರಕ್ಕೆ ಸಲ್ಲಿಸಲ್ಪಟ್ಟರೆ, 2005ರ ಬರ ನಿರ್ವಹಣೆ ಕೈಪಿಡಿ ಪ್ರಕಾರ ಒಂದು ವಾರದಲ್ಲಿ ಐಎಂಸಿಟಿ(ಇಂಟರ್ ಮಿನಿಸ್ಟಿರಿಯಲ್ ಸೆಂಟ್ರಲ್ ಟೀಮ್) ರಚನೆಯಾಗಬೇಕು. ಆ ತಂಡ ಖುದ್ದು ರಾಜ್ಯಕ್ಕೆ ಭೇಟಿ ನೀಡಿ ಹತ್ತು ದಿನಗಳಲ್ಲಿ ವರದಿ ಸಲ್ಲಿಸಬೇಕು. ವರದಿ ಸಲ್ಲಿಕೆಯಾದ ಒಂದು ತಿಂಗಳಲ್ಲಿ ರಾಷ್ಟ್ರೀಯ ವಿಪತ್ತು ನಿವಾರಣಾ ನಿಧಿ(ಎನ್‌ಡಿಆರ್‍ಎಫ್)ಯಿಂದ ಹಣ ಬಿಡುಗಡೆ ಮಾಡಬೇಕು. ಇದಕ್ಕಾಗಿ ಉನ್ನತ ಮಟ್ಟದ ಸಮಿತಿ ಪೂರ್ವಭಾವಿ ಸಭೆ ಸೇರಬೇಕು. ಈ ಸಭೆಯು ಗೃಹ ಸಚಿವ ಅಮಿತ್ ಶಾ ಅವರ ಅಧ್ಯಕ್ಷತೆಯಲ್ಲಿ ನಡೆಯಬೇಕು.

Advertisements

ಆದರೆ, ಕೇಂದ್ರ ಸರ್ಕಾರದ ಗೃಹ ಸಚಿವರು ಸಭೆಯನ್ನು ಕರೆಯಲಿಲ್ಲ, ಅನುದಾನವನ್ನೂ ಬಿಡುಗಡೆ ಮಾಡಲಿಲ್ಲ. ರಾಜ್ಯದ ಸ್ಥಿತಿ ಗಂಭೀರವಾಗುತ್ತಿದ್ದಂತೆ, ಅಕ್ಟೋಬರ್ 25, 2023ರಂದು ರಾಜ್ಯದ ಸಚಿವರ ನಿಯೋಗ ದೆಹಲಿಗೆ ತೆರಳಿ, ಖುದ್ದಾಗಿ ಗೃಹ ಸಚಿವರನ್ನು ಕಂಡು, ಮತ್ತೆ ಮನವಿ ಅರ್ಪಿಸಿತು. ಆದರೂ ಅಮಿತ್ ಶಾ ಸಭೆ ಕರೆಯಲಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ನವೆಂಬರ್‌ 15, 2023ರಂದು ಮತ್ತೆ ಪತ್ರ ಬರೆದರು. ಅದಕ್ಕೂ ಯಾವ ಪ್ರತಿಕ್ರಿಯೆ ಬರಲಿಲ್ಲ. ಆನಂತರ, ಕಂದಾಯ – ಕೃಷಿ ಸಚಿವರು ನವೆಂಬರ್‌ 23, 2023ರಂದು ಖುದ್ದಾಗಿ ದೆಹಲಿಗೆ ತೆರಳಿ ಕರ್ನಾಟಕ ಎದುರಿಸುತ್ತಿರುವ ಸಂಕಷ್ಟವನ್ನು ವಿವರಿಸಿ ಹಣ ಬಿಡುಗಡೆ ಮಾಡಲು ಕೋರಿಕೊಂಡರು. ಇಷ್ಟಾದರೂ ಅಮಿತ್‌ ಶಾ ಮನ ಕರಗಲಿಲ್ಲ, ಕಾನೂನು ಪ್ರಕಾರ ಕಡ್ಡಾಯವಾಗಿ ಕರೆಯಲೇಬೇಕಿದ್ದ ಸಭೆಯನ್ನೂ ಕರೆಯಲಿಲ್ಲ.

ಕಡೆಗೆ ವಿಧಿಯಿಲ್ಲದೇ ರಾಜ್ಯದ ಮುಖ್ಯಮಂತ್ರಿಗಳು ಮತ್ತು ಕಂದಾಯ ಮಂತ್ರಿಗಳು ದೆಹಲಿಗೆ ತೆರಳಿ, ಡಿಸೆಂಬರ್‌ 19, 2023ರಂದು ಪ್ರಧಾನ ಮಂತ್ರಿ ಮೋದಿಯವರನ್ನು ಭೇಟಿ ಮಾಡಿ ಮತ್ತೊಮ್ಮೆ ಮನವಿ ಮಾಡಿದರು. ಮರುದಿನ ಡಿಸೆಂಬರ್‌ 20, 2023ರಂದು ಗೃಹ ಸಚಿವ ಅಮಿತ್ ಶಾರನ್ನು ಕಂಡು ಎನ್‌ಡಿಆರ್‌ಎಫ್‌ನಿಂದ ಹಣ ಬಿಡುಗಡೆ ಮಾಡುವ ಸಲುವಾಗಿ ಉನ್ನತ ಮಟ್ಟದ ಸಭೆ ಕರೆಯುವಂತೆ ಕೋರಿಕೊಂಡರು. ಆದರೂ ಅಮಿತ್ ಶಾ ಸಭೆ ಕರೆಯಲಿಲ್ಲ. ಜನವರಿ 19, 2024ರಂದು ಮತ್ತೆ ಮುಖ್ಯಮಂತ್ರಿಗಳು ಇನ್ನೊಮ್ಮೆ ಪ್ರಧಾನ ಮಂತ್ರಿಗಳಿಗೆ ಪತ್ರ ಬರೆದು ರಾಜ್ಯದ ಬರಪರಿಹಾರಕ್ಕೆ ಅನುದಾನ ಬಿಡುಗಡೆ ಮಾಡಲು ಮನವಿ ಮಾಡಿಕೊಂಡರು.

ಆರು ತಿಂಗಳಿನಿಂದ ಲೆಕ್ಕವಿಲ್ಲದಷ್ಟು ಮನವಿಗಳು ಮತ್ತು ದೆಹಲಿ ಭೇಟಿಗಳ ನಂತರ, ರಾಜ್ಯದ ಇಡೀ ಸಚಿವ ಸಂಪುಟವೇ ದೆಹಲಿಗೆ ತೆರಳಿತು. ಮೋದಿಯವರ ಮುಂದೆಯೇ ಫೆಬ್ರವರಿ 7, 2024ರಂದು ಧರಣಿ ಕೂತಿತು. ಸಿದ್ದರಾಮಯ್ಯನವರು ಅಂಕಿ-ಅಂಶಗಳ ಸಮೇತ ಮತ್ತೊಮ್ಮೆ ವಿವರಿಸಿದರು. ಕೇಂದ್ರ ಸರ್ಕಾರದ ಮಲತಾಯಿ ಧೋರಣೆಯನ್ನು ಬಿಡಿಸಿಟ್ಟರು. ಆಗಲೂ ಕೇಂದ್ರ ಸರ್ಕಾರದ ಸಚಿವರು ರಾಜಕಾರಣದ ಮಾತುಗಳನ್ನು ಆಡಿದರೇ ಹೊರತು ಬರಪರಿಹಾರ ಬಿಡುಗಡೆ ಮಾಡಲಿಲ್ಲ.

2019ರಲ್ಲಿ ರಾಜ್ಯದ ಜನ ಬಿಜೆಪಿಯ 25 ಸಂಸದರನ್ನು ಗೆಲ್ಲಿಸಿ ದಿಲ್ಲಿಗೆ ಕಳುಹಿಸಿದರು. ಮಂಡ್ಯದಿಂದ ಗೆದ್ದ ಸುಮಲತಾ ಕೂಡ ಬಿಜೆಪಿ ಸೇರಿದರು. ಹಾಸನದಿಂದ ಗೆದ್ದ ಪ್ರಜ್ವಲ್ ಸಹ ಬಿಜೆಪಿ ಪಾಲಾದರು. ಕಾಂಗ್ರೆಸ್ ಬೆಂಬಲ ಪಡೆದು ರಾಜ್ಯಸಭಾ ಸದಸ್ಯರಾದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಕೂಡ ಮೋದಿಯವರನ್ನು ಬಾಯ್ತುಂಬ ಹೊಗಳತೊಡಗಿದರು.

ಗೌಡರು ಮೋದಿಯವರನ್ನು ಹೊಗಳಿದ್ದು ರಾಜ್ಯಕ್ಕೆ ಬರಪರಿಹಾರ ಕೊಡಿಸಲು ಅಲ್ಲ, ಜೆಡಿಎಸ್ ಪಕ್ಷವನ್ನು ಬಿಜೆಪಿಯೊಂದಿಗೆ ವಿಲೀನಗೊಳಿಸಲು. ಮಗ, ಮೊಮ್ಮಗ ಮತ್ತು ಅಳಿಯನಿಗೆ ಟಿಕೆಟ್ ಕೊಡಿಸಲು. ಅಷ್ಟೇ ಅಲ್ಲ, ಗೃಹ ಸಚಿವ ಅಮಿತ್ ಶಾ ಇಂದು ಕರ್ನಾಟಕಕ್ಕೆ ಬಂದು ರ್‍ಯಾಲಿಯಲ್ಲಿ ಪಾಲ್ಗೊಂಡಿರುವುದು ಕೂಡ, ದೇವೇಗೌಡರ ಮಗ ಮತ್ತು ಅಳಿಯನ ಕ್ಷೇತ್ರಗಳ ಮತಯಾಚಿಸಲು.

ಇದು ಏನನ್ನು ಸೂಚಿಸುತ್ತದೆ? ರಾಜ್ಯದಿಂದ ಆಯ್ಕೆಯಾದ ಸಂಸದರು ಜವಾಬ್ದಾರಿ ನಿರ್ವಹಿಸಿದರೇ? ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರ ನಡೆದುಕೊಂಡ ರೀತಿ ಸರಿಯೇ? ದೇಶವನ್ನಾಳುವ ಪ್ರಧಾನಿಯ ಐವತ್ತಾರು ಇಂಚಿನ ಎದೆಯೊಳಗೆ ಕರುಣೆ, ಕಾಳಜಿ, ಕಳಕಳಿಯೇ ಇಲ್ಲದಿದ್ದರೆ, ಅವರನ್ನು ಪ್ರಧಾನಿ ಎನ್ನಲಾಗುವುದೇ? ಇದು ಕ್ರೌರ್ಯದ ಪರಮಾವಧಿಯಲ್ಲವೇ?

ಇಂತಹ ಬರಡು ಹೃದಯದ ದಿಲ್ಲಿ ನಾಯಕರು ಈಗ ಕರ್ನಾಟಕಕ್ಕೆ ಬರುತ್ತಿದ್ದಾರೆ. ಕರ್ನಾಟಕದ ಜನ ಈಗಲಾದರೂ ಎದ್ದು ನಿಲ್ಲಬೇಕಾಗಿದೆ. ಕಾನೂನು ಪ್ರಕಾರ ಕೊಡಬೇಕಾದ ಪರಿಹಾರ ಕೊಡದೆ ವಂಚಿಸುತ್ತಿರುವ ಬಿಜೆಪಿಗರನ್ನು ಪ್ರಶ್ನಿಸಬೇಕಾಗಿದೆ. ಪ್ರಶ್ನಿಸಲಾಗದಿದ್ದರೆ, ಕೊನೆ ಪಕ್ಷ ತಮಗಿರುವ ಮತದಾನದ ಮೂಲಕವಾದರೂ ತಕ್ಕ ಉತ್ತರ ನೀಡಬೇಕಾಗಿದೆ.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಮೊಟ್ಟೆಗೆ ವಿರೋಧ; ಬಡ ಮಕ್ಕಳ ಆಹಾರದ ಸ್ವಾತಂತ್ರ್ಯಕ್ಕೆ ಕೊಕ್ಕೆ

ಮಂಡ್ಯದ ಆಲಕೆರೆ ಗ್ರಾಮದ ಸರ್ಕಾರಿ ಶಾಲೆಯ ವಿಚಾರದಲ್ಲಿ 84 ಮಕ್ಕಳ ಪೋಷಕರು...

ಈ ದಿನ ಸಂಪಾದಕೀಯ | ಅವಾಂತರಕಾರಿ ಆಸಿಮ್ ಮುನೀರ್ ಮತ್ತು ಮೌನಿ ಮೋದಿ

ವಿಶ್ವಗುರು ಭಾರತದ ಪ್ರಧಾನಿ ಮೋದಿಯವರು ಅಮೆರಿಕ ಮತ್ತು ಚೀನಾ ದೇಶಗಳಿಗೆ ಸೆಡ್ಡು...

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

Download Eedina App Android / iOS

X