ಪ್ಯಾಲಿಸ್ತೀನ್‌ನ ಗಾಜಾ ಪಟ್ಟಿಯಲ್ಲಿ ಹಾಮಸ್ ಹೋರಾಟಗಾರರೊಂದಿಗೆ ಇಸ್ರೇಲ್ ನಡೆಸುತ್ತಿರುವ ಯುದ್ಧವನ್ನು ತಕ್ಷಣ ನಿಲ್ಲಿಸಿ ಕದನ ವಿರಾಮವನ್ನು ಘೋಷಿಸುವಂತೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರಿಗೆ ಆಗ್ರಹಿಸಿದ್ದಾರೆ.
ಗಾಜಾದ ಮೇಲೆ ನಡೆಸಿದ ವಾಯುದಾಳಿಯಿಂದ ಆಹಾರ ಮತ್ತು ಮಾನವೀಯ ನೆರವು ಒದಗಿಸುತ್ತಿದ್ದ ಅಮೆರಿಕ ಮತ್ತು ಕೆನಡಾದ ನಾಗರಿಕರು ಮೃತಪಟ್ಟ ನಂತರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಸ್ರೇಲ್ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು.
ಗಾಜಾದಲ್ಲಿ ಇಸ್ರೇಲ್ ನಡೆಸುತ್ತಿರುವ ಮಾರಾಣಾಂತಿಕ ಆಕ್ರಮಣದ ಬಗ್ಗೆ ಅಮೆರಿಕ ಕಳವಳ ವ್ಯಕ್ತಪಡಿಸಿದೆ. ಕಳೆದ 7 ತಿಂಗಳಿನಿಂದ ನಡೆದ ಯುದ್ಧದಲ್ಲಿ 33 ಸಾವಿರಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ತಕ್ಷಣವೇ ಯುದ್ಧ ವಿರಾಮ ಘೋಷಿಸಿ ಎರಡು ಕಡೆಯಲ್ಲಿರುವ ಒತ್ತೆಯಾಳುಗಳನ್ನು ಬಿಡುಗಡೆಗೆ ತ್ವರಿತವಾಗಿ ಕ್ರಮವಹಿಸಬೇಕೆಂದು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಎಂದೋ ಕೈತಪ್ಪಿದ ‘ಕಚ್ಚತೀವು’ ಕಥೆ ಇರಲಿ; ಚೀನಾ ಅತಿಕ್ರಮಣ ಬಗ್ಗೆ ಮೋದಿ ಮಾತಾಡಲಿ
ಬೆಂಜಮಿನ್ ನೆತನ್ಯಾಹು ಅವರೊಂದಿಗೆ 30 ನಿಮಿಷಗಳ ಕಾಲ ನಡೆದ ದೂರವಾಣಿ ಮೂಲಕ ಸಂಭಾಷಣೆ ನಡೆಸಿರುವ ಬೈಡನ್, ಪ್ಯಾಲಿಸ್ತೇನ್ ನಾಗರಿಕರು ಹಾಗೂ ವಿದೇಶಿ ನೆರವು ಕಾರ್ಯಕರ್ತರ ರಕ್ಷಣೆ ತಕ್ಷಣ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಅಲ್ಲದೆ ಹಾಮಸ್ ಹೋರಾಟಗಾರರ ವಿರುದ್ಧ ನಡೆಯುತ್ತಿರುವ ಯುದ್ಧಕ್ಕೆ ಇಸ್ರೇಲ್‌ಗೆ ಬೆಂಬಲ ಮುಂದುವರೆಸುವ ಬಗ್ಗೆ ಕೂಡ ಪುನರ್ ಪರಿಶೀಲಿಸುವುದಾಗಿ ಅಮೆರಿಕ ಅಧ್ಯಕ್ಷರು ತಿಳಿಸಿದ್ದಾರೆ ಎನ್ನಲಾಗಿದೆ.
ಕೆಲವು ದಿನಗಳ ಹಿಂದಷ್ಟೆ ಗಾಜಾದಲ್ಲಿ ಇಸ್ರೇಲ್ ನಡೆಸಿದ ವಾಯು ದಾಳಿಯಲ್ಲಿ ಮಾನವೀಯ ನೆರವು ಒದಗಿಸುತ್ತಿದ್ದ ಕಾರ್ಯಕರ್ತರು ಮೃತಪಟ್ಟ ನಂತರ ಆಸ್ಟ್ರೇಲಿಯಾ, ಕೆನಡಾ, ಅಮೆರಿಕಾ, ಪೋಲಾಂಡ್ ಹಾಗೂ ಇಂಗ್ಲೆಂಡ್ ಘಟನೆಯ ಬಗ್ಗೆ ಸ್ವತಂತ್ರ ತನಿಖೆ ನಡೆಸಬೇಕೆಂದು ಆಗ್ರಹಿಸಿವೆ.
