ಬೆಂಗಳೂರಿನಲ್ಲಿ ಬಿಸಿಲಿನ ಬೇಗೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಲೇ ಇದೆ. ಮೂರು ವರ್ಷಗಳ ಬಳಿಕ ನಗರದಲ್ಲಿ ಗರಿಷ್ಠ ಮಟ್ಟವನ್ನು ತಲುಪಿದ್ದು, ಮಂಗಳವಾರ ಬರೋಬ್ಬರಿ 37.2 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. 2021ರ ಏಪ್ರಿಲ್ 1ರಲ್ಲಿ ನಗರದಲ್ಲಿ ಕೊನೆಯ ಬಾರಿಗೆ 37 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚು ತಾಪಮಾನ ದಾಖಲಾಗಿತ್ತು.
ಬೆಂಗಳೂರಿನ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ವೀಕ್ಷಣಾಲಯವು 37.2 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಿಸಿದೆ. ಕಳೆದ ಮೂರು ವರ್ಷಗಳಲ್ಲಿ ನಗರದಲ್ಲಿ ಈ ದಿನ ಅತ್ಯಂತ ಬಿಸಿಯಾದ ದಿನ ಎಂದು ಹೇಳಿದೆ.
ಮುಂದಿನ ಐದು ದಿನಗಳಲ್ಲಿ ಬೆಂಗಳೂರು ಸೇರಿದಂತೆ ಕರ್ನಾಟಕದ ಸರಾಸರಿ ತಾಪಮಾನಕ್ಕಿಂತ ಪಾದರಸದ ಮಟ್ಟವು 2-3 ಡಿಗ್ರಿಗಳಷ್ಟು ಹೆಚ್ಚಾಗುವ ಸಾಧ್ಯತೆಯಿದೆ.
ಎಲ್ ನಿನೊ ಪರಿಣಾಮವು ಸಾಮಾನ್ಯ ಮಟ್ಟಕ್ಕಿಂತ ಹೆಚ್ಚಿದೆ. ಇನ್ನೂ ಮೂರು ತಿಂಗಳುಗಳ ಕಾಲ ಅದು ದುರ್ಬಲಗೊಳ್ಳುವ ನಿರೀಕ್ಷೆಯಿದೆ. ಇದು ಹೆಚ್ಚು ಸಮತೋಲಿತ ಮಾನ್ಸೂನ್‌ಗೆ ಕಾರಣವಾಗುತ್ತದೆ ಎಂದು ಐಎಮ್‌ಡಿ ಹೇಳಿದೆ.
ಎಲ್ ನಿನೋ ಪರಿಣಾಮದಿಂದಾಗಿ ಕರ್ನಾಟಕವು ಶಾಖದ ಅಲೆಯನ್ನು ಎದುರಿಸುತ್ತಿದೆ. ಹಲವಾರು ಜಿಲ್ಲೆಗಳಲ್ಲಿ 40 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಿನ ತಾಪಮಾನವಿದೆ. ಹವಾಮಾನ ಇಲಾಖೆ ತಾಪಮಾನ ಹೆಚ್ಚಾದಂತೆ ಎಚ್ಚರಿಕೆ ನೀಡುತ್ತಿದೆ. ಮಹಾರಾಷ್ಟ್ರ ಮತ್ತು ಉತ್ತರ ಕರ್ನಾಟಕದಲ್ಲಿ ಕಡಿಮೆ ಮಳೆಯ ಜತೆಗೆ ಬಿಸಿಲಿನ ಶಾಖವೂ ಇದೆ.
ಪಾದರಸದ ಮಟ್ಟವು ಮುಂದಿನ ಕೆಲವು ದಿನಗಳಲ್ಲಿ ಸ್ವಲ್ಪಮಟ್ಟಿನ ಬದಲಾವಣೆಯೊಂದಿಗೆ 37 ಡಿಗ್ರಿಗಳಷ್ಟು ಇರುತ್ತದೆ. ಇದರ ಹೊರತಾಗಿ, ಉತ್ತರ ಕರ್ನಾಟಕದ ಕೆಲವು ಭಾಗಗಳು ಬಿಸಿಗಾಳಿಯೂ ಇರಲಿದೆ.
ಈ ಸುದ್ದಿ ಓದಿದ್ದೀರಾ? ರಾಜೀವ್ ಗಾಂಧಿ ಹತ್ಯೆ ಪ್ರಕರಣ | ಮೂವರು ಆರೋಪಿಗಳು ಶ್ರೀಲಂಕಾಗೆ ಗಡಿಪಾರು
ಭಾರತೀಯ ಹವಾಮಾನ ಇಲಾಖೆಯು ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ತಾಪಮಾನ ಮತ್ತು ಶಾಖದ ಅಲೆ ಉಂಟಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಿದೆ.
ಏಪ್ರಿಲ್-ಜೂನ್‌ನಲ್ಲಿ ವಿಶೇಷವಾಗಿ ಏಪ್ರಿಲ್‌ನಲ್ಲಿ ಕರ್ನಾಟಕದಲ್ಲಿ ಶಾಖದ ದಿನಗಳನ್ನು ಹೆಚ್ಚಿಸಿದೆ. ದಕ್ಷಿಣ ಪರ್ಯಾಯ ದ್ವೀಪವು ಹೆಚ್ಚುವರಿ ಶಾಖದ ಅಲೆಗಳನ್ನು ಅನುಭವಿಸಲಿದೆ. ಗುಜರಾತ್, ರಾಜಸ್ಥಾನ ಮತ್ತು ಒಡಿಶಾ ಸೇರಿದಂತೆ ನಾನಾ ರಾಜ್ಯಗಳು ತೀವ್ರ ತಾಪಮಾನವನ್ನು ಎದುರಿಸುವ ಸಾಧ್ಯತೆಯಿದೆ.
ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ವೀಕ್ಷಣಾಲಯವು ಗರಿಷ್ಠ 37.2 ಡಿಗ್ರಿ ಸೆಲ್ಸಿಯಸ್ ತಾಪಮಾನವನ್ನು ದಾಖಲಿಸಿದೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎ) 37.3ಡಿಗ್ರಿ ಸೆಲ್ಸಿಯಸ್ ಇತ್ತು. ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ 35.5 ಡಿಗ್ರಿ ಸೆಲ್ಸಿಯಸ್ ಮತ್ತು ಜಿಕೆವಿಕೆಯಲ್ಲಿ 36 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.
ಬೆಂಗಳೂರು ನಗರದಲ್ಲಿ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 3.2 ಡಿಗ್ರಿ ಸೆಲ್ಸಿಯಸ್ ಆಗಿದೆ. ಎಚ್‌ಎಎಲ್, ಕೆಐಎ ಮತ್ತು ಜಿಕೆವಿಕೆಯಲ್ಲಿ ಕ್ರಮವಾಗಿ 3 ಡಿಗ್ರಿ ಸೆಲ್ಸಿಯಸ್, 2.9 ಡಿಗ್ರಿ ಸೆಲ್ಸಿಯಸ್ ಮತ್ತು 2 ಡಿಗ್ರಿ ಸೆಲ್ಸಿಯಸ್ ಸಾಮಾನ್ಯಕ್ಕಿಂತ ಹೆಚ್ಚಿತ್ತು.
ಏಪ್ರಿಲ್‌ನಲ್ಲಿ ಸರಾಸರಿ ಗರಿಷ್ಠ ತಾಪಮಾನವು ಬೆಂಗಳೂರು ನಗರಕ್ಕೆ 34.1 ಡಿಗ್ರಿ ಸೆಲ್ಸಿಯಸ್ ಮತ್ತು ಎಚ್‌ಎಎಲ್ ವಿಮಾನ ನಿಲ್ದಾಣಕ್ಕೆ 33.8 ಡಿಗ್ರಿ ಸೆಲ್ಸಿಯಸ್ ಆಗಿದೆ.
2016ರ ಏಪ್ರಿಲ್ 25 ರಂದು ದಾಖಲಾದ ಅತ್ಯಧಿಕ ಗರಿಷ್ಠ ತಾಪಮಾನವು 39.2 ಡಿಗ್ರಿ ಸೆಲ್ಸಿಯಸ್ ಆಗಿತ್ತು. ಗರಿಷ್ಠ ತಾಪಮಾನವು ಈಗಾಗಲೇ ನಗರದ ಕೆಲವು ಭಾಗಗಳನ್ನು ನೀರಿನ ಬಿಕ್ಕಟ್ಟಿಗೆ ತಳ್ಳಿದೆ. ಕಳೆದ ಐದು ವರ್ಷಗಳಲ್ಲಿ ನಗರದಲ್ಲಿ ಮಾರ್ಚ್ 30ರಂದು 36.6 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು.
ಮುಂದಿನ ಐದು ದಿನಗಳಲ್ಲಿ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ತಾಪಮಾನವು 2-3 ಡಿಗ್ರಿ ಸೆಲ್ಸಿಯಸ್‌ನಿಂದ ಕ್ರಮೇಣ ಏರಿಕೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮಳೆಯಾಗುವ ಮುನ್ಸೂಚನೆ ಇಲ್ಲ.