ಕಳೆದ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಮತ್ತು ಎಚ್.ಡಿ ಕುಮಾರಸ್ವಾಮಿ ನಡುವಿನ ಜಿದ್ದಿನ ಕಣವಾಗಿದ್ದ ಮಂಡ್ಯ, ಈ ಬಾರಿ ಇದೇ ಇಬ್ಬರ ದೋಸ್ತಿಗೂ ಸಾಕ್ಷಿಯಾಗಿದೆ. ಬಿಜೆಪಿ-ಜೆಡಿಎಸ್ ಮೈತ್ರಿಯಿಂದಾಗಿ ಮಂಡ್ಯ ಕ್ಷೇತ್ರವು ಜೆಡಿಎಸ್ ಪಾಲಾಗಿದ್ದು, ಎಚ್.ಡಿ ಕುಮಾರಸ್ವಾಮಿ ಕಣಕ್ಕಿಳಿದಿದ್ದಾರೆ. ಬಿಜೆಪಿ ಟಿಕೆಟ್ ಬಯಸಿದ್ದ ಸಂಸದೆ ಸುಮಲತಾ ಚುನಾವಣಾ ಕಣದಿಂದ ಹಿಂದೆ ಸರಿದಿದ್ದಾರೆ. ಈಗ ಮಂಡ್ಯ ಸೊಸೆ, ಹಾಸನದ ಮಗನಿಗೆ ಬೆಂಬಲಿಸಲು ಮುಂದಾಗಿದ್ದಾರೆ. ಅವಕಾಶವಾದಿ ರಾಜಕಾರಣಕ್ಕೆ ಈ ಇಬ್ಬರೂ ಮತ್ತೆ ಉದಾಹರಣೆಯಾಗಿ ಮಂಡ್ಯ ಜನರೆದುರು ಕಾಣಿಸಿಕೊಂಡಿದ್ದಾರೆ.
2019ರ ಚುನಾವಣೆಯಲ್ಲಿ ಸುಮಲತಾ ಕಾಂಗ್ರೆಸ್ ಟಿಕೆಟ್ ಬಯಸಿದ್ದರು. ಅವರ ದುರದೃಷ್ಟಕ್ಕೆ ಆಗ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಇತ್ತು. ಆಗಲೂ ಮಂಡ್ಯ ಜೆಡಿಎಸ್ ಪಾಲಾಗಿತ್ತು. ಹೀಗಾಗಿ, ಸುಮಲತಾ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಮೈತ್ರಿ ಅಭ್ಯರ್ಥಿಯಾಗಿ ಎಚ್.ಡಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಕಣಕ್ಕಿಳಿದಿದ್ದರು. ಆಗ, ಸುಮಲತಾ ವಿರುದ್ಧ ಮುಗಿಬಿದ್ದಿದ್ದ ಜೆಡಿಎಸ್ ನಾಯಕರು, ದಿನಕ್ಕೊಂದು ನಿಂದನಾತ್ಮಕ ಹೇಳಿಕೆ ನೀಡಿದ್ದರು.
ಸುಮಲತಾರನ್ನು ನಿಂದಿಸಿದ್ದ ಮಾಜಿ ಸಚಿವ ಎಚ್.ಡಿ ರೇವಣ್ಣ, ‘ಗಂಡ ಸತ್ತು ತಿಂಗಳಾಗಿಲ್ಲ. ಇವರಿಗೇಕೆ ರಾಜಕೀಯ’ ಎಂದಿದ್ದರು. ಎಚ್.ಡಿ.ಕುಮಾರಸ್ವಾಮಿ ಅಂಬರೀಶ್ ಅವರ ಅಂತ್ಯಕ್ರಿಯೆ ಬಗ್ಗೆ ವ್ಯಂಗ್ಯದ ಮಾತುಗಳನ್ನಾಡಿದ್ದರು. ಇನ್ನು, ಮಾಜಿ ಸಂಸದ ಶಿವರಾಮೇಗೌಡ, ‘ಆಕೆ ಗೌಡ್ತಿಯಲ್ಲ, ನಾಯ್ಡು. ಮಂಡ್ಯವನ್ನು ನಾಯ್ಡುಮಯ ಮಾಡಲು ಬಿಡಬಾರದು’ ಎಂದಿದ್ದರು. ಅಲ್ಲದೆ, ಅನೇಕ ಜೆಡಿಎಸ್‌ನ ಸ್ಥಳೀಯ ಮುಖಂಡರು ಕೂಡ ಸುಮಲತಾ ಅವರನ್ನು ಅವಾಚ್ಯವಾಗಿ ನಿಂದಿಸಿದ್ದರು. ಇನ್ನು, ಸುಮಲತಾ ಬೆನ್ನಿಗೆ ನಿಂತು ಪ್ರಚಾರ ಮಾಡಿದ್ದ ನಟ ದರ್ಶನ್-ಯಶ್ ವಿರುದ್ಧವೂ ಜೆಡಿಎಸ್ ನಾಯಕರು ಅವಹೇಳನ ಮಾಡಿದ್ದರು.
ಜೆಡಿಎಸ್ ನಾಯಕರು ಇಷ್ಟೆಲ್ಲ ನಿಂದಿಸಿದರೂ, ಮೌನವಾಗಿದ್ದ ಸುಮಲತಾ ಸ್ವಾಭಿಮಾನದ ದಾಳ ಉರುಳಿಸಿದ್ದರು. ಜೆಡಿಎಸ್ ನಾಯಕರ ಹರುಕು ಬಾಯಿಯ ವಾಚಾಳಿತನ ಮತ್ತು ಸ್ವಾಭಿಮಾನದ ದಾಳ ಸುಮಲತಾಗೆ ಗೆಲುವು ತಂದುಕೊಟ್ಟಿತ್ತು.
ತಮ್ಮ ವಿರುದ್ಧ ಅಷ್ಟೆಲ್ಲ ನಾಲಿಗೆ ಹರಿಬಿಟ್ಟಿದ್ದ ಜೆಡಿಎಸ್‌ಗೆ ಈಗ ಸುಮಲತಾ ಬೆಂಬಲ ನೀಡುತ್ತಿದ್ದಾರೆ. ಇತ್ತೀಚೆಗೆ, ಸುಮಲತಾ ಅವರನ್ನು ಭೇಟಿಯಾಗಿದ್ದ ಕುಮಾರಸ್ವಾಮಿ ತಮ್ಮನ್ನು ಬೆಂಬಲಿಸುವಂತೆ ಮನವಿ ಮಾಡಿದ್ದಾರೆ. ಇನ್ನು, ಏಪ್ರಿಲ್ 3ರಂದು ಬೆಂಬಲಿಗರ ಸಭೆ ನಡೆಸಿದ ಸುಮಲತಾ, ತಾವು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಬಿಜೆಪಿ ಸೇರುತ್ತೇನೆ ಎಂದಿದ್ದಾರೆ.
ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಇದ್ದು, ಮಂಡ್ಯದಲ್ಲಿ ಜೆಡಿಎಸ್‌ಗೆ ಬಿಜೆಪಿ ಬೆಂಬಲ ನೀಡಲಿದೆ. ಸುಮಲತಾ ಕೂಡ ಜೆಡಿಎಸ್‌ಗೆ ಬೆಂಬಲ ನೀಡಲೇಬೇಕಾದ ಅನಿವಾರ್ಯತೆ ಇದೆ. ಅವರು ಬೆಂಬಲ ನೀಡದೆ, ಸದ್ಯದ ಚುನಾವಣೆಯಿಂದ ಅಂತರ ಕಾಯ್ದುಕೊಳ್ಳುವ ಅವಕಾಶವೂ ಇದೆ. ಏನೇ ಆದರೂ, ಜೆಡಿಎಸ್‌ಗಾಗಿ ಸ್ಪರ್ಧೆಯಿಂದ ಹಿಂದೆ ಸರಿದರು ಎಂಬುದಂತೂ ಸ್ಪಷ್ಟ.
ಇದೆಲ್ಲದರ ನಡುವೆ, ಸ್ವಾಭಿಮಾನ ಎಂಬ ಟ್ಯಾಗ್ ಹಿಡಿದು ಕಳೆದ ಚುನಾವಣೆಯಲ್ಲಿ ಮತ ನೀಡಿದ್ದ ಮಂಡ್ಯ ಜನರು ಸುಮಲತಾ ವಿರುದ್ಧ ಅಸಮಾಧಾನಗೊಂಡಿದ್ದಂತೂ ನಿಜ. ಈ ಚುನಾವಣೆಯಲ್ಲಿ ಅವರು ಬಿಜೆಪಿಯಿಂದ ಸ್ಪರ್ಧಿಸಿದರೂ ಸೋಲುತ್ತಾರೆ ಎಂಬುದು ಬಹುತೇಕ ಖಚಿತವಾಗಿತ್ತು. ಸದ್ಯ, ತಮ್ಮ ರಾಜಕೀಯ ಲಾಭದೊಂದಿಗೆ ಅವರು ಚುನಾವಣೆಯಿಂದ ಹಿಂದೆ ಉಳಿದಿದ್ದಾರೆ. ಸುಮಲತಾ ಅವರಿಗೆ ಲೋಕಸಭಾ ಚುನಾವಣೆಯ ನಂತರ ಬಿಜೆಪಿ ಯಾವುದಾದರೊಂದು ಸ್ಥಾನ ನೀಡಲಿದೆ ಎಂಬ ಮಾತುಗಳೂ ಕೇಳಿಬರುತ್ತಿವೆ.
ಏನೇ ಆಗಲಿ, 2019ರ ಚುನಾವಣೆಯಲ್ಲಿ ಸುಮಲತಾ ಗೆಲುವಿಗೆ ಕಾಂಗ್ರೆಸ್ ಕೂಡ ತೆರೆಮರೆಯಲ್ಲಿ ಸಹಕಾರ ನೀಡಿತ್ತು ಎಂಬುದು ಗೌಪ್ಯವಾಗಿ ಉಳಿದಿಲ್ಲ. ಹೀಗಾಗಿಯೇ, ಸುಮಲತಾ ತಮ್ಮನ್ನು ನಿಂದಿಸಿದ್ದ ಕುಮಾರಸ್ವಾಮಿ ಅವರಿಗೇ ಬೆಂಬಲ ನೀಡುವುದು ಜಿಲ್ಲೆಯ ಕೆಲ ಕಾಂಗ್ರೆಸ್ ಮುಖಂಡರಿಗೆ ಅಸಮಾಧಾನ ತಂದೊಡ್ಡಿದೆ.
‘ಜಿಲ್ಲೆಯಲ್ಲಿ ಕಾಂಗ್ರೆಸ್ ನಾಯಕರು ಸಹಕರಿಸದಿದ್ದರೆ, ಸುಮಲತಾ ಸಂಸತ್ ಭವನಕ್ಕೆ ಕಾಲಿಡುವುದು ಕನಸಾಗುತ್ತಿತ್ತು. ರಾಜಕೀಯ ಮೆಟ್ಟಿಲೇರಲು ಸಹಕರಿಸಿದ ಕಾಂಗ್ರೆಸ್ ಏಣಿಯನ್ನೇ ಒದ್ದು ಬಿಜೆಪಿ ಸೇರಿ, ಜೆಡಿಎಸ್‌ಗೆ ಬೆಂಬಲ ನೀಡುವುದು ಅವರ ಅವಕಾಶವಾದಿ ಧೋರಣೆಯನ್ನು ಪ್ರತಿಬಿಂಬಿಸುತ್ತದೆ. ಕರ್ನಾಟಕಕ್ಕೆ ಕೇಂದ್ರ ಸರ್ಕಾರ ತೆರಿಗೆ ಹಂಚಿಕೆಯಲ್ಲಿ ವಂಚಿಸಿದೆ, ಬರಗಾಲ ಎದುರಾಗಿದ್ದರೂ ಕೇಂದ್ರ ಪರಿಹಾರ ನೀಡಿಲ್ಲ. ಇಂತಹ ವಿಚಾರಗಳಲ್ಲಿ ಮೋದಿ ಅವರನ್ನು ಪ್ರಶ್ನಿಸದೆ, ಬಿಜೆಪಿ ಸೇರುತ್ತಿರುವ ಸುಮಲತಾ ಸ್ವಾಭಿಮಾನಿಯಾಗಲು ಸಾಧ್ಯವೇ?’ ಎಂದು ಮಂಡ್ಯದ ಕಾಂಗ್ರೆಸ್ ಮುಖಂಡರೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುಮಲತಾ ಅವರಿಗೆ ಕಿಂಚಿತ್ತಾದರೂ ಸ್ವಾಭಿಮಾನ ಇದ್ದರೆ, ತಮಗೆ ತುಚ್ಛವಾಗಿ ನಿಂದಿಸಿದ್ದ, ಅವಮಾನ ಮಾಡಿದ್ದ ಜೆಡಿಎಸ್‌ಗೆ ಬೆಂಬಲ ನೀಡುತ್ತಿರಲಿಲ್ಲ. ಅವರ ವಿರುದ್ಧ ನಿಲ್ಲಬೇಕಿತ್ತು. ಆದರೆ, ತಮಗಾದ ಅವಮಾನವನ್ನು ಮರೆತು, ಜೆಡಿಎಸ್ ಜೊತೆ ನಿಲ್ಲುವುದು ಅವರ ಸ್ವಾಭಿಮಾನ ಏನೆಂಬುದನ್ನು ತೋರಿಸುತ್ತದೆ ಎಂದು ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.