ತುಮಕೂರು | ಮೋದಿ ಪ್ರಧಾನಿಯಾದರೆ ಸಂವಿಧಾನಕ್ಕೆ ಅಪಾಯ: ಗೃಹ ಸಚಿವ ಪರಮೇಶ್ವರ್

Date:

Advertisements

ಸಾಂವಿಧಾನಿಕ ಸಂಸ್ಥೆಗಳಾದ ಐಟಿ, ಇಡಿ, ಸಿಬಿಐ ಮೂಲಕ ವಿರೋಧ ಪಕ್ಷಗಳನ್ನು ದಮನ ಮಾಡಿ, ಸರ್ವಾಧಿಕಾರಿಗಳಂತೆ ವರ್ತಿಸುತ್ತಿರುವ ಬಿಜೆಪಿಯನ್ನು ಸೋಲಿಸುವ ಮೂಲಕ ಅಪಾಯದಲ್ಲಿರುವ ಪ್ರಜಾಪ್ರಭುತ್ವವನ್ನು ರಕ್ಷಿಸಬೇಕಾಗಿದೆ ಎಂದು ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ.ಪರಮೇಶ್ವರ್  ಹೇಳಿದರು.

ತುಮಕೂರು ನಗರದ ಟೌನ್‌ಹಾಲ್‌ನಲ್ಲಿ ಇಂಡಿಯಾ ಮೈತ್ರಿಕೂಟದ ಅಭ್ಯರ್ಥಿ ಕಾಂಗ್ರೆಸ್‌ನ ಎಸ್.ಪಿ.ಮುದ್ದಹನುಮೇಗೌಡರ ನಾಮಪತ್ರ ಸಲ್ಲಿಸುವ ವೇಳೆ ಸೇರಿದ ಜನಸ್ತೋಮವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಪದೇ ಪದೆ ಸಂವಿಧಾನ ಬದಲಾವಣೆಯ ವಿಚಾರಗಳನ್ನು ಬಿಜೆಪಿ ಸಂಸದರು ಮಾತನಾಡುತ್ತಿದ್ದರೂ ಮೌನ ವಹಿಸಿ, ಅವರ ಮಾತುಗಳಿಗೆ ಕುಮ್ಮಕ್ಕು ನೀಡುತ್ತಿರುವ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾದರೆ, ಸಂವಿಧಾನಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ. ಹಾಗಾಗಿ ಪ್ರಪಂಚದಲ್ಲಿಯೇ ಅತ್ಯಂತ ಶ್ರೇಷ್ಠವೆನಿಸಿಕೊಂಡಿರುವ ಭಾರತದ ಸಂವಿಧಾನವನ್ನು ಉಳಿಸಿಕೊಳ್ಳಲು ನಾವೆಲ್ಲರೂ ಬಿಜೆಪಿಯನ್ನು ಸೋಲಿಸುವುದು ಅನಿವಾರ್ಯವಾಗಿದೆ ಎಂದರು.

Advertisements

ಇದು ಸತ್ಯ ಮತ್ತು ಅಸತ್ಯದ ನಡುವೆ ನಡೆಯುತ್ತಿರುವ ಹೋರಾಟವಾಗಿದೆ. ಅಸತ್ಯ ಎಷ್ಟೇ ವಿಜೃಂಭಿಸಿದರೂ, ಕೊನೆಗೆ ಸತ್ಯಕ್ಕೆ ಗೆಲುವು. ಹಾಗಾಗಿ ಸರಳ, ಸಜ್ಜನ ಹಾಗೂ ಉತ್ತಮ ಸಂಸದೀಯ ಪಟು ಎಂದು ಹೆಸರು ಪಡೆದಿರುವ ಎಸ್.ಪಿ. ಮುದ್ದಹನುಮೇಗೌಡ ಅವರು ಗೆಲ್ಲಬೇಕಿದೆ. ಆ ಮೂಲಕ ಜಿಲ್ಲೆಯ ಜ್ವಲಂತ ಸಮಸ್ಯೆಗಳಾದ ಕೊಬ್ಬರಿ ಬೆಲೆ ಇಳಿಕೆ ಸೇರಿದಂತೆ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂದರು.

ಎಲ್ಲಿಂದಲೋ ಬಂದ ವಿ.ಸೋಮಣ್ಣ ಅವರಿಗೆ ಮತಹಾಕುವುದರಿಂದ ಇದು ಸಾಧ್ಯವಿಲ್ಲ. ಹಾಲಿ ಸಂಸದ ಜಿ.ಎಸ್. ಬಸವರಾಜು ಸೇರಿದಂತೆ ರಾಜ್ಯದಿಂದ ಆರಿಸಿ ಹೋದ 26 ಬಿಜೆಪಿ ಸಂಸದರು ಒಂದು ದಿನವೂ ರಾಜ್ಯದ ನೆಲ, ಜಲ, ಭಾಷೆಯ ವಿಚಾರದಲ್ಲಿ ದನಿ ಎತ್ತಿ ಮಾತನಾಡಲಿಲ್ಲ. ಅವರ ಹಾದಿಯಲ್ಲಿಯೇ ಇರುವ ವಿ.ಸೋಮಣ್ಣ ಅವರಿಂದ ಏನನ್ನಾದರೂ ನಿರೀಕ್ಷೆ ಮಾಡಲು ಸಾಧ್ಯವೆ ಎಂದು ಡಾ.ಜಿ. ಪರಮೇಶ್ವರ್ ಪ್ರಶ್ನಿಸಿದರು.

ಬರ ಬಂದಾಗ, ನೆರೆ ಬಂದಾಗ ಬಾರದ ಅಮಿತ್ ಶಾ ಇಂದು ಚುನಾವಣೆಗೋಸ್ಕರ ರಾಜ್ಯಕ್ಕೆ ಬಂದು ಹಸಿ ಸುಳ್ಳುಗಳನ್ನು ಹೇಳುತ್ತಿದ್ದಾರೆ. ಸುಳ್ಳು ಹುಟ್ಟಿದ್ದೇ ಬಿಜೆಪಿಯಿಂದ. ಭೀಕರ ಬರಗಾಲದಿಂದ ಇಡೀ ಜನತೆ ತತ್ತರಿಸಿದ್ದು, 18 ಸಾವಿರ ಕೋಟಿ ರೂ. ಪರಿಹಾರ ಕೇಳಿದರೆ ಇದುವರೆಗೂ ನೀಡಿಲ್ಲ. ಜಿ.ಎಸ್.ಟಿ ಪಾಲಿನಲ್ಲಿಯೂ ರಾಜ್ಯಕ್ಕೆ ಅನ್ಯಾಯವಾಗಿದೆ. ಹೀಗಿದ್ದರೂ ರಾಜ್ಯದ ಬಿಜೆಪಿಯ ಸಂಸದರಾಗಲಿ, ಸಚಿವರಾಗಲಿ ಮೋದಿಯನ್ನು ಪ್ರಶ್ನಿಸಲಿಲ್ಲ ಎಂದರು.

ಆದರೆ, ಈಗ ಮೋದಿಗೆ ಮತ ನೀಡಿ ಎಂದು ಕೇಳಲು ಇವರಿಗೆ ನಾಚಿಕೆಯಾಗುವುದಿಲ್ಲವೇ? ಇಡೀ ದೇಶದಲ್ಲಿ ಅತಿ ಹೆಚ್ಚು ತೆರಿಗೆ ನೀಡುವ ಕರ್ನಾಟಕಕ್ಕೆ ನೀಡಿರುವುದು ಕೇವಲ 54 ಸಾವಿರ ಕೋಟಿ ಮಾತ್ರ. ಎಲ್ಲಾ ವಿಚಾರದಲ್ಲಿಯೂ ರಾಜ್ಯಕ್ಕೆ ಕೇಂದ್ರದ ಬಿಜೆಪಿ ಸರ್ಕಾರದಿಂದ ಅನ್ಯಾಯವಾಗುತ್ತಿದ್ದು, ಇದು ಸರಿಹೊಗಬೇಕಾದರೆ ಮುದ್ದಹನುಮೇಗೌಡರಂತಹ ಸಂಸದರು ಪಾರ್ಲಿಮೆಂಟ್‌ಗೆ ಹೋಗಬೇಕು. ಅವರನ್ನು ಅಲ್ಲಿಗೆ ಕಳುಹಿಸಿಕೊಡುವ ಜವಾಬ್ದಾರಿ ನಮ್ಮ ನಿಮ್ಮೆಲ್ಲರದ್ದು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಹಸ್ತಕ್ಕೆ ಮತ ನೀಡುವ ಮೂಲಕ ಜನವಿರೋಧಿ, ರೈತವಿರೋಧಿ, ಕಾರ್ಮಿಕ ವಿರೋಧಿ ಬಿಜೆಪಿಯನ್ನು ಸೋಲಿಸುವಂತೆ ಡಾ.ಜಿ.ಪರಮೇಶ್ವರ್ ಕರೆ ನೀಡಿದರು.

ಸಹಕಾರ ಸಚಿವ ಕೆ.ಎನ್.ರಾಜಣ್ಣ ಮಾತನಾಡಿ, ಹತ್ತು ವರ್ಷಗಳ ಕಾಲ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ, ಎರಡು ಬಾರಿ ಶಾಸಕರಾಗಿ, ಸಂಸದರಾಗಿ ಕೆಲಸ ಮಾಡಿರುವ ಎಸ್.ಪಿ.ಮುದ್ದಹನುಮೇಗೌಡರು ಸರಳ ಸಜ್ಜನಿಕೆಗೆ ಹೆಸರಾದವರು. ಅವರನ್ನು ಈ ಬಾರಿ ಗೆಲ್ಲಿಸುವ ಜವಾಬ್ದಾರಿ ನಮ್ಮ ನಿಮ್ಮೆಲ್ಲರ ಮೇಲಿದೆ. ಬಿಜೆಪಿ-ಜೆಡಿಎಸ್ ನ ಅಪವಿತ್ರ ಮೈತ್ರಿಯನ್ನು ಈಗಾಗಲೇ ನೋಡಿಯಾಗಿದೆ. ಇದು ಸ್ವಾರ್ಥ ಕುಟುಂಬ ರಾಜಕಾರಣಕ್ಕೆ ಮಾಡಿಕೊಂಡ ಒಪ್ಪಂದವಾಗಿದೆ. ಮಗ, ಮೊಮ್ಮಗ, ಅಳಿಯನಿಗಾಗಿ ದೇವೇಗೌಡರು ಈ ಇಳಿವಯಸ್ಸಿನಲ್ಲಿ ಸುತ್ತುತ್ತಿರುವುದನ್ನು ನೋಡಿದರೆ ನಿಜಕ್ಕೂ ನೋವಾಗುತ್ತದೆ. ಅಧಿಕಾರದ ಆಸೆಗೆ ಅವರ ಮಕ್ಕಳು, ಮೊಮ್ಮಕ್ಕಳು ಸಾಯುವ ಕಾಲದಲ್ಲಿಯೂ ಅವರಿಗೆ ನೆಮ್ಮದಿ ಕೊಡಲಿಲ್ಲವಲ್ಲ ಎಂದು ಅನುಕಂಪ ಮೂಡುತ್ತದೆ ಎಂದರು.

ದೇವೇಗೌಡರು ತುಮಕೂರಿಗೆ ಬಂದು ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ವಿ.ಸೋಮಣ್ಣರಿಗೆ ಮತ ಕೇಳುತ್ತಿಲ್ಲ. ಬದಲಿಗೆ ದೇವೇಗೌಡರನ್ನು ಸೋಲಿಸಿದವರನ್ನು ಸೋಲಿಸಿ ಎಂದು ಕರೆ ಕೊಡುತ್ತಿದ್ದಾರೆ. 2019ರ ಚುನಾವಣೆಯಲ್ಲಿ ದೇವೇಗೌಡರನ್ನು ಸೋಲಿಸಿದ್ದು ಇದೇ ಜಿ.ಎಸ್. ಬಸವರಾಜು ಮತ್ತು ವಿ.ಸೋಮಣ್ಣ, ದೇವೇಗೌಡರು ಕೇಳುತ್ತಿರುವುದು ಸಹ ಅವರನ್ನು ಸೋಲಿಸಿ ಎಂದು ಎಂದರು.

ಎಐಸಿಸಿ ಕಾರ್ಯದರ್ಶಿ ಮಯೂರು ಜಯಕುಮಾರ್ ಮಾತನಾಡಿ, ದೇಶದಲ್ಲಿ ಬಿಜೆಪಿ ಸರ್ಕಾರ ತನ್ನ ಕೊನೆಯ ದಿನಗಳನ್ನು ಎಣಿಸುತ್ತಿದೆ. ರಾಜ್ಯದಲ್ಲಿ ಐದು ಗ್ಯಾರಂಟಿಗಳನ್ನು ಜಾರಿ ಮಾಡಿದ ರೀತಿಯಲ್ಲಿಯೇ ಕೇಂದ್ರದಲ್ಲಿಯೂ ಹಲವು ಗ್ಯಾರಂಟಿಗಳನ್ನು ಕಾಂಗ್ರೆಸ್ ಜಾರಿಗೆ ತರಲಿದೆ. ಇದನ್ನು ಕಾರ್ಯಕರ್ತರು ಪ್ರತಿ ಮನೆ ಮನೆಗೂ ತಿಳಿಸಿ, ಕಾಂಗ್ರೆಸ್ ಪಕ್ಷ ಗೆಲ್ಲುವಂತೆ ಮಾಡಿ ಎಂದು ಕರೆ ನೀಡಿದರು.

ಗುಬ್ಬಿ ಶಾಸಕ ಎಸ್.ಆರ್. ಶ್ರೀನಿವಾಸ್ ಮಾತನಾಡಿ, ತುಮಕೂರು ಲೋಕಸಭಾ ಕ್ಷೇತ್ರದ ಜನತೆ ಸ್ವಾಭಿಮಾನಿಗಳು, ಈ ಹಿಂದೆ ಎ.ಕೃಷ್ಣಪ್ಪ, ಕೋದಂಡರಾಮಯ್ಯ, ಮಂಜುನಾಥ್, ಎಚ್.ಡಿ. ದೇವೇಗೌಡರನ್ನೇ ಸೋಲಿಸಿ ಮನೆಗೆ ಕಳುಹಿಸುವ ಮೂಲಕ ಜಿಲ್ಲೆಯಲ್ಲಿ ಹೊರಗಿನವರಿಗೆ ಅವಕಾಶ ಇಲ್ಲ ಎಂಬುದನ್ನು ಸಾಬೀತು ಪಡಿಸಿದ್ದಾರೆ. ಈ ಬಾರಿಯೂ ತುಮಕೂರು ಲೋಕಸಭಾ ಕ್ಷೇತ್ರದ ಮತದಾರರು ತಮ್ಮ ಸ್ವಾಭಿಮಾನವನ್ನು ಎತ್ತಿ ಹಿಡಿಯಬೇಕಾಗಿದೆ. ಈ ಹಿಂದಿನ ಐದು ವರ್ಷಗಳಲ್ಲಿ ಒಮ್ಮೆಯೂ ಜಿಲ್ಲೆಯ ಜಲ್ವಂತ ಸಮಸ್ಯೆಗಳ ಕುರಿತು ಮಾತನಾಡದ ಜಿ.ಎಸ್.ಬಸವರಾಜು ಅವರ ಮಾತಿಗೆ ಮರಳಾದರೆ ಜಿಲ್ಲೆಗೆ ಘೋರ ಅನ್ಯಾಯ ಮಾಡಿದಂತಾಗುತ್ತದೆ. ಕೊಟ್ಟ ಮಾತಿನಂತೆ ಐದು ಗ್ಯಾರಂಟಿಗಳನ್ನು ನೀಡಿರುವ ಕಾಂಗ್ರೆಸ್ ಪಕ್ಷ ಬೇಕೋ, ಕಳೆದ 10 ವರ್ಷಗಳಲ್ಲಿ ತಾವು ಕೊಟ್ಟ ಒಂದು ಭರವಸೆಯನ್ನು ಈಡೇರಿಸದ ಬಿಜೆಪಿ ಪಕ್ಷ ಬೇಕೇ ಎಂಬುದನ್ನು ಜನತೆ ತೀರ್ಮಾನಿಸಬೇಕು. ಹಣವಿದ್ದರೆ ಚುನಾವಣೆ ಗೆಲ್ಲಬಹುದು ಎಂಬ ಬಿಜೆಪಿ ಅಭ್ಯರ್ಥಿಯ ಮುಂದೆ ಸ್ವಾಭಿಮಾನವೆಂಬ ಗುಣವನ್ನು ನಾವೆಲ್ಲರೂ ಎತ್ತಿ ಹಿಡಿಯಬೇಕಿದೆ ಎಂದರು.

ಕಾಂಗ್ರೆಸ್ ಪಕ್ಷದ ಲೋಕಸಭಾ ಅಭ್ಯರ್ಥಿ ಎಸ್.ಪಿ.ಮುದ್ದಹನುಮೇಗೌಡ ಮಾತನಾಡಿ, 2014ರಿಂದ 2019ರವರೆಗೆ ಐದು ವರ್ಷಗಳ ಕಾಲ ಸಂಸದನಾಗಿ ಈ ಜಿಲ್ಲೆ, ರಾಜ್ಯದ ಹಲವಾರು ವಿಚಾರಗಳನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸುವ ಮೂಲಕ ಜಿಲ್ಲೆಯ ಜಲ್ವಂತ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಪ್ರಯತ್ನ ನಡೆಸಿದ್ದೇನೆ. ವಿಶ್ವಸಂಸ್ಥೆಯಲ್ಲಿ ಭಾರತವನ್ನು ಪ್ರತಿನಿಧಿಸುವ ಮೂಲಕ ಜಿಲ್ಲೆಗೆ ಕೀರ್ತಿ ತರುವ ಕೆಲಸ ಮಾಡಿದ್ದೇನೆ. ರಾಜ್ಯದ ನೆಲ, ಜಲ, ಭಾಷೆ, ಕೈಗಾರಿಕೆ, ರೈತರ ಸಮಸ್ಯೆ, ಕೊಬ್ಬರಿ ಸಮಸ್ಯೆಗಳ ಕುರಿತು ಅಧಿವೇಶನದಲ್ಲಿ ಚರ್ಚಿಸಿ, ಪರಿಹಾರ ದೊರಕಿಸುವ ಪ್ರಯತ್ನ ನಡೆಸಿದ್ದು, ಮುಂದೆ ಜನತೆ ಅವಕಾಶ ಮಾಡಿಕೊಟ್ಟರೆ, ಜಿಲ್ಲೆಯ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯಲು ಪಾರ್ಲಿಮೆಂಟಿನ ಒಳ, ಹೊರಗೆ ಪ್ರಯತ್ನಿಸುವುದಾಗಿ ಭರವಸೆ ನೀಡಿದರು.

ಮಾಜಿ ಶಾಸಕರಾದ ಡಿ.ಸಿ. ಗೌರಿಶಂಕರ್, ವೆಂಕಟರಮಣಪ್ಪ, ಎಸ್. ಷಪಿಅಹಮದ್, ಬೆಮೆಲ್ ಕಾಂತರಾಜು, ಕೆ.ಎಸ್.ಕಿರಣ ಕುಮಾರ್, ರಾಜ್ಯ ವಕ್ತಾರ ನಿಕೇತ್‌ರಾಜ್ ಮೌರ್ಯ ಅವರುಗಳು ಕಾರ್ಯಕರ್ತರು ಉದ್ದೇಶಿಸಿ ಮಾತನಾಡಿದರು.

ಮಾಜಿ ಶಾಸಕರಾದ ಡಾ.ರಫೀಕ್ ಅಹಮದ್, ಗಂಗಹನುಮಯ್ಯ, ಇಕ್ಬಾಲ್ ಅಹಮದ್, ಜಿ.ಪಂ ಮಾಜಿ ಅಧ್ಯಕ್ಷ್ಯೆ ಶಾಂತಲ ರಾಜಣ್ಣ, ಸದಸ್ಯರಾದ ರಾಧಾ ದೇವರಾಜು, ಮಾಜಿ ಮೇಯರಗಳಾದ ಪ್ರಭಾವತಿ, ಫರ್ಹಾನ ಬೇಗಂ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷ ಗೀತಾ ರಾಜಣ್ಣ ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು.

ಎತ್ತಿನ ಗಾಡಿಯಲ್ಲಿ ಹಸಿರು ಶಾಲಿನೊಂದಿಗೆ ಮೆರವಣಿಗೆ

ನಾಮಪತ್ರ ಸಲ್ಲಿಕೆ ಮೆರವಣಿಗೆಗೆ ವಿಶೇಷವಾಗಿ ವಾಹನ ಸಿದ್ದಗೊಂಡಿದ್ದರೂ, ಕೊನೆಯ ಘಳಿಗೆಯಲ್ಲಿ ಚಿಕ್ಕಣ್ಣಸ್ವಾಮಿ ದೇವಾಲಯದ ಧರ್ಮದರ್ಶಿ ಪಾಪಣ್ಣ ಅವರು ಸಾರಥಿಯಾಗಿ, ತಾವು ಸಾಕಿರುವ ಎತ್ತುಗಳಿಗೆ ಟೈರ್‌ಗಾಡಿ ಹೂಡಿ, ಟೌನ್‌ಹಾಲ್‌ನಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಅಶೋಕ ರಸ್ತೆ ಮೂಲಕ ಮೆರವಣಿಗೆ ನಡೆಸಿ, ನಾಮಪತ್ರ ಸಲ್ಲಿಸಿದರು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X