ವೃದ್ಧಾಪ್ಯ ವೇತನ ಮಾಡಿಸಿಕೊಡುವುದಾಗಿ ನಂಬಿಸಿ ವಯೋವೃದ್ಧೆಯ ಬಳಿ ತುರುವೇಕೆರೆ ತಾಲ್ಲೂಕಿನ ಮಾಯಸಂದ್ರ ನಾಡಕಚೇರಿಯ ಗ್ರಾಮ ಸಹಾಯಕ 200 ರೂಪಾಯಿ ಲಂಚ ಪಡೆದಿರುವ ಘಟನೆ ವರದಿಯಾಗಿದೆ.
ತುಮಕೂರಿನ ತುರುವೇಕೆರೆ ತಾಲೂಕಿನ ತುಯಲಹಳ್ಳಿ ಗ್ರಾಮದ ದಲಿತ ಸಮುದಾಯದ 70 ವರ್ಷದ ವಯೋವೃದ್ಧೆ ನರಸಮ್ಮ ಎಂಬವರಿಂದ ಗ್ರಾಮ ಸಹಾಯಕ ಆರ್.ರಂಗಸ್ವಾಮಿ ಎಂಬಾತ ಲಂಚ ಪಡೆದಿದ್ದಾನೆ ಎಂದು ಆರೋಪಿಸಲಾಗಿದೆ.
ಅಲ್ಲದೆ, ಗ್ರಾಮ ಸಹಾಯಕ ಆರ್. ರಂಗಸ್ವಾಮಿ ವಿರುದ್ಧ ವಿದ್ಯಾರ್ಥಿಗಳಿಂದ ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರಗಳನ್ನು ಮಾಡಿಸಿಕೊಡುವುದಾಗಿ ಸಾವಿರಾರು ರೂಪಾಯಿ ಲಂಚ ಪಡೆದಿರುವ ಆರೋಪವೂ ಕೇಳಿಬಂದಿದೆ.
ಇದನ್ನು ಓದಿದ್ದೀರಾ? ಉಡುಪಿ | ಬೀದಿನಾಯಿಗೆ ಅನ್ನ ಹಾಕಿದ್ದಕ್ಕೆ ದಲಿತ ಮಹಿಳೆ ಮೇಲೆ ಹಲ್ಲೆ; ದಸಂಸ ಖಂಡನೆ
ಮೂರು ವರ್ಷದ ಹಿಂದೆ ತುಯಲಹಳ್ಳಿ ಗ್ರಾಮದ ದಲಿತ ಸಮುದಾಯದ ನಿವಾಸಿ ನರಸಮ್ಮ ಕೋಂ ಲೇಟ್ ರಂಗಯ್ಯ ಎಂಬುವವರಿಗೆ ವೃದ್ಧಾಪ್ಯ ವೇತನ ಮಾಡಿಸಿಕೊಡುವುದಾಗಿ ನಂಬಿಸಿ ಮಾಯಸಂದ್ರ ನಾಡಕಚೇರಿಯ ತುಯಲಹಳ್ಳಿ ವೃತ್ತದಲ್ಲಿ ಕರ್ತವ್ಯ ನಿರ್ವಹಿಸುವ ಗ್ರಾಮ ಸಹಾಯಕ ಆರ್.ರಂಗಸ್ವಾಮಿ ಎಂಬಾತ 1500 ರೂ.ಗೆ ಬೇಡಿಕೆ ಇಟ್ಟು ಮುಂಗಡವಾಗಿ 200 ರೂ.ಗೆ ಪಡೆದಿದ್ದಾನೆ. ಆದರೆ, ಈವರೆಗೆ ವೃದ್ಧಾಪ್ಯದ ಪಿಂಚಣಿ ಬರುವಂತೆ ಮಾಡಿಸಿಲ್ಲ ಎಂದು ಸಂತ್ರಸ್ಥೆ ಆರೋಪಿಸಿದ್ದಾರೆ.
ಈ ಬಗ್ಗೆ ಆರ್.ರಂಗಸ್ವಾಮಿಯನ್ನು ವಿಚಾರಿಸಿದರೆ ದಾಖಲಾತಿಗಳನ್ನು ಯಾವುದೋ ಜಾಗದಲ್ಲಿಟ್ಟು ಮರೆತಿದ್ದೇನೆ. ಬೇರೆ ಕೆಲಸ ಇತ್ತು. ಕಚೇರಿ ಹೋದಾಗ ನೆನಪಾಗಿಲ್ಲ, ಈಗ, ನಾಳೆ ಮಾಡಿಸಿಕೊಡುತ್ತೇನೆ ಎಂಬಿತ್ಯಾದಿ ಆರಿಕೆಯ ಉತ್ತರಗಳನ್ನು ನೀಡುತ್ತಾ ಬಂದಿದ್ದಾನೆ ಎಂದು ವೃದ್ಧೆ ಆರೋಪಿಸಿದ್ದಾರೆ.
ಇದನ್ನು ಓದಿದ್ದೀರಾ? ಜಾತಿ ದೌರ್ಜನ್ಯ | ದಲಿತ ಮಹಿಳೆಯರಿಗೆ ತೆಂಗಿನ ಚಿಪ್ಪಿನಲ್ಲಿ ಚಹಾ ಕೊಟ್ಟ ಸವರ್ಣೀಯರು
“ನನಗೆ ಈವರೆಗೆ ಹಣ ಬಂದಿಲ್ಲ. ಒಪ್ಪತ್ತಿನ ಊಟಕ್ಕೆ ಕೂಲಿ ಮಾಡಿಕೊಂಡು ತಿನ್ನುವಂತಾಗಿದೆ. ನನ್ನ ಕೂಲಿ ಮಾಡಲು ಶಕ್ತಿ ಇಲ್ಲದಿದ್ದರೂ ಅನಿವಾರ್ಯವಾಗಿದ್ದು, ಪಿಂಚಣಿ ಹಣ ಬಂದರೆ ಜೀವನ ಹೇಗೋ ಸಾಗುತ್ತದೆ ಎಂದು ನಂಬಿ ಹಣ ನೀಡಿದ್ದೆ. ವೃದ್ಧಾಪ್ಯ ವೇತನದ ಅಧಿಕೃತ ಪತ್ರವನ್ನು ಕೈಗೆ ಕೊಟ್ಟ ನಂತರ ಬಾಕಿ ಹಣ ಕೊಡುವುದಾಗಿ ಹೇಳಿದರೂ ನನಗೆ ಮಾಡಿಸಿಲ್ಲ” ಎಂದು ದೂರಿದ್ದಾರೆ.
“ತುಯಲಹಳ್ಳಿ ವೃತ್ತದ ವ್ಯಾಪ್ತಿಯ ಅನೇಕರಿಗೆ ವೃದ್ಧಾಪ್ಯ ವೇತನ, ವಿಧವಾ ವೇತನಗಳನ್ನು ಮಾಡಿಸಿಕೊಡಲು ರಂಗಸ್ವಾಮಿ ಹಣ ಪಡೆದಿದ್ದು, ಕೆಲವರಿಗೆ ಮಾಡಿಸಿಕೊಟ್ಟಿದ್ದು, ಬಹುತೇಕರಿಗೆ ಸತಾಯಿಸುತ್ತಿದ್ದಾನೆ. ನನಗೆ ನ್ಯಾಯ ಕೊಡಿಸಿ, ಹಣ ಬರುವಂತೆ ಮಾಡಿಸಿಕೊಡಿ” ಎಂದು ಸಂತ್ರಸ್ಥೆ ನರಸಮ್ಮ ಅಳಲು ತೋಡಿಕೊಂಡಿದ್ದಾರೆ.
ಪ್ರಕರಣ ಕುರಿತು ಅನೇಕರಿಗೆ ಲಂಚ ಪಡೆದುಕೊಂಡು ವಂಚನೆ ಎಸಗುತ್ತಿರುವ ಕಂದಾಯ ಇಲಾಖೆಯ ನೌಕರ ಆರೋಪಿ ರಂಗಸ್ವಾಮಿ ವಿರುದ್ಧ ಇಲಾಖೆಯ ಅಧಿಕಾರಿಗಳು, ತಹಸೀಲ್ದಾರರು ಕ್ರಮ ಜರುಗಿಸಿ, ನೌಕರಿಯಿಂದ ವಜಾಗೊಳಿಸಬೇಕು, ನೊಂದವರಿಗೆ ನ್ಯಾಯ ಕೊಡಿಸಬೇಕೆಂದು ತುಮಕೂರು ಜಿಲ್ಲಾ ಘಟಕದ ದಲಿತ ಮುಖಂಡರು ಒತ್ತಾಯಿಸಿದ್ದಾರೆ.