ಬಿಜೆಪಿಯು ಚುನಾವಣಾ ಪ್ರಚಾರಕ್ಕಾಗಿ ಮಾಡಿರುವ ಜಾಹೀರಾತೊಂದು ಮಹಿಳಾ ವಿರೋಧಿಯಾಗಿದೆ ಎಂದು ಖಂಡಿಸಿರುವ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)ದ ಮುಖಂಡರು ಮುಖ್ಯ ಚುನಾವಣಾ ಆಯುಕ್ತರಿಗೆ ದೂರು ನೀಡಿದೆ.
ಈ ವೇಳೆ ಜಿಲ್ಲಾ ಕಾರ್ಯದರ್ಶಿ ಕೆ. ನೀಲಾ ಮಾತನಾಡಿ, “ಬಿಜೆಪಿಯು ಚುನಾವಣಾ ಪ್ರಚಾರಕ್ಕಾಗಿ ಜಾಹೀರಾತೊಂದನ್ನು ಮಾಡಿದೆ. ಅದು ಮಹಿಳಾ ವಿರೋಧಿಯಾಗಿದೆ. ವಧು ವೇಷದ ಮಹಿಳೆಯನ್ನು ಸುತ್ತುವರಿದು ವರನಾಗುವ ಸ್ಪರ್ಧೆ ನಡೆಯುವಂತಹ ಕಿತ್ತಾಡುವ ದೃಶ್ಯಗಳು ಇದ್ದು ಮತ್ತು ಕೊನೆಯಲ್ಲಿ ಮೋದಿಯವರನ್ನು ತೋರಿಸಲಾಗಿದೆ. ಬಿಜೆಪಿಯು ಚುನಾವಣೆಯಲ್ಲಿ ಗೆಲ್ಲಲು ಮಹಿಳೆಯರಿಗೆ ಅಪಮಾನ ಮಾಡುವಂತಹ ಜಾಹಿರಾತು ಬಳಸಿರುವುದು ಆ ಪಕ್ಷದ ಮಹಿಳಾ ವಿರೋಧಿ ನಡೆಯನ್ನು ಜಗಜ್ಜಾಹಿರುಗೊಳಿಸಿದಂತಾಗಿದೆ” ಎಂದರು.
ವ್ಯಕ್ತಿಯ ಘನತೆಯನ್ನು ಎತ್ತಿ ಹಿಡಿಯುವ ಸಂವಿಧಾನದ ಆಶಯವನ್ನು ಉಲ್ಲಂಘಿಸಿದೆ ಬಿಜೆಪಿ, ಸಿಪಿಐಎಂ ಪಕ್ಷ ಕಲಬುರಗಿ ಜಿಲ್ಲಾ ಸಮಿತಿಯು ಇದನ್ನು ತೀವ್ರವಾಗಿ ಖಂಡಿಸುತ್ತದೆ. ಮಾತ್ರವಲ್ಲ ಈ ಜಾಹೀರಾತನ್ನು ಕೂಡಲೇ ರದ್ದುಗೊಳಿಸಿ ದೇಶದ ಜನತೆಯಲ್ಲಿ ಬಿಜೆಪಿಯು ಕ್ಷಮೆ ಕೇಳಬೇಕೆಂದು ಆಗ್ರಹಿಸಿದರು.
ಚುನಾವಣಾ ಕಮಿಷನ್ ಕೂಡಲೇ ದೇಶದ ಮಹಿಳೆಯರನ್ನು ಹೀಗೆ ಅಪಮಾನಿಗೊಳಿಸಿದ ಮತ್ತು ಮಹಿಳೆಯರ ಆಯ್ಕೆಯ ಹಕ್ಕಿನ ಧಾಳಿ ಮಾಡಿದ್ದರಿಂದ ಬಿಜೆಪಿಯ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಮದುವೆಯು ಸಂಪೂರ್ಣ ವೈಯಕ್ತಿಕವಾದ ಸಾಂಸ್ಕೃತಿಕ ವಿಷಯವಾಗಿದೆ. ಆದರೆ, ಬಿಜೆಪಿಯು ಒಬ್ಬ ವಧುವಿಗೋಸ್ಕರ ಎಲ್ಲರೂ ಕಿತ್ತಾಡುವ ದೃಶ್ಯವನ್ನು ವರ್ಣರಂಜತವಾಗಿ ತೋರಿಸಿ ಮಹಿಳೆಯ ಅಸ್ತಿತ್ವ, ಅಸ್ಮಿತೆಗೆ ಧಕ್ಕೆ ಉಂಟು ಮಾಡಿದೆ. ಇಂತಹ ಮಹಿಳಾ ವಿರೋಧಿ ಮತ್ತು ಸಂವಿಧಾನದ ಮೌಲ್ಯದ ವಿರೋಧಿ ಜಾಹೀರಾತು ತರುವ ಮೂಲಕ ಮನುಸ್ಮೃತಿಯ ಕಣ್ಣೋಟವನ್ನು ಜನಮಾನಸದಲ್ಲಿ ತುಂಬಲು ಹೊರಟಿದೆ ಎಂದರು.
ಇಂತಹ ದೃಶ್ಯಗಳ ಮೂಲಕ ಮಹಿಳೆಯರ ಘನತೆಗೆ ದಕ್ಕೆ ತಂದಿರುವುದಲ್ಲದೆ, ಈ ಜಾಹೀರಾತು ವೀಕ್ಷಕರ ಮನದಲ್ಲಿ ಮನುಸ್ಮೃತಿಯ ಮೌಲ್ಯಗಳನ್ನು ತುಂಬಿ ಸಂವಿಧಾನದ ದೃಢ ನಿಲುವಾದ ವರ್ಣ-ವರ್ಣ-ಲಿಂಗ-ಜಾತಿಯ ತಾರತಮ್ಯವನ್ನು ಅಳಿಸಿ ಹಾಕುವ ಸಮಾನತೆಯ ಸಮಾಜವಾದಿ ನಾಡು ಕಟ್ಟುವ ಆಶಯವನ್ನು ಮಣ್ಣುಪಾಲು ಮಾಡಲು ಹೊರಟಿದೆ. ಇದು ಭಾರತದ ಪ್ರಜಾಪ್ರಭುತ್ವ ಮೌಲ್ಯಗಳನ್ನು ಹತ್ತಿಕ್ಕುವ ಹುನ್ನಾರವಾಗಿದೆ ಎಂದರು.
ಈ ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಬಿಜೆಪಿಯು ಅತ್ಯಂತ ಕೀಳು ಮಟ್ಟದ ಜಾಹೀರಾತುಗಳನ್ನು ಮಾಡುವ, ಸುಳ್ಳನ್ನು ಪ್ರಚಾರಗೊಳಿಸುವ, ಜನರನ್ನು ಭಾವೋದ್ರೇಕಗೊಳಿಸುವ, ಮತೀಯ ಪ್ರಚೋದನಾತ್ಮಕ ಸಂಗತಿಗಳನ್ನು ಮುನ್ನೆಲೆಗೆ ತರುವ ಮುಂತಾದ ಅಸಂವಿಧಾನಿಕ ಕೃತ್ಯಕ್ಕೆ ಇಳಿದಿದೆ. ಹೀಗೆ ಮಾಡುವ ಮೂಲಕ ತಾನೊಂದು ಮಹಿಳಾ ವಿರೋಧಿ, ಜನವಿರೋಧಿ ಪಕ್ಷ ಎಂಬುದನ್ನು ಜಾಹೀರುಗೊಳಿಸುತ್ತಿದೆ. ದೇಶದ ಜನತೆಯು ಇದನ್ನು ಅರಿಯಬೇಕಿದೆ ಎಂದು ಸಿಪಿಐಎಂ ಪಕ್ಷವು ವಿನಂತಿಸಿದೆ.