ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್ ಪೂಜಾರಿ ಬುಧವಾರ ನಾಮಪತ್ರ ಸಲ್ಲಿಸಿದರು.
ಬುಧವಾರ ಬೆಳಗ್ಗೆ ಕುದ್ರೋಳಿ ಗೋಕರ್ಣನಾಥ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ಮೆರವಣಿಗೆಯಲ್ಲಿ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು, ಅಭಿಮಾನಿಗಳೊಂದಿಗೆ ಪದ್ಮರಾಜ್ ಅವರು ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದರು.
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಮುಲ್ಲೈ ಮುಗಿಲನ್ ಅವರು ನಾಮಪತ್ರ ಸ್ವೀಕರಿಸಿದರು.
ನಾಮಪತ್ರ ಸಲ್ಲಿಸಿದ ಬಳಿಕ ಪದ್ಮರಾಜ್ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದು, “ಕಳೆದ 33 ವರ್ಷಗಳಿಂದ ಈ ಜಿಲ್ಲೆಯ ಮೇಲೆ ಕೋಮು ಸೂಕ್ಷ್ಮ ಪ್ರದೇಶವೆಂಬ ಕಪ್ಪುಚುಕ್ಕೆ ಬಿದ್ದಿದೆ. ವಿಶಿಷ್ಟ ಸಂಸ್ಕೃತಿಯ ಜಿಲ್ಲೆಯಲ್ಲಿ ಬಿಜೆಪಿ ಆಡಳಿತದಲ್ಲಿ ಕೋಮು ಸಾಮರಸ್ಯ ಕದಡಿದ್ದು ದೊಡ್ಡ ಹಿನ್ನಡೆಯಾಗಿದೆ. ಅದನ್ನು ನಿವಾರಿಸುವುದೇ ನಮ್ಮ ಉದ್ದೇಶ. ಜಾತಿ ಧರ್ಮ ಮೀರಿದ ಬಾಂಧವ್ಯ ಮಾಯವಾಗಿದೆ. ಇದರಿಂದಾಗಿ ಈ ಭಾಗದಲ್ಲಿ ಹೂಡಿಕೆ ಆಗುತ್ತಿಲ್ಲ. ಜನರು ಇದರ ಬಗ್ಗೆ ಅರಿವು ಮೂಡಿಸಿಕೊಂಡಿದ್ದು, ಬದಲಾವಣೆ ಬಯಸಿದ್ದಾರೆ. ನಿರುದ್ಯೋಗ ಹೆಚ್ಚಳದಿಂದಾಗಿ ಜನರು ಕಾಂಗ್ರೆಸಿನತ್ತ ವಾಲಿದ್ದು, ಮತವಾಗಿ ಪರಿವರ್ತನೆಯಾಗಲಿದೆ” ಎಂದು ಅಭಿಪ್ರಾಯಪಟ್ಟರು.
“ರಾಜ್ಯ ಕಾಂಗ್ರೆಸ್ ನೀಡಿರುವ ಐದು ಗ್ಯಾರಂಟಿ ಯೋಜನೆಗಳಿಂದ ಗೃಹಿಣಿಯ ಮುಖದಲ್ಲಿ ನಗು ಮೂಡಿಸಿದೆ. ಬಡ ಕುಟುಂಬಗಳಿಗೆ ಶಕ್ತಿ ನೀಡಿದೆ. ನಾವು ಯಾರ ಬಗ್ಗೆಯೂ ದ್ವೇಷ ಮಾಡುವುದಿಲ್ಲ. ಟೀಕೆಯನ್ನೂ ಮಾಡುವುದಿಲ್ಲ. ವಾಸ್ತವ ಏನಿದೆಯೋ ಅದನ್ನು ಜನರ ಮುಂದಿಡುತ್ತೇನೆ. ಜಾತಿ ರಾಜಕಾರಣ ಮಾಡುವುದಿಲ್ಲ. ಜನರ ಸ್ಪಂದನೆ ಉತ್ತಮವಾಗಿದ್ದು, ಈ ಬಾರಿ ನೂರಕ್ಕೆ ನೂರು ಕಾಂಗ್ರೆಸ್ ಗೆಲ್ಲಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ | 6 ಮಂದಿ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ
ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ವಿಧಾನ ಪರಿಷತ್ ಸದಸ್ಯರಾದ ಬಿ ಕೆ ಹರಿಪ್ರಸಾದ್, ಡಾ ಮಂಜುನಾಥ್ ಭಂಡಾರಿ, ಹರೀಶ್ ಕುಮಾರ್, ಮಾಜಿ ಸಚಿವ ಬಿ ರಮಾನಾಥ ರೈ, ಮಾಜಿ ಶಾಸಕ ಜೆ ಆರ್ ಲೋಬೊ, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ಮಾಜಿ ಸಚಿವ ಅಭಯಚಂದ್ರ ಜೈನ್ ಸೇರಿದಂತೆ ಇತರರು ಇದ್ದರು.
