ಕೆಪಿಸಿಸಿ ಕಚೇರಿಯಲ್ಲಿ ‘ಇಂಡಿಯಾ’ ಮಿತ್ರಪಕ್ಷಗಳ ಮೊದಲ ಸಭೆ: ’28 ಕ್ಷೇತ್ರದಲ್ಲೂ ಅನುಕೂಲವಾಗಲಿದೆ’ ಎಂದ ಡಿಕೆಶಿ

Date:

Advertisements

ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಇಂದು ಕೆಪಿಸಿಸಿ ಕಚೇರಿಯಲ್ಲಿ ‘ಇಂಡಿಯಾ’ ಮಹಾ ಮೈತ್ರಿಕೂಟದ ಮೊದಲ ಸಮನ್ವಯ ಸಭೆಯು ನಡೆಯಿತು.

ಡಿಸಿಎಂ ಡಿ ಕೆ ಶಿವಕುಮಾರ್ ಅವರು ಇಂಡಿಯಾ (INDIA) ಮೈತ್ರಿಕೂಟದ ಅಂಗಪಕ್ಷಗಳ ಕರ್ನಾಟಕ ಘಟಕದ ಮುಖಂಡರ ಜತೆ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಸಮಾಲೋಚನೆ ನಡೆಸಿದರು.

ಸಚಿವ ಡಾ ಎಂ ಸಿ ಸುಧಾಕರ್, ಕೆಪಿಸಿಸಿ ಮಾಧ್ಯಮ ಘಟಕದ ಅಧ್ಯಕ್ಷ ರಮೇಶ್ ಬಾಬು, ಸಹ ಅಧ್ಯಕ್ಷರಾದ ಐಶ್ವರ್ಯ ಮಹದೇವ್, ಆಪ್ ರಾಜ್ಯ ಘಟಕದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು, ಪೃಥ್ವಿರೆಡ್ಡಿ, ಸಿಪಿಎಂ ಪ್ರಧಾನ ಕಾರ್ಯದರ್ಶಿ ಬಸವರಾಜು, ಎನ್ ಸಿಪಿ ರಾಜ್ಯಾಧ್ಯಕ್ಷ ಸಿ ಎಸ್ ಇನಾಂದಾರ್, ಸಿಪಿಐ ಎಂಎಲ್ ಪ್ರಧಾನ ಕಾರ್ಯದರ್ಶಿ ಕ್ಲಿಪ್ಟನ್ ಡಿ ರೊಜೆರಿಯೋ, ರಾಷ್ಟ್ರೀಯ ಜನತಾದಳ ರಾಜ್ಯಾಧ್ಯಕ್ಷ ಯಾಕೂಬ್ ಗುಲ್ವಾಡಿ, ಫಾರ್ವರ್ಡ್ ಬ್ಲಾಕ್ ರಾಜ್ಯಾಧ್ಯಕ್ಷ ಶಿವಶಂಕರ್ ಮತ್ತಿತರರು ಭಾಗವಹಿಸಿದ್ದರು.

Advertisements

ಈ ಸಮನ್ವಯ ಸಭೆಯ ಬಳಿಕ ಜಂಟಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, “ಬೆಂಗಳೂರು ನಗರದಲ್ಲಿ ‘ಇಂಡಿಯಾ’ ಜನ್ಮತಾಳಿತು. ಈ ದೇಶದಲ್ಲಿ ಬದಲಾವಣೆ ಅನಿವಾರ್ಯ ಎಂದು ಮನಗಂಡು ಒಕ್ಕೂಟವನ್ನು ರಚನೆ ಮಾಡಲಾಯಿತು. ಕರ್ನಾಟಕದಲ್ಲಿ ಈ ಬದಲಾವಣೆ ಉಂಟಾಯಿತು. ನಂತರ ಅನೇಕ ಕಡೆ ಚುನಾವಣೆ ನಡೆಯಿತು. ಸೋಲು, ಗೆಲುವು ಎರಡನ್ನು ಕಂಡಿದ್ದೇವೆ. ಲೋಕಸಭಾ ಚುನಾವಣೆಯಲ್ಲಿ 28 ಕ್ಷೇತ್ರದಲ್ಲೂ ಅನುಕೂಲವಾಗಲಿದೆ” ಎಂದು ತಿಳಿಸಿದರು.

“ಈ ದೇಶದ ಜನರು ಹೊಸ ಬದಲಾವಣೆಯನ್ನು ಬಯಸಿದ್ದಾರೆ. ಅವರ ನಿರೀಕ್ಷೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಇಂಡಿಯಾ ಬ್ಲಾಕ್‌ ಮಹಾ ಮೈತ್ರಿಕೂಟವು ಕಾರ್ಯ ನಿರ್ವಹಿಸಲಿದೆ. ರಾಜ್ಯದಲ್ಲಿ ಹಲವು ಬೇರೆ ಬೇರೆ ಪಕ್ಷಗಳಿರಬಹುದು. ಆದರೆ ನಿಲುವುಗಳು ಮಾತ್ರ ಜನಪರವಾಗಿರಬೇಕು. ಕೇಂದ್ರದ ಕೋಮುವಾದಿ ಸರ್ವಾಧಿಕಾರಿ ಧೋರಣೆಗಳನ್ನು ಖಂಡಿಸಿ ರಾಜಕೀಯ ಮೌಲ್ಯಗಳನ್ನು ಸಂರಕ್ಷಣೆ ಮಾಡುವ ಕಾರಣಕ್ಕಾಗಿ ಹಾಗೂ ಸಂವಿಧಾನದ ಆಶಯಗಳನ್ನು ರಕ್ಷಣೆ ಮಾಡುವ ಕಾರಣಕ್ಕಾಗಿ ಸಮಾನ ಮನಸ್ಕ ಪಕ್ಷಗಳು ಒಂದಾಗಿ ಈ ಲೋಕಸಭಾ ಚುನಾವಣೆಯನ್ನು ಎದುರಿಸುತ್ತಿದ್ದೇವೆ. ಕರ್ನಾಟಕದಲ್ಲಿ ಕೋಮುವಾದಿ ಪಕ್ಷಗಳನ್ನು ಧಿಕ್ಕರಿಸಿ ಜಾತ್ಯತೀತ ಮತಗಳನ್ನು ಒಟ್ಟಾಗಿಸುವುದು ನಮ್ಮ ಆದ್ಯತೆ” ಎಂದು ಡಿ ಕೆ ಶಿವಕುಮಾರ್ ತಿಳಿಸಿದರು.

“ಕರ್ನಾಟಕದಲ್ಲಿ ಸುಮಾರು 10 ಪಕ್ಷಗಳು ಒಟ್ಟಿಗೆ ಸೇರಿ ಚುನಾವಣೆಯನ್ನು ಎದುರಿಸುವ ಬಗ್ಗೆ ಚರ್ಚೆ ನಡೆಸುತ್ತಿದ್ದೇವೆ. ಮಿತ್ರ ಪಕ್ಷಗಳ ಬಲಾಬಲ ಎಷ್ಟಿದೆ ಎನ್ನುವುದು ಮುಖ್ಯವಲ್ಲ, ಬದಲಾಗಿ ಅವರ ತತ್ವ, ಸಿದ್ಧಾಂತ, ಅವರನ್ನು ಅನುಸರಿಸುವ ಜನರು ನಮಗೆ ಮುಖ್ಯ” ಎಂದು ಡಿಸಿಎಂ ತಿಳಿಸಿದರು.

“2019ರ ಲೋಕಸಭಾ ಚುನಾವಣೆ ವೇಳೆ ಕಾಂಗ್ರೆಸ್ ಮತು ದಳ ಒಟ್ಟಾಗಿ ಚುನಾವಣೆ ಎದುರಿಸಿದ್ದೆವು. ತುಮಕೂರಿನಲ್ಲಿ ಸಿಪಿಐ ಪಕ್ಷವು 17 ಸಾವಿರ ಮತಗಳಿಸಿತ್ತು. ದೇವೇಗೌಡರು 12 ಸಾವಿರ ಮತಗಳಿಂದ ಸೋಲು ಕಂಡಿದ್ದರು. ಈ ರೀತಿಯ ವಿಂಗಡಣೆ ಆಗಬಾರದು ಎನ್ನುವುದು ನಮ್ಮೆಲ್ಲರ ಉದ್ದೇಶವಾಗಿದೆ. ನಾವೆಲ್ಲಾ ಒಟ್ಟಾಗಿ ಎನ್‌ಡಿಎ ಸೋಲಿಸಬೇಕು ಎಂಬುದು ನಮ್ಮ ಏಕೈಕ ಉದ್ದೇಶ. ಈ ವಿಚಾರವಾಗಿ ನಾವು ಒಟ್ಟಾಗಿ ಚರ್ಚೆ ನಡೆಸುತ್ತಿದ್ದೇವೆ” ಎಂದು ತಿಳಿಸಿದರು.

INNA

“ಕೇಂದ್ರ ಸರ್ಕಾರ ವಿಪಕ್ಷಗಳ ನಾಯಕರ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿ ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಇದನ್ನು ನಾವೆಲ್ಲಾ ಬಲವಾಗಿ ಖಂಡಿಸುತ್ತೇವೆ. ಬೂತ್ ಮಟ್ಟದಿಂದ ನಾವೆಲ್ಲಾ ಒಟ್ಟಿಗೆ ಕೆಲಸ ಮಾಡುತ್ತೇವೆ. ಜೊತೆಗೂಡುವುದು ಆರಂಭ, ಜೊತೆಗೂಡಿ ಚರ್ಚೆ ನಡೆಸಿದರೆ ಪ್ರಗತಿ, ಜೊತೆಗೂಡಿ ಕೆಲಸ ಮಾಡಿದರೆ ಯಶಸ್ಸು ಆದ ಕಾರಣ ಚಿಕ್ಕ, ದೊಡ್ಡ ಪಕ್ಷ ಎನ್ನದೇ ಜೊತೆಗೂಡಿ ಕೆಲಸ ಮಾಡುತ್ತಿದ್ದೇವೆ. One man with courage is a majority ಎನ್ನುವ ಮಾತು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದೆ. ಅಧಿಕಾರ ಇಲ್ಲದೇ ಇರಬಹುದು. ಆದರೆ ಮಿತ್ರ ಪಕ್ಷಗಳ ಸಿದ್ಧಾಂತ, ಬದ್ದತೆ ಮುಖ್ಯವಾದುದು. ನಾವೆಲ್ಲ ಈ ಹಿಂದೆ ಅನೇಕ ಚುನಾವಣೆಗಳನ್ನು ಬೇರೆ, ಬೇರೆಯಾಗಿ ಎದುರಿಸಿದ್ದೇವೆ. ಆದರೆ ಇಂದು ದೇಶದ ಉಳಿವಿಗೆ ಒಂದಾಗಿದ್ದೇವೆ” ಎಂದು ಡಿ ಕೆ ಶಿವಕುಮಾರ್ ತಿಳಿಸಿದರು.

“ಕೋಮುವಾದಿ ಸರ್ವಾಧಿಕಾರದ ವಿರುದ್ಧ ಪ್ರಜಾಪ್ರಭುತ್ವ ಇದು ನಮ್ಮ ಪ್ರಮುಖ ಘೋಷಣೆ. ಪ್ರಜಾಪ್ರಭುತ್ವವನ್ನು ರಕ್ಷಣೆ ಮಾಡಲು ನಾವು ಹೋರಾಟ ಮಾಡುತ್ತೇವೆ. ಚುನಾವಣಾ ಬಾಂಡ್ ವಿಚಾರದಲ್ಲಿ ಬಿಜೆಪಿ ಲೆಕ್ಕವೇ ಕೊಡುತ್ತಿಲ್ಲ. ಐಟಿ ಇಲಾಖೆ ಕಾಂಗ್ರೆಸ್ ಪಕ್ಷಕ್ಕೆ ನೋಟಿಸ್ ನೀಡಿದೆ. ಕಮ್ಯೂನಿಷ್ಟ್ ಪಕ್ಷಕ್ಕೆ 11 ಕೋಟಿ ವಿಚಾರವಾಗಿ ನೋಟಿಸ್ ನೀಡಿದ್ದಾರೆ. ನಾನು ತಿನ್ನುವುದಿಲ್ಲ, ತಿನ್ನಲು ಬಿಡುವುದಿಲ್ಲ ಎಂದು ಹೇಳುತ್ತಿದ್ದ ಮೋದಿಯವರು ಇದಕ್ಕೆ ಉತ್ತರ ಕೊಡಬೇಕು. ಅಮಿತ್ ಷಾ ಅವರು ರಾಜ್ಯಕ್ಕೆ ಬಂದಿದ್ದಾರೆ. ಬರ ಪರಿಹಾರದ ವಿಚಾರವಾಗಿ ಏನನ್ನೂ ಮಾತನಾಡುತ್ತಿಲ್ಲ. ಕರ್ನಾಟಕ ಜನರ ಬಗ್ಗೆ ಅವರಿಗೆ ವಿಶ್ವಾಸ ಇಲ್ಲವೇ ಇದಕ್ಕೆಲ್ಲಾ ಅಮಿತ್ ಷಾ ಉತ್ತರ ನೀಡಬೇಕಾಗಿದೆ” ಎಂದರು.

“ನಮ್ಮ ಸಮೀಕ್ಷೆ ಪ್ರಕಾರ ಕಾಂಗ್ರೆಸ್ ಪಕ್ಷ 20ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತದೆ. ಆದರೆ ಇತರೇ ಸಮೀಕ್ಷೆಗಳ ಪ್ರಕಾರ 28 ಸ್ಥಾನಗಳನ್ನೂ ನಾವು ಗೆಲ್ಲುತ್ತೇವೆ. ಎಲ್ಲ ಮಿತ್ರ ಪಕ್ಷಗಳನ್ನು ಸೇರಿಸಿ ಸಮನ್ವಯ ಸಮಿತಿ ರಚಿಸಲಾಗುವುದು. ಚುನಾವಣೆ ಮುಗಿಯುವ ತನಕ ಮೂರು ದಿನಗಳು ಅಥವಾ ವಾರಕ್ಕೊಮ್ಮೆ ಸಭೆ ಸೇರಲಾಗುವುದು. ಎಲ್ಲ ಮಿತ್ರ ಪಕ್ಷಗಳು ಪ್ರತಿ ಕ್ಷೇತ್ರದಲ್ಲೂ ನಮಗೆ ಬೆಂಬಲ ನೀಡುತ್ತೇವೆ ಎಂದು ಲಿಖಿತವಾಗಿ ಬರೆದುಕೊಟ್ಟಿವೆ. ಈ ಸಹಕಾರಕ್ಕೆ ಮುಖ್ಯಮಂತ್ರಿಗಳು ಹಾಗೂ ಎಲ್ಲರ ಪರವಾಗಿ ಅಭಿನಂದನೆ ತಿಳಿಸುತ್ತೇನೆ” ಎಂದು ಇದೇ ವೇಳೆ ಕೆಪಿಸಿಸಿ ಅಧ್ಯಕ್ಷ ಮಿತ್ರಪಕ್ಷಗಳ ಸಹಕಾರಕ್ಕೆ ಧನ್ಯವಾದ ಸಲ್ಲಿಸಿದರು.

ಇಂಡಿಯಾ ಒಕ್ಕೂಟದಿಂದ ಕಾಂಗ್ರೆಸ್ ಪಕ್ಷಕ್ಕೆ ರಾಜ್ಯದಲ್ಲಿ ಲಾಭವಾಗುತ್ತದೆಯೇ ಎಂದು ಪತ್ರಕರ್ತರು ಪ್ರಶ್ನಿಸಿದಾಗ, “28 ಕ್ಷೇತ್ರದಲ್ಲೂ ಅನುಕೂಲವಾಗಲಿದೆ. ರಾಜಕಾರಣದಲ್ಲಿ 49 ಎಂದರೆ ಸೊನ್ನೆ, 51 ಎಂದರೆ ನೂರು ಎಂದರ್ಥ. ಧ್ರುವನಾರಾಯಣ್ ಅವರು 1 ಮತದಿಂದ ಗೆದ್ದಿದ್ದರು. ದಿನೇಶ್ ಗುಂಡೂರಾವ್ ಅವರು ಅಲ್ಪ ಅಂತರದಲ್ಲೇ ಗೆದ್ದಿದ್ದರು. ಸೌಮ್ಯಾ ರೆಡ್ಡಿ 16 ಮತಗಳಿಂದ ಸೋತರು. ಆದ ಕಾರಣ ಒಂದೊಂದು ಮತವೂ ಮುಖ್ಯ” ಎಂದು ಹೇಳಿದರು.

ಈದಿನ 2
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

ಈದಿನ ವಿಶೇಷ | ಧರ್ಮಸ್ಥಳ: ಉತ್ತರ ನೀಡಿದ ಗೃಹ ಸಚಿವರು; ಈಗಲೂ ಉಳಿದ ಹಲವು ಪ್ರಶ್ನೆಗಳು

ಸದನದಲ್ಲಿ ನಿಂತು ಷಡ್ಯಂತ್ರ ಎನ್ನುವವರಿಗೆ, ಎಸ್‌ಐಟಿ ರಚನೆಯಾಗಿದ್ದೇಕೆ? ಕಾನೂನು ಏನು ಹೇಳುತ್ತೆ?...

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಪಟ್ಟಣ ಪಂಚಾಯತ್ ಚುನಾವಣೆ: ಮೂರರಲ್ಲಿ ಕಾಂಗ್ರೆಸ್‌ಗೆ ಮೇಲುಗೈ; ಎರಡರಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಗೆ ಜಯ

ಕರ್ನಾಟಕದಲ್ಲಿ ಐದು ಪ್ರದೇಶಗಳು ತಾಲೂಕು ಸ್ಥಾನಕ್ಕೇರಿದ ಬಳಿಕ ರಚನೆಯಾದ ಪಟ್ಟಣ ಪಂಚಾಯಿತಿಗೆ...

Download Eedina App Android / iOS

X